7

ಯಶಸ್ವಿಯಾಗಿ ನಡೆದ ಶೈಕ್ಷಣಿಕ ಮೇಳ

Published:
Updated:
ಯಶಸ್ವಿಯಾಗಿ ನಡೆದ ಶೈಕ್ಷಣಿಕ ಮೇಳ

ಬೆಂಗಳೂರು: `ಪ್ರಜಾವಾಣಿ~, `ಡೆಕ್ಕನ್ ಹೆರಾಲ್ಡ್~ ಪತ್ರಿಕಾ ಸಮೂಹವು ನಗರದ ಅರಮನೆ ಮೈದಾನದಲ್ಲಿ ಪಿಯುಸಿ ನಂತರದ ಮುಂದಿನ ಕೋರ್ಸುಗಳು, ಅವಕಾಶಗಳ ಕುರಿತು ಮಾಹಿತಿ ನೀಡಲು ಏರ್ಪಡಿಸಿದ್ದ ಎರಡು ದಿನಗಳ `ಜ್ಞಾನದೇಗುಲ~ ಶೈಕ್ಷಣಿಕ ಮೇಳದಲ್ಲಿ ಭಾನುವಾರ `ಕಾಮೆಡ್-ಕೆ~ ಸಂಸ್ಥೆ ನಡೆಸುವ ಪರೀಕ್ಷೆ ಪ್ರಕ್ರಿಯೆ, ಸೀಟು ಹಂಚಿಕೆ ಹಾಗೂ ಮ್ಯಾನೇಜ್‌ಮೆಂಟ್ ಕೋರ್ಸುಗಳ ಬಗ್ಗೆ ತಜ್ಞರು ಮಾಹಿತಿ ನೀಡಿದರು.`ಕಾಮೆಡ್-ಕೆ~ ಸಂಸ್ಥೆಯ ಸಹ ಕಾರ್ಯಕಾರಿ ಕಾರ್ಯದರ್ಶಿ ಡಾ.ಎನ್.ಕಿಶೋರ್ ಆಳ್ವ `ಕಾಮೆಡ್-ಕೆ ಪರೀಕ್ಷಾ ಪದ್ಧತಿ, ಸೀಟು ಹಂಚಿಕೆ~ ಬಗ್ಗೆ ಮಾತನಾಡಿ, `ಸಿಇಟಿಗೆ ಪರ್ಯಾಯವಾಗಿ ಕಾಮೆಡ್-ಕೆ ನಡೆಸುವ ಪರೀಕ್ಷೆಗಳನ್ನು ತೆಗೆದುಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶಗಳು ಲಭ್ಯವಾಗಲಿವೆ.ರಾಜ್ಯದ ಡೀಮ್ಡ ವಿವಿಗಳು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ಬರೆಯುವುದು ಅಗತ್ಯ. ಏಕೆಂದರೆ, ಆ ಸಂಸ್ಥೆಯ ಮೆಡಿಕಲ್, ಡೆಂಟಲ್ ಕಾಲೇಜುಗಳಿಗೆ ಸೇರುವವರಿಗೆ ಸರ್ಕಾರ ನಡೆಸುವ ಸಿಇಟಿ ಹಾಗೂ ಕಾಮೆಡ್-ಕೆ ಸಿಇಟಿ ಅನ್ವಯವಾಗುವುದಿಲ್ಲ~ ಎಂದರು.ಏಜೆಂಟರನ್ನು ನಂಬಬೇಡಿ: ಕಾಮೆಡ್-ಕೆ ನಡೆಸುವ ಪರೀಕ್ಷೆ ಹಾಗೂ ಸೀಟು ಹಂಚಿಕೆ ಸಂಪೂರ್ಣ ಪಾರದರ್ಶಕವಾಗಿದ್ದು, ಸಂಸ್ಥೆ ಯಾವುದೇ ಏಜೆಂಟರನ್ನು ಹೊಂದಿಲ್ಲ. ಆದ್ದರಿಂದ ಸೀಟು ಕೊಡಿಸುವ ಆಮಿಷವೊಡ್ಡುವ ಏಜೆಂಟರನ್ನು ನಂಬಬೇಡಿ ಎಂದು ಆಳ್ವ ಮನವಿ ಮಾಡಿದರು.ವಾರದಲ್ಲಿ ಇತ್ಯರ್ಥ: ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಮಧ್ಯೆ ಎಂಜಿನಿಯರಿಂಗ್ ಸೀಟುಗಳಿಗೆ ಶುಲ್ಕ ನಿಗದಿ ಕುರಿತು ಮಾತುಕತೆ ನಡೆಯುತ್ತಿದ್ದು, ಶುಲ್ಕ ಎಷ್ಟು ಇರಲಿದೆ ಎಂಬ ಬಗ್ಗೆ ಒಂದು ವಾರದಲ್ಲಿ ನಿರ್ಧಾರ ಹೊರಬೀಳಲಿದೆ. ತಕ್ಷಣವೇ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.`ಮ್ಯಾನೇಜ್‌ಮೆಂಟ್ ಕೋರ್ಸ್‌ನ ಅವಕಾಶಗಳು~ ಕುರಿತು ಅಲಯನ್ಸ್ ವಿಶ್ವವಿದ್ಯಾಲಯದ ಕುಲಪತಿ ಡಾ.ಮಧುಕರ್ ಅಂಗುರ್ ಮಾತನಾಡಿ, `120 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಶೇ 9 ರಷ್ಟಿದೆ. ಅದರಲ್ಲೂ ಮ್ಯಾನೇಜ್‌ಮೆಂಟ್ ಪದವೀಧರರ ಸಂಖ್ಯೆ ಒಟ್ಟಾರೆ ಉನ್ನತ ಶಿಕ್ಷಣದಲ್ಲಿ ಶೇ 7ರಷ್ಟಿದೆ. ಮ್ಯಾನೇಜ್‌ಮೆಂಟ್ ಕ್ಷೇತ್ರ ಅಧಿಕ ಉದ್ಯೋಗ ನೀಡಲಿದ್ದು, ಸುಮಾರು 80 ಸಾವಿರ ಉದ್ಯೋಗಗಳು ಖಾಲಿ ಇವೆ. ಭಾರತೀಯ ಸ್ಟೇಟ್ ಬ್ಯಾಂಕ್ ಒಂದೇ 20 ಸಾವಿರ ಎಂಬಿಎ ಪದವೀಧರರನ್ನು ನೇಮಕ ಮಾಡಿಕೊಂಡಿದೆ~ ಎಂದು ಹೇಳಿದರು.`ಭಾರತೀಯ ನಿರ್ವಹಣಾ ಸಂಸ್ಥೆ (ಐಐಎಂ)ಗಳ ಸಂಖ್ಯೆ 1983ರಲ್ಲಿ ಕೇವಲ ಮೂರು ಇದ್ದುದು, ಈಗ 13ಕ್ಕೇರಿದೆ~ ಎಂದು ಹೇಳಿದರು.ಜೆಮ್ಸ ಬಿ ಸ್ಕೂಲ್‌ನ ಡೀನ್ ಡಾ.ಎಂಐಎಂ ನೆಹ್ರೂಜಿ `ಎಂಬಿಎ ಆಕಾಂಕ್ಷಿಗಳ ಮುಂದಿರುವ ವಿಶಿಷ್ಟ ಪರ‌್ಯಾಯಗಳು~ ಕುರಿತು ಮಾತನಾಡಿ, `ಇಷ್ಟಪಟ್ಟ ಕೋರ್ಸನ್ನೇ ಮಾಡಬೇಕು ಎಂಬ ನಿರ್ಧಾರಕ್ಕೆ ಮಕ್ಕಳು ಜೋತು ಬೀಳದಂತೆ ಪೋಷಕರು ಎಚ್ಚರಿಕೆ ವಹಿಸಬೇಕು. ಆ ಕೋರ್ಸ್ ಹೊರತುಪಡಿಸಿಯೂ ಸಹ ಹಲವಾರು ಅವಕಾಶಗಳಿವೆ~ ಎಂದು ನುಡಿದರು.ಸೀಟು ಸಿಗದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಕ್ರಮವು `ತಾತ್ಕಾಲಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ~ ವನ್ನು ಕಂಡುಕೊಂಡಂತೆ ಎಂದರು.`ಉದ್ಯಮಿಗಳ ಜಗತ್ತು~ ಕುರಿತು ಕ್ಸೇವಿಯರ್ ಉದ್ಯಮ ನಿರ್ವಹಣಾ ಸಂಸ್ಥೆಯ ಪ್ರಾಧ್ಯಾಪಕ ರಾಜೇಂದ್ರ ದೇಸಾಯಿ ಮಾತನಾಡಿ, `ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವೋ ಆ ಬಗ್ಗೆ ಹೆಚ್ಚು ಗಮನವನ್ನು ಕೇಂದ್ರೀಕರಿಸಬೇಕು. ಮೊದಲು ನಿಮ್ಮ ಸಾಮರ್ಥ್ಯವನ್ನು ಗುರುತಿಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು.ವಾಣಿಜ್ಯ ನಿರ್ವಹಣೆ ಮತ್ತು ತಾಂತ್ರಿಕ ಸಂಸ್ಥೆ (ಐಬಿಎಂಟಿ)ಯ ನಿರ್ದೇಶಕ ಡಾ.ಅನಿಲ್ ರಾವತ್ `ಜಾಗತಿಕ ಉದ್ಯಮ ನೋಟ~ ವಿಷಯ ಕುರಿತು ಮಾತನಾಡಿ, `ಜಾಗತೀಕರಣದ ನಂತರ ಬದಲಾದ ಪರಿಸ್ಥಿತಿಯಲ್ಲಿ ಅಮೆರಿಕ, ಯೂರೋಪ್‌ನ ಆರ್ಥಿಕತೆ ಕುಸಿದು ಹೋಗಿದೆ. ಏಷ್ಯಾ ಖಂಡ ಅದರಲ್ಲೂ ಭಾರತ ಮತ್ತು ಚೀನಾ ದೇಶಗಳು ಆರ್ಥಿಕವಾಗಿ ಪ್ರಬಲ ರಾಷ್ಟ್ರಗಳಾಗಿ ಹೊರಹೊಮ್ಮಿವೆ. ಇದರಿಂದ ಸಹಜವಾಗಿ ಉದ್ಯೋಗಾವಕಾಶಗಳೂ ದೊರೆಯಲಿವೆ~ ಎಂದು ಅಭಿಪ್ರಾಯಪಟ್ಟರು.ಪ್ರಾಯೋಜಕರಿಗೆ ಸ್ಮರಣಿಕೆ

`ಪ್ರಜಾವಾಣಿ~, `ಡೆಕ್ಕನ್‌ಹೆರಾಲ್ಡ್~ ಪತ್ರಿಕಾ ಸಮೂಹ ಜಂಟಿಯಾಗಿ ಏರ್ಪಡಿಸಿದ್ದ ಶೈಕ್ಷಣಿಕ ಮೇಳ `ಜ್ಞಾನದೇಗುಲ~ದ ಸಹ ಪ್ರಾಯೋಜಕರಾದ ಜೆಮ್ಸ ಬಿ ಸ್ಕೂಲ್, ಎಎಂಸಿ ಸಿಟಿ ಇನ್‌ಸ್ಟಿಟ್ಯೂಷನ್ಸ್, ಐಬಿಎಂಟಿ ಬಿಜಿನೆಸ್ ಸ್ಕೂಲ್, ಕೇಂಬ್ರಿಡ್ಜ್ ತಾಂತ್ರಿಕ ಸಂಸ್ಥೆ, ಸಿಎಂಆರ್ ಸಮೂಹ ಸಂಸ್ಥೆಗಳು, ಎಂ.ಎಸ್.ರಾಮಯ್ಯ ಎಂಜಿನಿಯರಿಂಗ್ ಕಾಲೇಜು, ಬಿಎನ್‌ಎಂ ಶಿಕ್ಷಣ ಸಂಸ್ಥೆ, ರೇವಾ ಸಮೂಹ ಸಂಸ್ಥೆಗಳು, ವಿಜ್‌ಟೂನ್ಜ್ ಅಕಾಡೆಮಿ ಆಫ್ ಮೀಡಿಯಾ ಅಂಡ್ ಡಿಸೈನ್ ಹಾಗೂ ಆಚಾರ್ಯ ತಾಂತ್ರಿಕ ಸಂಸ್ಥೆಗಳ ಮುಖ್ಯಸ್ಥರಿಗೆ `ದಿ ಪ್ರಿಂಟರ್ಸ್‌ ಮೈಸೂರು ಲಿಮಿಟೆಡ್~ (ಟಿಪಿಎಂಎಲ್)ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಹಾಗೂ `ಡೆಕ್ಕನ್ ಹೆರಾಲ್ಡ್~ನ ಸಂಪಾದಕ ಕೆ.ಎನ್.ತಿಲಕ್‌ಕುಮಾರ್ ಅವರು ಸ್ಮರಣಿಕೆ ನೀಡಿ ಅಭಿನಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry