ಸಚಿವರ ‘ಲಂಚದ ಹಣ’!

7
ಸಿ. ಪುಟ್ಟರಂಗ ಶೆಟ್ಟಿ ಟೈಪಿಸ್ಟ್‌ ಬಳಿ ಸಿಕ್ಕಿದ್ದ ₹25.76 ಲಕ್ಷ ನಗದು ಪ್ರಕರಣ

ಸಚಿವರ ‘ಲಂಚದ ಹಣ’!

Published:
Updated:

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗ ಶೆಟ್ಟಿ ಕಚೇರಿಯ ಟೈಪಿಸ್ಟ್ ಎಸ್‌.ಜೆ.ಮೋಹನ್‌ಕುಮಾರ್ ಬಳಿ ಪತ್ತೆಯಾದ ದಾಖಲೆ ಇಲ್ಲದ ₹25.76 ಲಕ್ಷ, ಪುಟ್ಟರಂಗ ಶೆಟ್ಟಿ ಅವರಿಗೆ ಸಂದಾಯ ಆಗಬೇಕಿದ್ದ ‘ಲಂಚದ ಹಣ’.

ಪ್ರಕರಣ ಸಂಬಂಧ ವಿಧಾನಸೌಧ ಪೊಲೀಸರಿಗೆ ಹೇಳಿಕೆ ನೀಡಿರುವ ಎಸ್‌.ಜೆ.ಮೋಹನ್‌ ಕುಮಾರ್, ‘ಗುತ್ತಿಗೆದಾರರು ಹಾಗೂ ಅವರ ಪರವಿರುವ ವ್ಯಕ್ತಿಗಳಿಂದ ಪಡೆದಿದ್ದ ಹಣವನ್ನೇ ಪುಟ್ಟರಂಗಶೆಟ್ಟಿ ಅವರಿಗೆ ಲಂಚವಾಗಿ ಕೊಡಲು ಹೊರಟಿದ್ದೆ’ ಎಂಬುದನ್ನು ಒಪ್ಪಿಕೊಂಡಿದ್ದಾನೆ. 

ಆತನ ಹೇಳಿಕೆ ಆಧರಿಸಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಪ್ರಕರಣ ವರ್ಗಾಯಿಸಲು ಸಿದ್ಧತೆ ಮಾಡಿಕೊಂಡಿರುವ ವಿಧಾನಸೌಧ ಪೊಲೀಸರು, ‘ಮೋಹನ್‌ಕುಮಾರ್ ಹಾಗೂ ಗುತ್ತಿಗೆದಾರರ ಪರವಾಗಿ ಅನಂತು, ನಂದ, ಶ್ರೀನಿಧಿ ಹಾಗೂ ಕೃಷ್ಣಮೂರ್ತಿ ಎಂಬುವರು ಸಚಿವ ಪುಟ್ಟರಂಗ ಶೆಟ್ಟಿ ಅವರಿಗೆ ಲಂಚ ಕೊಡಲು ಯತ್ನಿಸಿದ್ದಾರೆ. ಆ ಐವರ ಕೃತ್ಯವು ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆಯಡಿ ಅಪರಾಧವಾಗಿರುವುದು ನಮ್ಮ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ, ಪ್ರಕರಣವನ್ನು ತಮಗೆ ವರ್ಗಾಯಿಸಲಾಗುತ್ತಿದೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳಿ’ ಎಂದು ಎಸಿಬಿ ಅಧಿಕಾರಿಗಳಿಗೆ ಮನವಿ ಮಾಡಲಿದ್ದಾರೆ.

ಮೋಹನ್‌ ಹೇಳಿಕೆ ವಿವರ: ‘ಮಲ್ಲೇಶ್ವರದ ಸ್ವಿಮ್ಮಿಂಗ್ ಫೂಲ್ ಬಡಾವಣೆ ನಿವಾಸಿಯಾದ ನಾನು, ಗುತ್ತಿಗೆ ಆಧಾರದಲ್ಲಿ ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದೇನೆ. ಜತೆಗೆ ನಾನೇ ಅವರ ಆಪ್ತ ಸಹಾಯಕ’ ಎಂದು ಮೋಹನ್‌ಕುಮಾರ್, ಹೇಳಿಕೆಯಲ್ಲಿ ತಿಳಿಸಿದ್ದಾನೆ.

‘ಜ. 3ರಂದು ಎಂದಿನಂತೆ ಕೆಲಸಕ್ಕೆ ಬಂದಿದ್ದೆ. ಗುತ್ತಿಗೆದಾರರ ಪರವಾಗಿ ಬಂದಿದ್ದ ಅನಂತು ಎಂಬಾತ ₹3.60 ಲಕ್ಷವನ್ನು ವಿಧಾನಸೌಧದ ಕೊಠಡಿ ಸಂಖ್ಯೆ 339ರ ಮುಂಭಾಗದ ಕಾರಿಡಾರ್‌ನಲ್ಲಿ ನನಗೆ ಕೊಟ್ಟು ಹೋಗಿದ್ದ. ಆ ಹಣವನ್ನು ಕಚೇರಿಯಲ್ಲೇ ಗೌಪ್ಯವಾಗಿಟ್ಟು ಸಂಜೆ ಮನೆಗೆ ಹೋಗಿದ್ದೆ’

‘ಮರುದಿನ ಜ. 4ರಂದು ಕೆಲಸಕ್ಕೆ ಬಂದಿದ್ದೆ. ಬೆಳಿಗ್ಗೆ 10ರ ಸುಮಾರಿಗೆ ಮೊಬೈಲ್‌ಗೆ ಕರೆ ಮಾಡಿ ಎಲ್‌ಎಚ್ (ಶಾಸಕರ ಭವನ) ಗೇಟ್‌ ಬಳಿ ಕರೆಸಿಕೊಂಡಿದ್ದ ನಂದ ಎಂಬಾತ, ₹15.9 ಲಕ್ಷ ಕೊಟ್ಟಿದ್ದ. ನನ್ನ ಸ್ನೇಹಿತ ಮಂಜು ಎಂಬಾತ, ತನ್ನ ಸಂಬಂಧಿ ಶ್ರೀನಿಧಿ ಕಡೆಯಿಂದ ಹೈಕೋರ್ಟ್ ಮುಂಭಾಗದ ಅಂಬೇಡ್ಕರ್ ರಸ್ತೆಯ ಮೆಟ್ರೊ ನಿಲ್ದಾಣ ಬಳಿ ₹2 ಲಕ್ಷ ಕೊಡಿಸಿದ್ದ. ಅದೇ ದಿನ ಕೃಷ್ಣಮೂರ್ತಿ ಎಂಬಾತ ಸಹ ವಿಧಾನಸೌಧ ಕೊಠಡಿ ಸಂಖ್ಯೆ 339ರ ಕಾರಿಡಾರ್ ಬಳಿ ₹4.26 ಲಕ್ಷ ಕೊಟ್ಟಿದ್ದ. ಅವರ ಹಣವನ್ನೆಲ್ಲ ಕಚೇರಿಗೆ ತೆಗೆದುಕೊಂಡು ಬಂದಿದ್ದೆ’.

‘ಪ್ಲಾಸ್ಟಿಕ್ ಕವರ್ ಹಾಗೂ ಸಚಿವರಿಗೆ ಹೊಸ ವರ್ಷದ ಶುಭಾಶಯ ಕೋರಿ ಬಂದಿದ್ದ ಗ್ರೀಟಿಂಗ್‌ ಕವರ್‌ನಲ್ಲಿ ಹಣವನ್ನೆಲ್ಲ ಹಾಕಿ ಬ್ಯಾಗ್‌ನಲ್ಲಿಟ್ಟುಕೊಂಡಿದ್ದ. ಅದೇ ಹಣವನ್ನು ಸಚಿವ ಪುಟ್ಟರಂಗಶೆಟ್ಟಿ ಅವರಿಗೆ ಲಂಚವಾಗಿ ನೀಡಿ, ಗುತ್ತಿಗೆದಾರರ ಕೆಲಸಗಳನ್ನು ಮಾಡಿಕೊಡುವಂತೆ ಪ್ರೇರೇಪಿಸುವ ಸಲುವಾಗಿ ಅವರ ಬಳಿಗೆ ತೆಗೆದುಕೊಂಡು ಹೊರಟಿದ್ದೆ. ವಿಧಾನಸೌಧ ಗೇಟಿನಲ್ಲಿ ಭದ್ರತಾ ಸಿಬ್ಬಂದಿಗೆ ಸಿಕ್ಕಿಬಿದ್ದೆ’ ಎಂದು ಮೋಹನ್‌ಕುಮಾರ್ ತಿಳಿಸಿದ್ದಾನೆ.

***

ಪ್ರಕರಣವನ್ನು ಎಸಿಬಿಗೆ ವರ್ಗಾಯಿಸಿ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್ ಸೋಮವಾರ ಆದೇಶಿಸಿದ್ದಾರೆ. ಮಂಗಳವಾರ ಬೆಳಿಗ್ಗೆಯೇ ದಾಖಲೆಗಳನ್ನು ಎಸಿಬಿ ಅಧಿಕಾರಿಗಳಿಗೆ ಹಸ್ತಾಂತರಿಸಲಿದ್ದೇವೆ

-ಡಿ.ದೇವರಾಜ್, ಡಿಸಿಪಿ, ಕೇಂದ್ರ ವಿಭಾಗ

ಬರಹ ಇಷ್ಟವಾಯಿತೆ?

 • 25

  Happy
 • 1

  Amused
 • 2

  Sad
 • 0

  Frustrated
 • 4

  Angry

Comments:

0 comments

Write the first review for this !