ಸುಟ್ಟು ಹೋದ ಕೇಕ್‌ನ ನೆನಪು...

7

ಸುಟ್ಟು ಹೋದ ಕೇಕ್‌ನ ನೆನಪು...

Published:
Updated:
Deccan Herald

ಚಿಕ್ಕಂದಿನಿಂದಲೂ ನನಗೆ ಅಡುಗೆ ಮಾಡುವುದೆಂದರೆ ಬಲು ಇಷ್ಟ. ನನ್ನಮ್ಮ ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಾರೆ. ಅವರ ಜತೆ ಅಡುಗೆ ಮನೆ ಸೇರಿ ಸಹಾಯ ಮಾಡುತ್ತಲೇ ನಾನೂ ಹಲ ಬಗೆಯ ಅಡುಗೆ ಮಾಡುವುದನ್ನು ಕಲಿತೆ.

ನಾನು ಮಂಗಳೂರಿನವಳು. ಹಾಗಾಗಿ, ಆ ಭಾಗದ ಅಡುಗೆಗಳು ನನಗೆ ಬರುತ್ತವೆ. ಉಪ್ಪುಕರಿ, ದಾಲ್, ಪಲ್ಯಗಳು, ಅನ್ನ, ಸೊಪ್ಪಿನ ಸಾರು ಇವು ನಾನು ಮೊದಲ ಬಾರಿಗೆ ಕಲಿತ ಅಡುಗೆಗಳು. ಇದರ ಜತೆಗೆ ಸಮೋಸಾ ಮತ್ತು ಕೇಕ್ ಮಾಡುವುದನ್ನೂ ಕಲಿತೆ. ಮೊದಲ ಸಲ ಸ್ಟೀಮ್ ಕೇಕ್ ಮಾಡಿದಾಗ ಅದರ ತಳ ಸುಟ್ಟು ಹೋಗಿತ್ತು.

ಸ್ಟೀಮ್ ಕೇಕ್ ಮಾಡುವಾಗ ವೆನಿಲಾ ಪುಡಿಯನ್ನು ತುಸು ಬಿಸಿ ಮಾಡಿ ಹಾಕಬೇಕಿತ್ತು. ಆದರೆ, ನಾನು ಹಾಗೆಯೇ ಹಾಕಿಬಿಟ್ಟಿದ್ದೆ. ಜತೆಗೆ ಮೊಟ್ಟೆ
ಯನ್ನೂ ಹಾಕಿರಲಿಲ್ಲ. ಹಬೆಯಲ್ಲಿ ಬೇಯಿಸಿ ಸುಮಾರು ಒಂದು ತಾಸು ಕಾದೆ. ಆಮೇಲೆ ಮುಚ್ಚಳ ತೆರೆದು ನೋಡಿದರೆ, ಕೇಕ್ ಮೇಲ್ಭಾಗವೆನೋ ಚೆನ್ನಾಗಿತ್ತು. ಅದರ ತಳ ಮಾತ್ರ ಪೂರ್ತಿ ಸುಟ್ಟು ಹೋಗಿತ್ತು. ನಾನು ಬೇಸರವಾಗಬಾರದು ಅಂತ ಅಮ್ಮ ಮತ್ತು ತಂಗಿ ಚೆನ್ನಾಗಿದೆ ಅಂತ ಹೇಳಿ ನನ್ನನ್ನು ಸಮಾಧಾನ ಮಾಡಿದ್ದರು. ಅದನ್ನೆಲ್ಲಾ ಈಗ ನೆನಪಿಸಿಕೊಂಡರೆ ತುಂಬಾ ನಗು ಬರುತ್ತೆ.

ಉಳಿದಂತೆ ನನಗೆ ಚಿಕನ್ ಫ್ರೈ, ಫಿಶ್ ಫ್ರೈ, ಫಿಶ್ ಕರಿ, ಏಡಿ ಕರಿ ಮತ್ತು ಫ್ರೈ ಮಾಡಲು ಬರುತ್ತೆ. ಸಮುದ್ರ ಆಹಾರ (ಸೀಫುಡ್) ಅಂದರೆ ನನಗಿಷ್ಟ. ನಮ್ಮನೆಯಲ್ಲಿ ಅಪ್ಪ–ಅಮ್ಮ, ತಂಗಿ ಮಾತ್ರ ಇರೋದು. ಅವರಿಗೆ ನಾನು ಮಾಡುವ ಚಪಾತಿ, ರೋಟಿ–ದಾಲ್ ತಡ್ಕ ಮತ್ತು ಬಿರಿಯಾನಿ ಅಂದರೆ ಇಷ್ಟ.

ದಾಲ್ ತಡ್ಕ

ಸಾಮಗ್ರಿಗಳು: 1 ಕಪ್ ತೊಗರಿಬೇಳೆ, 2 ಒಣ ಮೆಣಸಿನಕಾಯಿ, ಸ್ವಲ್ಪ ಹಸಿಶುಂಠಿ ಮತ್ತು 1 ಹಸಿ ಮೆಣಸಿನಕಾಯಿ, ನಾಲ್ಕೈದು ಎಸಳು ಬೆಳ್ಳುಳ್ಳಿ, ಅರಿಶಿಣ ಪುಡಿ, 1 ಈರುಳ್ಳಿ, 1 ಟೊಮೆಟೊ, ಒಗ್ಗರಣೆಗೆ ಎಣ್ಣೆ ಅಥವಾ ತುಪ್ಪ, ಜೀರಿಗೆ ಸಾಸಿವೆ, ಕರಿಬೇವು.

ಮಾಡುವ ವಿಧಾನ: ತೊಗರಿಬೇಳೆಯನ್ನು 20ನಿಮಿಷ ತಣ್ಣೀರಿನಲ್ಲಿ ನೆನಸಿಡಿ. ನಂತರ ಇದನ್ನು ಕುಕ್ಕರ್‌ನಲ್ಲಿ ಹಾಕಿ, ಸ್ವಲ್ಪ ಅರಿಶಿಣ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಐದಾರು ವಿಷನ್ ಹಾಕಿಸಿ. ಬಾಣಲೆಯಲ್ಲಿ ತುಸು ತುಪ್ಪ ಹಾಕಿ  ಕಾಯಿಸಿ, ನಂತರ ಅದಕ್ಕೆ ಸಾಸಿವೆ ಮತ್ತು ಜೀರಿಗೆ ಹಾಗೂ ಕರಿಬೇವು ಹಾಕಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ತಿರುವಿ. ಇದಕ್ಕೆ ಹಸಿಶುಂಠಿ ಮತ್ತು ಹಸಿಮೆಣಸಿನ ಕಾಯಿಯ ಪೇಸ್ಟ್ ಹಾಕಿ ಚೆನ್ನಾಗಿ ತಿರುವಿ. ಈರುಳ್ಳಿ ಬೇಯುತ್ತಿರುವಾಗಲೇ ತುಸು ಅರಿಶಿಣ ಪುಡಿ ಮತ್ತು ಸಣ್ಣಗೆ ಹೆಚ್ಚಿದ ಟೊಮೊಟೊ ಹಾಕಿ. ನಂತರ ಒಣ ಮೆಣಸಿಕಾಯಿ ಹಾಕಿ. ಈ ಮಿಶ್ರಣಕ್ಕೆ ಬೆಂದ ತೊಗರಿಬೇಳೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ದಾಲ್ ತಡ್ಕಕ್ಕೆ ತೆಳ್ಳಗೆ ಬೇಕೆಂದರೆ ನೀರು ಹಾಕಿಕೊಳ್ಳಬಹುದು. ದಾಲ್ ತಡ್ಕಕ್ಕೆ ಅಂತಿಮವಾಗಿ ತುಪ್ಪದ ಒಗ್ಗರಣೆ ಹಾಕಿ. ಒಗ್ಗರಣೆಗೆ ಜೀರಿಗೆ, ಒಣಮೆಣಸಿನಕಾಯಿ, ಕರಿಬೇವು ಹಾಕಿ. ಬೇಕೆಂದರೆ ತುಸು ಕಾರದ ಪುಡಿಯನ್ನೂ ಹಾಕಬಹುದು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !