ಶಕ್ತಿ ಶಾಲೆಯಲ್ಲಿ ‘ಶಕ್ತಿ ಕ್ಯಾನ್‌ ಕ್ರಿಯೇಟ್‌’ ಬೇಸಿಗೆ ಶಿಬಿರ

ಬುಧವಾರ, ಏಪ್ರಿಲ್ 24, 2019
31 °C

ಶಕ್ತಿ ಶಾಲೆಯಲ್ಲಿ ‘ಶಕ್ತಿ ಕ್ಯಾನ್‌ ಕ್ರಿಯೇಟ್‌’ ಬೇಸಿಗೆ ಶಿಬಿರ

Published:
Updated:
Prajavani

ಮಕ್ಕಳ ಶಾಲೆಗಳಿಗೆ ಈಗ ರಜೆ, ಪರೀಕ್ಷಾ ಫಲಿತಾಂಶವು ಪ್ರಕಟವಾಗಿವೆ. ರಜಾ ದಿನಗಳಲ್ಲಿ ಮಕ್ಕಳು ಅಜ್ಜ, ಅಜ್ಜಿ, ಚಿಕ್ಕಮ್ಮ, ಹೀಗೆ ಅವರಿಗೆ ಇಷ್ಟದ ಸಂಬಂಧಿಗಳ ಮನೆ ಅಥವಾ ಊರ  ಕಡೆಗೆ ಮುಖ ಮಾಡುತ್ತಾರೆ. ಈ ಸಿದ್ಧತೆ ರಜೆ ಘೋಷಣೆಗೂ ಮುನ್ನವೇ ತಯಾರಿ ಮಾಡಿಟ್ಟಿರುತ್ತಾರೆ. ಪಾಲಕರಿಗೆ ಈ ವೇಳೆ ಮಕ್ಕಳನ್ನು ಸಂಭಾಳಿಸುವುದು ಹೇಗೆ ಎಂಬ ಚಿಂತೆ ಶುರುವಾಗಿರುತ್ತದೆ. ಶಾಲೆಗೆ ಹೋಗುವಾಗ ಈ ತಾಪತ್ರಯ ಇರುವುದಿಲ್ಲ. ಮಕ್ಕಳನ್ನು ಮನೆಯಲ್ಲಿಯೇ ಕಟ್ಟಿ ಹಾಕುವುದು ಒಂದು ಸಾಹಸದ ಕೆಲಸ ಆಗಿಬಿಡುತ್ತದೆ. ಉದ್ಯೋಗಸ್ಥದ್ದೂ ಇದೇ ಕತೆ. ಮಕ್ಕಳ ರಜಾ ದಿನಗಳಲ್ಲಿ ಭಾರದ ಪುಸ್ತಕ ಇರುವ ಬ್ಯಾಗ್‌ನಿಂದ ರಿಲ್ಯಾಕ್ಸ್‌ ಆಗಿರುತ್ತಾರೆ. ಈ ಸಮಯದಲ್ಲಿ ಮಕ್ಕಳು ಖುಷಿ ಖುಷಿ ಆಗಿರಲಿ ಎಂಬ ಕಾರಣಕ್ಕೆ ಬೇಸಿಗೆ ಶಿಬಿರಗಳತ್ತ ಪೋಷಕರು ಎದಿರು ನೋಡುತ್ತಾರೆ. ಮಕ್ಕಳನ್ನು ಸದಾ ಚಟುವಟಿಕೆಯಿಂದ ಇರಬೇಕು ಎಂಬ ಸಲುವಾಗಿ ಬೇಸಿಗೆ ಶಿಬಿರಕ್ಕೆ ಸೇರ್ಪಡೆ ಮಾಡಲಾಗುತ್ತದೆ.

ಮಂಗಳೂರು ನಗರದಲ್ಲಿ ಈಗಾಗಲೇ ಹಲವು ವೈವಿಧ್ಯಮಯ ಬೇಸಿಗೆ ಶಿಬಿರಗಳು ಆರಂಭವಾಗಿವೆ. ಮಕ್ಕಳಿಗೆ ಬೇಸಿಗೆ ಕಾಲದ ರಜಾ ದಿನಗಳು ಸಂತೋಷದಾಯಕ ಆಗಿರಲಿ ಎಂಬ ಕಾಳಜಿಯಿಂದ ಮಂಗಳೂರಿನ ಶಕ್ತಿ ನಗರದ ಶಕ್ತಿ ವಸತಿ ಶಾಲೆಯು ‘ಶಕ್ತಿ ಕ್ಯಾನ್‌ ಕ್ರಿಯೇಟ್‌’ ಎಂಬ ವಿನೂತನ ಪರಿಕಲ್ಪನೆಯ ಬೇಸಿಗೆ ಶಿಬಿರವನ್ನು ಆರಂಭಿಸಿದೆ. ಶಿಬಿರ ಏಪ್ರಿಲ್‌ 11ರಿಂದ ಆರಂಭಗೊಂಡಿದ್ದು, 30ವರೆಗೆ ನಡೆಯಲಿದೆ. ಶಿಬಿರಕ್ಕೆ ಇದೇ ಶಾಲೆ ವಿದ್ಯಾರ್ಥಿಗಳು ದಾಖಲಾತಿ ಪಡೆಯಬೇಕು ಎಂಬ ನಿಯಮವಿಲ್ಲ. ಯಾವುದೇ ಶಾಲೆಯ ಆಸಕ್ತ ವಿದ್ಯಾರ್ಥಿಗಳು ‘ಶಕ್ತಿ ಕ್ಯಾನ್‌ ಕ್ರಿಯೇಟ್‌’  ಶಿಬಿರದ ಪ್ರಯೋಜನ ಪಡೆಯಬಹುದು.

‘ಶಿಬಿರಕ್ಕೆ ಬರುವ ಮಕ್ಕಳು ಸಂಪೂರ್ಣವಾಗಿ ಶಾಲೆ ಮರೆಯಬೇಕು. ಶಾಲಾ ವಾತಾರಣ ಬಿಟ್ಟು ಸ್ವಚ್ಛಂದವಾಗಿ ಪಠ್ಯೇತರ ಚಟುವಟಿಕೆ ಕಟ್ಟಿಕೊಡುವ ಕೆಲಸ ‘ಶಕ್ತಿ ಕ್ಯಾನ್‌ ಕ್ರಿಯೇಟ್‌’ ಶಿಬಿರದಲ್ಲಿ ನಡೆಯುತ್ತದೆ. ಅಂಕಗಳಿಗೆ ಪ್ರಾಶಸ್ತ್ಯ ಶಿಬಿರದಲ್ಲಿ ಇಲ್ಲ. ಮಕ್ಕಳಲ್ಲಿ ಖುಷಿಯ ಕಣಜ ಕಟ್ಟಿಕೊಡುವ, ಮಣ್ಣಿನಲ್ಲಿ ಆಡಿ ಸಂತಸ ಪಡುವ ವಾತಾವರಣ ಇರುತ್ತದೆ. ಶಿಬಿರಕ್ಕೆ ಬರುವ ಮಕ್ಕಳಿಗೆ ಎಲ್ಲ ಸಾಮಗ್ರಿಗಳನ್ನು ನೀಡಲಾಗುತ್ತದೆ’ ಎಂದು ಸಂಸ್ಥೆಯ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಹೇಳಿದರು.

ಶಿಬಿರವು ಬೆಳಿಗ್ಗೆ 8ರಿಂದ ಸಂಜೆ 5ರ ತನಕ ನಡೆಯುತ್ತದೆ. ಶಿಬಿರದಲ್ಲಿ ಯೋಗ, ಚಿತ್ರಕಲೆ, ಕರಕುಶಲ ಕಲೆ, ವ್ಯಂಗ್ಯ ಚಿತ್ರ, ಮುಖವಾಡ ರಚನೆ, ಫೋಮ್ ಆರ್ಟ್, ಆವೆ ಮಣ್ಣಿನ ರಚನೆ, ವರ್ಲಿ ಕಲೆ, ಕಾವಿ ಕಲೆ, ಗ್ರೀಟಿಂಗ್ ಕಾರ್ಡ್, ಗಾಳಿಪಟ ರಚನೆ, ರಂಗೋಲಿ, ವೇದ ಗಣಿತ, ಗೆರಟೆ ಕಲೆ, ಮಿಮಿಕ್ರಿ, ಮಾನವ ಸಂಪನ್ಮೂಲ ತರಬೇತಿ, ನಾಯಕತ್ವ ತರಬೇತಿ, ಭಾಷಣ ಕಲೆ, ಸುಂದರ ಕೈ ಬರಹ, ಪೇಪರ್ ಕಟ್ಟಿಂಗ್, ಲೋಹದ ಉಬ್ಬು ಶಿಲ್ಪ, ಜನಪದ ಹಾಡು, ಕುಣಿತ, ಕಿರು ನಾಟಕ, ಕತೆ ಕೇಳು - ಹೇಳು, ನೆರಳಿನಾಟ, ಮ್ಯಾಜಿಕ್, ವನ – ವನ್ಯ ಜೀವಿಗಳು, ಸೀಮೆ ಸುಣ್ಣದಿಂದ ಕಲಾಕೃತಿ ರಚನೆ, ರೇಡಿಯೊ ಸಾರಂಗ್ ಪ್ರಾತ್ಯಕ್ಷಿಕೆ, ಸಮುದ್ರ ತೀರದಲ್ಲಿ ಗಾಳಿಪಟ ಹಾರಿಸುವುದು, ಪ್ರವಾಸ ಸೇರಿದಂತೆ ಹಲವು ಚಟುವಟಿಕೆಗಳು ನಡೆಯುತ್ತಿವೆ.

ಶಿಬಿರವು ಮೂರು ಹಂತಗಳಲ್ಲಿ ನಡೆಯಲಿದೆ. 1ರಿಂದ 4ನೇ ತರಗತಿ 2 ಬ್ಯಾಚ್‌,  5ರಿಂದ 7 ಹಾಗೂ 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 1 ಬ್ಯಾಚ್‌ ಅನ್ನು ಮಾಡಲಾಗಿದೆ. ವಿದ್ಯಾರ್ಥಿ – ವಿದ್ಯಾರ್ಥಿನಿಯರು ಕೂಡಾ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಶಿಬಿರಕ್ಕೆ ನಗರದ ಬೇರೆ ಬೇರೆ ಕೇಂದ್ರಗಳಿಂದ ಬರುವ ವಿದ್ಯಾರ್ಥಿಗಳಿಗೆ ಸಂಚಾರ ಸೌಲಭ್ಯ ಒದಗಿಸಲಾಗಿದೆ. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಊಟ – ಜ್ಯೂಸ್‌ ವ್ಯವಸ್ಥೆ ಕೂಡ ಮಾಡಲಾಗಿದೆ. 

ಮಕ್ಕಳಲ್ಲಿನ ಸುಪ್ತ ಪ್ರತಿಭೆ ಹೊರಗೆಳೆದು ಅವರ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವಂತಾಗಲು ರಜಾ ಕಾಲದ ಶಿಬಿರ ಉತ್ತಮ ವೇದಿಕೆ ಆಗಿದೆ. ಈ ಕೆಲಸವನ್ನು ಶಕ್ತಿ ವಸತಿ ಶಾಲೆ ಕಟ್ಟಿಕೊಡುತ್ತಿದೆ. ಮಕ್ಕಳಲ್ಲಿ ಅಪಾರ ಪ್ರತಿಭೆ ಹಾಗೂ ಕೌಶಲಗಳು ಇರುತ್ತವೆ. ಇವುಗಳ ನಿರ್ವಹಣೆಗಾಗಿ ಶಿಬಿರಗಳ ಮೂಲಕ ವೇದಿಕೆ ಒದಗಿಸಲಾಗುತ್ತದೆ. ಈಗಾಗಲೇ ಶಿಬಿರಕ್ಕೆ 140 ವಿದ್ಯಾರ್ಥಿಗಳು ಹೆಸರು ನೋಂದಣಿ ಮಾಡಿಕೊಂಡು ದಿನಂಪ್ರತಿ ಬರುತ್ತಿದ್ದಾರೆ. ಪಾಲಕರು ಕೂಡಾ ಮಕ್ಕಳ ಚಟುವಟಿಕೆಯನ್ನು ಕಂಡು ಖುಷಿ ಪಡುತ್ತಿದ್ದಾರೆ ಎಂದು ಶಾಲೆಯ ಪ್ರಾಚಾರ್ಯೆ ವಿದ್ಯಾ ಕಾಮತ್ ಜಿ. ಹೇಳಿದರು.

ಶಿಬಿರದಲ್ಲಿ ಪರಿಣಿತರ ಮಾರ್ಗದರ್ಶನ:  ಶಿಬಿರದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ವಿಷಯ ಪರಿಣಿತರಿಂದ ಪ್ರಾಯೋಗಿಕ ತರಬೇತಿ ಸಿಗಲಿದೆ. ಪಿ.ಎನ್. ಆಚಾರ್ಯ ಮಣಿಪಾಲ, ವೆಂಕಿ ಪಲಿಮಾರ್, ಪೆರ್ಮುದೆ ಮೋಹನ್ ಕುಮಾರ್, ಜಾನ್ ಚಂದ್ರನ್, ದಿನೇಶ್ ಹೊಳ್ಳ, ವೀಣಾ ಶ್ರೀನಿವಾಸ್, ಸುಧೀರ್ ಕಾವೂರು, ಪೂರ್ಣೆಶ್ ಪಿ., ರತ್ನಾವತಿ ಜೆ. ಬೈಕಾಡಿ, ಸಚಿತಾ ನಂದಗೋಪಾಲ್, ಗೋಪಾಲಕೃಷ್ಣ ದೇಲಂಪಾಡಿ, ರಮೇಶ್ ಕಲ್ಮಾಡಿ, ಪ್ರೇಮನಾಥ ಮರ್ಣೆ, ಮೈಮ್ ರಾಮದಾಸ್, ಅರುಣ್ ಕುಮಾರ್ ಕುಳಾಯಿ, ಪಟ್ಟಾಭಿರಾಮ ಸುಳ್ಯ, ರಚನಾ ಕಾಮತ್, ಮುರಳೀಧರ್ ಕಾಮತ್, ನಾದಶ್ರೀ, ಎ.ಜಿ ಸದಾಶಿವ, ಮಹೇಶ್ ರಾವ್ ಉಡುಪಿ, ಸುರೇಖಾ ಕವತ್ತಾರು, ರಾಜೇಶ್ ಶ್ರೀವನ, ಎಂ.ಎಸ್ ಹೆಬ್ಬಾರ್, ಬೈಕಾಡಿ ಜನಾರ್ದನ ಆಚಾರ್, ನಸೀಮ್ ಬಾನು, ವಿದ್ಯಾ ಕಾಮತ್ ಜಿ., ರಾಜೇಶ್ವರಿ, ಪ್ರಶಾಂತ್, ಗಣೇಶ್ ಕುದ್ರೋಳಿ, ಆಶ್ಲಿ, ಹರೀಶ್ ಆಚಾರ್ ತೊಕ್ಕೊಟ್ಟು, ಸುಂದರ್ ತೋಡಾರ್, ಸಹನಾ ತೋಡಾರ್, ಶಿವಶಂಕರ್, ವಿನೀತ್ ಮೊದಲಾದವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !