ಸಗಟು ಹಣದುಬ್ಬರ ಇಳಿಕೆ

7

ಸಗಟು ಹಣದುಬ್ಬರ ಇಳಿಕೆ

Published:
Updated:

ನವದೆಹಲಿ: ಸಗಟು ಬೆಲೆಗಳನ್ನು ಆಧರಿಸಿದ ಹಣದುಬ್ಬರವು (ಡಬ್ಲ್ಯುಪಿಐ) ನವೆಂಬರ್‌ ತಿಂಗಳಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟವಾದ ಶೇ 4.64ಕ್ಕೆ ಇಳಿದಿದೆ.

ಆಹಾರ ಪದಾರ್ಥಗಳ ಅದರಲ್ಲೂ ವಿಶೇಷವಾಗಿ ತರಕಾರಿಗಳ ಬೆಲೆ ಅಗ್ಗವಾಗಿರುವುದರಿಂದ ಸಗಟು ಹಣದುಬ್ಬರವು ಕಡಿಮೆಯಾಗಿದೆ. ಆಗಸ್ಟ್‌ ತಿಂಗಳಲ್ಲಿ ಶೇ 4.62ರಷ್ಟಿತ್ತು.

ಹಿಂದಿನ ವರ್ಷದ ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಲ್ಲಿ ‘ಡಬ್ಲ್ಯುಪಿಐ’ ಕ್ರಮವಾಗಿ ಶೇ 5.28 ಮತ್ತು ಶೇ 4.02ರಷ್ಟಿತ್ತು.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಆಹಾರ ಪದಾರ್ಥಗಳ ಬೆಲೆಗಳು ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಲ್ಲಿ ಕ್ರಮವಾಗಿ ಶೇ 3.31 ಮತ್ತು ಶೇ 1.49ರಷ್ಟು ಅಗ್ಗವಾಗಿವೆ.

ನವೆಂಬರ್‌ ತಿಂಗಳಲ್ಲಿ ತರಕಾರಿಗಳ ಬೆಲೆ ಶೇ 26.98ರಷ್ಟು ಇಳಿಕೆ ದಾಖಲಿಸಿವೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ಇಳಿಯುತ್ತಿರುವುದರಿಂದ ಇಂಧನ ಮತ್ತು ವಿದ್ಯುತ್‌ ವಲಯದ ಹಣದುಬ್ಬರವು ಇಳಿಕೆ ಕಂಡಿದೆ. ನವೆಂಬರ್‌ನಲ್ಲಿ ಶೇ 16.28ರಷ್ಟು ದಾಖಲಾಗಿದ್ದರೂ, ಅಕ್ಟೋಬರ್‌ನಲ್ಲಿದ್ದ ಶೇ 18.44ಕ್ಕೆ ಹೋಲಿಸಿದರೆ ಕಡಿಮೆಯಾಗಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ಹಣಕಾಸು ನೀತಿ ನಿರ್ಧರಿಸಲು ಪ್ರಮುಖವಾಗಿ ಪರಿಗಣನೆಗೆ ತೆಗೆದುಕೊಳ್ಳುವ ಚಿಲ್ಲರೆ ಹಣದುಬ್ಬರವು ಕೂಡ  ನವೆಂಬರ್‌ ತಿಂಗಳಲ್ಲಿ 17 ತಿಂಗಳ ಕನಿಷ್ಠ ಮಟ್ಟವಾದ ಶೇ 2.33ರಷ್ಟಕ್ಕೆ ಇಳಿದಿದೆ.

ಪ್ರಸಕ್ತ ಹಣಕಾಸು ವರ್ಷದ ಐದನೇ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಆರ್‌ಬಿಐ ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಹಣದುಬ್ಬರ ಏರಿಕೆಯಾಗುವ ಆತಂಕ ನಿಜವಾಗದಿದ್ದರೆ ಬಡ್ಡಿ ದರ ಕಡಿಮೆ ಮಾಡುವುದಾಗಿಯೂ ತಿಳಿಸಿದೆ.

ಸಾಧಾರಣ ಮಟ್ಟದಲ್ಲಿ ಇರುವ ಬೆಲೆಗಳಿಂದ ಹಣಕಾಸು ವರ್ಷದ ದ್ವಿತಿಯಾರ್ಧದಲ್ಲಿ ಚಿಲ್ಲರೆ ಹಣದುಬ್ಬರ ಶೇ 2.7 ರಿಂದ ಶೇ 3.2ರ ಮಧ್ಯೆ ಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !