ಮೂಳೆ ಸವೆತ ತಡೆಗೆ ಕ್ಯಾಲ್ಸಿಯಂ ಪೂರಕ

ಬುಧವಾರ, ಮೇ 22, 2019
24 °C

ಮೂಳೆ ಸವೆತ ತಡೆಗೆ ಕ್ಯಾಲ್ಸಿಯಂ ಪೂರಕ

Published:
Updated:
Prajavani

ದೇಹದ ರಚನೆಗೆ ನೆರವಾಗುವ, ಆಂತರಿಕ ಅಂಗಾಂಗಗಳಿಗೆ ರಕ್ಷಣೆ ನೀಡುವ, ಸ್ನಾಯುಗಳು ಕೂಡಿಕೊಳ್ಳಲು ಸಹಕಾರಿಯಾಗಿರುವ ಮೂಳೆಯು ಕ್ಯಾಲ್ಸಿಯಂ ಮತ್ತು ಖನಿಜಾಂಶಗಳಿಂದ ಕೂಡಿದೆ. ಇಂತಹ ಮೂಳೆಗಳನ್ನು ಬಲಯುತವಾಗಿ ಮತ್ತು ಆರೋಗ್ಯವಂತಾಗಿಡಲು ಕ್ಯಾಲ್ಸಿಯಂ, ಖನಿಜಾಂಶವಿರುವ ಆಹಾರ ಪದಾರ್ಥಗಳನ್ನು ಮತ್ತು ವಿಟಮಿನ್ ಡಿ ಸಪ್ಲಿಮೆಂಟ್‌ ಅನ್ನು ನಿಯಮಿತ ಸೇವಿಸಬೇಕು. ವ್ಯಾಯಾಮವೂ ಅವಶ್ಯಕ. ಜೊತೆಗೆ ಆರೋಗ್ಯಕರ ಹವ್ಯಾಸಗಳು ನಮ್ಮ ಮೂಳೆಗಳನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತವೆ. ಉತ್ತಮವಾದ ಆಹಾರ ಪದಾರ್ಥಗಳನ್ನು ಸೇವಿಸದಿದ್ದರೆ ಮತ್ತು ವ್ಯಾಯಾಮದ ಕೊರತೆಯಿಂದ ಮೂಳೆಗಳು ಬಹು ಬೇಗ ದುರ್ಬಲವಾಗುತ್ತವೆ. ಅಷ್ಟೇ ಅಲ್ಲ, ಸಣ್ಣಪುಟ್ಟ ಆಪಘಾತಕ್ಕೂ ಮುರಿದುಹೋಗುವ ಸಂಭವವೂ ಇದೆ. ಒಮ್ಮೆ ಮೂಳೆ ಮುರಿದರೆ ಪುನಃ ಅದು ಕೂಡಿಕೊಳ್ಳಲು ಶಸ್ತ್ರಚಿಕಿತ್ಸೆಯೇ ಬೇಕಾಗಬಹುದು.

ಮೂಳೆ ಸವೆತದಿಂದಲೂ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ದುರ್ಬಲ ಮೂಳೆಗಳ ಲಕ್ಷಣ

ಮೂಳೆಗಳು ದುರ್ಬಲವಾದರೆ ಸ್ನಾಯುಗಳ ಶಕ್ತಿಯನ್ನು ಕುಂದಿಸಬಹುದು. ದೀರ್ಘಕಾಲದವರೆಗೆ ಮೂಳೆಗಳ ಆರೋಗ್ಯದ ಬಗ್ಗೆ ಗಮನ ನೀಡದಿದ್ದರೆ ಆಸ್ಟಿಯೋಪೊರೊಸಿಸ್‌ನಂತಹ ಕಾಯಿಲೆ ಕಾಣಿಸಿಕೊಳ್ಳಬಹುದು. ಇದರಿಂದ ಕಿಫೋಸಿಸ್ ಅಥವಾ ದುರ್ಬಲವಾದ ಮೂಳೆಗಳಾಗಿ ಬದಲಾವಣೆಗೊಂಡು ಮುರಿತ ಉಂಟಾಗುತ್ತದೆ. ಅಲ್ಲದೇ ಸಂಧಿಗಳು ದುರ್ಬಲಗೊಳ್ಳುತ್ತವೆ ಮತ್ತು ಸಂಧಿವಾತದಂತಹ ಸಮಸ್ಯೆಗಳು ಎದುರಾಗುತ್ತವೆ. ಈಗ ಆಸ್ಟಿಯೋಪೊರೊಸಿಸ್ ಬಹಳ ಜನರಲ್ಲಿ ಕಾಣಿಸಿಕೊಳ್ಳುತ್ತಿದ್ದು, ರೋಗಕ್ಕೆ ತುತ್ತಾಗುವ ಜನರು ಸಾಮಾನ್ಯವಾಗಿ ಮಣಿಕಟ್ಟು, ಬೆನ್ನೆಲುಬು ಮತ್ತು ಹಿಪ್‌ನ ಮೂಳೆಗಳ ಮುರಿತಕ್ಕೆ ಒಳಗಾಗುತ್ತಾರೆ.

ಭಾರತದಲ್ಲಿ ದುರ್ಬಲ ಮೂಳೆಯ ಸಮಸ್ಯೆಗೆ ಒಳಗಾಗುತ್ತಿರುವವರಲ್ಲಿ ಬಹುತೇಕ ಜನರು ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದಿರುವ ಕ್ಷೇತ್ರದವರಾಗಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅಸಮರ್ಪಕವಾದ ಆಹಾರ ಅಥವಾ ಅಪೌಷ್ಟಿಕತೆ. ಇದರ ಪರಿಣಾಮದಿಂದ ಭಾರತದಲ್ಲಿ ಆಸ್ಟಿಯೋಪೆನಿಯಾ (ಶೇ.52) ಮತ್ತು ಆಸ್ಟಿಯೋಪೊರೊಸಿಸ್(ಶೇ.29) ರೋಗಲಕ್ಷಣಗಳು ಜನರಲ್ಲಿ ಕಾಣಿಸಿಕೊಳ್ಳುತ್ತಿವೆ. ಆಸ್ಟಿಯೋಪೊರೊಸಿಸ್ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ. ಭಾರತೀಯ ಮಹಿಳೆಯರಲ್ಲಿ ಅದರಲ್ಲೂ ಕಡಿಮೆ ಆದಾಯ ಇರುವಂತಹ ಕುಟುಂಬಗಳ ಮಹಿಳೆಯರು ಕಡಿಮೆ ಕ್ಯಾಲರಿ, ಕಡಿಮೆ ಪ್ರೊಟೀನ್‌ಗಳು ಮತ್ತು ಮೈಕ್ರೋನ್ಯೂಟ್ರಿಯೆಂಟ್‌ಗಳೊಂದಿಗೆ ಕ್ಯಾಲ್ಸಿಯಂ ಪ್ರಮಾಣ ಕಡಿಮೆ ಇರುವ ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ. ಆಸ್ಪತ್ರೆಗಳ ಅಂಕಿ–ಅಂಶಗಳನ್ನು ಗಮನಿಸಿದರೆ ಕಡಿಮೆ ವಯೋಮಾನದವರಿರುವಾಗಲೇ ಮಹಿಳೆಯರು ಆಸ್ಟಿಯೋಪೊರೊಟಿಕ್ ಹಿಪ್ ಮುರಿತಕ್ಕೆ ಒಳಗಾಗುತ್ತಿದ್ದಾರೆ. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತೀಯ ಮಹಿಳೆಯರು 30– 60 ವರ್ಷವಯಸ್ಸಿನಲ್ಲಿಯೇ ಈ ಸಮಸ್ಯೆಗೆ ಹೆಚ್ಚು ತುತ್ತಾಗುತ್ತಿದ್ದಾರೆ.

ಕಾರಣಗಳು

ಇದಕ್ಕೆ ಪ್ರಮುಖ ಕಾರಣಗಳೆಂದರೆ ಕಡಿಮೆ ಕ್ಯಾಲ್ಸಿಯಂ ಇರುವ ಪದಾರ್ಥಗಳ ಸೇವನೆ, ಸರಿಯಾದ ರೀತಿಯಲ್ಲಿ ಆಹಾರ ಸೇವಿಸದಿರುವುದು. ಗ್ಯಾಸ್ಟ್ರೋಇಂಟೆಸ್ಟಿನಲ್ ಶಸ್ತ್ರಚಿಕಿತ್ಸೆಗೆ ಒಳಗಾದವರು, ಸ್ಟೆರಾಯ್ಡ್‌ಗಳನ್ನು ಮತ್ತು ಇತರೆ ಔಷಧಗಳನ್ನು ತೆಗೆದುಕೊಳ್ಳುವ ರೋಗಿಗಳಿಗೆ ಅಡ್ಡ ಪರಿಣಾಮ ಉಂಟಾಗಿ ಮೂಳೆಗಳಲ್ಲಿ ಸವೆತ ಉಂಟಾಗುತ್ತದೆ, ವಿಟಮಿನ್ ಡಿ ಇಂಥವರಲ್ಲಿ ಕಡಿಮೆ ಪ್ರಮಾಣದಲ್ಲಿರುತ್ತದೆ.

ಹೃದ್ರೋಗ, ಪಾರ್ಶ್ವವಾಯು, ಬೊಜ್ಜು, ಮಧುಮೇಹ ಮತ್ತು ಥೈರಾಯ್ಡ್, ರುಮಟಾಯ್ಡ್ ಅರ್ಥ್ರೈಟಿಸ್, ಸೆಲಿಯಾಕ್ ರೋಗಗಳೂ ಸಹ ಮೂಳೆಗಳ ಆರೋಗ್ಯವನ್ನು ಹದಗೆಡಿಸಬಹುದು. ಧೂಮಪಾನ, ಮದ್ಯಪಾನ ಮತ್ತು ಮಾದಕದ್ರವ್ಯ ಸೇವನೆ ಕೂಡ ಮೂಳೆಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ರೋಗ ಪತ್ತೆ

ನಿಮ್ಮ ಮೂಳೆಯ ಆರೋಗ್ಯದ ಪರಿಸ್ಥಿತಿಯನ್ನು ಎಕ್ಸ್‌ರೇ, ‘ಬೋನ್ ಮಿನರಲ್ ಡೆನ್ಸಿಟಿ’ ಪರೀಕ್ಷಾ ವಿಧಾನಗಳಿಂದ ಕಂಡು ಹಿಡಿಯಬಹುದು. ಮುಂಚಿತವಾಗಿ ಆಸ್ಟಿಯೋಪೊರೊಸಿಸ್‌ನ ಲಕ್ಷಣಗಳನ್ನು ಪತ್ತೆ ಮಾಡಬಹುದು. ಇದಲ್ಲದೇ, ನಿರ್ದಿಷ್ಟವಾದ ಕ್ಯಾಲ್ಸಿಯಂ, ವಿಟಮಿನ್ ಡಿ, ಅಲ್ಕಾಲೈನ್ ಫಾಸ್ಫೇಟೇಸ್ ಇತ್ಯಾದಿ ರಕ್ತ ಪರೀಕ್ಷೆಗಳನ್ನು ವೈದ್ಯರ ಸಲಹೆ ಮೇರೆಗೆ ಮಾಡಿಸಿಕೊಳ್ಳಬೇಕಾಗುತ್ತದೆ. ಮೂಳೆಗಳಲ್ಲಿ ಸವೆತ ಅಥವಾ ದೌರ್ಬಲ್ಯ ಕಂಡುಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಅವರ ಸಲಹೆ ಸೂಚನೆಯಂತೆ ಚಿಕಿತ್ಸೆ ಪಡೆಯಬೇಕು.

ರೂಢಿಸಿಕೊಳ್ಳುವುದೇನು?

ನಿಯಮಿತವಾದ ವ್ಯಾಯಾಮ, ಕ್ಯಾಲ್ಸಿಯಂ ಮತ್ತು ಖನಿಜಾಂಶಗಳು ಇರುವ ಸಮರ್ಪಕವಾದ ಆಹಾರ ಸೇವನೆ, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಸೇರಿದಂತೆ ಹಲವು ಉತ್ತಮ ಜೀವನಶೈಲಿಗಳನ್ನು ರೂಢಿಸಿಕೊಂಡರೆ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮದ್ಯಪಾನ ಮತ್ತು ತಂಬಾಕುಸೇವನೆಯನ್ನು ಬಿಡಬೇಕು.

(ಲೇಖಕರು ಕನ್ಸಲ್ಟೆಂಟ್ ಆರ್ಥೋಪೆಡಿಕ್ ಸರ್ಜನ್, ವಿಕ್ರಂ ಹಾಸ್ಪಿಟಲ್, ಬೆಂಗಳೂರು)

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !