ಕ್ಯಾಂಟೀನ್ ಎಂಬ ನೆನಪಿನ ಬುತ್ತಿ

6

ಕ್ಯಾಂಟೀನ್ ಎಂಬ ನೆನಪಿನ ಬುತ್ತಿ

Published:
Updated:

ನನ್ನೂರು ವಿಜಯಪುರ. ಹೈಸ್ಕೂಲ್ ಮುಗಿಸಿ ವಿ.ಬಿ.ದರ್ಬಾರು ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ಕಾಲಿಟ್ಟ ದಿನಗಳು. ಮನದಲ್ಲಿ ಒಂಥರಾ ಭಯ, ಅಂಜಿಕೆ. ಮೊದಲ ದಿನ ತರಗತಿಯಲ್ಲಿ ಕುಳಿತು ಪಾಠವೂ ಕೇಳಿ ಆಯ್ತು. ಮಧ್ಯಾಹ್ನ ಊಟಕ್ಕೆ ಹೊರಗೆ ಬಂದೆ. ನಮ್ಮ ತರಗತಿಯ ಕೊಠಡಿ ಹಿಂಭಾಗವೇ ಕ್ಯಾಂಟಿನ್ ಇತ್ತು. ಸ್ನೇಹಿತರ ಜೊತೆ ಅಲ್ಲಿಗೆ ಹೋಗಿ ಬೆಣ್ಣೆ ದೋಸೆ ತಿಂದೆ.

ಅಲ್ಲಿಂದ ಕ್ಯಾಂಟೀನು ರುಚಿ ನಮಗೆ ರೂಢಿಯಾಗಿಬಿಟ್ಟಿತು. ಗೆಳೆಯ ಗೆಳತಿಯರು ಎಲ್ಲರೂ ಒಟ್ಟಾಗಿ ಆ ಕ್ಯಾಂಟೀನ್‌ನಲ್ಲಿ ಭೇಟಿಯಾಗುತ್ತಿದ್ದೆವು. ಕ್ರಮೇಣ ಅದೇ ನಮ್ಮ ಅಡ್ಡಾ ಆಗಿ ರೂಪುಗೊಂಡಿತು.

ಒಂದು ದಿನ ಕ್ಯಾಂಟಿನ್‌ನಲ್ಲಿ ಕೂತು ಹರಟೆ ಹೊಡೆಯುತ್ತಿದ್ದೆವು. ಇದ್ದಕ್ಕಿದ್ದಂತೆ ಗಲಾಟೆಯ ಶಬ್ದ ಹೊರಗಡೆಯಿಂದ ಕೇಳಿ ಬಂತು. ಸಾಕಷ್ಟು ಮಂದಿ ಅಲ್ಲಿ ಗುಂಪು ಸೇರಿದ್ದರು. ಯಾರಿಗೆ ಏನಾಯಿತೊ ಅಂದುಕೊಂಡು ಅಲ್ಲಿಗೆ ನಾವು ಹೋದೆವು. ಆ ಗುಂಪಿನಲ್ಲಿದ್ದ ಯಾರೊ ಒಬ್ಬರು ಕ್ಯಾಂಟೀನ್ ಮಾಲೀಕ ಪರಶು ಅಣ್ಣ ಅವರಿಗೆ ಬೈಯುತ್ತಿದ್ದರು. ಪರಶು ಅಣ್ಣ ಅವರಿಗೆ ಏಕೆ ಬೈಯ್ಯುತ್ತಿದ್ದಾರೆ ಎಂದು ಅಲ್ಲಿ ನೆರೆದಿದ್ದವರನ್ನು ಕೇಳಿದಾಗ ‘ಎರಡು ತಿಂಗಳಿನಿಂದ ಪರುಶು ಅಣ್ಣ ಬಾಡಿಗೆ ಕಟ್ಟಿಲ್ಲ’ ಎಂದು ಗೊತ್ತಾಯಿತು.

ಮರುದಿನ ಕ್ಯಾಂಟೀನ್‌ ಖಾಲಿ ಮಾಡಬೇಕಾದ ಪ್ರಮೇಯ ಪರುಶು ಅವರಿಗೆ ಎದುರಾಯಿತು. ಆರ್ಥಿಕ ಪರಿಸ್ಥಿತಿಯೂ ಚೆನ್ನಾಗಿಲ್ಲದ ಕಾರಣಕ್ಕೆ ಅವರಿಗೆ ಸಹಾಯ ಮಾಡಲು ನಮ್ಮ ಗುಂಪು ನಿರ್ಧರಿಸಿತು.

ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಂದ ಕೈಲಾದಷ್ಟು ದೇಣಿಗೆ ಸಂಗ್ರಹ ಮಾಡಿದೆವು. ಆ ಹಣವನ್ನು ಪರಶು ಅಣ್ಣನಿಗೆ ಕೊಡಲು ಮುಂದಾದೆವು. ಆದರೆ, ಅವರು ಅದನ್ನು ಸ್ವೀಕರಿಸಲು ಹಿಂದೇಟು ಹಾಕಿದರು. ಬಳಿಕ ನಮ್ಮ ಒತ್ತಾಯಕ್ಕೆ ಮಣಿದ ಅವರು, ‘ಈ ಹಣವನ್ನು ನಾನು ಮತ್ತೆ ನಿಮಗೆ ಹಿಂದಿರುಗಿಸುತ್ತೇನೆ’ ಎಂಬ ಷರತ್ತು ವಿಧಿಸಿ ಸ್ವೀಕರಿಸಿದರು.

ಆಗ ನಾವು ‘ಇದು ದೇಣಿಗೆ ದುಡ್ಡು, ಈ ಹಣವನ್ನು ನಮಗೆ ವಾಪಸ್ ಕೊಡಬೇಡಿ. ಅದರ ಬದಲಾಗಿ ಹಸಿದು ಬಂದವರಿಗೆ ಅನ್ನ ನೀಡಿ’ ಎಂದೆವು. ಹೀಗೆ, ಕ್ಯಾಂಟೀನ್ ಮುಚ್ಚುವ ಆತಂಕದಿಂದ ದೂರವಾದೆವು. ಈಗ ಅದೇ ಕ್ಯಾಂಟೀನ್ ತುಂಬಾ ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆ. ನಮ್ಮ ಸಹಾಯ ನೆನೆಯುವ ಪರುಶು ಅಣ್ಣ, ಹಸಿದು ಬಂದವರಿಗೆ ಕೆಲವೊಮ್ಮೆ ಹಣವಿಲ್ಲದಿದ್ದರೂ ಊಟ ಕೊಟ್ಟು ಹಸಿವು ನೀಗಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !