ನಾನ್ ಕಟ್ಟಾ; ನಂಗೇನ್ ಹೇಳ್ತೀರೋ..!

ಸೋಮವಾರ, ಮೇ 20, 2019
30 °C
ಮತಗಟ್ಟೆ ಕೇಂದ್ರಗಳ ಕೂಗಳತೆ ದೂರದಲ್ಲೇ ಕೊನೆ ಕ್ಷಣದ ಕಸರತ್ತು; ಮತಕ್ಕಾಗಿ ಮೊರೆ

ನಾನ್ ಕಟ್ಟಾ; ನಂಗೇನ್ ಹೇಳ್ತೀರೋ..!

Published:
Updated:

ವಿಜಯಪುರ: ‘ಏಯ್‌ ನಾ ಕಟ್ಟಾ ಕಣ್ರೋ. ನಂಗೇನ್ ನೀವ್ ಹೇಳ್ತೀರ್ರೋ. ಬೇರೆ ಯಾರಾಗಾದ್ರೂ ಕೈ ಮುಗಿರಿ. ಯಾರ್ ಎಷ್ಟೇ ಬೇಡ್ಕೊಂಡ್ರೂ ನನ್ನ ಮತ...’

ವಿಜಯಪುರ ತಾಲ್ಲೂಕಿನ ನಾಗಠಾಣ ಗ್ರಾಮದಲ್ಲಿ ಮಂಗಳವಾರ ಮತ ಚಲಾಯಿಸಲಿಕ್ಕಾಗಿ ಮತಗಟ್ಟೆಗೆ ಬಂದ ವ್ಯಕ್ತಿಯೊಬ್ಬರಿಗೆ, ‘ಅಣ್ಣಾ ನಮ್ದೇ ಫಸ್ಟ್‌... ಇಲ್ಲಣ್ಣೋ ಮೂರು ಮೂರು..!’ ಎಂದು ಮೊರೆಯಿಟ್ಟ ಬಿಜೆಪಿ, ಜೆಡಿಎಸ್ ಬೆಂಬಲಿಗರಿಗೆ ಮತದಾರರೊಬ್ಬರು ನೀಡಿದ ಕಟು ಪ್ರತಿಕ್ರಿಯೆಯಿದು.

ಮತಗಟ್ಟೆ ಕೇಂದ್ರದಿಂದ ಕೂಗಳತೆ ದೂರದಲ್ಲೇ, ನಿಷೇಧಿತ ಪ್ರದೇಶದಲ್ಲಿ ಮತ ಯಾಚನೆ ಬಿರುಸಿನಿಂದ ನಡೆದಿದ್ದು ಗೋಚರಿಸಿತು.

ಜೆಡಿಎಸ್ ಅಭ್ಯರ್ಥಿ ಸುನೀತಾ ದೇವಾನಂದ ಚವ್ಹಾಣ ಸಹ ವಿವಿಧ ಮತಗಟ್ಟೆಗಳಿಗೆ ಬೆಂಬಲಿಗರೊಂದಿಗೆ ಭೇಟಿ ನೀಡಿ, ಮತದಾನ ಪ್ರಕ್ರಿಯೆ ವೀಕ್ಷಿಸಿದರು. ಇದೇ ಸಂದರ್ಭ ಸರತಿಯಲ್ಲಿದ್ದ ಮತದಾರರಿಗೆ ಕೈ ಮುಗಿದರು. ಮತ ಚಲಾಯಿಸಲು ಮತಗಟ್ಟೆಗೆ ಬಂದ ಹೆಣ್ಮಕ್ಕಳನ್ನು ಭೇಟಿಯಾಗಿ ‘ನಾ ಹೆಣ್ಮಗಳಿದ್ದೀನಿ. ನಿಮ್ಮ ಪರವಿರ್ತೀನಿ. ಮೂರಕ್ಕ ನಿಮ್ಮ ಮತ ಹಾಕ್ರಕ್ಕ’ ಎಂದು ಮೊರೆಯಿಟ್ಟರು.

‘ನಮ್ಮೂರು ಫುಲ್‌ ಬಿಜೆಪಿ ಕಣ್ರೀ. ಕೆಲವರು ದುಡ್ಡಿನಾಸೆಗೆ ಜೆಡಿಎಸ್ ಬೆಂಬಲಿಸುತ್ತಿದ್ದಾರಷ್ಟೇ. ಅವರು ಒಳಗೆ ಯಾವ್ದಕ್ಕ ಒತ್ತಾರೆ ಎಂಬುದೇ ಅವರಿಗೆ ಕನ್ಫರ್ಮ್‌ ಇಲ್ರೀ’ ಎಂದು ನಾಗಠಾಣದ ಬಿಜೆಪಿ ಕಾರ್ಯಕರ್ತರೊಬ್ಬರು ಇದೇ ಸಂದರ್ಭ ‘ಪ್ರಜಾವಾಣಿ’ಗೆ ತಿಳಿಸಿದರು.

ಆಧಾರ್‌ ಕಾರ್ಡ್‌ನಲ್ಲೇ ಗಾಳಿ: ಬಿಜೆಪಿಯ ಹುರಿಯಾಳು ರಮೇಶ ಜಿಗಜಿಣಗಿ ಸ್ವಗ್ರಾಮ ಅಥರ್ಗಾ. ಮಾದರಿ ಮತಗಟ್ಟೆಯೂ ಇಲ್ಲಿಯೇ ಇತ್ತು. ಮತದಾನ ಕೇಂದ್ರದ ಮುಂಭಾಗ ಶಾಮಿಯಾನ ಹಾಕಿ, ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಇದರ ಜತೆ ಕುಡಿಯಲು ನೀರಿಟ್ಟಿದ್ದರು. ಕೂರಲು ಕುರ್ಚಿಗಳಿದ್ದವು. ಮಹಿಳೆಯರು ಸರತಿಯಲ್ಲಿ ಕೂತು ಮತ ಚಲಾಯಿಸಿದ್ದು ವಿಶೇಷವಾಗಿತ್ತು.

ಸಿಐಎಸ್‌ಎಫ್‌ ಪಡೆ ಮತಗಟ್ಟೆಗೆ ಭದ್ರತೆ ಒದಗಿಸಿತ್ತು. ಮತಗಟ್ಟೆಯಿಂದ 100 ಅಡಿ ಅಂತರದಲ್ಲೇ ನಿಂತಿದ್ದ ಬಿಜೆಪಿ ಬೆಂಬಲಿಗರು, ಮತ ಚಲಾಯಿಸಲು ಬಂದವರಿಗೆಲ್ಲಾ; ‘ಅಣ್ವಾವ್ರೇ, ಅಕ್ಕಾವ್ರೇ ನಮ್ದು ಏಕ್‌ ನಂಬರ್ ಮರಿಬ್ಯಾಡ್ರೀ’ ಎಂದು ಖುಲ್ಲಂ ಖುಲ್ಲಾ ಮನವಿ ಮಾಡಿದರು. ಯುವಕರಂತೂ ಮಹಿಳೆಯರು ತಂಡೋಪ ತಂಡವಾಗಿ ಮತಗಟ್ಟೆಯತ್ತ ಬರುತ್ತಿದ್ದಂತೆ, ಅವರ ಬಳಿಗೆ ತೆರಳಿ ಮತದಾರರ ಗುರುತಿನ ಚೀಟಿ ಕೊಟ್ಟು, ಕ್ರಮ ಸಂಖ್ಯೆಯನ್ನು ಹೇಳಿ ಮತ ಚಲಾಯಿಸಲು ಕಳುಹಿಸಿದರು.

‘ಬಿಸಿಲು ಭಾಳಾ ಐತ್ರಿ. ಪುಣ್ಯಾಕ ಕುಡಿಯೋ ನೀರಿನ ವ್ಯವಸ್ಥೆ ಮಾಡಿ ಚಲೋ ಮಾಡ್ಯಾರ’ ಎಂದು ರಾಜಕುಮಾರ ಚಾಂದಕವಠೆ, ಪ್ರಸಾದ ಚಂದನಕರ ಹೇಳಿದರೆ, ಸರತಿಗಾಗಿ ಕುರ್ಚಿಯಲ್ಲಿ ಕೂತಿದ್ದ ಮಹಿಳೆಯರು ಬಿಸಿಲ ಬೇಗೆ ತಾಳಲಾರದೆ, ತಮ್ಮ ಕೈಯಲ್ಲಿದ್ದ ಆಧಾರ್‌ ಕಾರ್ಡ್‌ನ ಗುರುತಿನ ಪತ್ರದಿಂದಲೇ ಗಾಳಿ ಹೊಡೆದುಕೊಂಡರು.

ತಾಂಬಾದಲ್ಲಿ ಮಾತಿನ ಚಕಮಕಿ: ‘ನಮ್ಮೂರಾಕಿನೇ ಎಲೆಕ್ಷನ್‌ಗೆ ನಿಂತ್ವಾಳೆ. ನಾವ್ ಬೆಂಬಲಿಸ್ತೀವಿ ಎಂದು ಮಹಿಳಾ ಮತದಾರರು ಹೇಳಿದರೆ; ಹೆಣ್ಮಗಳು ಊರಾಕಿ. ವಿಧಾನಸಭಾ ಚುನಾವಣೆಗೂ ಮಿಕ್ಕಿ ಈ ಚುನಾವಣೆ ಮಾಡೀವಿ. ಮನಗೂಳಿನೂ ನಮ್ಮೂರ್‌ಗೆ ಭಾಳಾ ಕೆಲ್ಸ ಮಾಡಿಕೊಟ್ವಾರೆ. ಅದಕ್ಕೆ ವೋಟ್ ಹಾಕ್ತೀವಿ. ಏನೇ ಆದ್ರೂ ಲೀಡ್ ನಮ್ದೆ. ಅವ್ರಿಗೂ 30ರಿಂದ 40% ವೋಟ್ ಆಗಬಹುದು’ ಎಂದು ಮತಗಟ್ಟೆ ಬಳಿಯಿದ್ದ ಮತದಾರ ಸಮೂಹ ತಮ್ಮೊಳಗೆ ಚರ್ಚೆ ನಡೆಸಿತು.

ಮತಗಟ್ಟೆ ಕೇಂದ್ರದೊಳಗಿನ ಮರದ ನೆರಳಿನಲ್ಲಿ ನಿಂತು ಜೆಡಿಎಸ್ ಬೆಂಬಲಿಗರು ಮತ ಯಾಚನೆ ನಡೆಸಿದ್ದರು. ಬೈಕ್‌ನಲ್ಲಿ ಸ್ಥಳಕ್ಕೆ ಬಂದ ಬಿಜೆಪಿ ಕಾರ್ಯಕರ್ತ ಶಂಕರ ಏಳುಕೋಟಿ ಆಕ್ಷೇಪ ತೆಗೆದ್ರು. ಭದ್ರತೆಗಿದ್ದ ಪೊಲೀಸರಿಗೆ ದಬಾಯಿಸಿದ್ರು. ಅವರನ್ನ ಹೊರಗೆ ಕಳಿಸ್ತೀರೋ, ಇಲ್ಲಾ ನಾನು ನಮ್‌ ಹುಡುಗ್ರನ್ನ ಕರೆಸಿಕೊಳ್ಳಲಾ ಎನ್ನುತ್ತಿದ್ದಂತೆ, ನೆರೆದಿದ್ದವರು ಶಂಕರ ವಿರುದ್ಧ ಮುಗಿಬಿದ್ದರು.

ಏಕಾಂಗಿಯಾಗಿದ್ದ ಏಳುಕೋಟಿ ಯಾರಿಗೂ ಅಂಜದೆ, ತನ್ನ ವಾಕ್ಸಮರ ಮುಂದುವರೆಸಿದರು. ‘ಇವ್ನದು ಯಾವಾಗ್ಲೂ ಇದೇ ಕಿರಿಕಿರಿ. ಸುಮ್ನೆ ತಗಾದೆ ತೆಗಿತ್ವಾನೆ’ ಎಂದ್ಕೊಂಡು ಜೆಡಿಎಸ್‌ ಕಾರ್ಯಕರ್ತರು ಅಲ್ಲಿಂದ ತೆರಳಿದರು.

ಈ ಘಟನೆಗೂ ಮುನ್ನವೇ ಸಿಂದಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಮುಖಂಡೆ ಮಂಜುಳಾ ಗೋವರ್ಧನಾ ಮೂರ್ತಿ ಮತಗಟ್ಟೆಗೆ ಭೇಟಿ ನೀಡಿ, ಮತದಾನ ಕೇಂದ್ರದೊಳಗೂ ತನ್ನ ಬೆಂಬಲಿಗರೊಂದಿಗೆ ಹೋಗಿ ಬಂದರು.

ತಾಂಡಾ–ದೊಡ್ಡಿ ನಮ್ಮವು..! ‘ಅಲಿಯಾಬಾದ, ಎರಡು ತಾಂಡಾಗಳಿಂದ ನಾಲ್ಕು ಮತಗಟ್ಟೆಗಳಿವೆ. 3700ಕ್ಕೂ ಹೆಚ್ಚು ಮತ ಇಲ್ಲಿವೆ. ಅರ್ಧಕ್ಕು ಹೆಚ್ಚು ಮಂದಿ ದುಡಿಯೋಕ ನೆರೆಯ ಮಹಾರಾಷ್ಟ್ರದ ವಿವಿಧೆಡೆ ಹೋಗಿದ್ದರು. 15 ಮಂದಿಯ ತಂಡಕ್ಕೆ ಒಂದರಂತೆ ಹಲವು ಕ್ರೂಸರ್ ವ್ಯವಸ್ಥೆ ಮಾಡಿದ್ದೆವು.

ಹೆಚ್ಚು ಜನರಿದ್ದೆಡೆ ಮಿನಿ ಲಾರಿ ಮಾಡಿದ್ದೆವು. ನಮ್ಮ ನಿರೀಕ್ಷೆಯಂತೆ ಮಂದಿ ಮತ ಹಾಕೋಕೆ ಬಂದವ್ರೇ. ಲಿಂಗಾಯತರು, ಮಾದರ ಮತ ಅವರಿಗೆ ಹೋಗ್ತಾವೆ. ತಾಂಡಾ, ದೊಡ್ಡಿಯ ಮತ ನಮಗ ಫಿಕ್ಸ್‌. ಇದು ನಮ್ಮೂರಿನ ಚುನಾವಣಾ ಚಿತ್ರಣ.

ಇದೇ ರೀತಿ ವಿವಿಧೆಡೆಯ ತಾಂಡಾಗಳಿಂದ ದುಡಿಯೋಕ ಹೊರಗೋಗಿದ್ದ ಮಂದಿಯನ್ನು ಮತದಾನಕ್ಕಾಗಿ ಕರೆಸಿಕೊಳ್ಳಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಸ್ಥಳೀಯ ಜೆಡಿಎಸ್‌ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !