ಹೆರಾಯಿನ್ ಮಾರುತ್ತಿದ್ದ ಯುವತಿ ಸೆರೆ

7

ಹೆರಾಯಿನ್ ಮಾರುತ್ತಿದ್ದ ಯುವತಿ ಸೆರೆ

Published:
Updated:
Deccan Herald

ಬೆಂಗಳೂರು: ಪ್ರಿಯಕರನಿಂದ ಮಾದಕ ವಸ್ತು ಹೆರಾಯಿನ್ ತರಿಸಿಕೊಂಡು ಯುವಕರಿಗೆ ಮಾರಾಟ ಮಾಡುತ್ತಿದ್ದ ಮಣಿಪುರದ ವಿಚಾಂಥೊನಿಲು ಅಬೋನ್ಮಿ (23) ಎಂಬ ಯುವತಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಅಬೋನ್ಮಿ, ಬಾಣಸವಾಡಿಯ ಸುಬ್ಬಯ್ಯನಪಾಳ್ಯದಲ್ಲಿ ನೆಲೆಸಿದ್ದಳು. ಮನೆ ಸಮೀಪದ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಆಕೆ, ನಗರದಲ್ಲಿ ನೆಲೆಸಿರುವ ಈಶಾನ್ಯ ರಾಜ್ಯದ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಗ್ರಾಂಗೆ ₹ 9 ಸಾವಿರದಂತೆ ಹೆರಾಯಿನ್ ಮಾರುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಈಕೆಗೆ ಸುಮಾರು 40 ಯುವಕರು ಕಾಯಂ ಗಿರಾಕಿಗಳಾಗಿದ್ದರು. ‘ಕಸ್ಟಮರ್ಸ್’ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಗ್ರೂಪ್ ಮಾಡಿದ್ದ ಅಬೋನ್ಮಿ, ಎಷ್ಟು ಪ್ರಮಾಣದ ಹೆರಾಯಿನ್ ಬೇಕು ಎಂಬ ಬಗ್ಗೆ ಅದರಲ್ಲೇ ಆರ್ಡರ್ ಪಡೆದುಕೊಳ್ಳುತ್ತಿದ್ದಳು.

‘ಯುವತಿ ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ಬಗ್ಗೆ ನಮ್ಮ ಭಾತ್ಮೀದಾರರಿಂದ ಮಾಹಿತಿ ಬಂತು. ಬುಧವಾರ ಸಂಜೆ ಆಕೆಯ ಮನೆ ಮೇಲೆ ದಾಳಿ ನಡೆಸಿದಾಗ, ₹ 2.80 ಲಕ್ಷ ಮೌಲ್ಯದ 35 ಗ್ರಾಂ ಹೆರಾಯಿನ್ ಹಾಗೂ ಅದನ್ನು ಮಾರಲು ಬಳಸುತ್ತಿದ್ದ 35 ಸಣ್ಣ ಪ್ಲಾಸ್ಟಿಕ್ ಡಬ್ಬಿಗಳು ಸಿಕ್ಕವು. ಜತೆಗೆ, ₹ 1 ಸಾವಿರ ನಗದು ಹಾಗೂ ಆಕೆಯ ಐಫೋನ್ ಸಹ ಜಪ್ತಿ ಮಾಡಿದೆವು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ಮಣಿಪುರದಲ್ಲಿ ನೆಲೆಸಿರುವ ಅಬೋನ್ಮಿಯ ಪ್ರಿಯಕರ, ತಿಂಗಳಿಗೆ ಒಮ್ಮೆ ನಗರಕ್ಕೆ ಬಂದು ಹೆರಾಯಿನ್ ಕೊಟ್ಟು ಹೋಗುತ್ತಿದ್ದ. ಆತನ ಪತ್ತೆ ಕಾರ್ಯದಲ್ಲಿ ತೊಡಗಿದ್ದೇವೆ. ಜತೆಗೆ, ಈಕೆಯಿಂದ ವ್ಯಸನಿಗಳಾಗಿರುವ ಯುವಕರನ್ನು ಕರೆಸಿ ಎಚ್ಚರಿಕೆ ನೀಡುತ್ತಿದ್ದೇವೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !