ಸಹ ಪಯಣಕ್ಕೆ ಸೈ, ಟ್ರಾಫಿಕ್‌ಗೆ ಬೈ...

7
ಕಾರ್‌ ಪೂಲಿಂಗ್‌ಗೆ ಒಲವು ತೋರಿದ ಅಪಾರ್ಟ್‌ಮೆಂಟ್‌ ನಿವಾಸಿಗಳು

ಸಹ ಪಯಣಕ್ಕೆ ಸೈ, ಟ್ರಾಫಿಕ್‌ಗೆ ಬೈ...

Published:
Updated:
Deccan Herald

ಬೆಂಗಳೂರು: ಕಾರು ಸಹ ಪ್ರಯಾಣ (ಕಾರ್‌ ಪೂಲಿಂಗ್‌) ನಗರದಲ್ಲಿ, ಅದರಲ್ಲೂ ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ, ಜನಪ್ರಿಯತೆ ಪಡೆಯುತ್ತಿದೆ. ಇದನ್ನು ನಿರ್ವಹಿಸಲೆಂದೇ ಹಲವು ಕಂಪನಿಗಳು, ಪ್ರತ್ಯೇಕ ಮೊಬೈಲ್‌ ಅಪ್ಲಿಕೇಷನ್‌ಗಳು ಬಂದಿವೆ. 

ಆ್ಯಪ್‌ ಆಧರಿತ ಟ್ಯಾಕ್ಸಿ ಸೇವೆಗಿಂತ ಕಾರ್‌ ಪೂಲಿಂಗ್‌ ಅಗ್ಗವಾಗಿದ್ದು, ವೈಟ್‌ಫೀಲ್ಡ್‌ ಭಾಗದತ್ತ ತೆರಳುವ ಹೆಚ್ಚಿನ ಟೆಕಿಗಳು ಈ ವ್ಯವಸ್ಥೆಯತ್ತಲೇ ಒಲವು ತೋರುತ್ತಿದ್ದಾರೆ.

ಕಾರ್‌ ಪೂಲಿಂಗ್‌ ಹೇಗೆ?
ಒಂದು ಸ್ಥಳದಿಂದ ಇನ್ನೊಂದೆಡೆಗೆ ಸ್ವಂತ ಕಾರಿನಲ್ಲಿ ಹೋಗುವವರು ಅದೇ ಮಾರ್ಗದಲ್ಲಿ ಹೋಗುವ ವ್ಯಕ್ತಿಗಳನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗುವ ವ್ಯವಸ್ಥೆ. ಒಂದು ಕಾರಿನಲ್ಲಿ ನಾಲ್ಕು ಜನ ಪ್ರಯಾಣ ಹಂಚಿಕೊಳ್ಳಬಹುದು. ಹೀಗಾದಾಗ ನಾಲ್ಕು ಜನ ಪ್ರತ್ಯೇಕ ವಾಹನ ಬಳಸುವುದು ಹಾಗೂ ಸಂಚಾರ ದಟ್ಟಣೆಗೆ ಕಾರಣರಾಗುವುದು ತಪ್ಪುತ್ತದೆ. ಕೊನೆಯ ಪ್ರದೇಶದವರೆಗೂ ಕಾರು ಯಾನ ಮಾಡಬಹುದು. ಈಗಾಗಲೇ ಇರುವ ಆ್ಯಪ್‌ ಆಧರಿತ ಕ್ಯಾಬ್‌ ಸೇವೆಗಿಂತ ತೀರಾ ಅಗ್ಗವಿದು ಎನ್ನುತ್ತಾರೆ ಬಳಕೆದಾರರು. 

ನಿಗದಿತ ಮಾರ್ಗದಲ್ಲಿ ಪ್ರಯಾಣ ಆರಂಭಿಸಿದಾಗ ಮೊಬೈಲ್‌ ಅಪ್ಲಿಕೇಷನ್‌ನಲ್ಲಿ ತಮ್ಮ ಪ್ರಯಾಣದ ಮಾರ್ಗ ಪ್ರಕಟಿಸಿದರೆ ಆಯಿತು. ಅದೇ ಮಾರ್ಗದಲ್ಲಿ ಹೋಗುವ ವ್ಯಕ್ತಿ ಅದೇ ಅಪ್ಲಿಕೇಷನ್‌ ಮೂಲಕ ತನ್ನ ಪ್ರಯಾಣದ ಅಗತ್ಯತೆಯನ್ನು ಪ್ರಕಟಿಸುತ್ತಾರೆ. ಅವರನ್ನು ಕರೆದೊಯ್ಯುವ ಇಚ್ಛೆ ಇದ್ದರೆ ನಿಗದಿತ ಪಿಕ್‌ಅಪ್‌ ಪಾಯಿಂಟ್‌ನಲ್ಲಿ ಬರ ಹೇಳಿ ಕರೆದೊಯ್ಯಬಹುದು. ಅಥವಾ ನಿರಾಕರಿಸುವ ಆಯ್ಕೆಯೂ ಇದೆ. 

ಇತ್ತೀಚೆಗೆ ಕ್ವಿಕ್‌ ರೈಡ್‌ ಕಂಪನಿ ಕಾರು ಪ್ರಯಾಣ ಹಂಚಿಕೆ ಕುರಿತು ಜಾಗೃತಿ ಮೂಡಿಸಿತು. ಸದ್ಯ ಸಂಸ್ಥೆಯ ಕಾರ್ಯಜಾಲದಲ್ಲಿ ನಾಲ್ಕು ಲಕ್ಷ ಜನ ಸಕ್ರಿಯ ಬಳಕೆದಾರರು ಇದ್ದಾರೆ. 

ಎಸ್‌ವಿಆರ್‌ ಲೋಟಸ್‌ ಪಾಂಡ್‌ ಅಪಾರ್ಟ್‌ಮೆಂಟ್‌ ನಿವಾಸಿ ಗಿರಿಧರ್‌ ಅಗರ್‌ವಾಲ್‌ ಹೇಳುವ ಪ್ರಕಾರ, ‘ನಾನು ತಿಂಗಳಿಗೆ ₹ 5 ಸಾವಿರದಷ್ಟು ಪೆಟ್ರೋಲ್‌ಗಾಗಿ ವ್ಯಯಿಸುತ್ತೇನೆ. 2 ತಿಂಗಳ ಹಿಂದೆ ಕಾರ್‌ ಪೂಲಿಂಗ್‌ ವ್ಯವಸ್ಥೆಗೆ ಬಂದಿದ್ದೇನೆ. ಇಂಧನ ವೆಚ್ಚದಲ್ಲಿ ಶೇ 40ರಷ್ಟು ಉಳಿತಾಯವಾಗಿದೆ. ನಮ್ಮ ಸಮಯ, ಪ್ರಯಾಣ ಬಯಸುವವರ ಸಮಯ ಎರಡೂ ಹೊಂದಾಣಿಕೆಯಾದರೆ ಮಾತ್ರ ಹೋಗುತ್ತೇವೆ’ ಎಂದು ಹೇಳಿದರು.

‘ಮೊಬೈಲ್‌ ಅಪ್ಲಿಕೇಷನ್‌ನಲ್ಲಿ ಪ್ರಯಾಣ ಹಂಚಿಕೆದಾರರ ಸಂಪೂರ್ಣ ಮಾಹಿತಿ ಇರುತ್ತದೆ. ಅವರನ್ನು ಕರೆದೊಯ್ಯಬೇಕೋ ಬೇಡವೋ ಎಂಬುದನ್ನು ನಿರ್ಧರಿಸಬಹುದು. ಈ ರೀತಿ ಪ್ರಯಾಣ ಹಂಚಿಕೊಳ್ಳುವವರು ಕಾರ್ಪೊರೇಟ್‌ ಕಂಪನಿಗಳಲ್ಲೇ ಇರುವವರಾದ್ದರಿಂದ ಪರಸ್ಪರ ಹೊಂದಾಣಿಕೆ ಇರುತ್ತದೆ. ಪ್ರತಿ ಕಿಲೋಮೀಟರ್‌ಗೆ ₹ 5.50ರಿಂದ ₹ 6ರವರೆಗೆ ದರ ವಿಧಿಸಬಹುದು. ಅಥವಾ ಪ್ರತಿ ಯಾನಕ್ಕೆ ಇಂತಿಷ್ಟು ಎಂದು ದರ ಪಡೆಯಬಹುದು. ನಾವು ಬೇರೆಯವರ ವಾಹನ ಹಂಚಿಕೊಂಡರೆ ಇದೇ ದರ ಕೊಡಬೇಕಾಗುತ್ತದೆ. ಯಾವುದೇ ಸಮಸ್ಯೆ ಇಲ್ಲ’ ಎಂದು ಮಾಹಿತಿ ನೀಡಿದರು.

ವರ್ತೂರಿನ ಹೈಲೈಫ್‌ ಪರ್ಲ್‌ಶೆಲ್‌ ಅಪಾರ್ಟ್‌ಮೆಂಟ್‌ ನಿವಾಸಿ ದೀಪ್ತೇಂದು ಮಿತ್ರ ಅವರ ಅನುಭವ ಭಿನ್ನವಾಗಿತ್ತು. ‘ಕಾರ್‌ ಪೂಲಿಂಗ್‌ ವ್ಯವಸ್ಥೆಯಿಂದಾಗಿ ನನಗೆ ನೂರಾರು ಜನರು ಸ್ನೇಹಿತರಾಗಿದ್ದಾರೆ. ಬೇರೆ ಬೇರೆ ಕಂಪನಿಗಳಲ್ಲಿರುವವರು ಗೆಳೆಯರಾಗುತ್ತಾರೆ. ಉದ್ಯೋಗಾವಕಾಶಗಳ ಬಗ್ಗೆ ಚರ್ಚಿಸಲೂ ವೇದಿಕೆಯಾಗಿದೆ’ ಎಂದು  ಹೇಳಿದರು. 

ಪರಿಸರ ಸ್ನೇಹಿ ವ್ಯವಸ್ಥೆ
ನಾಲ್ಕು ಲಕ್ಷ ಜನ ಕಾರು ಪ್ರಯಾಣವನ್ನು ಪರಸ್ಪರ ಹಂಚಿಕೊಂಡರೆ ನಗರದಾದ್ಯಂತ ಸುಮಾರು 11 ಸಾವಿರ ಟನ್‌ಗೂ ಅಧಿಕ ಪ್ರಮಾಣ ಇಂಗಾಲ ಉತ್ಪತ್ತಿಯಾಗುವುದನ್ನು ತಡೆಯಬಹುದು. ಒಂದು ಲೀಟರ್‌ ಇಂಧನ ಉರಿದರೆ ಸುಮಾರು 2.4 ಕೆಜಿಯಷ್ಟು ಇಂಗಾಲ ಉತ್ಪತ್ತಿಯಾಗುತ್ತದೆ. ಬೆಂಗಳೂರಿನಲ್ಲಿ ಒಂದು ಕಾರು ಪ್ರತಿ ಲೀಟರ್‌ ಪೆಟ್ರೋಲ್‌ಗೆ ಸರಾಸರಿ 10 ಕಿಲೋಮೀಟರ್‌ನಷ್ಟು ಮೈಲೇಜ್‌ ಕೊಡುತ್ತದೆ. ಕಾರು ಬಳಕೆಯನ್ನು ಪರಸ್ಪರ ಹಂಚಿಕೊಂಡರೆ ಮಾಲಿನ್ಯ ಉಂಟಾಗುವುದನ್ನು ತಡೆಗಟ್ಟಬಹುದು ಎಂದು ಕ್ವಿಕ್‌ ರೈಡ್‌ ಸಂಸ್ಥೆಯ ಸಹ ಸಂಸ್ಥಾಪಕಕೆ.ಎನ್‌.ಎಂ. ರಾವ್‌ ಹೇಳಿದರು.

*
ಕಾರ್‌ ಪೂಲಿಂಗ್‌ನ ಸಹ ಪ್ರಯಾಣಿಕನ ಪೂರ್ತಿ ವಿವರ ಗೊತ್ತಿರುವುದರಿಂದ ಮಹಿಳೆಯರಿಗಂತೂ ಪೂರ್ಣ ಸುರಕ್ಷಿತವಾಗಿದೆ.
–ದೀಪ್ತೇಂದು ಮಿತ್ರಕಾರ್‌, ಕಾರ್‌ ಪೂಲಿಂಗ್‌ ಬಳಕೆದಾರ

ಬರಹ ಇಷ್ಟವಾಯಿತೆ?

 • 19

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !