ಭಾನುವಾರ, ಸೆಪ್ಟೆಂಬರ್ 22, 2019
22 °C
ಕಾರ್ಯಪ್ರವೃತ್ತವಾದ ಜಲಮಂಡಳಿ

ಮುಂಗಾರು ಸಿದ್ಧತೆ: 40 ಸಾವಿರ ಮ್ಯಾನ್‌ಹೋಲ್‌ ಸ್ವಚ್ಛ

Published:
Updated:
Prajavani

ಬೆಂಗಳೂರು: ಮಳೆಗಾಲದಲ್ಲಿ ನಗರದ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಡೆಯಲು ಸ್ಥಳೀಯ ಆಡಳಿತ ಸಂಸ್ಥೆಗಳು ಕೆಲಸ ಆರಂಭಿಸಿವೆ. ಕೊಳಚೆ ನೀರಿನ ಸರಾಗ ಹರಿವಿಗಾಗಿ ಜಲಮಂಡಳಿ ಈಗಾಗಲೇ 40 ಸಾವಿರಕ್ಕೂ ಹೆಚ್ಚು ಮ್ಯಾನ್‌ಹೋಲ್‌ಗಳನ್ನು ಸ್ವಚ್ಛಗೊಳಿಸಿದೆ.  

ಜಲಮಂಡಳಿ ವ್ಯಾಪ್ತಿಯ ಎಲ್ಲ ಮ್ಯಾನ್‌ಹೋಲ್‌ಗಳನ್ನು ಸ್ವಚ್ಛ ಮಾಡಲು 18 ತಿಂಗಳ ಗಡುವನ್ನು ಹಾಕಿಕೊಳ್ಳಲಾಗಿದೆ. ಈ ಸ್ವಚ್ಛತಾ ಕೆಲಸ ಜನವರಿಯಿಂದಲೇ ಆರಂಭವಾಗಿದೆ.

‘ನಗರದಲ್ಲಿ 2.4 ಲಕ್ಷ ಮ್ಯಾನ್‌ಹೋಲ್‌ಗಳಿವೆ. ಅವುಗಳನ್ನು ಕೆಲವೇ ತಿಂಗಳುಗಳಲ್ಲಿ ಶುಚಿಗೊಳಿಸುವುದು ಕಷ್ಟದ ಕೆಲಸ. ಹಾಗಾಗಿ 18 ತಿಂಗಳ ಗಡುವನ್ನು ಹಾಕಿಕೊಂಡು ಶುಚಿಗೊಳಿಸುತ್ತಿದ್ದೇವೆ. ಪ್ರತಿ ತಿಂಗಳು ಅಂದಾಜು 8,000 ಮ್ಯಾನ್‌ಹೋಲ್‌ಗಳನ್ನು ಸ್ವಚ್ಛ ಮಾಡುತ್ತಿದ್ದೇವೆ’ ಎಂದು ಜಲಮಂಡಳಿಯ ಮುಖ್ಯ ಎಂಜಿನಿಯರ್‌ ಬಿ.ಸಿ.ಗಂಗಾಧರ್‌ (ನಿರ್ವಹಣೆ) ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಳೆ ಸುರಿದಾಗ ಯಾವ ಪ್ರದೇಶಗಳಲ್ಲಿ ಹೆಚ್ಚಾಗಿ ಮ್ಯಾನ್‌ಹೋಲ್‌ಗಳಿಂದ ನೀರು ಹೊರಬರುತ್ತದೆ ಎಂದು ಎಂಜಿನಿಯರ್‌ಗಳು ಗುರುತಿಸಿದ್ದಾರೆ. ಅಂತಹ ಸ್ಥಳಗಳ ಮ್ಯಾನ್‌ಹೋಲ್‌ಗಳನ್ನು ಸ್ವಚ್ಛಗೊಳಿಸಲು ಆದ್ಯತೆ ನೀಡುತ್ತಿದ್ದೇವೆ’ ಎಂದು ಅವರು ಹೇಳಿದರು. 

‘ಅತಿಗಣ್ಯ ವ್ಯಕ್ತಿಗಳು ಹೆಚ್ಚಾಗಿ ಸಂಚರಿಸುವ ಜೆ.ಸಿ.ರಸ್ತೆ, ರಾಜಭವನ ರಸ್ತೆ, ಬಾಲಬ್ರೂಯಿ, ಹೈ ಗ್ರೌಂಡ್ಸ್‌ ಮತ್ತು ಸುತ್ತಮುತ್ತಲಿನ ರಸ್ತೆಗಳ ಸ್ವಚ್ಛತಾ ಕಾರ್ಯಕ್ಕೆ ಗಮನ ಹರಿಸಿದ್ದೇವೆ’ ಎಂದು ಎಂಜಿನಿಯರ್‌ ಒಬ್ಬರು ತಿಳಿಸಿದರು.

ಈ ಶುಚಿತ್ವ ಕಾರ್ಯಕ್ಕಾಗಿ ಸದ್ಯ 139 ಜಟ್ಟಿಂಗ್‌ ಯಂತ್ರಗಳನ್ನು ಬಳಸಲಾಗುತ್ತಿದೆ. ‘ಬೆಂಗಳೂರಿನಂತರ ಮಹಾನಗರಕ್ಕೆ ಈಗಿರುವ ಯಂತ್ರಗಳು ಸಾಲುತ್ತಿಲ್ಲ. ಹಾಗಾಗಿ ಹೊಸ ಯಂತ್ರಗಳ ಖರೀದಿ ಪ್ರಕ್ರಿಯೆ ಜಾರಿಯಲ್ಲಿದೆ. ತಿಂಗಳೊಳಗೆ ಇನ್ನೂ 31 ಯಂತ್ರಗಳು ಸ್ವಚ್ಛತಾ ಕಾರ್ಯಕ್ಕೆ ಸೇರ್ಪಡೆಯಾಗಲಿವೆ’ ಎಂದು ಗಂಗಾಧರ್‌ ತಿಳಿಸಿದರು. 

‘ಬಹುತೇಕರು ಮನೆ ಮೇಲೆ ಬೀಳುವ ಮಳೆನೀರು ಹರಿಯಲು ಒಳಚರಂಡಿಗೆ ಸಂಪರ್ಕ ಕಲ್ಪಿಸಿರುತ್ತಾರೆ. ಇದರಿಂದ ಕಸ–ಕಟ್ಟಿ ಮ್ಯಾನ್‌ಹೋಲ್‌ಗಳಲ್ಲಿ ಶೇಖರಣೆ ಆಗಿ ನೀರು ಕಟ್ಟಿಕೊಳ್ಳುತ್ತವೆ’ ಎಂದು ತಿಳಿಸಿದರು.

‘ಈ 18 ತಿಂಗಳ ಕಾರ್ಯಯೋಜನೆ ಪೂರ್ಣಗೊಂಡ ಬಳಿಕ, ಮತ್ತೆ ಎಂದಿನಂತೆ ಸಮಸ್ಯೆ ಇರುವ ಕಡೆ ಯಂತ್ರಗಳು ಸ್ವಚ್ಛತೆಗೆ ತೆರಳಲಿವೆ. ಈ ಮಧ್ಯೆ ತುರ್ತಾಗಿ ಶುಚಿಗೊಳಿಸಲೇಬೇಕಾದ ಮ್ಯಾನ್‌ಹೋಲ್‌ಗಳ ಕುರಿತು ದೂರುಗಳು ಬಂದರೆ, ಅವುಗಳನ್ನೂ ಸರಿಪಡಿಸುತ್ತೇವೆ’ ಎಂದರು.   

‘ಮಳೆಗಾಲದಲ್ಲಿ ಮ್ಯಾನ್‌ವೋಲ್‌ಗಳು ತುಂಬಿ ಹರಿಯುತ್ತವೆ. ಇದರಿಂದ ತೊಂದರೆ ಆಗುತ್ತದೆ’ ಎಂಬ ದೂರುಗಳು ಹೆಚ್ಚಾಗಿ ಬಂದ ಕಾರಣ ಜಲಮಂಡಳಿಯು ಈ ಅಭಿಯಾನ ಹಮ್ಮಿಕೊಂಡಿದೆ.

***

ಜಟ್ಟಿಂಗ್ ಯಂತ್ರಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ. ಇದರಿಂದ ಪ್ರತಿದಿನದ ಕೆಲಸದ ಪ್ರಗತಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

– ಬಿ.ಸಿ.ಗಂಗಾಧರ್‌, ಮುಖ್ಯ ಎಂಜಿನಿಯರ್‌(ನಿರ್ವಹಣೆ), ಜಲಮಂಡಳಿ

Post Comments (+)