7

ಪ್ರಾಣ ಕೊಟ್ಟರೂ ಭೂಮಿ ಕೊಡೆವು

Published:
Updated:

ಗುಲ್ಬರ್ಗ: `ಪ್ರಾಣ ಕೊಟ್ಟರೂ ಭೂಮಿ ಕೊಡೆವು~ ಎಂಬ ನಿಲುವು ಭಾನುವಾರ ಗುಲ್ಬರ್ಗದ ಶೇಖರೋಜಾದ ಕಡಗಂಚಿ ಮಠದಲ್ಲಿ ನಡೆದ  ರೈತರ ಸಭೆಯಲ್ಲಿ ಹೊರಹೊಮ್ಮಿತು.  ಕೈಗಾರಿಕಾ ಉದ್ದೇಶಕ್ಕಾಗಿ ರಾಜ್ಯ ಸರ್ಕಾರವು ಶೇಖರೋಜಾ, ಪಲ್ಲಾಪುರ, ಸಿಂಧಗಿ, ತಾಜಾ ಸುಲ್ತಾನಪುರ, ಕೆರಿ ಭೋಸಗಾದ  2,229 ಎಕರೆ ಭೂ ಪ್ರದೇಶ ಸ್ವಾಧೀನ ಪಡಿಸಲು ಉದ್ದೇಶಿಸಿದೆ. ಈ ವ್ಯಾಪ್ತಿಯ ರೈತರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಹೈದರಾಬಾದ್ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಕೃಷಿ ವಿಭಾಗದ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಕೃಷಿ ಭೂಮಿಯನ್ನು ಕೈಗಾರಿಕೆಗಾಗಿ ಕಸಿದುಕೊಂಡರೆ ರೈತರು ಮಾತ್ರವಲ್ಲ, ಅದನ್ನು ನಂಬಿದ ಒಕ್ಕಲುತನ ಕಸುಬುದಾರರು, ಕೂಲಿಕಾರರು ನಿರ್ಗತಿಕರಾಗುತ್ತಾರೆ. ಇಲ್ಲಿನ ಜನ ಕೆಲಸಕ್ಕಾಗಿ ಪಟ್ಟಣಗಳಿಗೆ ವಲಸೆ ಹೋಗಬೇಕಾಗುತ್ತದೆ. ಗುಲ್ಬರ್ಗ ನಗರಕ್ಕೆ ಪೂರೈಕೆಯಾಗುವ ಕೃಷಿ ಉತ್ಪನ್ನವೂ ಇಳಿಕೆಯಾಗುತ್ತದೆ.ಹೀಗಾಗಿ ಆಹಾರ ಉತ್ಪನ್ನಕ್ಕಾಗಿ ನಗರವಾಸಿಗಳೂ ಬೇರೆ ಪ್ರದೇಶಕ್ಕೆ ಅವಲಂಬಿಸಬೇಕಾದ ದುಸ್ಥಿತಿ ಮತ್ತು ಬೆಲೆಯೇರಿಕೆ ಉಂಟಾಗುತ್ತದೆ ಎಂಬ ಅಭಿಪ್ರಾಯ ಕೇಳಿ ಬಂತು. ಅಲ್ಲದೇ ಭಾವನಾತ್ಮಕವಾಗಿ ತೀವ್ರ ವಿರೋಧ ವ್ಯಕ್ತವಾಯಿತು.ಭೂ ಸ್ವಾಧೀನ ಪ್ರಕ್ರಿಯೆಯು ಸರ್ಕಾರಕ್ಕೆ ಅನಿವಾರ್ಯವೇ ಆದರೆ, ಬ್ರಿಟೀಷರು ರಚಿಸಿದ 1894ರ ಭೂ ಸ್ವಾಧೀನ ಕಾಯಿದೆಗೆ ತಿದ್ದುಪಡಿ ಮಾಡಬೇಕು. ಆ ಬಳಿಕ ರೈತರ ಜೊತೆ ಸಮಾಲೋಚನೆ ನಡೆಸಿ ಅಂತಿಮ ನಿರ್ಣಯ ಅಂಗೀಕರಿಸಬೇಕು. ಆದರೆ ರೈತರನ್ನು ನಿರ್ಲಕ್ಷಿಸಿ ಸರ್ಕಾರವು ಮುಂದಡಿ ಹೆಜ್ಜೆ ಇಟ್ಟಲ್ಲಿ ಪ್ರಾಣ ಬೇಕಾದರೂ ಕೊಟ್ಟೇವು ಭೂಮಿ ಕೊಡೆವು ಎಂದು ರೈತರು ಹೇಳಿದರು. ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲು ಆಗಸ್ಟ್ 7ರಂದು ಸಭೆ ನಡೆಸಲು ನಿರ್ಧರಿಸಲಾಯಿತು.ಉಮಾಕಾಂತ ನಿಗ್ಗುಡಗಿ, ಬಸವರಾಜ ಹಡಗಿಲ, ಬಸವರಡ್ಡಿ ಕರಡ್ಡಿ, ವಹಾಬ್ ಬಾಬಾ, ಗುರುಲಿಂಗಪ್ಪ ಎಸ್. ಪಾಟೀಲ್, ಸಂತೋಷ್ ಕುಮಾರ ಎ. ಬೆನ್ನೂರ, ರಾಜಕುಮಾರ್, ಬಸವಜ್ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry