7
ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸೈಕಲ್ ರವಿ l ಆರೋಪಿ ವಿರುದ್ಧ 24 ಪ್ರಕರಣ ದಾಖಲು

ರೌಡಿ ಬೆನ್ನಟ್ಟಿ ಫೈರಿಂಗ್‌ ಮಾಡಿದ ಪೊಲೀಸರು

Published:
Updated:

ಬೆಂಗಳೂರು: ಆರು ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ರೌಡಿ ರವಿಕುಮಾರ್‌ ಅಲಿಯಾಸ್‌ ಸೈಕಲ್ ರವಿಯನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ್ದ ಸಿಸಿಬಿ ಪೊಲೀಸರು, ಆತನ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಘಟನೆಯಲ್ಲಿ ರವಿಯ ಹೊಟ್ಟೆ ಮತ್ತು ಬಲಗಾಲಿಗೆ ಗುಂಡುಗಳು ಹೊಕ್ಕಿದ್ದು, ರಾಜರಾಜೇಶ್ವರಿ ನಗರದ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ರೌಡಿಯ ದಾಳಿಯಿಂದ ಸಿಸಿಬಿ ಕಾನ್‌ಸ್ಟೆಬಲ್‌ ಸತೀಶ್ ಎಂಬುವರಿಗೂ ಗಾಯಗಳಾಗಿವೆ ಎಂದು ಸಿಸಿಬಿಯ ಹಿರಿಯ ಅಧಿಕಾರಿ ಹೇಳಿದರು.

ಆರೋಪಿಯ ವಿರುದ್ಧ ನಗರದ ಹಲವು ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಸುಲಿಗೆ ಸೇರಿದಂತೆ 24 ಪ್ರಕರಣಗಳು ದಾಖಲಾಗಿದ್ದವು. ಜಾಮೀನು ಮೇಲೆ ಹೊರಬಂದಿದ್ದ ಆತ, ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ. ಅಪರಾಧ ಕೃತ್ಯದಲ್ಲೂ ಭಾಗಿಯಾಗುತ್ತಿದ್ದ ಎಂದರು.

ಆತ, ಬುಧವಾರ ಮಧ್ಯಾಹ್ನ ನೈಸ್‌ ರಸ್ತೆಯಲ್ಲಿ ಕಾರಿನಲ್ಲಿ ಹೊರಟಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಬಂಧನಕ್ಕೆ ತೆರಳಿದ್ದ ಇನ್‌ಸ್ಪೆಕ್ಟರ್‌ಗಳಾದ ಆರ್.ಪ್ರಕಾಶ್ ಹಾಗೂ ಮಲ್ಲಿಕಾರ್ಜುನ್ ನೇತೃತ್ವದ ತಂಡ, ಆತನ ಕಾರನ್ನು ಅಡ್ಡಗಟ್ಟಿತ್ತು. ಪೊಲೀಸರನ್ನು ಕಂಡ ರೌಡಿ, ಅತಿ ವೇಗದಲ್ಲಿ ಕಾರು ಚಲಾಯಿಸಿಕೊಂಡು  ತಪ್ಪಿಸಿಕೊಳ್ಳಲು ಯತ್ನಿಸಿದ. ಆತನ ಕಾರನ್ನು ತಂಡವು ಬೆನ್ನಟ್ಟಿತ್ತು ಎಂದರು.

ರೌಡಿ ರವಿ, ಕಾರು ಚಲಾಯಿಸುತ್ತಲೇ ಪಿಸ್ತೂಲ್‌ನಿಂದ ಪೊಲೀಸರ ಜೀಪಿನತ್ತ ಗುಂಡು ಹಾರಿಸಿದ್ದ. ಅದೇ ವೇಳೆ ಕಾನ್‌ಸ್ಟೆಬಲ್ ಸತೀಶ್ ಗಾಯಗೊಂಡರು. ಆಗ ಆತ್ಮರಕ್ಷಣೆಗಾಗಿ ಮಲ್ಲಿಕಾರ್ಜುನ್ ಹಾಗೂ ಪ್ರಕಾಶ್, ಪಿಸ್ತೂಲ್‌ನಿಂದ ರೌಡಿ ಮೇಲೆ ಫೈರಿಂಗ್‌ ಮಾಡಿದರು. ತೀವ್ರ ಗಾಯಗೊಂಡು ರಕ್ತಸ್ರಾವದಿಂದ ಬಳಲುತ್ತಿದ್ದ ಆರೋಪಿ, ರಸ್ತೆ ಬದಿಯಲ್ಲೇ ಕಾರು ನಿಲ್ಲಿಸಿ ಕುಸಿದು ಬಿದ್ದ. ನಂತರ, ಪೊಲೀಸರೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರು ಎಂದು ಅಧಿಕಾರಿ ವಿವರಿಸಿದರು. 

ನಕಲಿ ದಾಖಲೆ ಸೃಷ್ಟಿಸಿ ಜಾಗ ಮಾರಾಟ: ಅಮೃತಹಳ್ಳಿ ನಿವಾಸಿಯಾಗಿದ್ದ ಸೈಕಲ್ ರವಿ, ಬನಶಂಕರಿ ಠಾಣೆಯ ರೌಡಿಶೀಟರ್. ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿ ಲಿಂಗನ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ರವಿ, ಆ ನಂತರ ಜಾಮೀನು ಮೇಲೆ ಹೊರಬಂದಿದ್ದ ಎಂದು ಹಿರಿಯ ಅಧಿಕಾರಿ ಹೇಳಿದರು. 

ರಾಜರಾಜೇಶ್ವರಿ ನಗರದಲ್ಲಿ ಪತ್ನಿ ಮತ್ತು ಮಕ್ಕಳ ಜತೆ ನೆಲೆಸಿದ್ದ ಆತ, ನಗರದಲ್ಲಿ ಖಾಲಿ ಇರುತ್ತಿದ್ದ ಜಾಗಗಳನ್ನು ಗುರುತಿಸುತ್ತಿದ್ದ. ಅಂಥ ಜಾಗಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಎಂದರು.

ಕೆಲತಿಂಗಳ ಹಿಂದೆ ಆರೋಪಿ, ತಮಿಳುನಾಡಿನ ಕೃಷ್ಣಗಿರಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ. ಆ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು, ದಾಳಿ ನಡೆಸಿದ್ದರು. ಅಲ್ಲಿಂದ ರವಿ ತಪ್ಪಿಸಿಕೊಂಡಿದ್ದ. ಅಂದಿನಿಂದಲೇ ಆತನ ಮೇಲೆ ಕಣ್ಣಿಡಲಾಗಿತ್ತು ಎಂದು ಹಿರಿಯ ಅಧಿಕಾರಿ ವಿವರಿಸಿದರು.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !