ಪಿಸ್ತೂಲ್ ಮಾರಾಟ ಜಾಲ ಸಿಸಿಬಿ ಬಲೆಗೆ

ಮಂಗಳವಾರ, ಏಪ್ರಿಲ್ 23, 2019
27 °C
ಅಂತರರಾಜ್ಯ ಗ್ಯಾಂಗ್‌ನ ಎಂಟು ಮಂದಿ ಬಂಧನ * ರೈಸ್ ಪುಲ್ಲಿಂಗ್, ನಿಧಿ ಹುಡುಕಾಟದ ಹೆಸರಿನಲ್ಲೂ ವಂಚನೆ

ಪಿಸ್ತೂಲ್ ಮಾರಾಟ ಜಾಲ ಸಿಸಿಬಿ ಬಲೆಗೆ

Published:
Updated:
Prajavani

ಬೆಂಗಳೂರು: ಮಹಾರಾಷ್ಟ್ರದಿಂದ ನಾಡ ಪಿಸ್ತೂಲ್‌ಗಳನ್ನು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಸಿಸಿಬಿ ಪೊಲೀಸರು, ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 2 ಪಿಸ್ತೂಲ್, 8 ಜೀವಂತ ಗುಂಡುಗಳು, ಏರ್‌ ಗನ್, ಕ್ಲೋರೋಫಾರ್ಮ್‌, ಕಾರು, ಎರಡು ರಾಯಲ್ ಎನ್‌ಫೀಲ್ಡ್ ಬೈಕ್ ಹಾಗೂ ₹55 ಸಾವಿರ ನಗದು ಜಪ್ತಿ ಮಾಡಿದ್ದಾರೆ.

‘ಜಾಲದ ಪ್ರಮುಖ ಆರೋಪಿಗಳಾದ ಮಹಾರಾಷ್ಟ್ರದ ಇಮ್ರಾನ್ ಖಾನ್ ಹಾಗೂ ಮೊಹಮ್ಮದ್ ಹಸನ್ ಅನ್ಸಾರಿ, ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ತೆಗೆದುಕೊಂಡು ಭಾನುವಾರ ನಗರಕ್ಕೆ ಬಂದಿದ್ದರು. ಆರ್‌.ಟಿ.ನಗರ ಠಾಣೆ ವ್ಯಾಪ್ತಿಯ ತರಳಬಾಳು ರಸ್ತೆಯಲ್ಲಿ ನಿಂತುಕೊಂಡು ಪಿಸ್ತೂಲ್ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್‌ ತಿಳಿಸಿದರು.

‘ಜಾಲದ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋಗಿ ದಾಳಿ ಮಾಡಿದ್ದ ಸಿಸಿಬಿ ರೌಡಿ ನಿಗ್ರಹ ದಳದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಅವರೇ ಉಳಿದೆಲ್ಲ ಆರೋಪಿಗಳ ಹೆಸರು ಬಾಯ್ಬಿಟ್ಟರು.  ಬಂಧಿತರಲ್ಲಿ ಇಬ್ಬರು ಮಹಾರಾಷ್ಟ್ರದವರು. ಉಳಿದವರು ಬೆಂಗಳೂರಿನವರು’ ಎಂದು ವಿವರಿಸಿದರು.

ಡಾನ್ಸ್‌ ಬಾರ್‌ನಲ್ಲಿ ಪರಿಚಯ: ‘ಪಿಸ್ತೂಲ್ ಮಾರಾಟವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದ ಮಹಾರಾಷ್ಟ್ರದ ಇಮ್ರಾನ್ ಖಾನ್ ಹಾಗೂ ಮೊಹಮ್ಮದ್ ಹಸನ್ ಅನ್ಸಾರಿ, ಕಳೆದ ವರ್ಷ ಬೆಂಗಳೂರಿಗೆ ಬಂದಿದ್ದರು. ಇಬ್ಬರೂ ಶೇಷಾದ್ರಿಪುರದ ಡಾನ್ಸ್‌ ಬಾರ್‌ಗೆ ಹೋಗಿದ್ದಾಗ ಆರೋಪಿ ಹೆಬ್ಬಾಳದ ಶಕೀಲ್ ಅಹಮ್ಮದ್‌ನ ಪರಿಚಯವಾಗಿತ್ತು’ ಎಂದು ಟಿ.ಸುನೀಲ್‌ಕುಮಾರ್ ಹೇಳಿದರು.

‘ನಾವು ಪಿಸ್ತೂಲ್ ಮಾರಾಟ ಮಾಡುತ್ತೇವೆ’ ಎಂದು ಇಮ್ರಾನ್ ಹಾಗೂ ಮೊಹಮ್ಮದ್ ಹೇಳಿದ್ದರು. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳದಲ್ಲಿ ಗಿರಾಕಿಗಳನ್ನು ಹುಡುಕಿಕೊಡುವುದಾಗಿ ಶಕೀಲ್ ಹೇಳಿದ್ದ. ನಂತರ, ಸ್ನೇಹಿತರೆಲ್ಲರನ್ನೂ ತಂಡದಲ್ಲಿ ಸೇರಿಸಿಕೊಂಡು ವ್ಯವಸ್ಥಿತವಾಗಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದರು. ಈ ಜಾಲ ಇದುವರೆಗೂ ಯಾರ‍್ಯಾರಿಗೆ ಪಿಸ್ತೂಲ್ ಮಾರಾಟ ಮಾಡಿದೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ’ ಎಂದು ತಿಳಿಸಿದರು.

ನಿಧಿ ಹುಡುಕಾಟದ ಹೆಸರಿನಲ್ಲೂ ವಂಚನೆ: ‘ಆರೋಪಿಗಳ ಬಳಿ ಕಟ್ಟರ್, ಕ್ಲೋರೋಫಾರ್ಮ್‌ ಸಿಕ್ಕಿವೆ. ಮನೆಗಳವು, ಸುಲಿಗೆ ಹಾಗೂ ಇತರೆ ಪ್ರಕರಣಗಳಲ್ಲೂ ಆರೋಪಿಗಳು ಭಾಗಿಯಾಗಿರುವ ಶಂಕೆ ಇದ್ದು, ಆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್ ತಿಳಿಸಿದರು.

‘ರೈಸ್‌ ಪುಲ್ಲಿಂಗ್, ನಿಧಿ ಹುಡುಕಾಟದ ಹೆಸರಿನಲ್ಲೂ ಆರೋಪಿಗಳು ಹಲವರನ್ನು ವಂಚಿಸಿರುವುದಾಗಿ ಗೊತ್ತಾಗಿದೆ. ಪಿಸ್ತೂಲ್ ಮಾರಾಟ ಸಂಬಂಧ ಆರ್‌.ಟಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳಿದಂತೆ ಆರೋಪಿಗಳ ವಿರುದ್ಧ ಬೇರೆ ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ’ ಎಂದು ಹೇಳಿದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !