ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ನಿಂದನೆ ಕಾಯ್ದೆ ದುರ್ಬಳಕೆಗೆ ಅಂಕುಶ

1989ರ ನಿಯಮ ದುರುಪಯೋಗ: ಆರೋಪ ಪರಿಗಣಿಸಿದ ‘ಸುಪ್ರೀಂ’
Last Updated 20 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಯಾವುದೇ ಸರ್ಕಾರಿ ನೌಕರರು ಅಥವಾ ವ್ಯಕ್ತಿಗಳ ವಿರುದ್ಧ ದೂರು ದಾಖಲಾದರೆ ತಕ್ಷಣಕ್ಕೆ ಅವರನ್ನು ಬಂಧಿಸಕೂಡದು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ತೀರ್ಪು ನೀಡಿದೆ.

ಈ ಕಾಯ್ದೆ ಅಡಿ ಯಾರನ್ನೇ ಬಂಧಿಸುವ ಮೊದಲು ಪ್ರಕರಣದ ಬಗ್ಗೆ ಡಿವೈಎಸ್‌ಪಿ ಅಥವಾ ಅದಕ್ಕಿಂತ ಮೇಲಿನ ದರ್ಜೆಯ ಪೊಲೀಸ್‌ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿ ಒಪ್ಪಿಗೆ ನೀಡುವುದು ಕಡ್ಡಾಯ ಎಂದು ನಿರ್ದೇಶನ ನೀಡಿದೆ.

ಎಸ್‌ಸಿ, ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ–1989 ದುರುಪಯೋಗ ಹೆಚ್ಚಾಗುತ್ತಿದೆ ಎಂಬ ದೂರನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿದೆ.

ಜಾತಿ ನಿಂದನೆ ದೂರಿನಲ್ಲಿರುವ ಸತ್ಯಾಂಶದ ಕುರಿತು ಹಿರಿಯ ಪೊಲೀಸ್‌ ಅಧಿಕಾರಿಗಳು ಪರಾಮರ್ಶೆ ನಡೆಸಿ ತನಿಖಾ ವರದಿ ಸಲ್ಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

‘ಸುಪ್ರೀಂ’ ನಿರ್ದೇಶನ: ಎಸ್‌ಸಿ, ಎಸ್‌ಟಿ ಕಾಯ್ದೆಯ ದುರುಪಯೋಗ ತಡೆಯುವ ನಿಟ್ಟಿನಲ್ಲಿ ನ್ಯಾಯಮೂರ್ತಿಗಳಾದ ಆದರ್ಶ್‌ ಗೋಯಲ್‌ ಮತ್ತು ಯು.ಯು. ಲಲಿತ್‌ ಅವರ ಪೀಠವು ಕೆಲವು ಮಾರ್ಗಸೂಚಿ ನೀಡಿದೆ.

ಈ ಕಾಯ್ದೆ ಅಡಿ ದೂರು ದಾಖಲಾದರೆ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನಿರಾಕರಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಒಂದು ವೇಳೆ ಬಂಧನ ಅನಿವಾರ್ಯವಾದರೆ ಸಂಬಂಧಿಸಿದ ಇಲಾಖೆ, ಹಿರಿಯ ಅಧಿಕಾರಿಗಳ (ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ) ಪೂರ್ವಾನುಮತಿ ಪಡೆಯುವುದು ಕಡ್ಡಾಯ.

**

ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ 1989ರ ಅಡಿ ಜಾತಿ ನಿಂದನೆಗೆ ದೂರು ದಾಖಲಾದರೆ ಆರೋಪಿಗಳಿಗೆ ಕಠಿಣ ಶಿಕ್ಷೆ ಮತ್ತು ನಿರೀಕ್ಷಣಾ ಜಾಮೀನು ಇಲ್ಲ

89 ಪುಟಗಳ ತೀರ್ಪಿನಲ್ಲಿ ಹಲವು ನಿರ್ದೇಶನ, ಮಾರ್ಗಸೂಚಿ ನೀಡಿದ ಸುಪ್ರೀಂ ಕೋರ್ಟ್

ಕಾಯ್ದೆ ದುರ್ಬಳಕೆ ತಡೆಗೆ ಕಠಿಣ ಷರತ್ತು

**

ನ್ಯಾಯಮೂರ್ತಿಗಳ ಅಸಮಾಧಾನ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವ್ಯಕ್ತಿಗಳ ಮೇಲೆ ನಡೆಯುತ್ತಿದ್ದ ಹಲ್ಲೆ, ದೌರ್ಜನ್ಯ ಮತ್ತು ಜಾತಿ ನಿಂದನೆ ತಡೆಯುವ ಉದ್ದೇಶದಿಂದ ಜಾರಿಗೆ ತರಲಾದ ‘ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ 1989’ ದುರುಪಯೋಗ ಹೆಚ್ಚಾಗುತ್ತಿದೆ ಎಂದು ನ್ಯಾಯಮೂರ್ತಿಗಳು ಕಳವಳ ವ್ಯಕ್ತಪಡಿಸಿದರು.

ಸರ್ಕಾರಿ ನೌಕರರು ಮತ್ತು ಅಮಾಯಕರನ್ನು ಬೆದರಿಸುವ ಅಸ್ತ್ರವಾಗಿ ಈ ಕಾಯ್ದೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಅಸಮಾಧಾನ ಹೊರಹಾಕಿದರು.

ಈ ಕಾಯ್ದೆ ಅಡಿ ಮೂರು ದಶಕದಲ್ಲಿ ದಾಖಲಾದ ದೂರು ಮತ್ತು ಪ್ರಕರಣ ಗಮನಿಸಿದರೆ ಇದು ಮನವರಿಕೆಯಾಗುತ್ತದೆ.

ಅಮಾಯಕರ ವಿರುದ್ಧ ಸುಳ್ಳು ದೂರು, ಪ್ರಕರಣ ದಾಖಲಾಗುತ್ತಿರುವುದರಿಂದ ಸಮಾಜದಲ್ಲಿ ವೈಷಮ್ಯ ಬೆಳೆಯುತ್ತಿದೆ. ಸಂವಿಧಾನದ ಮೌಲ್ಯಗಳಿಗೆ ಧಕ್ಕೆಯಾಗುತ್ತಿದೆ. ಇಂತಹ ಪ್ರವೃತ್ತಿಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ನ್ಯಾಯಮೂರ್ತಿಗಳಾದ ಗೋಯಲ್‌ ಮತ್ತು ಲಲಿತ್‌ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT