ಮಹಿಳೆಯರಲ್ಲಿ ಸೋಂಕು ತರುವ ವಾಹಕಗಳು...

7

ಮಹಿಳೆಯರಲ್ಲಿ ಸೋಂಕು ತರುವ ವಾಹಕಗಳು...

Published:
Updated:

ಆರೋಗ್ಯವಾಗಿರಬೇಕೆಂದರೆ ಜನನಾಂಗದ ಶುದ್ಧತೆಯನ್ನು ಕಾಪಾಡಿಕೊಳ್ಳುವುದೂ ಅಷ್ಟೇ ಮುಖ್ಯ. ಅದರಲ್ಲೂ ಮಹಿಳೆಯರಿಗೆ ಮೂತ್ರನಾಳ ಹಾಗೂ ಯೋನಿಯ ಸೋಂಕು ಬಹುಬೇಗ ತಗುಲುವ ಸಾಧ್ಯತೆ ಹೆಚ್ಚಿರುತ್ತದೆ.

ಕೆಲವು ಮಹಿಳೆಯರಿಗೆ ಅಪರೂಪಕ್ಕೆ ಸೋಂಕಾದರೆ, ಇನ್ನೂ ಕೆಲವರಿಗೆ ಆಗಾಗ್ಗೆ ಈ ಸಮಸ್ಯೆ ಕಾಡುತ್ತಲೇ ಇರುತ್ತದೆ. ಆದರೆ ಸೋಂಕಿನ ಲಕ್ಷಣಗಳು ಕಂಡು ಬರುತ್ತಿದ್ದಂತೆಯೇ ನಿರ್ಲಕ್ಷ್ಯ ವಹಿಸದೇ ಶುದ್ಧತೆಯ ಕಡೆ ಗಂಭೀರವಾಗಿ ಗಮನ ಕೊಡಲೇಬೇಕು. ಜನನಾಂಗದ ಅಶುದ್ಧತೆಯು ಲೈಂಗಿಕಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂಥ ಗಂಭೀರ ಸಮಸ್ಯೆ. ಆದ್ದರಿಂದ ಈ ಕುರಿತು ಚಿಂತಿಸಲೇಬೇಕು.

ಕೆಲವು ಅನಾರೋಗ್ಯಕರ ಅಭ್ಯಾಸಗಳು ಜನನಾಂಗ ಅಥವಾ ಮೂತ್ರನಾಳದ ಉರಿಯೂತ ಸಮಸ್ಯೆಗೆ ಮೂಲವಾಗಿರುತ್ತವೆ. ಜೊತೆಗೆ ಗರ್ಭಧಾರಣೆ ಸಮಯದಲ್ಲಿ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಈ ಸಮಯದಲ್ಲಿ ಅಶುದ್ಧತೆ, ದೀರ್ಘಾವಧಿ ಆಂಟಿಬಯೋಟಿಕ್‌ಗಳ ಸೇವನೆ ಹಾಗೂ ಸ್ಟೆರಾಯ್ಡ್ ಥೆರಪಿ, ಡಯಾಬಿಟಿಕ್ ಮೆಲ್ಲಿಟಸ್ (ರಕ್ತದಲ್ಲಿ ಹೆಚ್ಚು ಸಕ್ಕರೆ ಅಂಶ ಸೇರಿಕೊಳ್ಳುವುದು); ಇದರ ಜೊತೆ ಪ್ರತಿರೋಧಕ ಶಕ್ತಿಯ ಕೊರತೆ, ಧೂಮಪಾನ–ಮದ್ಯಪಾನಗಳ ಸೇವನೆ; ಗರ್ಭನಿರೋಧಕ ಬಳಕೆ, ಕೆಲವೊಮ್ಮೆ ಟ್ಯಾಂಪೊನ್ ಬಳಕೆ, ಬಹುಲೈಂಗಿಕ ಸಂಪರ್ಕ, ನಿರಂತರ ಲೈಂಗಿಕಕ್ರಿಯೆ, ಅಶುದ್ಧ ವಾತಾವರಣದಲ್ಲಿ ಹೆರಿಗೆ ಅಥವಾ ಗರ್ಭಪಾತ ಆಗುವುದು, ಅಪೌಷ್ಟಿಕತೆ – ಇವೆಲ್ಲವೂ ಸೋಂಕನ್ನು ತರುವ ವಾಹಕಗಳು.

ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳುವ ಅಭ್ಯಾಸವಿಲ್ಲದೇ ಇರುವುದು, ಸೂಕ್ತ ಒಳ ಉಡುಪನ್ನು ಧರಿಸದೇ ಇರುವುದು, ಶೌಚಾಲಯಕ್ಕೆ ಹೋದ ನಂತರದ ಶುದ್ಧತೆಯೆಡೆಗೆ ಗಮನ ನೀಡದೆ ಇರುವುದು, ಋತುಚಕ್ರದ ಅವಧಿಯಲ್ಲಿ ಶುದ್ಧತೆ ಕಾಪಾಡಿಕೊಳ್ಳದೇ ಇರುವುದು – ಇವು ಕೂಡ ಸೋಂಕಿಗೆ ಕಾರಣವಾಗಬಹುದು.

ಜನನಾಂಗದ ಶುದ್ಧತೆಯನ್ನು ಕಾಪಾಡಿಕೊಳ್ಳುವುದರಿಂದ ಸೋಂಕನ್ನು ದೂರವಿಡಬಹುದು. ಸೋಂಕಾಗಿರುವುದನ್ನು ಅತಿ ಬೇಗ ಕಂಡುಕೊಳ್ಳುವುದು, ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆಯುವುದು, ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು – ಇವೆಲ್ಲವೂ ಮಹಿಳೆಯರ ಆರೋಗ್ಯವನ್ನು ರಕ್ಷಿಸುವ ದಾರಿಗಳೇ ಹೌದು.

ಒಳ ಉಡುಪಿನ ಬಗ್ಗೆ ಎಚ್ಚರವಿರಲಿ: ಒಳ ಉಡುಪಿನ ಶುದ್ಧತೆಯು ಮೂತ್ರನಾಳದ ಸೋಂಕನ್ನು ನಿರ್ಧರಿಸುವ ಅತಿ ಪ್ರಮುಖ ಅಂಶ. ಈಗೀಗ ನೈಲಾನ್ ಹಾಗೂ ಸಿಲಿಕಾನ್ ಬಟ್ಟೆಯ ಒಳ ಉಡುಪುಗಳನ್ನು ಆಕರ್ಷಕ ಎಂಬಂತೆ ಬಿಂಬಿಸುವುದು ವಾಣಿಜ್ಯೀಕರಣದ ಟ್ರೆಂಡ್ ಆಗಿದೆ. ಆದರೆ ಈ ಒಳ ಉಡುಪುಗಳು ತೇವವನ್ನು ಹೀರಿಕೊಳ್ಳುವುದಿಲ್ಲ. ಹೆಚ್ಚು ತೇವವಿದ್ದ ಪಕ್ಷದಲ್ಲಿ ಸೋಂಕಿನ ಸಾಧ್ಯತೆಯೂ ಹೆಚ್ಚಿರುತ್ತದೆ. ಆದ್ದರಿಂದ ಕಾಟನ್ ಬಟ್ಟೆಯ ಒಳ ಉಡುಪು ಸೂಕ್ತ. ಜೊತೆಗೆ ಸೋಂಕು ತಗುಲಿದ ಸಮಯದಲ್ಲಿ ಆಗಾಗ್ಗೆ ಒಳ ಉಡುಪಿನ ಬದಲಾವಣೆ ಅವಶ್ಯಕವಿರುತ್ತದೆ. ಅತಿಯಾದ ಸ್ರಾವವಿದ್ದಲ್ಲಿ ದಿನಕ್ಕೆ ಎರಡು ಮೂರು ಬಾರಿಯಾದರೂ ಒಳ ಉಡುಪನ್ನು ಬದಲಾಯಿಸಬೇಕಾಗುತ್ತದೆ. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವ ಮಹಿಳೆಯರೇ ಯೋನಿನಾಳದ ಉರಿಯೂತದ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಋತುಚಕ್ರದ ಅವಧಿಯ ಶುದ್ಧತೆ: ಋತುಚಕ್ರದ ಸಮಯದಲ್ಲಿನ ಶುದ್ಧತೆಯ ವಿಷಯದಲ್ಲಿ ತಾಯಂದಿರು ಹೆಣ್ಣುಮಕ್ಕಳಿಗೆ ತಿಳಿವಳಿಕೆ ನೀಡುವುದು ಅತಿ ಅಗತ್ಯ. ಋತುಚಕ್ರದ ಅವಧಿಯಲ್ಲಿ ಸ್ಯಾನಿಟರಿ ಪ್ಯಾಡ್‍ನ ಸೂಕ್ತ ನಿರ್ವಹಣೆಯೂ ಇರಬೇಕು. ಆಗಾಗ್ಗೆ ಪ್ಯಾಡ್ ಬದಲಿಸಬೇಕು. ಹಾಗಾಗದೇ ಇದ್ದರೆ, ಪ್ಯಾಡ್‍ನಲ್ಲಿನ ಅತಿ ಹೆಚ್ಚು ತೇವಾಂಶ ಸೋಂಕಿಗೆ ಎಡೆಮಾಡಿಕೊಡುತ್ತದೆ. ಅತಿ ಸ್ರಾವವಿದ್ದರಂತೂ ಈ ತೇವಾಂಶ ಸೂಕ್ಷ್ಮಾಣುಜೀವಿಗಳಿಗೆ ಆಸ್ಪದಮಾಡಿಕೊಡುತ್ತದೆ.

ಋತುಚಕ್ರದ ಅವಧಿಯಲ್ಲಿ 3ರಿಂದ 4 ಗಂಟೆಗೊಮ್ಮೆ ಪ್ಯಾಡ್ ಬದಲಿಸುತ್ತಿರಬೇಕು. ಅಂದರೆ ದಿನಕ್ಕೆ 6ರಿಂದ 8 ಬಾರಿ ಬದಲಾಯಿಸುವುದು ಅವಶ್ಯ. ಬದಲಾಯಿಸದೇ ಇದ್ದಲ್ಲಿ, ದೀರ್ಘಾವಧಿ ತೇವಾಂಶ ಉಳಿದು ಸೂಕ್ಷ್ಮಾಣುಜೀವಿಗಳಿಗೆ ಅವಕಾಶ ನೀಡುತ್ತದೆ. ಪ್ಯಾಡ್‍ಗಳ ಬದಲು ಬಟ್ಟೆ ಬಳಸುತ್ತಿದ್ದರೆ, ಅದು ಶುದ್ಧವಾಗಿರುವಂತೆ ನೋಡಿಕೊಳ್ಳಬೇಕು. ಅವುಗಳನ್ನು ಇಡುವ ಜಾಗವೂ ಶುದ್ಧವಾಗಿರಬೇಕು. ಕೆಲವು ಸಾಂಪ್ರದಾಯಿಕ ಕಾರಣಗಳಿಗೆ ಋತುಚಕ್ರದ ಸಮಯ ಸ್ನಾನ ಮಾಡದೇ ಇರುವ ಅಭ್ಯಾಸ ಇನ್ನೂ ಉಳಿದುಕೊಂಡಿವೆ. ಆದರೆ ಈ ಸಮಯದಲ್ಲಿ ಸೂಕ್ಷ್ಮಾಣುಜೀವಿಗಳು ಸೇರುವ ಸಾಧ್ಯತೆ ಹೆಚ್ಚಿರುವುದರಿಂದ ಸ್ನಾನ ಮಾಡುವುದು ಅತಿ ಅವಶ್ಯಕ. ಇದು ದೈಹಿಕ, ಮಾನಸಿಕ ವಿಶ್ರಾಂತಿಗೂ ಅಗತ್ಯ.

ಸ್ನಾನ: ಕುಳಿತು ಸ್ನಾನ ಮಾಡುವುದು ಹಲವರ ಅಭ್ಯಾಸ. ಆದರೆ ಹೀಗೆ ಕುಳಿತು ಸ್ನಾನ ಮಾಡಿದರೆ ಮೂತ್ರನಾಳದ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಆದರಲ್ಲೂ ಋತುಚಕ್ರದ ಸಮಯದಲ್ಲಿ ಗರ್ಭಕಂಠದ ನಾಳ ಅಗಲವಾಗುವುದರಿಂದ ಸೋಂಕಿಗೆ ಸುಲಭ ಹಾದಿಯಾಗುತ್ತದೆ.

ಜನನಾಂಗದ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಕಡೆ ಹಲವು ಸಾಮಗ್ರಿಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ, ಇಂಡೋನೇಷ್ಯಾದಲ್ಲಿ ಗಿಡಮೂಲಿಕೆಗಳಿಂದ ಮನೆಯಲ್ಲೇ ತಯಾರಿಸಿದ ದ್ರವವನ್ನು ಬಳಸಲಾಗುತ್ತದೆ. ಥಾಯ್ಲೆಂಡ್‍ನಲ್ಲಿ ಇದಕ್ಕೆಂದೇ ಶಾಂಪುಗಳನ್ನು ಬಳಸಲಾಗುತ್ತದೆ. ಆಫ್ರಿಕಾದಲ್ಲಿ ಮನೆಯಲ್ಲೇ ತಯಾರಿಸಿದ ಸೋಪುಗಳ ಬಳಕೆಯಿದೆ. ಇನ್ನೂ ಕೆಲವೆಡೆ ಬಟ್ಟೆಗಳನ್ನು ಬಳಸುವ ಮಹಿಳೆಯರಿದ್ದಾರೆ. ಆದರೆ ಬಟ್ಟೆಯನ್ನು ಬಳಸುವವರಲ್ಲಿ ಸೋಂಕು ಇರುವುದು ಕಂಡುಬಂದಿದೆ. ಸೋಪು, ಶಾಂಪು ಬಳಸುವ ಮಹಿಳೆಯರಲ್ಲೂ ಸೋಂಕಿನ ಪ್ರಮಾಣ ಹೆಚ್ಚಿರುವುದು ಕಂಡುಬಂದಿದೆ.

ಕ್ರೀಂ, ರೇಜರ್ ಬಳಕೆ: ರೇಜರ್ ಹಾಗೂ ಕ್ರೀಂಗಳ ಬಳಕೆ ಜನನಾಂಗದ ಸೂಕ್ಷ್ಮ ಚರ್ಮದ ಮೇಲೆ ಪರಿಣಾಮ ಉಂಟು ಮಾಡಿ ಸೂಕ್ಷ್ಮಾಣು ಜೀವಿಗಳು ಸೇರಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಆದ್ದರಿಂದ ಬಳಕೆ ಬಗ್ಗೆ ಎಚ್ಚರವಹಿಸುವುದು ಉಚಿತ.

ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳುವುದು ಸೋಂಕನ್ನು ದೂರವಿಡುವ ಅತಿ ಮುಖ್ಯ ಹಾಗೂ ಸರಳ ಅಭ್ಯಾಸ ಎಂಬುದನ್ನು ಗಮನದಲ್ಲಿಡಿ. ನೈರ್ಮಲ್ಯದ ಅಭ್ಯಾಸ ಉತ್ತಮ ಆರೋಗ್ಯಕ್ಕೂ ಕಾರಣ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !