ದಲಿತ ಸಂಘಟನೆ ಅಧ್ಯಕ್ಷನ ಸಹಚರ ಸೆರೆ

7
ಮೀಟರ್‌ ಬಡ್ಡಿ ದಂಧೆ, ಎಂಜಿನಿಯರ್‌– ಗುತ್ತಿಗೆದಾರರ ಬ್ಲಾಕ್‌ಮೇಲ್ ಆರೋಪ

ದಲಿತ ಸಂಘಟನೆ ಅಧ್ಯಕ್ಷನ ಸಹಚರ ಸೆರೆ

Published:
Updated:
Deccan Herald

ಬೆಂಗಳೂರು: ಮೀಟರ್‌ ಬಡ್ಡಿ ದಂಧೆ ನಡೆಸುತ್ತಿದ್ದ ಆರೋಪದಡಿ ‘ದಲಿತ ಸಂರಕ್ಷ ಸಮಿತಿ’ ರಾಜ್ಯ ಘಟಕದ ಅಧ್ಯಕ್ಷ  ಲಯನ್‌ ಕೆ.ವಿ.ಬಾಲಕೃಷ್ಣನನ್ನು ಇತ್ತೀಚೆಗಷ್ಟೇ ಬಂಧಿಸಿದ್ದ ಸಿಸಿಬಿ ಪೊಲೀಸರು, ಆತನ ಸಹಚರ ದಾದಾಪೀರ್ ಹಲಗೇರಿ ಮಹಮ್ಮದ್ ಇಸಾಕ್ ಎಂಬಾತನನ್ನು ಶನಿವಾರ ಸೆರೆ ಹಿಡಿದಿದ್ದಾರೆ.

ಹುಬ್ಬಳ್ಳಿ ನಿವಾಸಿಯಾದ ದಾದಾಪೀರ್, ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಅರ್ಜಿ ಸಲ್ಲಿಸಿ ಸರ್ಕಾರಿ ಕಟ್ಟಡ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದ. ಅದೇ ಮಾಹಿತಿ ಬಳಸಿ ಬಾಲಕೃಷ್ಣ, ಎಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ಬ್ಲಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ. ದಾದಾಪೀರ್‌ಗೂ ಕಮಿಷನ್‌ ಕೊಡುತ್ತಿದ್ದ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

‘ಮನೆಯನ್ನೇ ಸಂಘದ ಕಚೇರಿಯನ್ನಾಗಿ ಮಾಡಿಕೊಂಡಿದ್ದ ಬಾಲಕೃಷ್ಣ, ಸ್ಥಳೀಯರಿಗೆ ಸಾಲ ಕೊಡುತ್ತಿದ್ದ. ಅವರೆಲ್ಲರಿಂದ ಮೀಟರ್‌ ಬಡ್ಡಿ ವಸೂಲಿ ಮಾಡುತ್ತಿದ್ದ. ಕೊಡದಿದ್ದರೇ ಹಲ್ಲೆ ಮಾಡುತ್ತಿದ್ದ. ಆ ಬಗ್ಗೆ ಹಲವರು ಹೇಳಿಕೆ ಕೊಟ್ಟಿದ್ದಾರೆ. ಬಿಡಿಎ ನಿವೇಶನ ಕೊಡಿಸುವುದಾಗಿ ರಾಜು ಎಂಬುವರಿಂದ 2014ರಲ್ಲಿ ₹5 ಲಕ್ಷ ಪಡೆದಿದ್ದ ಆರೋಪಿ, ನಿವೇಶನ ಕೊಡಿಸದೇ ಹಣವನ್ನೂ ವಾಪಸ್‌ ನೀಡದೇ ವಂಚಿಸಿದ್ದ. ಆ ಬಗ್ಗೆ ಮಹದೇವಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು’ ಎಂದರು.

ಪಿಸ್ತೂಲ್ ಜಪ್ತಿ: ‘ಬಾಲಕೃಷ್ಣನ ಇಂದಿರಾನಗರ ಬಳಿಯ ಎ.ನಾರಾಯಣಪುರದಲ್ಲಿರುವ ಮನೆ ಮೇಲೆ ಅ. 23ರಂದು ದಾಳಿ ಮಾಡಲಾಗಿತ್ತು. ಮನೆಯಲ್ಲಿ ಪತ್ತೆಯಾದ ಏರ್‌ ಗನ್‌ ಹಾಗೂ ಪಿಸ್ತೂಲ್, ಖಾಲಿ ಚೆಕ್‌ಗಳು, ಆಸ್ತಿ ದಾಖಲೆಗಳು ಹಾಗೂ ₹1.28 ಲಕ್ಷ ನಗದು ಜಪ್ತಿ ಮಾಡಲಾಯಿತು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಆರೋಪಿ ವಿರುದ್ಧ ಕೆಲವು ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರು ಹೇಳಿಕೆ ನೀಡಿದ್ದಾರೆ. ಕೆಲವು ಸರ್ಕಾರಿ ನೌಕರರು ಹಾಗೂ ಜನಪ್ರತಿನಿಧಿಗಳಿಗೂ ಆರೋಪಿ ಬ್ಲಾಕ್‌ಮೇಲ್‌ ಮಾಡಿದ್ದ ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ. ಆ ಬಗ್ಗೆ ಮಾಹಿತಿ ಪಡೆಯಬೇಕಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !