ಮಾನವ ಹಕ್ಕುಗಳ ಕುರಿತ ರಾಜ್ಯ ವರದಿ ನೀಡದಕ್ಕೆ ಎಚ್‌.ಎಲ್‌.ದತ್ತು ಬೇಸರ

7
ವಿಕಾಸಸೌಧದಲ್ಲಿ ಎನ್‌ಎಚ್‌ಆರ್‌ಸಿ ಬಹಿರಂಗ ವಿಚಾರಣೆ ಅಧಿವೇಶನ

ಮಾನವ ಹಕ್ಕುಗಳ ಕುರಿತ ರಾಜ್ಯ ವರದಿ ನೀಡದಕ್ಕೆ ಎಚ್‌.ಎಲ್‌.ದತ್ತು ಬೇಸರ

Published:
Updated:

ಬೆಂಗಳೂರು: ‘ಮಾನವ ಹಕ್ಕುಗಳ ರಕ್ಷಣೆ ಹಾಗೂ ಉಲ್ಲಂಘನೆ ಸಂಬಂಧ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವರದಿ (ಎಟಿಆರ್) ನೀಡುವಂತೆ ಶಿಫಾರಸು ಮಾಡಿ ಎರಡು ವರ್ಷ ಕಳೆದರೂ ಕರ್ನಾಟಕದಿಂದ ಇನ್ನೂ ವರದಿ ಬಂದಿಲ್ಲ’ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಅಧ್ಯಕ್ಷ ಎಚ್‌.ಎಲ್.ದತ್ತು ಬೇಸರ ವ್ಯಕ್ತಪಡಿಸಿದರು.

ವಿಕಾಸಸೌಧದಲ್ಲಿ ಗುರುವಾರ ಮಾನವ ಹಕ್ಕುಗಳ ಆಯೋಗದ ಬಹಿರಂಗ ವಿಚಾರಣೆ ಅಧಿವೇಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ, ಹಿರಿಯ ನಾಗರಿಕರ ರಕ್ಷಣೆ, ಕಾರ್ಮಿಕರ ವರ್ಗದ ಹಕ್ಕುಗಳ ರಕ್ಷಣೆ.. ಹೀಗೆ, ಹಲವು ವಿಷಯಗಳ ಕುರಿತು ಚರ್ಚಿಸಲು 2016ರಲ್ಲಿ ಆಯೋಗ ರಾಷ್ಟ್ರಮಟ್ಟದ ಕಾರ್ಯಾಗಾರ ಆಯೋಜಿಸಿತ್ತು. ಎಲ್ಲ ರಾಜ್ಯಗಳಿಂದಲೂ ಸರ್ಕಾರದ ಪ್ರತಿನಿಧಿಗಳು ಭಾಗವಹಿಸಿದ್ದರು. ಸಾರ್ವಜನಿಕರ ರಕ್ಷಣೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ಆಗಲೇ ತಿಳಿಸಲಾಗಿತ್ತು. ಆದರೆ, ಕರ್ನಾಟಕ ಆ ನಿಯಮ ಪಾಲಿಸಿಲ್ಲ. ಆದಷ್ಟು ಬೇಗ ಎಟಿಆರ್ ಸಲ್ಲಿಸಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಸೂಚನೆ ನೀಡಿದರು.

‘ದೇಶದಲ್ಲಿ ಎನ್‌ಎಚ್‌ಆರ್‌ಸಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ದೂರುಗಳ ತ್ವರಿತ ವಿಲೇವಾರಿಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಕೆಲ ರಾಜ್ಯಗಳಲ್ಲಿ ಬಹಿರಂಗ ವಿಚಾರಣೆ ಹಾಗೂ ಶಿಬಿರಗಳನ್ನು ಆಯೋಜಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ’ ಎಂದು ಹೇಳಿದರು.

‘ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ವಿಚಾರದಲ್ಲಿ ಆಯೋಗ ಕಟಿಬದ್ಧವಾಗಿದೆ. ಇಂಥ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅಂತೆಯೇ ಕಾರಾಗೃಹಗಳ ಸುಧಾರಣೆ, ಸರ್ಕಾರಿ ಶಾಲೆಗಳ ಉನ್ನತೀಕರಣ, ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಆರಂಭ, ಆ ಕೇಂದ್ರಗಳಿಗೆ ವೈದ್ಯರ ನೇಮಕ.. ಹೀಗೆ ಹಲವು ವಿಚಾರಗಳ ಕುರಿತು ಸರ್ಕಾರದ ಮೇಲೆ ಒತ್ತಡ ಹೇರಿ ಅಭಿವೃದ್ಧಿ ಮಾಡಿಸುವಲ್ಲಿ ಆಯೋಗ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ’ ಎಂದರು.

ವಿಕಾಸಸೌಧದ ನಾಲ್ಕು ಕೊಠಡಿಗಳಲ್ಲಿ ಆಯೋಗದ ಸದಸ್ಯರು ಬಹಿರಂಗ ವಿಚಾರಣೆ ಪ್ರಾರಂಭಿಸಿದ್ದು, ಎರಡು ದಿನಗಳಲ್ಲಿ 190 ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !