ಸೋಮವಾರ, ಅಕ್ಟೋಬರ್ 21, 2019
24 °C
ಮುದ್ರಾಂಕ ಸುಂಕ, ನೋಂದಣಿ ಶುಲ್ಕ: ಮಾರ್ಗಸೂಚಿ ದರ ಪರಿಷ್ಕರಣೆ ವಿಳಂಬ

ಬೊಕ್ಕಸಕ್ಕೆ ₹441 ಕೋಟಿ ನಷ್ಟ: ಸಿಎಜಿ ವರದಿ

Published:
Updated:

ಬೆಂಗಳೂರು: ಕರ್ನಾಟಕ ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕ ನಿಗದಿಪಡಿಸುವಲ್ಲಿ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಮಾರ್ಗಸೂಚಿ ದರವನ್ನೂ ಪರಿಷ್ಕರಿಸದೆ ಇದ್ದುದರಿಂದ ಬೊಕ್ಕಸಕ್ಕೆ ₹ 441 ಕೋಟಿ ನಷ್ಟ ಉಂಟಾಗಿದೆ ಎಂಬುದನ್ನು 2018ನೇ ಸಾಲಿನ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯಲ್ಲಿ ತಿಳಿಸಲಾಗಿದೆ.

ಮಾರುಕಟ್ಟೆ ಮೌಲ್ಯದ ಸೂಚಕಗಳನ್ನು ಮಾರ್ಗಸೂಚಿ ಮಾರುಕಟ್ಟೆ ಮೌಲ್ಯವನ್ನು ಅಂದಾಜಿಸುವಲ್ಲಿ ಪರಿಗಣಿಸಿಲ್ಲ ಎಂಬುದು ಸಿಎಜಿ ಗಮನಕ್ಕೆ ಬಂದಿತ್ತು. ಹೀಗಾಗಿ 3,335 ಪ್ರಕರಣಗಳಲ್ಲಿ ಪುನರ್‌ ಪರಿಶೀಲನೆ ನಡೆಸಿದಾಗ ₹ 2,232.40 ಕೋಟಿ ಮೊತ್ತವು ಲೆಕ್ಕಕ್ಕೆ ಸಿಗದೆ ಹೋಗಿತ್ತು. ಇದರಿಂದ ₹ 149.01 ಕೋಟಿ ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕ ನಷ್ಟವಾಗಿದೆ ಎಂಬುದನ್ನು ವರದಿ ಕಂಡುಕೊಂಡಿದೆ.

ಇದೇ ತಪ್ಪಿನಿಂದಾಗಿ ಗ್ರಾಮದ ಅಭಿವೃದ್ಧಿಪಡಿಸಿರದ ಭೂಮಿಗಿಂತಲೂ ಕಡಿಮೆ ಪ್ರಮಾಣದಲ್ಲಿ ನಿವೇಶನ ಮೌಲ್ಯಮಾಪನಗೊಳ್ಳುವಂತಾಯಿತು. 13,533 ಪ್ರಕರಣಗಳನ್ನು ಪರಿಶೀಲಿಸಿದಾಗ 3,167.52 ಕೋಟಿ ಅವಮೌಲ್ಯಾಂಕನ (ಅಂಡರ್‌ ವ್ಯಾಲ್ಯೂವೇಷನ್‌) ನಡೆದಿರುವುದು ಹಾಗೂ ಅದರಿಂದ ₹ 189.82 ಕೋಟಿ ನಷ್ಟವಾಗಿರುವುದು ಗೊತ್ತಾಗಿದೆ.

ಗ್ರಾಮಗಳಲ್ಲಿ ಅಧಿಕ ಪ್ರಮಾಣದ ಮಾರ್ಗಸೂಚಿ ಮಾರುಕಟ್ಟೆ ಮೌಲ್ಯದೊಂದಿಗಿನ ನಮೂದುಗಳನ್ನು ತೆಗೆದು ಹಾಕಿದ್ದರಿಂದ ₹ 33.51 ಕೋಟಿ, 3,237 ಅಪಾರ್ಟ್‌ಮೆಂಟ್‌ಗಳನ್ನು ಕಡಿಮೆ ಪ್ರಮಾಣದಲ್ಲಿ ಮೌಲ್ಯಮಾಪನ ಮಾಡಿದ್ದರಿಂದ ₹ 48.56 ಕೋಟಿ, ವಿವಿಧ ಯೋಜನೆಗಳಿಗೆ ನಿರ್ದಿಷ್ಟ ಹೆಸರು ನಿಗದಿಪಡಿಸದ ಕಾರಣ ₹ 20.37ಕೋಟಿ ಮೊತ್ತದಷ್ಟು ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕವನ್ನು ಕಡಿಮೆ ಪ್ರಮಾಣದಲ್ಲಿ ನಿಗದಿಪಡಿಸಲಾಗಿದೆ ಎಂದು ವರದಿ ತಿಳಿಸಿದೆ.

ಒಟ್ಟು 18 ಉಪ ನೋಂದಣಿ ಅಧಿಕಾರಿಗಳ ಕಚೇರಿಗಳಲ್ಲಿ ಮಾರ್ಗಸೂಚಿ ಮಾರುಕಟ್ಟೆ ಮೌಲ್ಯಗಳನ್ನು ತಪ್ಪಾಗಿ ಅಳವಡಿಸಿದ್ದರಿಂದ ಇಷ್ಟು ನಷ್ಟ ಸಂಭವಿಸಿದೆ ಎಂದು ವಿವರಿಸಲಾಗಿದೆ.

ಉಪಖನಿಜ ಸಾಗಣೆ: ₹ 191 ಕೋಟಿ ನಷ್ಟ: ರಾಜ್ಯದ ಉಪಖನಿಜಗಳ ಗಣಿಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸದೆ ಇರುವುದು, ದುರ್ಬಲ ಮೇಲ್ವಿಚಾರಣೆಗಳಿಂದಾಗಿ 9.94 ಲಕ್ಷ ಘನ ಮೀಟರ್‌ಗಳಷ್ಟು ಅಕ್ರಮ ಗಣಿಗಾರಿಕೆ ನಡೆದಿದೆ, ಇದರಿಂದ ರಾಜಧನ ಮತ್ತು ದಂಡ ಸೇರಿ ಬೊಕ್ಕಸಕ್ಕೆ ₹ 191.96 ಕೋಟಿ ನಷ್ಟ ಉಂಟಾಗಿದೆ ಎಂದು ಸಿಎಜಿ ವರದಿ ತಿಳಿಸಿದೆ.

Post Comments (+)