ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಪ್ರಚಾರ, ಷಡ್ಯಂತ್ರದಿಂದ ತಪ್ಪಿದ ಟಿಕೆಟ್: ತಹಸೀಲ್ದಾರ

ತಹಸೀಲ್ದಾರ ಅಭಿಮಾನಿಗಳಿಂದ ಪ್ರತಿಭಟನಾ ಮೆರವಣಿಗೆ
Last Updated 17 ಏಪ್ರಿಲ್ 2018, 8:31 IST
ಅಕ್ಷರ ಗಾತ್ರ

ಹಾನಗಲ್: ನಿರಂತರ ಒಂಬತ್ತು ಬಾರಿ ಕಾಂಗ್ರೆಸ್‌ ಟಿಕೆಟ್‌ ಗಿಟ್ಟಿಸಿದ್ದ ಶಾಸಕ ಮನೋಹರ ತಹಸೀಲ್ದಾರ ಅವರಿಗೆ ಈ ಬಾರಿ ಟಿಕೆಟ್‌ ಕೈತಪ್ಪಿದೆ. ಈ ಸಲವೂ ಟಿಕೆಟ್ ಸಿಗುವ ಭರವಸೆಯಲ್ಲಿದ್ದ ಶಾಸಕ ತಹಸೀಲ್ದಾರ್‌ ನಿರಾಸೆಗೆ ಒಳಗಾಗಿದ್ದು, ಇದರಿಂದ ಅವರ ಬೆಂಬಲಿಗರು ಅಸಮಾಧಾನಗೊಂಡಿದ್ದಾರೆ.

ಭಾನುವಾರ ಕಾಂಗ್ರೆಸ್‌ನ ಅಧಿಕೃತ ಪಟ್ಟಿ ಬಿಡುಗಡೆಗೆ ಮುನ್ನವೇ, ಇಲ್ಲಿನ ಕಾಂಗ್ರೆಸ್‌ ಕಾರ್ಯಕರ್ತರು ಬೀದಿಗಳಿದು ಪಕ್ಷದ ತೀರ್ಮಾನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಟೈರ್‌ಗೆ ಬೆಂಕಿ ಹಚ್ಚಿ ಅಸಮಾಧಾನದ ಹೊಗೆ ಎಬ್ಬಿಸಿದ್ದರು. ಸೋಮವಾರ ಬೆಳಿಗ್ಗೆ ಹಾವೇರಿಯಿಂದ ಆಗಮಿಸಿದ ಶಾಸಕ ಮನೋಹರ ತಹಸೀಲ್ದಾರ್‌ ಮುಖದಲ್ಲಿ ಕಳೆ ಇರಲಿಲ್ಲ. ಟಿಕೆಟ್‌ ಸಿಗದಿರುವ ಬಗ್ಗೆ ಅತೃಪ್ತಿ ಭಾವ ಆವರಿಸಿತ್ತು.

ಇಲ್ಲಿನ ವಿರಕ್ತಮಠದ ವೃತ್ತದಲ್ಲಿ ಜಮಾಯಿಸಿದ್ದ ಶಾಸಕರ ಅಭಿಮಾನಿಗಳು, ಮನೋಹರ ಅವರನ್ನು ಸ್ವಾಗತಿಸಿಕೊಂಡು ಘೋಷಣೆ ಕೂಗಿದರು. ಪ್ರಮುಖ ಬೀದಿಯ ಮೂಲಕ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು. ಗಾಂಧಿವೃತ್ತಕ್ಕೆ ಬಂದ ಕಾರ್ಯಕರ್ತರು ಕೆಲ ಹೊತ್ತು ರಸ್ತೆ ತಡೆ ನಡೆಸಿದರು. ವರಿಷ್ಠರ ತೀರ್ಮಾನ ವಿರೋಧಿಸಿ ಘೋಷಣೆಗಳನ್ನು ಕೂಗಿದರು. ಬಂಡಾಯ ಇಲ್ಲವೆ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಶಾಸಕ ತಹಸೀಲ್ದಾರ ಅವರನ್ನು ಒತ್ತಾಯಿಸಿದರು.

ಷಡ್ಯಂತ್ರದಿಂದ ಕೈ ತಪ್ಪಿದೆ: ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮನೋಹರ ತಹಸೀಲ್ದಾರ್, ಸುಧೀರ್ಘ 40 ವರ್ಷ ಪಕ್ಷದ ಶಿಸ್ತಿನ ಕಾರ್ಯಕರ್ತನಾಗಿ ವಹಿಸಿದ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಕ್ಷೇತ್ರದಲ್ಲಿ ಪಕ್ಷ ಕಟ್ಟಿ ಬೆಳೆಸಿದ್ದೇನೆ.ಒಂದು ವರ್ಷ ನನ್ನ ಆರೋಗ್ಯ ಸರಿ ಇರಲಿಲ್ಲ. ಈ ವೇಳೆ ನಮ್ಮವರಿಂದಲೇ ಅಪಪ್ರಚಾರ ಮತ್ತು ಕಾಣದ ಕೈಗಳ ಷಡ್ಯಂತ್ರದಿಂದ ಟಿಕೆಟ್‌ ತಪ್ಪಿದೆ’ ಎಂದು ಅವರು ಹೇಳಿದರು.

‘ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷನಾಗಿ, ವಿಧಾನಸಭೆ ಉಪ ಸಭಾಪತಿ, ಜಿಲ್ಲಾ ಉಸ್ತುವಾರಿ ಸಚಿವನಾಗಿ ಸಮರ್ಥವಾಗಿ ಕೆಲಸ ಮಾಡಿದ್ದೇನೆ. ಪಕ್ಷ ಮನ್ನಣೆ ನೀಡುವ ನಿರೀಕ್ಷೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಮುಖಂಡ ವಿರೂಪಾಕ್ಷಪ್ಪ ತಳವಾರ ಮಾತನಾಡಿ, ‘ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣ ಇತ್ತು. ಶಾಸಕರನ್ನೇ ಅಭ್ಯರ್ಥಿ ಮಾಡಬೇಕಿತ್ತು. ಇದು ಸಾಧ್ಯವಾಗದಿದ್ದರೆ ಸ್ಥಳೀಯರಾದ ಏಳು ಆಕಾಂಕ್ಷಿಗಳ ಪೈಕಿ ಒಬ್ಬರನ್ನುಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕ್ಕಿತ್ತು’ ಎಂದರು.

ಮುಖಂಡ ಎಂ.ಎಲ್‌. ಲಾಲಖಾನವರ ಮಾತನಾಡಿ, ‘ನಲವತ್ತು ವರ್ಷದಿಂದ ಕಾಂಗ್ರೆಸ್‌ನ ನಿಷ್ಠಾವಂತನಾಗಿ ಪಕ್ಷ ಕಟ್ಟಿದ ಶಾಸಕ ಮನೋಹರ ಅವರನ್ನು ಕಾಂಗ್ರೆಸ್‌ ಹೈಕಮಾಂಡ್ ಗೌರವದಿಂದ ನಡೆಸಿಕೊಂಡಿಲ್ಲ.ಪ್ರತಿ ಚುನಾವಣೆಯಲ್ಲೂ ಕೊನೆಯ ಹಂತದಲ್ಲಿ ಮನೋಹರ ಅವರಿಗೆ ಟಿಕೆಟ್‌ ನೀಡಲಾಗುತ್ತಿತ್ತು. ಈ ಬಾರಿ ಟಿಕೆಟ್‌ ನೀಡದೆ, ಅನ್ಯಾಯ ಮಾಡಲಾಗಿದೆ. ಈ ನಡೆ ಸರಿಯಲ್ಲ. ಇದನ್ನು ಖಂಡಿಸುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಡೆವರೆಗೆ ಕಾಯುವೆ: ತಹಸೀಲ್ದಾರ

‘ಪಕ್ಷದ ವರಿಷ್ಠರ ಮೇಲೆ ವಿಶ್ವಾಸವಿದೆ. ಅಭ್ಯರ್ಥಿ ಬದಲಿಸುವ ಸಾಧ್ಯತೆಗಳಿವೆ. ಹಾಗಾಗಿ, ಕೊನೆಯ ಹಂತದವರೆಗೂ ಕಾಯ್ದು ನೋಡುತ್ತೇನೆ. ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ’ ಎಂದು ಶಾಸಕ ಮನೋಹರ ತಹಸೀಲ್ದಾರ ಪ್ರತಿಕ್ರಿಯಿಸಿದರು.

‘ಹೈಕಮಾಂಡ್‌ ತೀರ್ಮಾನ ಆಶ್ಚರ್ಯ ಮೂಡಿಸಿದೆ. ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿ ಬಿಡುಗಡೆ ತನಕ ನನ್ನದೇ ಹೆಸರಿತ್ತು. ಹಂತಿಮ ಹಂತದಲ್ಲಿ ಬದಲಾವಣೆಯಾಗಿದೆ. ಟಿಕೆಟ್‌ ಕೈತಪ್ಪಿರುವುದು ನಿರಾಶೆ ತಂದಿದೆ. ಹಾಗಂತ ಸುಮ್ಮನಿರಲ್ಲ. ಸ್ಥಳೀಯ ನಾಯಕರೊಂದಿಗೆ ವರಿಷ್ಠರನ್ನು ಭೇಟಿ ಮಾಡಿ ಕ್ಷೇತ್ರದ ಸಂಪೂರ್ಣ ಚಿತ್ರಣ ಬಿಚ್ಚಿಡುತ್ತೇನೆ. ಇಲ್ಲಿನ ವಾಸ್ತವಿಕತೆ ಮನವರಿಕೆ ಮಾಡಿಸುತ್ತೇನೆ. ಈ ಹಿಂದಿನ ಚುನಾವಣೆ ವೇಳೆಯೂ ಕೊನೆಯ ಕ್ಷಣದಲ್ಲಿ ಬಿ ಫಾರ್ಮ್‌ ಸಿಕ್ಕಿತ್ತು, ಸದ್ಯದ ಬೆಳೆವಣಿಯಿಂದ ಆಘಾತವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT