ಗಾಯಕಿಗೆ ಕಿರುಕುಳ: ಕಾರು ಚಾಲಕ ಸೆರೆ

7

ಗಾಯಕಿಗೆ ಕಿರುಕುಳ: ಕಾರು ಚಾಲಕ ಸೆರೆ

Published:
Updated:

ಬೆಂಗಳೂರು: ಗಾಯಕಿ ವಸುಂಧರಾ ದಾಸ್‌ ಅವರನ್ನು ಹಿಂಬಾಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡಿದ್ದ ಆರೋಪದಡಿ ಕಾರು ಚಾಲಕ ಮುನಾರ್ ಪಾಷಾ ಎಂಬುವರನ್ನು ಮಲ್ಲೇಶ್ವರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಹೆಬ್ಬಗೋಡಿ ನಿವಾಸಿಯಾದ ಮುನಾರ್, ತಮ್ಮದೇ ಕಾರು ಇಟ್ಟುಕೊಂಡು ಬಾಡಿಗೆಗೆ ಓಡಿಸುತ್ತಿದ್ದರು. ಅವರ ವಿರುದ್ಧ ವಸುಂಧರಾ ದೂರು ನೀಡಿದ್ದರು. ಮಹಿಳೆ ಗೌರವಕ್ಕೆ ಧಕ್ಕೆ ತಂದ ಹಾಗೂ ಕಿರುಕುಳ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಪೊಲೀಸರು ಹೇಳಿದರು.

‘ನ. 29ರಂದು ಸಂಜೆ ಮಲ್ಲೇಶ್ವರಕ್ಕೆ ಹೊರಟಿದ್ದ ವಸುಂಧರಾ, ಸದಾಶಿವನಗರ ಸಮೀಪದ ಭಾಷ್ಯಂ ವೃತ್ತದ ಸಿಗ್ನಲ್‌ನಲ್ಲಿ ಕಾರು ನಿಲ್ಲಿಸಿಕೊಂಡಿದ್ದರು. ಅವರ ಪಕ್ಕದಲ್ಲೇ ಮುನಾರ್‌ ಅವರ ಕಾರು ನಿಂತಿತ್ತು. ಸಿಗ್ನಲ್‌ ಬಿಡುತ್ತಿದ್ದಂತೆ ದೂರುದಾರರು, ಮಲ್ಲೇಶ್ವರ ಕಡೆಗೆ ಕಾರು ತಿರುಗಿಸಿದ್ದರು. ಸದಾಶಿವನಗರಕ್ಕೆ ಹೊರಟಿದ್ದ ಆರೋಪಿಯ ಕಾರು ಮುಂದಕ್ಕೆ ಹೋಗಲು ಅಡ್ಡಿಯುಂಟಾಗಿತ್ತು’

‘ಕೋಪಗೊಂಡ ಮುನಾರ್, ವಸುಂಧರಾರನ್ನು ಹಿಂಬಾಲಿಸಿಕೊಂಡು ಹೋಗಿ ಮಲ್ಲೇಶ್ವರ 18ನೇ ಅಡ್ಡರಸ್ತೆ ಸಿಗ್ನಲ್‌ನಲ್ಲಿ ಕಾರು ತಡೆದು ಬಂಪರ್‌ಗೆ ಒದ್ದಿದ್ದ. ಭಯಗೊಂಡ ಗಾಯಕಿ, ಕಾರು ಚಲಾಯಿಸಿಕೊಂಡು ಮುಂದಕ್ಕೆ ಹೋಗಿದ್ದರು. ಮಾರ್ಗೋಸಾ ರಸ್ತೆಯಲ್ಲಿ ಪುನಃ ಕಾರು ಅಡ್ಡಗಟ್ಟಿದ್ದ ಆರೋಪಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಸ್ಥಳದಲ್ಲಿ ವಾಹನಗಳ ದಟ್ಟಣೆ ಉಂಟಾಗುತ್ತಿದ್ದಂತೆ ಆರೋಪಿ, ಅಲ್ಲಿಂದ ಹೊರಟುಹೋಗಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ವಿವರಿಸಿದರು.

ಸಂಚಾರ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದೆ: ‘ವಸುಂಧರಾ ಯಾರು ಎಂಬುದೇ ನನಗೆ ಗೊತ್ತಿರಲಿಲ್ಲ. ಅವರು, ಭಾಷ್ಯಂ ವೃತ್ತದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಕಾರು ಚಲಾಯಿಸಿದ್ದರು. ನನ್ನ ಕಾರಿಗೆ ತೊಂದರೆ ಉಂಟಾಯಿತು. ಹೀಗಾಗಿ, ಹಿಂಬಾಲಿಸಿಕೊಂಡು ಹೋಗಿ ಪ್ರಶ್ನಿಸಿದೆ’ ಎಂದು ಆರೋಪಿ ಮುನಾರ್ ಹೇಳಿಕೆ ನೀಡಿರುವುದಾಗಿ ಪೊಲೀಸರು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !