₹ 13 ಕೋಟಿ ವೆಚ್ಚದ ಯೋಜನೆ; ಎಂ.ಬಿ.ಪಾಟೀಲ

7
ಲಾಲ್‌ಬಾಗ್ ಮಾದರಿಯಲ್ಲಿ ಭೂತನಾಳ ಕೆರೆ ಉದ್ಯಾನ ಅಭಿವೃದ್ಧಿ

₹ 13 ಕೋಟಿ ವೆಚ್ಚದ ಯೋಜನೆ; ಎಂ.ಬಿ.ಪಾಟೀಲ

Published:
Updated:

ವಿಜಯಪುರ: ‘₹ 13 ಕೋಟಿ ವೆಚ್ಚದಲ್ಲಿ ನಗರ ಹೊರ ವಲಯದ ಭೂತನಾಳ ಕೆರೆ, ಉದ್ಯಾನವನ್ನು ಅಭಿವೃದ್ಧಿಗೊಳಿಸಲಾಗುವುದು’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

‘ಜಲಸಂಪನ್ಮೂಲ ಸಚಿವನಿದ್ದ ಸಂದರ್ಭ ಕೆರೆಗೆ ಕಾಯಕಲ್ಪ ನೀಡಲಾಗಿತ್ತು. ಇದೀಗ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಟೆಂಡರ್‌ ಪ್ರಕ್ರಿಯೆ ನಡೆದಿದೆ’ ಎಂದು ಭಾನುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಂಗ್ರಹಗೊಂಡಿದ್ದ ಕೆರೆ ಸಂರಕ್ಷಣಾ ಕರವನ್ನು ಭೂತನಾಳ ಕೆರೆ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದ್ದು, ಕೆರೆ ಆವರಣದ 8.12 ಎಕರೆ ಪ್ರದೇಶವನ್ನು ಪ್ರವಾಸಿಗರಿಗಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ₹ 9.13 ಕೋಟಿ ಅಂದಾಜು ಮೊತ್ತದ ಕ್ರಿಯಾ ಯೋಜನಗೆ ಅನುಮೋದನೆ ನೀಡಲಾಗಿದೆ.

ಈ ಕಾಮಗಾರಿಯನ್ನು ಮಹಾನಗರ ಪಾಲಿಕೆಗೆ ವಹಿಸಲಾಗಿದೆ. ಈಗಾಗಲೇ ₹ 4.56 ಕೋಟಿ ಹಣವನ್ನು ಮೊದಲನೇ ಕಂತಿನಲ್ಲಿ ಬಿಡುಗಡೆ ಮಾಡಲಾಗಿದೆ. ಅಭಿವೃದ್ಧಿಗೆ ಇನ್ನೂ ₹ 3–4 ಕೋಟಿ ಕೊರತೆಯಾಗಲಿದೆ. ಇಷ್ಟು ಹಣ ಮತ್ತೆ ಕರ ರೂಪದಲ್ಲೇ ಸಂಗ್ರಹಗೊಂಡಿದ್ದು, ಯೋಜನೆ ಅನುಷ್ಠಾನಕ್ಕೆ ಬಳಸಿಕೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

‘ವೈವಿಧ್ಯಮಯವಾದ ನೀರಿನ ಕಾರಂಜಿಗಳು, ಚಿಣ್ಣರ ಆಟದ ಮೈದಾನ, ಆಹಾರ ಮಳಿಗೆಗಳು, ಮೆಡಿಟೇಷನ್ ಹಾಲ್, ಶುದ್ಧ ಕುಡಿಯುವ ನೀರಿನ ಸೌಲಭ್ಯ, ಪ್ರವೇಶ ದ್ವಾರ, ಆಧುನಿಕ ಟಿಕೆಟ್ ಕೌಂಟರ್, ಒಳಭಾಗದ ರಸ್ತೆಗಳು ಹಾಗೂ ಉದ್ಯಾನದ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪುಗೊಂಡಿದೆ.

ಕೆರೆಯ ಬದಿಯಲ್ಲಿ ವಾಕಿಂಗ್ ಟ್ರ್ಯಾಕ್, ಸೋಲಾರ್ ದೀಪ, ಸೂಚನಾ ಫಲಕ, ಶಿಲ್ಪಕಲಾ ಉದ್ಯಾನ, ರಕ್ಷಣಾ ಗೋಡೆ ಮೊದಲಾದವುಗಳನ್ನು ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಈಗಾಗಲೇ ಐತಿಹಾಸಿಕ ಬೇಗಂ ತಲಾಬ್ ಅಭಿವೃದ್ಧಿಗಾಗಿ ₹ 12 ಕೋಟಿ ಮೊತ್ತದ ಯೋಜನೆ ಅನುಷ್ಠಾನಗೊಂಡಿದೆ. 50% ಕಾಮಗಾರಿ ಮುಗಿದಿವೆ. ಎರಡೂ ಕೆರೆಯಂಗಳ ಅಭಿವೃದ್ಧಿಗೊಂಡರೆ, ಪ್ರವಾಸೋದ್ಯಮವೂ ಬೆಳವಣಿಗೆಯಾಗಲಿದೆ’ ಎಂದು ಹೇಳಿದರು.

ಪೊಲೀಸ್ ತರಬೇತಿ ಅಕಾಡೆಮಿ

‘ವಿಜಯಪುರದಲ್ಲಿ ವಿ ಟ್ರ್ಯಾಕ್‌, ಸುಸಜ್ಜಿತ ಪೊಲೀಸ್ ತರಬೇತಿ ಅಕಾಡೆಮಿ ಘೋಷಣೆಯನ್ನು ಮುಖ್ಯಮಂತ್ರಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ಸಂದರ್ಭ ಘೋಷಿಸಲಿದ್ದಾರೆ’ ಎಂದು ಗೃಹ ಸಚಿವರು ಪ್ರಕಟಿಸಿದರು.

ಅರಕೇರಿಯಲ್ಲಿರುವ ಐಆರ್‌ಬಿ ಘಟಕಕ್ಕೆ ಸಮಗ್ರ ಕುಡಿಯುವ ನೀರು ಆಂತರಿಕ ವಿತರಣಾ ಜಾಲದ ವ್ಯವಸ್ಥೆ ಕಾಮಗಾರಿಗೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ದೊರಕಿದ್ದು, ಒಟ್ಟು ₹ 1.38 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಪಾಟೀಲ ಹೇಳಿದರು.

‘ತೋಟಗಾರಿಕೆ ಬೆಳೆಗಾರರ ಹಲವು ವರ್ಷಗಳ ಬೇಡಿಕೆ ಈಡೇರಿದೆ. ದ್ರಾಕ್ಷಿ, ದಾಳಿಂಬೆ ಬೆಳೆಗಾರರಿಗೆ ಪುನಶ್ಚೇತನ ಪ್ಯಾಕೇಜ್‌ ಘೋಷಣೆಯಾಗಿದೆ. ನಿಂಬೆ ಬೆಳೆಗಾರರನ್ನು ಇದರೊಳಗೆ ಸೇರ್ಪಡೆ ಮಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ.

ಹಲ ವರ್ಷಗಳಿಂದ ದ್ರಾಕ್ಷಿ ಬೆಳೆಗಾರರಿಗೆ ಕಂಟಕವಾಗಿರುವ ಸಾಲ ಮನ್ನಾ ನಿರ್ಧಾರವನ್ನು ಬಜೆಟ್‌ ಮೇಲಿನ ಚರ್ಚೆಗೆ ಉತ್ತರಿಸುವ ಸಂದರ್ಭ ಮುಖ್ಯಮಂತ್ರಿ ಪ್ರಕಟಿಸುವ ನಿರೀಕ್ಷೆಯಿದೆ’ ಎಂದು ಸಚಿವರು ತಿಳಿಸಿದರು.

‘ನಾನು ಜಲಸಂಪನ್ಮೂಲ ಸಚಿವನಿದ್ದ ಅವಧಿಯಲ್ಲಿ ಜಿಲ್ಲೆಗೆ ಘೋಷಣೆಯಾದ ಎಲ್ಲ ನೀರಾವರಿ ಯೋಜನೆಗಳ ತಾರ್ಕಿಕ ಅಂತ್ಯಕ್ಕೆ ಯತ್ನಿಸುವೆ. ಸಿದ್ಧೇಶ್ವರ ಸ್ವಾಮೀಜಿ ಸಹ ಈ ನಿಟ್ಟಿನಲ್ಲಿ ಸೂಚನೆ ನೀಡಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರ ಜತೆ ಚರ್ಚಿಸುವೆ’ ಎಂದು ಎಂ.ಬಿ.ಪಾಟೀಲ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಫೆ.12ರಂದು ವಿಜಯಪುರ ವಿಮಾನ ನಿಲ್ದಾಣದ ಪ್ರಗತಿ ಕುರಿತಂತೆ ಅಧಿಕಾರಿಗಳ ಸಭೆ ನಡೆಸಲಿದ್ದೇನೆ’ ಎಂದು ಸಚಿವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !