ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ ಮಂತ್ರ ಪಠಿಸಿ ದಾಳಿ ನಡೆಸಿದ ಪಾಕ್‌

ಮತ್ತೆ ಕದನ ವಿರಾಮ ಉಲ್ಲಂಘನೆ ; ಜಮ್ಮು ಗಡಿಯಲ್ಲಿ ಭಾರಿ ಶೆಲ್‌ ದಾಳಿ
Last Updated 21 ಮೇ 2018, 19:20 IST
ಅಕ್ಷರ ಗಾತ್ರ

ಶ್ರೀನಗರ: ಗಡಿಯಲ್ಲಿಯ ತ್ವೇಷಮಯ ವಾತಾವರಣ ಶಮನಗೊಳಿಸಲು ಶಾಂತಿ ಮಾತುಕತೆ ನಡೆಸಿದ ಬೆನ್ನಲ್ಲೇ ಭಾರಿ ಶೆಲ್‌ ದಾಳಿ ನಡೆಸುವ ಮೂಲಕ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ.

ಜಮ್ಮುವಿನ ಆರ್ನಿಯಾ, ರಾಮಗಡ ಮತ್ತು ಚಾಮ್ಲಿಯಾಲ್‌ನಲ್ಲಿರುವ ಗಡಿ ಭದ್ರತಾ ಪಡೆಯ(ಬಿಎಸ್‌ಎಫ್‌) ಠಾಣೆಗಳ ಮೇಲೆ ಪಾಕಿಸ್ತಾನ ಭಾನುವಾರ ರಾತ್ರಿ 10 ಗಂಟೆಗೆ ಅಪ್ರಚೋದಿತ ದಾಳಿ ಆರಂಭಿಸಿದೆ.

ಪಾಕಿಸ್ತಾನ ದಾಳಿಗೆ ಬಿಎಸ್‌ಎಫ್‌ ಕೂಡ ತಕ್ಕ ಪ್ರತ್ಯುತ್ತರ ನೀಡಿದ್ದು, ಯಾವುದೇ ಸಾವು, ನೋವಿನ ವರದಿಯಾಗಿಲ್ಲ. ಗಡಿಯಲ್ಲಿರುವ 150ಕ್ಕೂ ಹೆಚ್ಚು ಶಾಲೆಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.

ಕಳೆದ ಒಂದು ವಾರದಿಂದ ಪಾಕಿಸ್ತಾನ ನಡೆಸುತ್ತಿರುವ ದಾಳಿಗೆ ಭಾರತ ಶನಿವಾರ ಪ್ರತಿದಾಳಿ ಆರಂಭಿಸಿತ್ತು. ಇದರಿಂದ ತತ್ತರಿಸಿದ್ದ ಪಾಕಿಸ್ತಾನ ಭಾನುವಾರ ಗಡಿ ಭದ್ರತಾ ಪಡೆ ಅಧಿಕಾರಿಗಳಿಗೆ ಕರೆ ಮಾಡಿ ದಾಳಿ ನಿಲ್ಲಿಸುವಂತೆ ಮನವಿ ಮಾಡಿಕೊಂಡಿತ್ತು.

ಮನವಿಗೆ ಸ್ಪಂದಿಸಿದ ಬಿಎಸ್‌ಎಫ್‌ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿತ್ತು. ಅದಾದ ಕೆಲವು ಗಂಟೆಗಳಲ್ಲಿಯೇ ಪಾಕಿಸ್ತಾನ ಮತ್ತೇ ತನ್ನ ಹಳೆಯ ವರಸೆ ಮುಂದುವರಿಸಿದೆ.

ಪಾಕಿಸ್ತಾನ ಕಳೆದ ಒಂದು ವಾರದಿಂದ ಗಡಿಠಾಣೆ ಮತ್ತು ನಾಗರಿಕರ ನೆಲೆಗಳ ಮೇಲೆ ನಡೆಸಿದ ನಿರಂತರ ಶೆಲ್‌ ದಾಳಿಗೆ ಆರು ನಾಗರಿಕರು ಮತ್ತು ಒಬ್ಬ ಬಿಎಸ್‌ಎಫ್‌ ಯೋಧ ಬಲಿಯಾಗಿದ್ದಾರೆ. 18 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

(ಅರ್ನಿಯಾ ವಲಯದ ಗ್ರಾಮಗಳ ಮೇಲೆ ಪಾಕಿಸ್ತಾನ ನಡೆಸುತ್ತಿರುವ ದಾಳಿಯಿಂದ ಆತಂಕಗೊಂಡ ಗ್ರಾಮಸ್ಥರು ಸುರಕ್ಷಿತ ಸ್ಥಳಕ್ಕೆ ಸೋಮವಾರ ತೆರಳಿದರು–ಪಿಟಿಐ ಚಿತ್ರ)

**

‘ಶಾಂತಿ ಸ್ಥಾಪನೆ ಯತ್ನಗಳಿಗೆ ಸ್ವಾಗತ’

ನವದೆಹಲಿ: ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಪಾಕಿಸ್ತಾನ ನಡೆಸುವ ಎಲ್ಲ ರೀತಿಯ ಪ್ರಯತ್ನಗಳನ್ನೂ ಮುಕ್ತವಾಗಿ ಸ್ವಾಗತಿಸುವುದಾಗಿ ಭಾರತ ಹೇಳಿದೆ.

ರಂಜಾನ್‌ ಪ್ರಯುಕ್ತ ಜೂನ್‌ ಎರಡನೇ ವಾರದವರೆಗೂ ಕಣಿವೆ ರಾಜ್ಯದಲ್ಲಿ ಸೇನಾ ಕಾರ್ಯಾಚರಣೆ ಸ್ಥಗಿತಗೊಳಿಸುವ ಸರ್ಕಾರದ ಆದೇಶವನ್ನು ಸಶಸ್ತ್ರ ಪಡೆಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ತಾಕೀತು ಮಾಡಿದ್ದಾರೆ.

ಕಾಶ್ಮೀರ ಬಿಕ್ಕಟ್ಟು ಸೇರಿದಂತೆ ಎರಡೂ ರಾಷ್ಟ್ರಗಳ ನಡುವಿನ ಸಮಸ್ಯೆಗಳಿಗೆ ಶಾಂತಿಯುತ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವ ಪಾಕಿಸ್ತಾನದ ಪ್ರಸ್ತಾಪಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

‘ಕಾರ್ಯಾಚರಣೆ ಸ್ಥಗಿತಗೊಳಿಸುವ ಕೇಂದ್ರ ಗೃಹ ಸಚಿವಾಲಯದ ನಿರ್ಧಾರಕ್ಕೆ ಭಾರತೀಯ ಸೇನೆ ಬದ್ಧವಾಗಿದೆ. ಒಂದು ವೇಳೆ ಪಾಕಿಸ್ತಾನ ದಾಳಿ ನಡೆಸಿದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡದೆ ಕೈಕಟ್ಟಿ ಕೂರಲು ಸಾಧ್ಯವಿಲ್ಲ’ ಎಂದು ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನದ ದಾಳಿಗೆ ಪ್ರತಿದಾಳಿ ನಡೆಸುವ ಮುಕ್ತ ಸ್ವಾತಂತ್ರ್ಯವನ್ನು ಭಾರತೀಯ ಸೇನೆ ನೀಡಲಾಗಿದೆ. ಗುಪ್ತಚರ ವರದಿಗಳನ್ನು ಆಧರಿಸಿದ ಕಾರ್ಯಾಚರಣೆಗಳ ಮೇಲೆ ಮಾತ್ರ ನಿರ್ಬಂಧ ಹೇರಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

**

ಶಾಂತಿ ಮಾತುಕತೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಎಲ್ಲ ನಡೆಗಳನ್ನೂ ಗಂಭೀರವಾಗಿ ತೆಗೆದುಕೊಳ್ಳಲಾಗುವುದು
– ನಿರ್ಮಲಾ ಸೀತಾರಾಮನ್‌, ರಕ್ಷಣಾ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT