‘ಪ್ರೀತಿಸುವ ಗುಣವಿದ್ದರೆಯಾವುದೂ ಭಾರವಲ್ಲ’

7

‘ಪ್ರೀತಿಸುವ ಗುಣವಿದ್ದರೆಯಾವುದೂ ಭಾರವಲ್ಲ’

Published:
Updated:
ಡಾ. ವಿಜಯಾ

ನಾವು ಪ್ರತಿದಿನದ ಪ್ರತಿಕ್ಷಣವೂ ಒಂದಲ್ಲ ಒಂದು ಒತ್ತಡದಲ್ಲಿಯೇ ಬದುಕುತ್ತಾ ಇರುತ್ತೇವೆ. ಅವನ್ನು ಒತ್ತಡ ಅಂದುಕೊಂಡರೆ ಒತ್ತಡ; ಬದಲಿಗೆ ಆ ಕೆಲಸವನ್ನು ಪ್ರೀತಿಸುತ್ತ ಹೋದರೆ ಆಗ ಅದು ಒತ್ತಡ ಅನಿಸುವುದಿಲ್ಲ. 

ಒತ್ತಡ ಅನ್ನುವುದಕ್ಕೆ ಬಹಳ ಅರ್ಥ ಇದೆ. ಭಾರ ಹಾಕುವುದು, ಕಾವು ಕೊಡುವುದು, ಅಮುಕಿಡುವುದು ಹೀಗೆ... ನಾನು ನಿರ್ವಹಿಸಿರುವ ವೃತ್ತಿಗಳಲ್ಲಿ ಪತ್ರಿಕೋದ್ಯಮ ಅತ್ಯಂತ ಒತ್ತಡದ ಕೆಲಸ. ಪತ್ರಿಕೋದ್ಯಮದಲ್ಲಿಯೂ ಸ್ತ್ರೀಯರು ಎದುರಿಸುವ ಒತ್ತಡ ಬೇರೆಯದೇ ರೀತಿಯವು. ಯಾರು, ಎಲ್ಲಿ, ಯಾವ ವಿಷಯಕ್ಕೆ ರಾಜಿ ಆಗುತ್ತಾರೆ ಎನ್ನುವುದರಲ್ಲಿಯೇ ಈ ವ್ಯತ್ಯಾಸದ ಮೂಲ ಇದೆ. ಅದು ಒಂದು ನೆಲೆಯಾದರೆ ಕೌಟುಂಬಿಕವಾಗಿ, ಸಾಮಾಜಿಕವಾಗಿ ಅವಳು ಅನುಭವಿಸುವ ಒತ್ತಡಗಳು ‍ಮತ್ತೊಂದು ಬಗೆಯವು. 

ಈ ಒತ್ತಡಗಳನ್ನು ನಿರ್ವಹಿಸುವುದು ಹೇಗೆ? ನನ್ನ ಅನುಭವದಲ್ಲಿ ಹೇಳುವುದಾದರೆ, ನಾನು ಪ್ರತಿಯೊಂದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ. ‘ನನ್ನ ಮೇಲೆ ಒತ್ತಡ ಹಾಕಿದ್ದಾರೆ, ಯಾರೋ ಏನೋ ಮಾಡಿದ್ದಾರೆ’ ಎಂದೆಲ್ಲ ಯಾರ ಮೇಲೂ ಆಪಾದನೆಯನ್ನು ಮಾಡುವುದಿಲ್ಲ. ಒಂದು ವಿಷಯ ನನಗೆ ಹೊರೆ ಅನಿಸಿದರೆ ಅದು ನಾನು ಮಾಡಿರುವ ತಪ್ಪಿನಿಂದಲೇ ಸೃಷ್ಟಿಯಾದದ್ದೇ ಹೊರತು ಬೇರೆ ಯಾರೋ ನನ್ನ ಮೇಲೆ ಹೇರಿದ್ದಾರೆ ಎಂದು ನಾನೆಂದೂ ಅಂದುಕೊಳ್ಳುವುದಿಲ್ಲ. 

ಹಾಗೆಯೇ ಅಂಥ ಒತ್ತಡಗಳನ್ನು ನಿವಾರಿಸಿಕೊಳ್ಳುವುದಕ್ಕೆ ನಾನು ಹುಡುಕಿಕೊಳ್ಳುವ ದಾರಿ ಯಾವುದೆಂದರೆ ನಾಳೆಗಳತ್ತ ದೃಷ್ಟಿ ನೆಡುವುದು. ಇದಕ್ಕಿಂತ ದೊಡ್ಡದಾದ ಇನ್ನೊಂದು ಕೆಲಸವನ್ನು ಮಾಡುವುದಿದೆ. ಈ ಕೆಲಸವನ್ನು ಬೇಗ ಮುಗಿಸಿ ಅದರಲ್ಲಿ ತೊಡಗಿಕೊಳ್ಳಬೇಕು ಎಂದುಕೊಂಡು ಈಗಿರುವ ಒತ್ತಡವನ್ನು ದಾಟಿಕೊಂಡು ಬಿಡುತ್ತೇನೆ. ಇರುವ ಒತ್ತಡವನ್ನೇ ಅನುಭವಿಸುತ್ತ, ಸಂಕಟಪಡುತ್ತ ಕೂತುಕೊಳ್ಳುವುದಿಲ್ಲ. ಹಾಗೆ ಒತ್ತಡಗಳಲ್ಲಿಯೇ ಮುಳುಗಿಹೋಗಿದ್ದರೆ ನನಗೆ ಇಷ್ಟು ದೊಡ್ಡ ಬದುಕನ್ನು ಬದುಕಲು ಸಾಧ್ಯವೇ ಆಗುತ್ತಿರಲಿಲ್ಲ.

ಜೀವನದಲ್ಲಿ ವೈಯಕ್ತಿಕವಾಗಿ, ಸಾಂಸ್ಕೃತಿಕವಾಗಿ, ವೃತ್ತಿಸಂಬಂಧವಾಗಿ ನಾನು ಕಂಡ ಏರಿಳಿತ, ನಾನು ಕಂಡ ಜನರು, ಸಂಕಷ್ಟದ ಸನ್ನಿವೇಶಗಳನ್ನು ದಾಟಿಕೊಂಡು ಹೋಗಲು ಸಾಧ್ಯವಾಗಿದ್ದು ಹೀಗೆ – ಒಂದು ಕಡೆಯಿಂದ ಇನ್ನೊಂದು ಕಡೆಗೆ ದಾಟಿಕೊಳ್ಳುವುದರ ಮೂಲಕವೇ. ನಾನು  ಮುಂದೆ ಮಾಡಬೇಕಾಗಿರುವ ದೊಡ್ಡ ಕೆಲಸ, ಅದರಲ್ಲಿ ಬರಬಹುದಾದ ಅಡೆತಡೆಗಳು, ಸುಖ, ಸಂತೋಷ ಎಲ್ಲವನ್ನೂ ಮೊದಲೇ ಮನಸ್ಸಿನಲ್ಲಿ ಚಿತ್ರಿಸಿಕೊಂಡು ಆ ಕೆಲಸಕ್ಕೆ ಪ್ರವೇಶಿಸುವುದಕ್ಕೂ ಮೊದಲೇ ಅವೆಲ್ಲವನ್ನೂ ಅನುಭವಿಸುವುದಕ್ಕೆ ಶುರುಮಾಡಿಬಿಡುತ್ತೇನೆ. ಹಾಗಾಗಿ ಈಗ ಈ ಕ್ಷಣ ನನ್ನ ಮೇಲೆ ಇರುವುದು ಒತ್ತಡ ಅನಿಸುವುದೇ ಇಲ್ಲ. ಒಂದು ಕೆಲಸದಿಂದ ಆಗಿರುವ ಒತ್ತಡದಿಂದ ತಪ್ಪಿಸಿಕೊಳ್ಳುವ ದಾರಿ ಇನ್ನೂ ದೊಡ್ಡ ಕೆಲಸದಲ್ಲಿ ತೊಡಗಿಕೊಳ್ಳುವುದು. ಇದು ನಾನು ನನ್ನ ಬದುಕಿನಲ್ಲಿ ರೂಢಿಸಿಕೊಂಡಿರುವ ಕ್ರಮ. 

ಆರಂಭದಲ್ಲಿ ನಾನು ಒತ್ತಡ ಎನ್ನುವುದಕ್ಕೆ ಕಾವು ಕೊಡುವುದು ಎಂಬ ಅರ್ಥವೂ ಇದೆ ಎಂದು ಹೇಳಿದೆ. ನಾನು ನನ್ನ ಮಗುವಿಗೆ ಇಷ್ಟವಿಲ್ಲದಿದ್ದರೂ ಅದಕ್ಕೆ ಊಟ ಮಾಡಿಸಬೇಕು. ಅದರ ಆರೋಗ್ಯದ ದೃಷ್ಟಿಯಿಂದ, ಬೆಳವಣಿಗೆಯ ದೃಷ್ಟಿಯಿಂದ ಊಟ ಮಾಡಿಸಲೇಬೇಕು. ಅಮ್ಮನ ಒತ್ತಾಯ ಮಗುವಿಗೆ ಒತ್ತಡ ಅನಿಸಬಹುದು. ಆದರೆ ಅದು ಬೇಕಾದ ಒತ್ತಡ. ನನ್ನ ಮಗ ‘ತುಂಬಾ ಓಡಾಡಬೇಡ. ಶ್ರಮ ಮಾಡಿಕೊಳ್ಳಬೇಡ’ ಎಂದು ಹಾಕುವ ಒತ್ತಾಯ ನನಗೆ ಅವಶ್ಯಕ ಎನ್ನಿಸುವ ಒತ್ತಡ. ಹೀಗೆ ನಮ್ಮ ಹಿತದೃಷ್ಟಿಯಿಂದ ಕೊಡುವ ಒತ್ತಡವನ್ನೇ ನಾನು ಕಾವು ಕೊಡುವ ಒತ್ತಡ ಎಂದಿದ್ದು. ಅದು ಸುಖ ಕೊಡುವ ಒತ್ತಡವೂ ಹೌದು. 

ಒತ್ತಡಗಳನ್ನು ಕಾವು ಕೊಡುವ ಪ್ರಕ್ರಿಯೆಯಾಗಿ ಪರಿವರ್ತಿಸಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇರುತ್ತದೆ. ಅದರ ಬದಲು ಕೊರಗುವುದು, ಮರುಗುವುದು, ಯಾರನ್ನೋ ದೂಷಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಎಲ್ಲವನ್ನೂ ಸಕಾರಾತ್ಮಕವಾಗಿ ತೆಗೆದುಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು. 

ನನ್ನ ಬಹಳ ಪ್ರಧಾನವಾದ ಗುಣ ಪ್ರೀತಿಸುವುದು. ಬದುಕಿನಲ್ಲಿ ಎದುರಾಗುವ ಪ್ರತಿಯೊಂದನ್ನೂ ನಾನು ತುಂಬ ಪ್ರೀತಿಯಿಂದ ಸ್ವಾಗತಿಸುತ್ತೇನೆ. ಒತ್ತಡವನ್ನೂ ಎಂಜಾಯ್ ಮಾಡುವುದು ನನಗೆ ಗೊತ್ತು. ಹಾಗಾಗಿ ಯಾವತ್ತೂ ನನಗೆ ಬದುಕು ಭಾರ ಆಗಿಲ್ಲ. ಪುಸ್ತಕದಲ್ಲಿ ಒಂದಿಷ್ಟು ಕಷ್ಟಗಳನ್ನು ಹೇಳಿಕೊಂಡಿದ್ದೇನೆ. ಆದರೆ ಅವ್ಯಾವವೂ ಆ ಕ್ಷಣದಲ್ಲಿ ನನಗೆ ಕಷ್ಟ ಅನಿಸಿರಲಿಲ್ಲ. ಇಂದು ನೆನೆಸಿಕೊಂಡಾಗ ಕಷ್ಟ ಅನಿಸುತ್ತದೆ.
ಓದಿದವರೂ ‘ಅಮ್ಮಾ ಎಂಥ ಬದುಕನ್ನು ಕಳೆದಿದ್ದೀರಿ’ ಎನ್ನುತ್ತಾರೆ. ಹೇಗೆ ಕಳೆದೆ ಗೊತ್ತಿಲ್ಲ. ರಾತ್ರಿಯಾಯ್ತು, ಬೆಳಗಾಯ್ತು, ರಾತ್ರಿಯಾಯ್ತು, ಬೆಳಗಾಯ್ತು... ಮಧ್ಯದಲ್ಲಿ ಏನೇನೋ ನಡೆದು ಹೋಗುತ್ತದೆ. ಆ ದಿನಗಳೂ ಕಳೆದುಹೋಯ್ತಲ್ಲಾ... ಒಂದು ನನಗೆ ಒತ್ತಡ ಅನಿಸುತ್ತಿದೆಯಾ, ಭಾರ ಅನಿಸುತ್ತಿದೆಯಾ? ಇನ್ನೊಂದು ಸುಖಕೊಡುವ ಕೆಲಸದ ಕಡೆಗೆ ಹೊರಳಿಕೊಳ್ಳುವುದಷ್ಟೆ.

ಪ್ರೀತಿಸುವ ಗುಣವೇ ಒಂದು ಅಸ್ತ್ರ. ಅದೊಂದಿದ್ದರೆ ಯಾವುದೂ ಭಾರ ಆಗುವುದಿಲ್ಲ.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !