ತರಕಾರಿ, ಹಣ್ಣಿನ ಮೇಲೆ ಕಲಾತ್ಮಕ ಚಿತ್ತಾರ

7

ತರಕಾರಿ, ಹಣ್ಣಿನ ಮೇಲೆ ಕಲಾತ್ಮಕ ಚಿತ್ತಾರ

Published:
Updated:
Deccan Herald

ಇವರಿಗೆ ತರಕಾರಿ, ಹಣ್ಣುಗಳೇ ಕ್ಯಾನ್ವಾಸ್‌. ಒಂದು ಬಾರಿ ಹಣ್ಣು, ತರಕಾರಿಗಳು ಕೈಯಲ್ಲಿ ಹಿಡಿದುಕೊಂಡರೆ ಬರೀ ಅರ್ಧ ಗಂಟೆಯಲ್ಲಿ ಅವು ನೈಜ ರೂಪವನ್ನು ಕಳೆದುಕೊಂಡು ಚಿಟ್ಟೆ, ಗುಲಾಬಿ, ಪ್ರಾಣಿ ಕಲಾಕೃತಿಗಳಾಗಿ ಬದಲಾಗುತ್ತವೆ. ಜಯನಗರದ ಮುಬೀನ್‌ ಸುಲ್ತಾನಾ ಅವರು ತರಕಾರಿ ಕೆತ್ತನೆಯಲ್ಲಿ ಸಿದ್ಧಹಸ್ತರು. ಹಣ್ಣು, ತರಕಾರಿಗಳು ಇವರ ಕೈಯಲ್ಲಿ ಪ್ರಾಣಿ, ಪಕ್ಷಿ ಅಥವಾ ಮುನುಷ್ಯನ ರೂಪ ತಾಳುತ್ತವೆ. 


ಮುಬೀನ್‌ ಸುಲ್ತಾನಾ

ಮುಬೀನ್‌ ಸುಲ್ತಾನಾ  ಕಳೆದ 15–20 ವರ್ಷಗಳಿಂದ ತರಕಾರಿ ಕೆತ್ತನೆ (ವೆಜಿಟೇಬಲ್‌ ಕಾರ್ವಿಂಗ್‌) ಮಾಡುತ್ತಿದ್ದಾರೆ. ಮೂಲಂಗಿ, ಕಿತ್ತಳೆ, ಕಲ್ಲಂಗಡಿ ಹಣ್ಣು, ಬೀಟ್‌ರೂಟ್‌, ಪಪ್ಪಾಯ, ಕ್ಯಾಪ್ಸಿಕಂ, ಕ್ಯಾರೆಟ್‌ ಸೇರಿದಂತೆ ಬಗೆ ಬಗೆ ತರಕಾರಿ, ಹಣ್ಣು ಇವರ ಕೈಚಳಕದಿಂದ ಕಲಾಕೃತಿಗಳನ್ನು ರಚಿಸುತ್ತಾರೆ. ಹಣ್ಣು, ತರಕಾರಿಗಳಲ್ಲಿ ಅವರ ವಿನ್ಯಾಸಗಳನ್ನು ನೋಡಿದಾಗ ಹುಬ್ಬು ಮೇಲೇರಿ, ಕಣ್ಣುಗಳು ಆಶ್ಚರ್ಯದಿಂದ ಅರಳುತ್ತದೆ. ತರಕಾರಿಯನ್ನು ಕೈಗೆ ತೆಗೆದುಕೊಂಡು ಚೂಪಾದ ಸಣ್ಣ ಚಾಕುವಿನಿಂದ ಚಕಚಕನೆ ಕೆತ್ತುತ್ತಾ ಅದರ ಮೂಲರೂಪವೇ ಬದಲಾಯಿಸಿ ಕೇವಲ ಅರ್ಧಗಂಟೆಯಲ್ಲಿ ಹೊಸ ಕಲಾಕೃತಿಯಾಗಿ ರೂಪತಾಳುವಂತೆ ಮಾಡುವುದೇ ವಿಸ್ಮಯ.

ಮುಬೀನ್ ಅವರಿಗೆ ಹೂವಿನ ಅಲಂಕಾರದಲ್ಲಿ ಇದ್ದ ಆಸಕ್ತಿ ಅವರನ್ನು ತರಕಾರಿ ಕೆತ್ತನೆ ಕಡೆಗೂ ಆಕರ್ಷಿಸಿತು. ಮ್ಯಾಗಜಿನ್‌ನಲ್ಲಿದ್ದ ತರಕಾರಿ ಕೆತ್ತನೆ ಬಗ್ಗೆ ಇದ್ದ ಲೇಖನ ಓದಿ ತಾನೂ ಅದರಂತೆ ಮಾಡತೊಡಗಿದರು. ಚಾಕು ಕೈಗೆತ್ತಿಕೊಂಡು ಮನೆಯಲ್ಲಿದ್ದ ತರಕಾರಿ, ಹಣ್ಣುಗಳ ಮೇಲೆ ಪ್ರಯೋಗ ಮಾಡಲಾರಂಭಿಸಿದರು. ಯೂಟ್ಯೂಬ್‌ ನೋಡಿಕೊಂಡು ಕಲಿತರು. ಬಗೆ ಬಗೆ ವಿನ್ಯಾಸಗಳ ಪ್ರಯೋಗ ಮಾಡುತ್ತಾ ಹೋದರು. 

‘ಹೂವಿನ ಅಲಂಕಾರ ಅಥವಾ ಬೇರೆ ಹವ್ಯಾಸ ಎಂದರೆ ದುಡ್ಡು ಖರ್ಚು ಮಾಡಬೇಕು. ಆದರೆ ತರಕಾರಿ ಕೆತ್ತನೆಗೆ ಯಾವುದೇ ಖರ್ಚಿಲ್ಲ. ತರಕಾರಿ, ಹಣ್ಣುಗಳ ಮೇಲೆ ವಿನ್ಯಾಸ ಸರಿಯಾಗಿ ಬಂದಿಲ್ಲ ಎಂದರೆ ಅದನ್ನು ಅಡುಗೆಗೆ ಅಥವಾ ಹಾಗೇ ತಿನ್ನಬಹುದು. ಇದಕ್ಕೆ ಹೆಚ್ಚು ಶ್ರಮವೂ ಬೇಕಿಲ್ಲ’ ಎಂದು ವಿವರಣೆ ನೀಡುತ್ತಾರೆ ಮುಬೀನ್‌.

‘ಇತ್ತೀಚೆಗೆ ಸಭೆ, ಪಾರ್ಟಿಗಳಲ್ಲಿ ತರಕಾರಿ ಕೆತ್ತನೆಗೆ ಬೇಡಿಕೆ ಹೆಚ್ಚಾಗಿದೆ. ಪ್ರಮುಖ ಕಾರ್ಯಕ್ರಮಗಳಲ್ಲಿ ಜನರನ್ನು ಆಕರ್ಷಿಸಲು ಈ ಕಲೆ ಬಳಕೆಯಾಗುತ್ತಿದೆ. ಊಟದ ಟೇಬಲ್‌ ಮೇಲೆ ಬರೀ ಸಲಾಡ್‌ ಇಡುವ ಬದಲು ಸೌತೆಕಾಯಿಯಲ್ಲಿ ಗುಲಾಬಿ, ಹಲ್ಲಿಯಂತೆ ವಿನ್ಯಾಸ ಮಾಡಿದರೆ, ಹಣ್ಣುಗಳನ್ನು ಗುಲಾಬಿಯಂತೆ ಕತ್ತರಿಸಿಟ್ಟರೆ, ಕ್ಯಾರೆಟ್‌, ಮೂಲಂಗಿಯ ಮೇಲೆ ಹೂವಿನ ವಿನ್ಯಾಸ ಬಿಡಿಸಿಟ್ಟರೆ ಆಕರ್ಷಣೀಯವಾಗಿರುತ್ತದೆ. ಇತ್ತೀಚೆಗೆ ಪಂಚತಾರಾ ಹೋಟೆಲ್‌ಗಳಲ್ಲಿ ತರಕಾರಿ ಕೆತ್ತನೆ ಹೆಚ್ಚು ಪ್ರಸಿದ್ಧವಾಗುತ್ತಿದೆ. ಇದರಿಂದ ಈ ಕಲೆ ಹೆಚ್ಚು ಜನಪ್ರಿಯವಾಗುತ್ತಿದೆ’ ಎಂದು ಹೇಳುತ್ತಾರೆ. 

ಅವರ ಕೈಯಲ್ಲಿ ಕಲ್ಲಂಗಡಿ ಹಣ್ಣು ಮನುಷ್ಯನಾಗಿ, ವಿವಿಧ ಬಗೆಯ ಹೂವುಗಳಾಗಿ ಅರಳಿ ನಿಂತರೆ, ಪಪ್ಪಾಯದಲ್ಲೂ ನಾಯಿ, ಆನೆ, ಸೂರ್ಯಕಾಂತಿ ಹೂವು ಹೀಗೆ ನಾನಾ ವಿನ್ಯಾಸ ಮೈದಳೆದಿವೆ. ಕುಂಬಳಕಾಯಿಯ ಮೈತುಂಬಾ ಗುಲಾಬಿ ಹೂವುಗಳು ಅರಳಿವೆ. ಮತ್ತೊಂಡೆ ಕಲ್ಲಂಗಡಿಯಲ್ಲಿ ತಾಜ್‌ಮಹಲ್‌ ವಿನ್ಯಾಸ ಮೂಡಿದೆ. ಹಣ್ಣಾದ ಪಪ್ಪಾಯಿ ಹಕ್ಕಿಯಾಗಿ ರೂಪಾಂತರಗೊಂಡು ಹಾರಾಡಲು ಸಿದ್ಧವಾಗಿರುವಂತಿದೆ. ಮೂಲಂಗಿ ಹೂವಾಗಿ ಅರಳಿ ಹೂದಾನಿಯಲ್ಲಿ ಸ್ಥಾನ ಪಡೆದಿವೆ. ಕರಬೂಜ ಹಣ್ಣು ದೇವರ ಮಂಟಪವಾಗಿದೆ. ಕ್ಯಾಪ್ಸಿಕಂನಲ್ಲಿ ಚಿಟ್ಟೆ, ಟೊಮೆಟೊದಲ್ಲಿ ಗುಲಾಬಿ ಅರಳಿದೆ. 

‘ವಿನ್ಯಾಸಗಳನ್ನು ಮಾಡುವ ಮುಂಚೆ ನಾನು ಯಾವ ವಿನ್ಯಾಸ ಮಾಡಬೇಕು ಎಂದು ಆಲೋಚಿಸುತ್ತೇನೆ. ಒಂದು ಬಾರಿ ಕೈಗೆ ತರಕಾರಿ ಬಂದುಬಿಟ್ಟರೆ ತನ್ನಿಂತಾನೇ ಸಲೀಸಾಗಿ ವಿನ್ಯಾಸ ಮೂಡುತ್ತವೆ. ಒಮ್ಮೆ ಈ ಕಲೆ ಕೈಹಿಡಿದರೆ ಹೆಚ್ಚು ಶ್ರಮ ಬೇಕಾಗಿಲ್ಲ’ ಎಂಬುದು ಅವರ ಅನುಭವದ ಮಾತು.

ಮುಬೀನ್ ಬಿಡುವಿನ ಅವಧಿಯಲ್ಲಿ ಆಸಕ್ತರಿಗೆ ತರಗತಿಯನ್ನೂ ನಡೆಸುತ್ತಾರೆ. ಲಾಲ್‌ಬಾಗ್‌ನಲ್ಲೂ ತರಕಾರಿ ಕೆತ್ತನೆ ಹಾಗೂ ಹೂವಿನ ಅಲಂಕಾರದ ಬಗ್ಗೆ ಆಸಕ್ತರಿಗೆ ಹೇಳಿಕೊಡುತ್ತಾರೆ. 

ಸಂಪರ್ಕಕ್ಕೆ– 73530 78667

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !