ಬುಧವಾರ, ನವೆಂಬರ್ 20, 2019
26 °C
ರೈಲ್ವೆ ನಿಲ್ದಾಣಗಳ ಬಳಿ ಅಪರಾಧ ಚಟುವಟಿಕೆಗೆ ಕಡಿವಾಣ * ತಂತ್ರಜ್ಞಾನದ ಮೊರೆ ಹೋದ ಆರ್‌ಪಿಎಫ್‌

ಸಿಸಿಟಿವಿ ಕ್ಯಾಮೆರಾಗಳಿಗೆ ಚಹರೆ ಪತ್ತೆ ತಂತ್ರಾಂಶ ಜೋಡಣೆ

Published:
Updated:

ಬೆಂಗಳೂರು: ರೈಲು ನಿಲ್ದಾಣಗಳ ಬಳಿ ಅಪರಾಧ ಚಟುವಟಿಕೆ ನಿಯಂತ್ರಿಸುವ ಸಲುವಾಗಿ ರೈಲ್ವೆ ಸುರಕ್ಷತಾ ಪಡೆ (ಆರ್‌ಪಿಎಫ್‌) ತಂತ್ರಜ್ಞಾನದ ಮೊರೆ ಹೋಗಿದೆ.

ರೈಲು ನಿಲ್ದಾಣಗಳ ಬಳಿ ವ್ಯಕ್ತಿಗಳ ಚಹರೆ ಗುರುತಿಸುವ ತಂತ್ರಾಂಶವನ್ನು ಜೋಡಿಸಿದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಿಕೆ, ನಿಲ್ದಾಣದ ಆಸುಪಾಸಿನ ಭೌಗೋಳಿಕ ಲಕ್ಷಣಗಳನ್ನು ಗುರುತಿಸುವ  ವ್ಯವಸ್ಥೆಯನ್ನು ಒಳಗೊಂಡ ಹೊಸ ಭದ್ರತಾ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲಿದೆ.

ನಗರಕ್ಕೆ ಬುಧವಾರ ಭೇಟಿ ನೀಡಿದ ಆರ್‌ಪಿಎಫ್‌ನ ಮಹಾ ನಿರ್ದೇಶಕ ಅರುಣ್‌ ಕುಮಾರ್‌, ದೇಶದ ಒಟ್ಟು 2020 ರೈಲು ನಿಲ್ದಾಣಗಳಲ್ಲಿ ಸುರಕ್ಷತಾ ಕ್ರಮಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯಕ್ರಮ ಪ್ರಕಟಿಸಿದರು. ಮೈಸೂರು ರೈಲು ನಿಲ್ದಾಣ, ಯಶವಂತಪುರ ರೈಲು ನಿಲ್ದಾಣ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ನಗರ ರೈಲು ನಿಲ್ದಾಣಗಳು ಇವುಗಳಲ್ಲಿ ಸೇರಿವೆ.

ನಗರದಲ್ಲಿ  ರೈಲು ಪ್ರಯಾಣಿಕರ ಸಂಖ್ಯೆ ಅತಿ ಹೆಚ್ಚು ಇರುವ ನಿಲ್ದಾಣಗಳಲ್ಲಿ ಚಹರೆ ಪತ್ತೆ ತಂತ್ರಾಂಶ ಜೋಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಿದೆ. ಸಿಬ್ಬಂದಿಯು ಉಡುಪಿನಲ್ಲಿ ಧರಿಸುವಂತಹ ಕ್ಯಾಮೆರಾಗಳನ್ನು (ಅವು ದೃಶ್ಯ ಮತ್ತು ಧ್ವನಿಗಳೆರಡನ್ನೂ ಚಿತ್ರೀಕರಿಸುತ್ತವೆ) ಹಾಗೂ ಡ್ರೋನ್‌ಗಳನ್ನು ಈ ವರ್ಷಾಂತ್ಯದೊಳಗೆ ಬಳಕೆಗೆ ತರಲಿದೆ.

‘ನಗರದ ರೈಲ್ವೆ ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಈಗಾಗಲೇ ಅಳವಡಿಸಲಾಗಿದೆ. ಅವುಗಳಿಗೆ ಚಹರೆ ಗುರುತಿಸುವ ತಂತ್ರಾಂಶವನ್ನು ಜೋಡಿಸಿರುವುದರಿಂದ ಅಪರಾಧಿಗಳ ಗುರುತು ಪತ್ತೆ ಸುಲಭವಾಗಲಿದೆ’ ಎಂದು ಅರುಣ್‌ ಕುಮಾರ್‌ ತಿಳಿಸಿದರು.

‘ಪ್ರಯಾಣಿಕರ ಸ್ವತ್ತುಗಳನ್ನು ಕದಿಯುವವರ ಪತ್ತೆಗೆ ನಮ್ಮ ಸಿಬ್ಬಂದಿ ನಗರ ರೈಲ್ವೆ ಪೊಲೀಸರ ಜತೆ ಸೇರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಐದು ತಿಂಗಳುಗಳಲ್ಲಿ ₹ 1 ಕೋಟಿ ಮೌಲ್ಯದಷ್ಟು ಕದ್ದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಆರ್‌ಪಿಎಫ್‌ನ ವಿಭಾಗೀಯ ಭದ್ರತಾ ಆಯುಕ್ತರಾದ (ಡಿಎಸ್‌ಸಿ) ದೇಬಶ್ಮಿತಾ ಸಿ. ಬ್ಯಾನರ್ಜಿ ತಿಳಿಸಿದರು.

‘ತಂತ್ರಜ್ಞಾನವನ್ನು ಹೆಚ್ಚು ಹೆಚ್ಚು ಬಳಸಿ ಗುಪ್ತಚರ ವ್ಯವಸ್ಥೆಯನ್ನು ಬಲಪಡಿಸಿದಷ್ಟೂ ಅಪರಾಧಿಗಳ ಪತ್ತೆ ಸುಲಭವಾಗಲಿದೆ’ ಎಂದರು. 

‘ಆರ್‌ಪಿಎಫ್‌ ಸಿಬ್ಬಂದಿ ಡ್ರೋನ್‌ಗಳನ್ನು ಬಳಸಿ ನಿಲ್ದಾಣದ ಆಸುಪಾಸಿನ ಪ್ರದೇಶಗಳ ಮೇಲೂ ನಿಗಾ ಇಡಲಿದ್ದಾರೆ. ಕಿಡಿಗೇಡಿಗಳು ರೈಲ್ವೆ ನಿಲ್ದಾಣವನ್ನು ಅಕ್ರಮವಾಗಿ ಪ್ರವೇಶಿಸುವ ಸ್ಥಳಗಳನ್ನು ಪತ್ತೆ ಹಚ್ಚಿ ಅವುಗಳನ್ನು ಮುಚ್ಚುವುದಕ್ಕೂ ಇದು ನೆರವಿಗೆ ಬರಲಿದೆ. ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುವವರ ಗುರುತು ಪತ್ತೆಗೆ ಬಯೊಮೆಟ್ರಿಕ್‌ ತಂತ್ರಜ್ಞಾನವನ್ನು ಬಳಸಲಿದ್ದೇವೆ. ಜನಜಂಗುಳಿಯ ಮೇಲೆ ಈ ರೀತಿ ನಿಗಾ ಇಡುವುದರಿಂದ ಅಪರಾಧಿ ಚಟುವಟಿಕೆಗಳಿಗೆ ಸಹಜವಾಗಿಯೇ ಕಡಿವಾಣ ಬೀಳಲಿದೆ’ ಎಂದರು.

‘4 ಸಾವಿರ ಮಹಿಳೆಯರೂ ಸೇರಿದಂತೆ ದೇಶದಾದ್ಯಂತ 12 ಸಾವಿರ ಸಬ್ಇನ್‌ಸ್ಪೆಕ್ಟರ್‌ಗಳನ್ನು  ನೇಮಿಸಿಕೊಳ್ಳಲು ಇಲಾಖೆ ಸಿದ್ಧತೆ ನಡೆಸಿದೆ’ ಎಂದು ಮಾಹಿತಿ ನೀಡಿದರು.

‘ಆಗಾಗ್ಗೆ ಅಣಕು ಕಾರ್ಯಾಚರಣೆಗಳನ್ನು ನಡೆಸುವ ಮೂಲಕ ವಿಪತ್ತುಗಳನ್ನು ಎದುರಿಸಲೂ ನಿಲ್ದಾಣಗಳು ಸನ್ನದ್ಧವಾಗಿರುವಂತೆ ನೋಡಿಕೊಳ್ಳಲಾಗುವುದು’ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)