ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ಧಾರಣೆ ಗಗನಮುಖಿ..!

ಮಾರುಕಟ್ಟೆಗೆ ಕ್ಷೀಣಿಸಿದ ಆವಕ; ದಿಢೀರ್ ಬೆಲೆ ಏರಿಕೆಗೆ ತತ್ತರಿಸಿದ ಗ್ರಾಹಕ
Last Updated 10 ಜನವರಿ 2019, 10:12 IST
ಅಕ್ಷರ ಗಾತ್ರ

ವಿಜಯಪುರ: ಕಾಯಿಪಲ್ಲೆ, ತಪ್ಪಲು ಪಲ್ಲೆ ಧಾರಣೆ ಎರಡ್ಮೂರು ದಿನದಿಂದ ಏಕಾಏಕಿ ಗಗನಮುಖಿಯಾಗಿದೆ. ಖರೀದಿಗಾಗಿ ಕಾಯಿಪಲ್ಲೆ ಬಜಾರ್‌ಗೆ ತೆರಳಿದ ಗೃಹಿಣಿಯರು ಬೆಲೆ ಕೇಳಿ ಬೆಚ್ಚಿ ಬಿದ್ದರು.

ವಾರದ ಹಿಂದಷ್ಟೇ ಪಾವ್‌ ಕಿಲೋ ಕಾಯಿಪಲ್ಲೆ ಧಾರಣೆ ₹ 10ರ ಆಸುಪಾಸಿನಲ್ಲಿತ್ತು. ಇದೇ ಸಹಜ ಲೆಕ್ಕಾಚಾರದಲ್ಲಿ ಬಜಾರ್‌ಗೆ ಬಂದಿದ್ದವರು, ಪಾವ್‌ ಕಿಲೋ ಧಾರಣೆ ₹ 20, ₹ 30 ಎಂದು ವ್ಯಾಪಾರಿಗಳು ಹೇಳುತ್ತಿದ್ದಂತೆ ಹೌಹಾರಿದರು. ದಿಢೀರ್‌ ಬೆಲೆ ಏರಿಕೆಗೆ ಕಾರಣ ಏನೆಂದು ಪ್ರಶ್ನಿಸಿದರು.

ಬೆಲೆ ಕಡಿಮೆ ಇದ್ದೆಡೆ ಖರೀದಿಸಬೇಕು ಎಂದು ಇಡೀ ಬಜಾರ್ ಸುತ್ತಿದವರು ಸಹ ಬೇಸರ ವ್ಯಕ್ತಪಡಿಸಿದರು. ಹಿಂದಿನ ವಾರಗಳಂತೆ ಈ ವಾರ ಹೆಚ್ಚಿನ ಉತ್ಪನ್ನವೇ ಮಾರುಕಟ್ಟೆಗೆ ಬಂದಿಲ್ಲ. ಹಳ್ಳಿಯವರು ಯಾಕೋ ಬಂದಿಲ್ಲ ಎಂದು ಬಡಬಡಿಸುತ್ತಲೇ, ತಮ್ಮ ಕೈಗೆಟುಕುವಷ್ಟು ಕಾಯಿಪಲ್ಲೆ ಖರೀದಿಸಿದ್ದು, ನಗರದ ವಿವಿಧೆಡೆ ನಡೆಯುವ ಕಾಯಿಪಲ್ಲೆ ಬಜಾರ್‌ಗಳಲ್ಲಿ ಗೋಚರಿಸಿತು.

‘ಮಾರುಕಟ್ಟೆಗೆ ಕಾಯಿಪಲ್ಲೆ ಆವಕ ಕಡಿಮೆಯಾಗಿದೆ. ಇದರಿಂದ ಧಾರಣೆ ಕೊಂಚ ತುಟ್ಟಿಯಾಗಿದೆ. ಹಿಂದಿನ ವಾರದ ಧಾರಣೆಗೆ ಹೋಲಿಸಿದರೆ ಹೆಚ್ಚೇನು ವ್ಯತ್ಯಾಸವಿಲ್ಲ’ ಎಂದು ವ್ಯಾಪಾರಿ ನೂರ್‌ಜಹಾನ್ ಬಾಗವಾನ ಹೇಳಿದರು.

‘ಮಂಗಳವಾರ, ಬುಧವಾರ ಬಂದ್ ಇತ್ರೀ. ಹಳ್ಳಿಗಳಿಂದ ತರಕಾರಿ ಬೆಳೆದು ಮಾರಾಟಕ್ಕೆ ತರುವವರು ಸಂಚಾರ ಸಮಸ್ಯೆಯಿಂದ ಯಾರೊಬ್ಬ್ರೂ ಬಂದಿರಲಿಲ್ಲ. ಇದರ ಪರಿಣಾಮ ಬಜಾರ್‌ಗೆ ಬಂದಿದ್ದ ಕಾಯಿಪಲ್ಲೆ, ತಪ್ಪಲು ಪಲ್ಲೆಗೆ ಸಾಕಷ್ಟು ಬೇಡಿಕೆ ಬಂತ್ರಿ. ಇದ್ದಕ್ಕಿದ್ದಂತೆ ಧಾರಣೆ ಏರಿತ್ರೀ’ ಎಂದು ವ್ಯಾಪಾರಿ ಲಕ್ಷ್ಮೀ ಬಾಯಿ ಹಜೇರಿ ತಿಳಿಸಿದರು.

‘ವಾಹನ ಸಂಚಾರ ಸರಾಗವಾದ್ರೇ, ಹಳ್ಳಿ ವ್ಯಾಪಾರಿಗಳು ಹೆಚ್ಚಿನದಾಗಿ ತಮ್ಮ ಉತ್ಪನ್ನ ತರುತ್ತಾರೆ. ಇದು ಮಾರುಕಟ್ಟೆಯ ಬೇಡಿಕೆಗೆ ಸಾಕಾಗಲಿದೆ. ಜತೆಗೆ ಸಹಜವಾಗಿಯೇ ಬೆಲೆಯೂ ನಿಯಂತ್ರಣಕ್ಕೆ ಬರಲಿದೆ. ಮತ್ತೆ ಯಥಾಪ್ರಕಾರ ಅದೇ ₹ 10ಕ್ಕೆ ಪಾವ್‌ಕಿಲೋ ವ್ಯಾಪಾರ ನಡೆಯಲಿದೆ’ ಎಂದು ಅವರು ಹೇಳಿದರು.

ಮತ್ತೆ ಬರಬೇಕ್ರೀ:

‘ಧಾರಣೆ ತುಟ್ಟಿಯಾಗಿದ್ದು ಗೊತ್ತಿರಲಿಲ್ರೀ. ಬಜಾರ್‌ಗೆ ಬಂದು ಕಾಯಿಪಲ್ಲೆ ದರ ಕೇಳಿದಾಗಲೇ ಬೆಲೆ ಏರಿಕೆಯ ಬಿಸಿ ತಟ್ಟಿದ್ದು. ರೊಕ್ಕವನ್ನು ಜಾಸ್ತಿ ತಂದಿರಲಿಲ್ರೀ. ಎಷ್ಟಿತ್ತು ಅಷ್ಟರೊಳಗೆ ಮೂರ್ನಾಲ್ಕು ದಿನಕ್ಕಾಗುವಷ್ಟು ಕಾಯಿಪಲ್ಲೆ ಖರೀದಿಸಿದೆ’ ಎಂದು ಕೆ.ಎಸ್.ಹಿರೇಮಠ ತಿಳಿಸಿದರು.

‘ನೋಡ್ರೀ... ಈ ಹಿಂದೆ ಒಮ್ಮೆ ಕಾಯಿಪಲ್ಲೆ ತುಟ್ಟಿಯಾಗಿದ್ದರೆ, ತಪ್ಪಲು ಪಲ್ಲೆ ಸಸ್ತಾ ಇರ್ತಿತ್ತು. ತಪ್ಪಲು ಪಲ್ಲೆ ತುಟ್ಟಿಯಿದ್ರೇ, ಕಾಯಿಪಲ್ಲೆ ಸಸ್ತಾ ಇರ್ತಿತ್ತು. ಇದೀಗ ಎರಡು ತುಟ್ಟಿಯಿವೆ. ಯಾವುದು ಖರೀದಿಗೆ ಕೈಗೆಟುಕುತ್ತಿಲ್ಲ.

ಆದ್ರೂ ಅನಿವಾರ್ಯ. ನಿತ್ಯ ಅಡುಗೆ ಮನೆ ನಡೆಸಬೇಕಲ್ರೀ. ವಿಧಿಯಿಲ್ಲದೆ ಇದ್ದಷ್ಟು ಖರೀದಿ ನಡೆಸಿವ್ನೀ. ಇನ್ನೊಂದ್‌ ಮೂರ್ನಾಲ್ಕು ದಿನ ಬಿಟ್ಟು ಮತ್ತೊಮ್ಮೆ ಖರೀದಿಗೆ ಬರಬೇಕಿದೆ’ ಎಂದು ಗೃಹಿಣಿ ಲಕ್ಷ್ಮೀ, ಕಾಯಿಪಲ್ಲೆ ಬಜಾರ್‌ನ ಚಿತ್ರಣ ನೀಡಿದರು.

‘ಹಿಂದಿನ ವಾರ ಎಲ್ವೂ ಪಾವ್‌ ಕಿಲೋ ₹ 10 ಇದ್ವು. ಆದರೆ ಈ ವಾರ ₹ 20, ₹ 30 ಆಗ್ಯಾವೆ. ಉಳ್ಳಾಗಡ್ಡಿಯೂ ಏರಿಕೆಯಾಗಿದೆ. ತಪ್ಪಲು ಪಲ್ಲೆಯೂ ಹೊರತಾಗಿಲ್ಲ. ₹ 10, ₹ 20ಕ್ಕೆ ಎಷ್ಟು ಬರುತ್ತೆ ಅಷ್ಷನ್ನೇ ಕೊಂಡೆ’ ಎಂದು ಆರ್.ಟಿ.ಪಾಟೀಲ ತಿಳಿಸಿದರು.

ಕಾಯಿಪಲ್ಲೆ–ಸೊಪ್ಪು ಧಾರಣೆ..!

ಸೌತೆಕಾಯಿ, ಬದನೆಕಾಯಿ, ಹಿರೇಕಾಯಿ ತಲಾ ಒಂದೊಂದು ಕೆ.ಜಿ.ಗೆ ₹ 80, ಬೆಂಡಿಕಾಯಿ ₹ 60, ಟೊಮೆಟೊ, ಗಜ್ಜರಿ, ಹಸಿಮೆಣಸಿನಕಾಯಿ, ಅವರೆಕಾಯಿ, ದೊಣ್ಣೆ ಮೆಣಸಿನಕಾಯಿ, ಚವಳಿಕಾಯಿ ₹ 40, ಆಲೂಗಡ್ಡೆ ₹ 20, ಹೂಕೋಸು ₹ 30, ನವಿಲುಕೋಸು ₹ 20, ಗೆಣಸು ₹ 20ರಂತೆ ವಿವಿಧೆಡೆ ಮಾರಾಟವಾದವು.

ಮೆಂತ್ಯೆ ಒಂದಕ್ಕೆ ₹ 10, ಉಳ್ಳಾಗಡ್ಡಿ ಸೊಪ್ಪು, ಕೊತ್ತಂಬರಿ, ಪುದೀನಾ, ರಾಜಗಿರಿ, ಪಾಲಕ್, ಕರಿಬೇವು, ಸಬ್ಸಿಗೆ ಒಂದೊಂದು ಕಂತೆಗೆ ತಲಾ ₹ 5ರಂತೆ ಮಾರಾಟವಾದವು. ಈ ಹಿಂದಿನ ವಾರದಲ್ಲಿ ಎರಡು, ಮೂರು ಕಂತೆಗೆ ಇದೇ ಧಾರಣೆಯಿತ್ತು.

ಟೊಮೆಟೊ ಒಂದು ಕೆ.ಜಿ. ದರ ₹ 10 ಇದ್ದರೆ, ಈ ವಾರ ₹ 40 ಆಗಿದೆ. ಉಳ್ಳಾಗಡ್ಡಿಯ ಧಾರಣೆಯೂ ಕೆ.ಜಿ.ಗೆ ₹ 5 ಹೆಚ್ಚಿದೆ. ಹಿಂದಿನ ವಾರ ₹ 10 ಇದ್ದರೆ, ಈ ವಾರ ₹ 15 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT