‘ಮರೆಯಲಾಗುತ್ತಿಲ್ಲ ಬಾಲ್ಯದ ಗೆಳತಿಯ ನೆನಪು...’

7

‘ಮರೆಯಲಾಗುತ್ತಿಲ್ಲ ಬಾಲ್ಯದ ಗೆಳತಿಯ ನೆನಪು...’

Published:
Updated:

ಹೆಸರು, ಊರು ಬೇಡ

1. ನಾನು ಎಂಬಿಎ ಓದುತ್ತಿದ್ದೇನೆ. ನನ್ನ ಜೀವನ ಖಿನ್ನತೆಯಲ್ಲಿ ಮುಳುಗಿದೆ. ಮೊದಲಿನ ಹಾಗೆ ಏನು ಮಾಡಲು ಸಾಧ್ಯವಾಗುತ್ತಿಲ್ಲ. ಜೀವನದಲ್ಲಿ ಭರವಸೆಗಳೇ ಇಲ್ಲದಂತಾಗಿದೆ. ಇದಕ್ಕೆಲ್ಲ ಕಾರಣ ನನ್ನ ಬಾಲ್ಯದ ಗೆಳತಿಯ ಮದುವೆ. ಅವಳು ಮದುವೆ ಆದಾಗಿನಿಂದ ಜೀವನವೇ ಬೇಡ ಎನ್ನಿಸುತ್ತಿದೆ. ಒಮ್ಮೊಮ್ಮೆ ಸಾಯಬೇಕು ಎನ್ನಿಸುತ್ತದೆ. ಆದರೆ ನಾನು ಕುಟುಂಬಕ್ಕಾಗಿ ಬದುಕಬೇಕು. ಅವಳ ನೆನಪು ಪದೇ ಪದೇ ಕಾಡುತ್ತದೆ. ಅವಳನ್ನು ಮರೆಯಲು ಸಾಧ್ಯವೇ ಆಗುತ್ತಿಲ್ಲ.

ಜೀವನದಲ್ಲಿ ಬರುವ ಪ್ರತಿಕ್ಷಣವೂ ಆಶ್ಚರ್ಯದಿಂದ ಕೂಡಿರುತ್ತದೆ. ಇಲ್ಲಿ ಎದುರಾಗುವ ಎಲ್ಲ ಘಟನೆಗಳು ನಾವು ಅಂದುಕೊಂಡ ಹಾಗೇ ಇರುವುದಿಲ್ಲ. ಆದರೆ ಪ್ರಪಂಚ ಅಷ್ಟಕ್ಕೇ ಕೊನೆಯಾಗುವುದಿಲ್ಲ. ನಿಮಗೆ ಅನೇಕ ಜವಾಬ್ದಾರಿಗಳಿವೆ. ಓದಿನ ಮೇಲೆ ಗಮನ ಹರಿಸಿ ಮತ್ತು ಒಳ್ಳೆಯ ಕೆಲಸ ಪಡೆದುಕೊಳ್ಳಿ. ಜೀವನದಲ್ಲಿ ಘಟಿಸಿ ಹೋದ ಘಟನೆಗಳ ಬಗ್ಗೆ ಚಿಂತಿಸುತ್ತಾ, ನಿಮ್ಮ ಬಗ್ಗೆ ನೀವೇ ಸಹಾನುಭೂತಿ ತೋರಿಸಿಕೊಂಡಿದ್ದರೆ ನಿಮ್ಮಿಂದ ಏನನ್ನು ಬದಲಾಯಿಸಲು ಸಾಧ್ಯವಿಲ್ಲ. ಅದು ನಿಮ್ಮನ್ನು ಮತ್ತಷ್ಟು ದುಃಖಕ್ಕೆ ತಳ್ಳುತ್ತದೆ. ಹಾಗಾಗಿ ನಿಮ್ಮ ಸ್ನೇಹಿತೆಯನ್ನು ಬಲವಂತವಾಗಿ ಮರೆಯಲು ಪ್ರಯ್ನತಿಸಬೇಡಿ. ನಿಮ್ಮ ಬಾಲ್ಯದ ಗೆಳತಿಯನ್ನು ನೀವೇಕೆ ಮರೆಯಬೇಕು? ನೀವು ನಿಜವಾಗಿಯೂ ಅವರ ಮೇಲೆ ಅಂತಃಕರಣ ಹೊಂದಿದವರಾದರೆ, ಅವರನ್ನು ಪ್ರೀತಿಸುವವರಾದರೆ ಅವರ ಸಂತೋಷದ ಜೀವನವನ್ನು ನೋಡಿ ಖುಷಿಪಡಿ. ಅದುವೇ ಅಂತಿಮ ಸತ್ಯ. ಅವರನ್ನು ಮರೆಯುವ ಬದಲು, ಅವರೊಂದಿಗೆ ಕಳೆದ ಸುಂದರ ನೆನಪುಗಳನ್ನು ಮೆಲುಕು ಹಾಕಿಕೊಳ್ಳುತ್ತಿರಿ. ಇದರಿಂದ ನೀವು ಖಿನ್ನತೆಯಿಂದ ಹೊರಬರಲು ಸಹಾಯವಾಗುತ್ತದೆ ಮತ್ತು ಹೊಸ ಯೋಚನೆಗಳನ್ನು ಆರಂಭಿಸಬಹುದು. ಜೊತೆಗೆ ಇದು ನಿಮ್ಮ ನಗುವನ್ನು ಮರಳಿಸಲು ಸಹಾಯ ಮಾಡುತ್ತದೆ. ಇದನ್ನೇ ಅಭ್ಯಾಸ ಮಾಡಿದರೆ ನೀವು ಓದಿನ ಮೇಲೆ ಗಮನ ಹರಿಸಿ, ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಯಾರಿಗೆ ಗೊತ್ತು ಸಮಯ ಕಳೆದಂತೆ ನಿಮಗೆ ಒಳ್ಳೆಯ ಜೀವನಸಂಗಾತಿ ಸಿಗಬಹುದು. ಹಾಗಾಗಿ ಇಂದಿನ ಕ್ಷಣಗಳಲ್ಲಿ ಬದುಕಿ. ಈಗಿನಿಂದ ನಿಮ್ಮ ಪ್ರಾಶಸ್ತ್ಯ ಓದನ್ನು ಮುಗಿಸಿ, ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿರಲಿ.

ವಿಜಯ್, ಮಂಗಳೂರು

2. ನನಗೆ 29 ವರ್ಷ. ಬೆಂಗಳೂರಿನಲ್ಲಿದ್ದೇನೆ. ಪೋಷಕರು ಮಂಗಳೂರಿನಲ್ಲಿದ್ದಾರೆ. ನಾನು ಖಾಸಗಿ ಕಂಪನಿಯಲ್ಲಿ ಉದ್ಯೋಗಿ. ನನ್ನ ತಂದೆಗೆ ಕುಡಿತದ ಚಟವಿದೆ. ಹಲವು ಬಾರಿ ಲೀವರ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾನು ಎಷ್ಟು ತಿಳಿ ಹೇಳಿದರೂ ಅವರು ಕೇಳುತ್ತಿಲ್ಲ. ತಾಯಿ ಕೂಡ ನನಗೇ ಬೈದು ಸುಮ್ಮನಿರಲು ಹೇಳುತ್ತಾರೆ. ತಂದೆ ಕುಡಿದು ಕೆಟ್ಟದಾಗಿ ವರ್ತಿಸುತ್ತಾರೆ. ನಾನು ಡಿಪ್ಲೊಮಾ ಓದಿರುವೆ; ಆದರೆ ಕೆಲಸ ತೃಪ್ತಿದಾಯಕವಾಗಿಲ್ಲ. ಹೆಚ್ಚಿನ ವ್ಯಾಸಂಗ ಮಾಡಬಹುದಿತ್ತು ಎಂದು ಅನ್ನಿಸುತ್ತದೆ. ಆದರೆ ಸಮಯ ಮೀರಿದೆ. ತುಂಬಾ ಗೊಂದಲದಲ್ಲಿದ್ದೇನೆ. ಮನೆಗೆ ಹೋಗಬೇಕೆಂದರೆ ಬೇಸರವಾಗುತ್ತದೆ. ನಮ್ಮ ಸಂಬಂಧಿಕರು ಮುಂದೆ ಬರುತ್ತಿಲ್ಲ. ಮನೆಯಲ್ಲಿ ಬೆಳೆದ ಅಡಕೆ, ತೆಂಗು ಎಲ್ಲವನ್ನೂ ಮಾರಾಟ ಮಾಡಿ ಆಸ್ಪತ್ರೆಯ ವೆಚ್ಚವನ್ನು ಭರಿಸುತ್ತಿದ್ದಾರೆ. ಮದುವೆಯ ವಿಚಾರ ಬಂದರೆ ಮುಂದಿನ ಜೀವನ ಹೇಗೆಂದು ತಿಳಿಯುತ್ತಿಲ್ಲ. ಒಂದು ಕಡೆ ಭವಿಷ್ಯದ ಚಿಂತೆ ಆದರೆ ಇನ್ನೊಂದೆಡೆ ತಂದೆಯ ಆರೋಗ್ಯ ಮತ್ತು ಮನೆಯ ಸಮಸ್ಯೆ. ಇದರಿಂದ ತುಂಬಾ ಖಿನ್ನತೆಗೆ ಒಳಗಾಗಿದ್ದೇನೆ. ದಯವಿಟ್ಟು ಪರಿಹಾರ ತಿಳಿಸಿ.

ನಿಮ್ಮ ಪೋಷಕರು, ಅದರಲ್ಲೂ ನಿಮ್ಮ ತಂದೆಯ ಬಗ್ಗೆ ನಿಮಗಿರುವ ವಿಶೇಷ ಕಾಳಜಿ ನಿಜಕ್ಕೂ ಮೆಚ್ಚುವಂತಹದ್ದು. ನಿಮ್ಮ ತಂದೆ ಅವರಾಗಿಯೇ ಕುಡಿತದ ಚಟದಿಂದ ಹೊರಬರುವವರೆಗೆ ಕಾಳಜಿಯಿಂದ ಏನು ಮಾಡಲು ಸಾಧ್ಯವಿಲ್ಲ. ಅದರೊಂದಿಗೆ ನಿಮ್ಮ ತಾಯಿಯೂ ಅವರಿಗೆ ಸಹಕಾರ ನೀಡುತ್ತಿದ್ದಾರೆ. ಎಂದರೆ ಅವರು ಕೂಡ ತಂದೆಗೆ ಕುಡಿತವನ್ನು ಬಿಡಲು ಹೇಳಿ, ಹೇಳಿ ಬೇಸತ್ತು ಹೋಗಿರಬೇಕು ಮತ್ತು ಇರುವ ಪರಿಸ್ಥಿತಿಯನ್ನೇ ಒಪ್ಪಿಕೊಂಡಿರಬೇಕು. ನೀವು ಅವರಿಂದ ಯಾವಾಗಲೂ ದೂರ ಇರುವುದರಿಂದ ನಿಮ್ಮಿಂದ ಅವರಿಗೆ ಹೆಚ್ಚಿಗೆ ಏನು ಮಾಡಲಾಗದು. ಅದರ ಬದಲು ಅವರನ್ನು ಡಿ–ಅಡಿಕ್ಷನ್ ಸೆಂಟರ್‌ಗೆ ಸೇರಿಸಿ ಅದರಿಂದ ಸಹಾಯವಾಗಬಹುದು.

ಈಗಲೂ ಕಾಲ ಮಿಂಚಿಲ್ಲ, ನೀವು ಓದನ್ನು ಮುಂದುವರಿಸಬಹುದು. ದೂರಶಿಕ್ಷಣದ ಮೂಲಕ ವ್ಯಾಸಂಗ ಮಾಡಬಹುದು. ಸದ್ಯಕ್ಕೆ ಸ್ವಲ್ಪ ಮಟ್ಟಿಗೆ ಸ್ವಾರ್ಥಿಯಾಗಿ ಮತ್ತು ನಿಮ್ಮ ಮೇಲೆ ಗಮನ ನೀಡಿ. ತಂದೆ–ತಾಯಿಗಳ ಮೇಲೆ ಕಾಳಜಿ ನೀಡುವುದು ನಿಮ್ಮ ಜೀವನದ ಭಾಗ. ಆದರೆ ಇದು ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಯೋಚನೆ ಮಾಡುವ ಸಮಯ ಹಾಗೂ ಅದರ ಮೇಲೆ ಕೆಲಸ ಮಾಡಿ. ಜೀವನದಲ್ಲಿ ನೆಲೆಗೊಳ್ಳಲು ಪ್ರಯ್ನತಿಸಿ, ಜೀವನಸಂಗಾತಿಯನ್ನು ಹುಡುಕಿಕೊಳ್ಳಲು ರೆಡಿಯಾಗಿ. ಅದರಿಂದ ನಿಮ್ಮಲ್ಲಿ ಅನಗತ್ಯ ನಕಾರಾತ್ಮಕ ಯೋಚನೆಗಳು ಬರದಂತೆ ತಡೆದು ಖಿನ್ನತೆಗೆ ಒಳಗಾದಂತೆ ಮಾಡಲು ಸಹಾಯವಾಗುತ್ತದೆ. ಹಾಗಾಗಿ ಸಕಾರಾತ್ಮಕರಾಗಿರಿ ಮತ್ತು ಜೀವನಕ್ಕೆ ಯೋಜನೆಗಳನ್ನು ರೂಪಿಸಿಕೊಳ್ಳಿ.

ಗುರು, ಊರು ಬೇಡ

3. ನನಗೆ 21 ವರ್ಷ ವಯಸ್ಸು; ಬದುಕಲು ಇಷ್ಟ ಇಲ್ಲ, ಸಾಯಬೇಕು ಅನ್ನಿಸುತ್ತದೆ. ಏಕೆಂದರೆ ಮನೆಯಲ್ಲಿ ನನ್ನನ್ನು ಕಸದಂತೆ ಕಾಣುತ್ತಾರೆ. ‘ಯಾಕಾದರೂ ಇದೀಯೋ ದಂಡ’ ಅಂತ ಪ್ರತಿನಿತ್ಯ ಮೂದಲಿಕೆಯ ಮಾತು ಕೇಳಿ, ಕೇಳಿ ಸಾಕಾಗಿಹೋಗಿದೆ. ಜೀವನದಲ್ಲಿ ದೊಡ್ಡ ಗುರಿ ಹೊಂದಿದ್ದೇನೆ. ಆದರೆ ನಿತ್ಯ ಹಿಯಾಳಿಕೆಗಳಿಂದ ಜೀವನವೇ ಬೇಡವಾಗಿದೆ.  

ನೀವು ಪ್ರೌಢರಾಗಿದ್ದೀರಿ. ಬೇರೆಯವರು ಹೇಳುವ ಎಲ್ಲಾ ನಕರಾತ್ಮಕ ಮಾತುಗಳನ್ನು ಕೇಳಿಸಿಕೊಳ್ಳವುದು ಮತ್ತು ಪೋಷಕರು ಮೂದಲಿಸುವುದನ್ನೇ ಕೇಳಿಸಿಕೊಂಡು ಇರಬೇಕು ಎಂದೇನು ಇಲ್ಲ. ನೀವು ಅದನ್ನು ಸವಾಲಾಗಿ ಸ್ವೀಕರಿಸಿ. ಜೀವನದ ಬಗ್ಗೆ ಇರಿಸಿಕೊಂಡ ಗುರಿಗಾಗಿ ನೀವೂ ಕೆಲಸ ಮಾಡುತ್ತಿದ್ದೀರಿ ಎಂಬುದನ್ನು ಅವರ ಎದುರು ತೋರಿಸಿ. ಆ ಮೂಲಕ ನಿಮ್ಮನ್ನು ನೀವು ನಿರೂಪಿಸಿಕೊಳ್ಳಿ. ಪ್ರತಿದಿನ ಅವರು ಹೇಳುವುದನ್ನೇ ಕೇಳಿಸಿಕೊಂಡು ಇರುವ ಬದಲು ನಿಮ್ಮ ಗುರಿಯ ಮೇಲೆ ಗಮನ ನೀಡಲು ಪ್ರಯ್ನತಿಸಿ. ಚೆನ್ನಾಗಿ ಓದಿ ಒಳ್ಳೆಯ ಕೆಲಸ ಪಡೆದುಕೊಂಡು ಸ್ವತಂತ್ರರಾಗಿರಿ. ಮನಸ್ಸಿನಲ್ಲಿ ಬರುವ ಎಲ್ಲಾ ನಕಾರಾತ್ಮಕ ಯೋಚನೆಗಳನ್ನು ನಿರ್ಲಕ್ಷ್ಯ ಮಾಡಿ. ಕೆಲ ಸಮಯ ಮನೆಯಿಂದ ದೂರ ಇರಿ.

ನೀವು ಯಾವಾಗಲಾದರೂ ಇದೆಲ್ಲಾ ಹೇಗೆ ಆರಂಭವಾಯಿತು ಮತ್ತು ನೀವೇಕೆ ಪದೇ ಪದೇ ಮೂ‌ದಲಿಕೆಯನ್ನು ಕೇಳುತ್ತಿದ್ದೀರಿ; ಎಂಬುದರ ಬಗ್ಗೆ ಯೋಚಿಸಿದ್ದೀರಾ ಅಥವಾ ವಿರ್ಮಶಿಸಿಕೊಂಡಿದ್ದೀರಾ? ಯಾವಾಗಲಾದರೂ ಮನೆಯವರ ಜೊತೆ ಮಾತನಾಡಲು ಪ್ರಯ್ನತಿಸಿದ್ದೀರಾ? ಮನೆಯವರಿಗೆ ಸಣ್ಣಪುಟ್ಟ ಮನೆಗೆಲಸದಲ್ಲಿ ಸಹಾಯ ಮಾಡಿದ್ದೀರಾ? ಚೆನ್ನಾಗಿ ಓದುತ್ತಿದ್ದೀರಾ? ಈ ಎಲ್ಲಾ ಪ್ರಶ್ನೆಗಳನ್ನು ನಿಮ್ಮೊಳಗೆ ನೀವೇ ಕೇಳಿಕೊಳ್ಳಿ. ನೀವು ವಿಶ್ವಾಸವಿಡುವವರ ಜೊತೆ ಮಾತನಾಡಿ. ‘ಜೀವನ ನನಗೆ ಬೇಸರವಾಗಿದೆ’ ಎಂದು ಹೇಳುತ್ತಿರುವುದು ಸುಲಭ, ಅದರ ಬದಲು ಜೀವನವನ್ನು ಸವಾಲಾಗಿ ಆಗಿ ಸ್ವೀಕರಿಸಿ. ಜೀವನ ಎನ್ನುವುದು ಸುಂದರವಾದ ಅನುಭವ. ಈ ಜೀವನದಲ್ಲಿ ನಾವು ತುಂಬ ಸಾಧಿಸಬಹುದು. ನಿಮ್ಮ ಓದು, ಸಂಪಾದನೆ, ಶಕ್ತಿ, ಯುಕ್ತಿ – ಎಲ್ಲವೂ ನಿಮಗೆ ಮಾತ್ರವಲ್ಲ, ಸಮಾಜಕ್ಕೂ ಉಪಯೋಗವಾಗುತ್ತದೆ. ಈ ಬಗ್ಗೆ ನೀವು ಯೋಚಿಸಿ, ಕ್ರಿಯಾಶೀಲತೆಯಿಂದ ಜೀವನದಲ್ಲಿ ತೊಡಗಿಕೊಳ್ಳಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !