ಬುಧವಾರ, ಜೂನ್ 3, 2020
27 °C

ಶುಚಿ, ರುಚಿ ಆಹಾರಕ್ಕೆ ‘ಕೆಫೆ ಮೈಸೂರು’

ಎನ್. ನವೀನ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಗ್ರಾಹಕರಿಗೆ ರುಚಿ, ಶುಚಿ ಹಾಗೂ ಗುಣಮಟ್ಟದ ತಿಂಡಿ- ತಿನಿಸುಗಳನ್ನು ಪೂರೈಸುವ ಬದ್ಧತೆ ಹೊಂದಿರುವ ಯಾವುದೇ ಹೋಟೆಲ್ ಯಶಸ್ಸಿನ ಉತ್ತುಂಗ ಏರುತ್ತದೆ. ಇದೇ ತತ್ವವನ್ನು ಅಳವಡಿಸಿಕೊಂಡು ಗ್ರಾಹಕ ಸ್ನೇಹಿ ಹೋಟೆಲ್ ಸ್ಥಾಪಿಸಿ, ಜನರ ಉದರ ತಣಿಸುತ್ತಿದ್ದಾರೆ ಕೆ.ಸಿ.ದಿನೇಶ್ ಭಟ್.

ಇಟ್ಟಿಗೆಗೂಡಿನ ಕರಗ ದೇವಸ್ಥಾನ ಎದುರು ಇರುವ ‘ಕೆಫೆ ಮೈಸೂರು’ ಹೋಟೆಲ್ ಈ ಭಾಗದ ಪ್ರಸಿದ್ಧ ರೆಸ್ಟೋರೆಂಟ್ ಎನಿಸಿಕೊಂಡಿದೆ. ಇಲ್ಲಿಗೆ ಸ್ಥಳೀಯರಲ್ಲದೆ ಆಲನಹಳ್ಳಿ, ವಿಜಯನಗರ ಸೇರಿದಂತೆ ದೂರದ ಪ್ರದೇಶಗಳಿಂದಲೂ ಗ್ರಾಹಕರು ಬರುವುದು ವಿಶೇಷ.

ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಹೋಟೆಲ್ ತೆರೆದಿರುತ್ತದೆ. ಕಾಫಿ, ಟೀ ಪ್ರಸಿದ್ಧಿ ಪಡೆದಿದ್ದು, ಬೆಳಿಗ್ಗೆ ವಾಯುವಿಹಾರಿಗಳು ಹಾಜರಿರುತ್ತಾರೆ. ಚಾಮುಂಡಿ ಬೆಟ್ಟಕ್ಕೆ ತೆರಳುವ ಕೆಲವರು ವಾಯುವಿಹಾರಕ್ಕೂ ಮುನ್ನ ಟೀ, ಕಾಫಿ ರುಚಿ ಸವಿದು ಹೋದರೆ, ಮತ್ತೆ ಕೆಲವರು ವಾಯುವಿಹಾರ ಮುಗಿಸಿ ಬಂದು ಟೀ, ಕಾಫಿ ಕುಡಿಯುತ್ತಾರೆ. ಗುಣಮಟ್ಟದ ಟೀ, ಕಾಫಿ ಪುಡಿ ಹಾಗೂ ನಂದಿನಿ ಹಾಲು ಬಳಸುವುದರಿಂದ ಇಲ್ಲಿನ ಟೀ, ಕಾಫಿಗೆ ಬೇಡಿಕೆ ಹೆಚ್ಚು. 20 ವರ್ಷಗಳಿಂದ ಅನುಭವ ಇರುವ ವ್ಯಕ್ತಿಯೊಬ್ಬರು ಟೀ, ಕಾಫಿ ಮಾಡುತ್ತಾರೆ. ಇದಲ್ಲದೆ, ಕಷಾಯ, ಬಾದಾಮಿ ಹಾಲು, ಮಸಾಲೆ ಮಜ್ಜಿಗೆಯೂ ಲಭ್ಯವಿದೆ.

ಬೆಳಿಗ್ಗೆ 7ರಿಂದ ತಿಂಡಿ ಲಭ್ಯ. ಇಡ್ಲಿ, ವಡೆ, ಪೊಂಗಲ್, ರೈಸ್ ಬಾತ್, ಪೂರಿ, ಉಪ್ಪಿಟ್ಟು, ಕೇಸರಿಭಾತ್, ಸೆಟ್‌ದೋಸೆ, ಮಸಾಲೆ ದೋಸೆ, ಮೈಸೂರು ಮಸಾಲೆ, ರವೆ ದೋಸೆ ಮಾಡಲಾಗುತ್ತದೆ.

ಸೆಟ್‌ ದೋಸೆ ಹಾಗೂ ರವೆ ದೋಸೆ ಹೆಚ್ಚಾಗಿ ಮಾರಾಟವಾಗುತ್ತದೆ. ಮಧ್ಯಾಹ್ನ 12ರಿಂದ ಊಟ ಸಿಗುತ್ತದೆ. ಇದಲ್ಲದೆ, ಮಿನಿ ಮೀಲ್ಸ್, ವೆಜ್ ಬಿರಿಯಾನಿ, ಫ್ರೈಡ್ ರೈಸ್, ಗೀ ರೈಸ್, ಮೊಸರನ್ನ, ರವಾ ಇಡ್ಲಿ, ಚಪಾತಿ ಲಭ್ಯ ಎಂದು ಹೋಟೆಲ್ ಮಾಲೀಕ ದಿನೇಶ್ ಭಟ್
ತಿಳಿಸಿದರು.

ಸಂಜೆ ಮಂಗಳೂರು ಬಜ್ಜಿ, ಈರುಳ್ಳಿ, ಬಾಳೆಕಾಯಿ, ಹೀರೇಕಾಯಿ ಬಜ್ಜಿ, ಮಸಾಲೆ ಉಪ್ಪಿಟ್ಟು, ಕೇಸರಿಭಾತ್,
ಬೋಂಡಾ ಸೂಪ್, ಅವಲಕ್ಕಿ ಉಪ್ಪಿಟ್ಟು, ನೀರ್ ದೋಸೆ, ರಾಗಿ ರೊಟ್ಟಿ, ಪಾಲಕ್ ದೋಸೆ, ಶಾವಿಗೆ ಇಡ್ಲಿ ಹಾಗೂ ಅಕ್ಕಿ ಇಡ್ಲಿ (ದಿನ ಬಿಟ್ಟು ದಿನ) ಸಿಗುತ್ತವೆ. ರಾತ್ರಿಗೆ ವೆಜ್ ಬಿರಿಯಾನಿ, ಫ್ರೈಡ್ ರೈಸ್, ಗೀ ರೈಸ್, ವಿವಿಧ ದೋಸೆ, ರೋಟಿ ಕರ‍್ರಿ ಸೇರಿದಂತೆ ವಿವಿಧ ಖಾದ್ಯಗಳು ಸಿಗುತ್ತವೆ. ರೋಟಿ ಕರ‍್ರಿ ತಿನ್ನಲು ಹೆಚ್ಚಿನ ಜನ ಬರುತ್ತಾರೆ ಎಂದು ಹೇಳಿದರು.

ಮೈಸೂರು ಮಸಾಲೆ ಈ ಹೋಟೆಲ್‌ನ ವಿಶೇಷ ತಿನಿಸು. ಅಮೂಲ್ ಬೆಣ್ಣೆ, ಕೆಂಪು ಚೆಟ್ನಿ ಹಾಕಿ ಈ ದೋಸೆ ಮಾಡಲಾಗುತ್ತದೆ. ಹೀಗಾಗಿ, ಇದು ಸ್ವಾದಿಷ್ಟಭರಿತವಾಗಿರುತ್ತದೆ.

ಮೂರು ಅಂತಸ್ತಿನ ರೆಸ್ಟೋರೆಂಟ್‌ನಲ್ಲಿ ನೆಲ ಮಹಡಿ ಹಾಗೂ ಮೊದಲನೇ ಮಹಡಿಯಲ್ಲಿ ಒಟ್ಟು 85 ಮಂದಿ ಕುಳಿತು ಊಟ ಮಾಡಬಹುದು. ಇಲ್ಲಿ ಸುಮಾರು 35 ಮಂದಿ ಕೆಲಸ ಮಾಡುತ್ತಿದ್ದಾರೆ.

ಕಾರ್ಮಿಕರೇ ಹೋಟೆಲ್‌ನ ಆಸ್ತಿ. ಅವರಿಂದಲೇ ಈ ಹೋಟೆಲ್ ನಡೆಯುತ್ತಿದೆ. ಅನುಭವಿ ಬಾಣಸಿಗರು, ಸಿಬ್ಬಂದಿ ಇದ್ದು, ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದ್ದಾರೆ. ಎಲ್ಲರೂ ಒಂದು ಕುಟುಂಬವೆಂಬಂತೆ ಕೆಲಸ ಮಾಡುತ್ತಾರೆ ಎಂದು ದಿನೇಶ್ ಭಟ್ ಹೇಳಿದರು.

ನಾವು ಈ ಹೋಟೆಲ್‌ನ ಕಾಯಂ ಗ್ರಾಹಕರು. ದಿನಕ್ಕೆ ಎರಡು ಬಾರಿಯಾದರೂ ಈ ಹೋಟೆಲ್‌ಗೆ ಬರುತ್ತೇವೆ. ಇದು ಮತ್ತೊಂದು ಮನೆಯಂತಾಗಿದ್ದು, ಇಲ್ಲಿ ಸಿಗುವ ಎಲ್ಲ ತಿಂಡಿ, ಊಟ ನಮಗೆ ಇಷ್ಟ ಎಂದು ರಾಜಣ್ಣ ಹಾಗೂ ನಾರಾಯಣಸ್ವಾಮಿ ತಿಳಿಸಿದರು.

ಊಬರ್ ಈಸ್ಟ್, ಸ್ವಿಗ್ಗಿ ಮೂಲಕವೂ ತಿಂಡಿ- ತಿನಿಸುಗಳನ್ನು ಆರ್ಡರ್
ಮಾಡಬಹುದು.

ಮಾಹಿತಿಗೆ ಮೊ: 9901241732, ದೂ: 0821- 4288770 ಸಂಪರ್ಕಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.