ಸಿದ್ಧೇಶ್ವರ ಜಾತ್ರೆಗೂ ಮುನ್ನವೇ ಜಮಾಯಿಸಿದ ಜಾನುವಾರು..!

7
ವಿಜಯಪುರದ ಹೊರವಲಯ ತೊರವಿ ಬಳಿ ನಡೆದಿರುವ ಸಿದ್ಧೇಶ್ವರ ಜಾನುವಾರು ಜಾತ್ರೆ; ಊರಿಂದ ಬುತ್ತಿ ತಂದವರು

ಸಿದ್ಧೇಶ್ವರ ಜಾತ್ರೆಗೂ ಮುನ್ನವೇ ಜಮಾಯಿಸಿದ ಜಾನುವಾರು..!

Published:
Updated:
Prajavani

ವಿಜಯಪುರ: ವಿಜಯಪುರದ ಆರಾಧ್ಯದೈವ ಸಿದ್ಧೇಶ್ವರರ ಜಾತ್ರೆಗೆ ಶತಮಾನದ ನಂಟಿದೆ. ಜಾತ್ರಾ ಮಹೋತ್ಸವದ ಸಂದರ್ಭ ನಗರದ ಹೊರ ವಲಯದಲ್ಲಿನ ತೊರವಿ ಬಳಿ ನಡೆಯಲಿರುವ ಜಾನುವಾರು ಜಾತ್ರೆಗೂ ಅಷ್ಟೇ ಐತಿಹ್ಯವಿದೆ.

ಜ.12ರ ಶನಿವಾರದಿಂದ ಸಿದ್ಧೇಶ್ವರ ಜಾನುವಾರು ಜಾತ್ರೆ ವಿಧ್ಯುಕ್ತವಾಗಿ ಆರಂಭಗೊಳ್ಳಲಿದೆ. 18ರ ಶುಕ್ರವಾರದವರೆಗೂ ಏಳು ದಿನ ತೊರವಿ ಬಳಿಯಿರುವ ಎಪಿಎಂಸಿಯ ವಿಶಾಲ 110 ಎಕರೆ ಪ್ರದೇಶದ ವಿಸ್ತಾರದಲ್ಲಿ ಜಾನುವಾರುಗಳು ಈಗಾಗಲೇ ಜಮಾವಣೆಗೊಂಡಿವೆ.

ಜಾನುವಾರು ಜಾತ್ರೆ ವಿಧ್ಯುಕ್ತವಾಗಿ ಚಾಲನೆ ಪಡೆದುಕೊಳ್ಳದಿದ್ದರೂ; ಎರಡ್ಮೂರು ದಿನಗಳಿಂದ ಸಹಸ್ರ, ಸಹಸ್ರ ಸಂಖ್ಯೆಯ ದನಗಳು, ವಿಶಾಲ ಮೈದಾನದಲ್ಲಿ ಜಮಾಯಿಸಿವೆ. ಎಪಿಎಂಸಿಯ ಜಾಗ ಸಾಲದೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಆವರಣದಲ್ಲೂ ಬೀಡುಬಿಟ್ಟಿವೆ.

ಈಗಾಗಲೇ ವಹಿವಾಟು ಆರಂಭಗೊಂಡಿದೆ. ವ್ಯಾಪಾರಿಗಳು–ರೈತರ ನಡುವೆ ಚೌಕಾಶಿ ಬಿರುಸುಗೊಂಡಿದೆ. ಜಿಲ್ಲೆಯಿಂದಷ್ಟೇ ಅಲ್ಲದೇ ನೆರೆ ಹೊರೆಯ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ಯಾದಗಿರಿ, ಕಲಬುರ್ಗಿ ಭಾಗದ ರೈತರು ಈಗಾಗಲೇ ತಮ್ಮ ಜಾನುವಾರುಗಳನ್ನು ಮಾರಾಟಕ್ಕಾಗಿ ಜಾತ್ರೆಗೆ ತಂದಿದ್ದಾರೆ.

ಮಂಗಳವಾರ ಮುಸ್ಸಂಜೆಯಿಂದಲೇ ಇಲ್ಲಿ ಜಾನುವಾರು ಜಮಾವಣೆಗೊಂಡಿವೆ. ಶುಕ್ರವಾರ ವಿಜಯಪುರ ಸುತ್ತಮುತ್ತಲಿನ ರೈತರು, ಬಂಡಿ ಹೂಡಿಕೊಂಡು ಜಾನುವಾರು ಮಾರಾಟಕ್ಕಾಗಿ ಜಾತ್ರೆಗೆ ತಂಡೋಪ ತಂಡವಾಗಿ ಬಂದ ಚಿತ್ರಣ ರಸ್ತೆಗಳಲ್ಲಿ ಗೋಚರಿಸಿತು.

ಜಾತ್ರೆ ಆವರಣದಲ್ಲಿ ಜಾನುವಾರು ಜಮಾವಣೆಗೊಂಡ ಬೆನ್ನಿಗೆ ದೂರದೂರಿನ ವ್ಯಾಪಾರಿಗಳು ದಾಂಗುಡಿಯಿಟ್ಟಿದ್ದಾರೆ. ನೆರೆಯ ಮಹಾರಾಷ್ಟ್ರದ ನೋಂದಣಿ ಸಂಖ್ಯೆಯಿರುವ ವಾಹನಗಳ ಓಡಾಟ ಬಿರುಸುಗೊಂಡಿದೆ. ಮಹಾರಾಷ್ಟ್ರದ ರೈತರು ಈ ಜಾತ್ರೆಯಲ್ಲೇ ತಮ್ಮ ಒಕ್ಕಲುತನಕ್ಕೆ ಅಗತ್ಯವಿರುವ ಹೋರಿ ಖರೀದಿಸುವುದು ವಿಶೇಷ.

ರಾಜ್ಯದ ರಾಯಚೂರು, ದಾವಣಗೆರೆ, ಬಳ್ಳಾರಿ, ಕೊಪ್ಪಳ ಭಾಗದ ರೈತರು ಸಹ, ಈ ಭಾಗದ ಕಿಲಾರಿ ತಳಿಯ, ದಷ್ಟಪುಷ್ಟ ದೇಹ ಹೊಂದಿರುವ ಭಾರಿ ಗಾತ್ರದ ಹೋರಿ ಖರೀದಿಗಾಗಿಯೇ ಇಲ್ಲಿಗೆ ಬರುತ್ತಾರೆ. ಪ್ರತಿ ವರ್ಷವೂ ಇಲ್ಲಿ ಹೋರಿಗಳನ್ನು ಖರೀದಿಸಿ, ಸಾಕುವುದನ್ನು ಕೆಲ ರೈತರು ಹವ್ಯಾಸವಾಗಿಸಿಕೊಂಡಿದ್ದಾರೆ.

ಬಂಡಿಯೊಳಗೆ ‘ಬಾಳ ಬುತ್ತಿ..!’

ಈಚೆಗಿನ ದಿನಗಳಲ್ಲಿ ಜಾತ್ರೆಗೆ ಬಂಡಿ ಕಟ್ಟಿಕೊಂಡು ಬರುವವರು ಕಡಿಮೆಯಾಗಿದ್ದಾರೆ. ಹತ್ತಿರದ ಮಂದಿ ಮಾತ್ರ ಬಂಡಿಯಲ್ಲಿ ಬರುತ್ತಾರೆ. ದೂರದ ಜಿಲ್ಲೆಗಳಿಂದ ಬರುವ ಅಪಾರ ಸಂಖ್ಯೆಯ ರೈತರು ಮಾತ್ರ ಸಂಕ್ರಾಂತಿ ಆಸುಪಾಸಿನ ದಿನಗಳಲ್ಲಿ ವಾಹನಗಳ ಮೂಲಕ ತಮ್ಮ ರಾಸುಗಳನ್ನು ಜಾತ್ರೆಗೆ ತಂದು ಮಾರುತ್ತಾರೆ.

ಸಂಕ್ರಾಂತಿ ಆಸುಪಾಸಿನ ಮೂರು ದಿನ ದನಗಳ ಜಾತ್ರೆಯಲ್ಲಿ ಭರ್ಜರಿ ವಹಿವಾಟು. ವಯಸ್ಸಾದ, ಅಸಹಾಯಕ ಎತ್ತುಗಳನ್ನು ಮಾರಿ, ಮುಂದಿನ ಕೃಷಿ ಚಟುವಟಿಕೆಗೆ ಪೂರಕವಾಗುವಂತೆ ಸದೃಢ ಮೈಕಟ್ಟಿನ ರಾಸುಗಳನ್ನು ಕೊಳ್ಳಲು ರೈತ ಸಮೂಹ ಈ ಜಾತ್ರೆಯಲ್ಲಿ ಮುಗಿಬೀಳಲಿದೆ.

‘ಬಂಡಿಯಲ್ಲಿ ಜಾತ್ರೆಗೆ ಹೊಂಟಿದ್ದೀವಿ. ಕಣಕಿ ಸಿಗವಲ್ದು. ಹೊಲದಲ್ಲಿದ್ದ ಎರಡು ಅಡಿ ಎತ್ತರದ ಜೋಳದ ದಂಟನ್ನೇ ಕಿತ್ಕೊಂಡು ಹೋಗ್ತಿದ್ದೀವಿ. ಶನಿವಾರದಿಂದ ಜಾತ್ರೆ ಚಾಲು ಆಗುತ್ತೆ. ಸಂಕ್ರಮಣದ ಮುನ್ನ ದಿನ ಅಪಾರ ಜನರು ಖರೀದಿಗೆಂದೇ ಭೇಟಿ ಕೊಡ್ತ್ವಾರೆ.

ಒಮ್ಮೆ ಜಾತ್ರೆ ಬೀದಿಗೆ ಹೋದ್ರೇ, ಮತ್ತೆ ಊರಿಗೆ ಮರಳೋದು ಪೂರೈಸಿಕೊಂಡೇ. ಅದಕ್ಕಾಗಿ ಎತ್ತುಗಳಿಗೆ ನಿತ್ಯ ಬೇಕಿರುವ ಕಣಕಿ, ಹಿಂಡಿ, ನುಚ್ಚು, ತೊಗರಿ ಹೊಟ್ಟನ್ನು ಚೀಲಗಳಲ್ಲಿ ತುಂಬಿಕೊಂಡು, ನಮ್ಗೂ ಬುತ್ತಿ ಕಟ್ಕೊಂಡು ಜಾತ್ರೆಗೆ ಬಂದ್ವೀ’ ಎಂದು ವಿಜಯಪುರದ ಕಮಾನ್‌ಖಾನ್‌ ಬಜಾರ್‌ ಬಳಿಯ ರೈತ ಮುದ್ದಪ್ಪ ಉಪ್ಪರಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !