ಹೊಸ ಯುಗದ ಸೆಲೆಬ್ರಿಟಿ ಕೆಲವು ಕಥೆಗಳ ಪಾಠ

ಬುಧವಾರ, ಜೂನ್ 26, 2019
25 °C

ಹೊಸ ಯುಗದ ಸೆಲೆಬ್ರಿಟಿ ಕೆಲವು ಕಥೆಗಳ ಪಾಠ

Published:
Updated:
Prajavani

‘ಕೈಯಲ್ಲೊಂದು ಮೊಬೈಲು ಇದ್ದರೆ ಯುವಕರಿಗೆ ಯಾವುದೂ ಬೇಡ. ಮೊಬೈಲಿನಲ್ಲಿ ಅದೇನು ನೊಡ್ತಾರೋ, ಅದೇನು ಮಾಡ್ತಾರೋ’ ಎಂದು ಇಂದಿನ ಕಾಲದ ಹುಡುಗರನ್ನು ಹಿರಿಯರು ದೂರುವುದುಂಟು. ಆದರೆ, ಕೈಯಲ್ಲಿ ಹಿಡಿಯುವ ಮೊಬೈಲ್‌ ಅಥವಾ ಕಾಲ ಮೇಲೆ ಇಟ್ಟಕೊಳ್ಳುವ ಲ್ಯಾಪ್‌ಟಾಪ್‌ ಮೂಲಕವೇ ಸಮಾಜದಲ್ಲಿ ಅಸ್ಮಿತೆ ಸಂಪಾದಿಸಿದ ಯುವಕರ ಕಥೆ ಪ್ರೇರಣಾದಾಯಿ ಆಗಲಾರದೇ?!

***

ಮರೆಯಲಾಗದ ಜಾವಾ ಬೈಕನ್ನೂ, ಮರೆಯಬಾರದ ಬೆಲ್‌ ಬಾಟಂ ಶೈಲಿಯ ಪ್ಯಾಂಟುಗಳನ್ನೂ, ಸಿಹಿ ತಿನಿಸುಗಳನ್ನು ರಸಿಕರ ನಾಲಗೆಯ ಮೇಲೆ ಇಡುವ ಮಾದರಿಯಲ್ಲಿ ಉಣಬಡಿಸುವ ‘ಬೆಲ್‌ ಬಾಟಂ’ ಸಿನಿಮಾ ವೀಕ್ಷಿಸಿ ಹೊರಬಂದ ಯುವಕರ ಗುಂಪೊಂದು ಚಹಾ ಅಂಗಡಿಯ ಮುಂದೆ ನಿಂತು ತಮ್ಮ ಭವಿಷ್ಯದ ಬಗ್ಗೆ ಆಲೋಚಿಸುತ್ತಿತ್ತು. ಯುವಕರು ತಮ್ಮ ಭವಿಷ್ಯದ ಬಗ್ಗೆ ಆಲೋಚನೆ ಮಾಡುವುದಕ್ಕೆ ಪ್ರಚೋದಿಸುವ ಅಂಶ ಈ ರಂಜನೀಯ ಸಿನಿಮಾದಲ್ಲಿ ಏನೂ ಇಲ್ಲದಿದ್ದರೂ, ಅವರು ‘ನಾವು ಆ ರಿಷಬ್‌ನಂತೆ (ನಟ, ನಿರ್ದೇಶಕ ರಿಷಬ್ ಶೆಟ್ಟಿ) ಸೆಲೆಬ್ರಿಟಿ ಆಗುವುದು ಯಾವಾಗ ಗುರೂ’ ಎಂದು ಪರಸ್ಪರ ಕೇಳಿಕೊಳ್ಳುತ್ತಿದ್ದರು.

‘ಸೆಲೆಬ್ರಿಟಿ’ ಎನ್ನುವ ಪದ ಕೇಳಿದ ತಕ್ಷಣ ಕಿವಿ ನಿಮಿರುವುದು ಸಹಜ. ಸೆಲೆಬ್ರಿಟಿ ಆಗಬೇಕು ಎಂದು ಬಯಸುವುದು ಮನುಷ್ಯನ ತೀರಾ ಸಹಜ ಆಸೆಗಳಲ್ಲಿ ಒಂದಾಗಿರಬಹುದು. ತನ್ನ ಅಸ್ಮಿತೆಯನ್ನು ಗಟ್ಟಿ ಮಾಡಿಕೊಳ್ಳುವ ಪ್ರಯತ್ನದ ಒಂದು ಭಾಗ ‘ಸೆಲೆಬ್ರಿಟಿ’ ಆಗುವುದಾಗಿರಬಹುದು! ಎಲ್ಲರೂ ತನ್ನತ್ತ ತಿರುಗಿ ನೋಡಲಿ, ತಾನೆಂದರೆ ಯಾರು ಎಂಬುದು ಎಲ್ಲರಿಗೂ ಗೊತ್ತಾಗಲಿ ಎಂಬ ಆಸೆ ಹೊರಗಿನಿಂದ ಬರುವುದಲ್ಲ; ಅದು ಮನುಷ್ಯನೊಳಗೇ ಇರುವಂಥದ್ದು. ಮಗು ಕೂಡ ತನ್ನ ಆಟ ಕಂಡು ಸುತ್ತಲಿನವರು ನಕ್ಕಾಗ, ಅದೇ ಆಟ ಇನ್ನಷ್ಟು ಮಾಡುತ್ತದೆಯಲ್ಲ?!

ಅದಿರಲಿ, ‘ಸೆಲೆಬ್ರಿಟಿ’ಯಾಗುವ ಸಾಧ್ಯತೆಗಳನ್ನು ಸಾಮಾಜಿಕ ಜಾಲತಾಣಗಳು, ನವ ಮಾಧ್ಯಮಗಳು ಜನಸಾಮಾನ್ಯರ ಮುಂದೆ ತೆರೆದಿಟ್ಟ ಬಗೆಯನ್ನು ಗಮನಿಸಿದ್ದೀರಾ? ‘ಚಕ್ರ’ದ ನಂತರದ ಅತ್ಯಂತ ಮಹತ್ವದ ಆವಿಷ್ಕಾರವಾದ ‘ಇಂಟರ್ನೆಟ್‌’, ಮನುಕುಲ ಸಂಗ್ರಹಿಸಿದ ಅಷ್ಟೂ ಮಾಹಿತಿ ಎಲ್ಲರಿಗೂ ಸಮಾನವಾಗಿ ಸಿಗುವಂತೆ ಮಾಡುವ ಸಾಧನವಾಗಿ ಮೊದಲು ಕಂಡಿತು. ನಂತರದ ಕಾಲಘಟ್ಟದಲ್ಲಿ, ಸಂವಾದ–ಚರ್ಚೆಗಳನ್ನು ಅತ್ಯಂತ ಪ್ರಜಾಸತ್ತಾತ್ಮಕಗೊಳಿಸುವ ಸಲಕರಣೆಯಾಗಿ ಕಂಡಿತು. ಈಗ, ಅದು ‘ಸೆಲೆಬ್ರಿಟಿ’ಯಾಗಲು ಹತ್ತೆಂಟು ಅವಕಾಶಗಳನ್ನು ತೆರೆದಿಡುವ ವೇದಿಕೆಯಾಗಿಯೂ ಬದಲಾಗಿದೆ.

ಸಿನಿಮಾ ಅಲ್ಲ ವೆಬ್‌ ಸರಣಿ!

ನಟ ವಿನಾಯಕ್ ಜೋಶಿ ಅವರು ಕನ್ನಡದ ಸಿನಿಮಾ ವೀಕ್ಷಕರಿಗೆ 1996ರಲ್ಲಿ ‘ನಮ್ಮೂರ ಮಂದಾರ ಹೂವೇ’ ಚಿತ್ರ ತೆರೆಗೆ ಬಂದಾಗಿನಿಂದಲೂ ಪರಿಚಿತ. ಅದರಲ್ಲಿ ಬಾಲನಟನಾಗಿ ಅಭಿನಯಿಸಿದ್ದ ವಿನಾಯಕ್, ನಂತರ ಹತ್ತು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಅವರ ಜೊತೆ ಕುಳಿತರೆ ಕೇಳುವ ಮಾತು, ‘ನಾನು ಈಗ ಇಂಟರ್ನೆಟ್‌ ಸ್ಟಾರ್‌ ಆಗುತ್ತಿದ್ದೇನೆ. ಸಿನಿಮಾವೊಂದನ್ನೇ ನಂಬಿಕೊಂಡು ಕುಳಿತಿದ್ದರೆ ಇದೆಲ್ಲ ಸಾಧ್ಯವಾಗುತ್ತಿರಲಿಲ್ಲ. ಇಂಟರ್ನೆಟ್‌ನಿಂದಾಗಿ ಇದನ್ನು ಸಾಧ್ಯವಾಗಿಸಿಕೊಂಡೆ, ನೆಲೆ ಕಂಡುಕೊಂಡ ತೃಪ್ತಿ ನನ್ನಲ್ಲಿ ಇದೆ’ ಎಂಬುದು.

ಅವರಿಗೆ ತೃಪ್ತಿ ತಂದುಕೊಟ್ಟಿದ್ದು, ಅವರೇ ನಿರ್ದೇಶಿಸಿ, ನಿರ್ಮಾಣ ಮಾಡಿರುವ ‘ಜೋಶೀಲೆ’ ಎನ್ನುವ ಕನ್ನಡ ವೆಬ್‌ ಸರಣಿ. ಇದು ಯೂಟ್ಯೂಬ್‌ನಲ್ಲಿ ಉಚಿತ ವೀಕ್ಷಣೆಗೆ ಲಭ್ಯವಿದ್ದು, ಇದನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ವಿನಾಯಕ್ ಅವರು ಯಶಸ್ಸನ್ನು, ಖುಷಿಯನ್ನು ಮತ್ತು ಅಸ್ಮಿತೆಯನ್ನು ಈಗ ವೆಬ್‌ ಮಾಧ್ಯಮದ ಮೂಲಕ ಕಂಡುಕೊಂಡಿದ್ದಾರೆ. ಅವರಿಗೆ ಸಿನಿಮಾದಲ್ಲಿ ಸಾಧಿಸುವುದಕ್ಕಿಂತ ಹೆಚ್ಚಿನದ್ದನ್ನು ವೆಬ್‌ ಮೂಲಕ ಸಾಧಿಸಿದ ಖುಷಿ ಸಿಕ್ಕಿದ್ದಕ್ಕೆ ಕಾರಣಗಳಿವೆ.

ಅದನ್ನು ಅವರದೇ ಮಾತಿನಲ್ಲಿ ಹೇಳುವುದಾದರೆ: ‘ಸಿನಿಮಾ ಮಂದಿರಗಳ ಮೂಲಕ ಆಗುವ ಹಣ ಸಂಗ್ರಹ ಆಧರಿಸಿ ಸಿನಿಮಾ ಯಶಸ್ಸು ತೀರ್ಮಾನಿಸುವ ಸ್ಥಿತಿ ಇಂದು ಇದೆ. ಜೋಶೀಲೆಯಲ್ಲಿ ಇರುವಂತಹ ಹೂರಣವನ್ನು ಸಿನಿಮಾ ಮೂಲಕ ಕೊಡಲು ಸಾಧ್ಯವಿರಲಿಲ್ಲ. ಒಳ್ಳೆಯ ಕಂಟೆಂಟ್‌ ಮೂಲಕ ಜನರನ್ನು ತಲುಪಬೇಕು ಎಂಬ ಉದ್ದೇಶ ವೆಬ್‌ನ ಕಾರಣವಾಗಿ ಈಡೇರಿದೆ. ಹಾಗಾಗಿಯೇ ಹೆಚ್ಚು ತೃಪ್ತಿ ಸಿಕ್ಕಿದೆ. ಈಗಿರುವ ವೆಬ್‌ ಕಂಟೆಂಟ್‌ಗೆ ಸಾವಿಲ್ಲ. ಇದೇ ಕಂಟೆಂಟ್‌ ಮುಂದೊಂದು ಸಂದರ್ಭದಲ್ಲಿ ಈಗಿನದ್ದಕ್ಕಿಂತ ಹೆಚ್ಚು ಹಿಟ್ ಆಗಬಹುದು.’

ಅವಕಾಶ ಎಲ್ಲಿದೆ, ಅವಕಾಶ ಸಿಗುತ್ತಿಲ್ಲ ಎಂದು ಹೇಳುವವರಿಗೆ ವಿನಾಯಕ್ ಅವರ ಮಾತಿನಲ್ಲಿ ಸಂದೇಶವೊಂದಿದೆ. ‘ಸಿನಿಮಾಗಳಲ್ಲಿ ಅವಕಾಶಗಳು ಸಿಕ್ಕವರಿಗೇ ಮತ್ತೆ ಮತ್ತೆ ಸಿಗುತ್ತಿವೆ. ಹೀಗಿರುವಾಗ ನಮ್ಮಂಥ ನಟರು ಎಲ್ಲಿಗೆ ಹೋಗಬೇಕು? ವೆಬ್‌ ಮಾಧ್ಯಮದಲ್ಲಿ ನಮ್ಮನ್ನು ಹಿಡಿಯಲು ಯಾರಿಂದಲೂ ಸಾಧ್ಯವಿಲ್ಲ’ ಎನ್ನುತ್ತಾರೆ ಅವರು.

ಬರಹಗಾರ – ಫೇಸ್‌ಬುಕ್‌ ಮೂಲಕ!

ಬರಹಗಾರರು ಕೂಡ ಸೆಲೆಬ್ರಿಟಿಗಳು ಎಂಬ ಮಾತಿಗೆ ತಕರಾರೇನೂ ಇರಲಿಕ್ಕಿಲ್ಲ. ಏಕೆಂದರೆ, ಸೆಲೆಬ್ರಿಟಿ ಬರಹಗಾರರ ದಂಡು ಕನ್ನಡದಲ್ಲೂ, ಇಂಗ್ಲಿಷ್‌ನಲ್ಲೂ ಇದ್ದೇ ಇದೆ. ಕನ್ನಡ ಗ್ರಾಹಕರ ಪರ ಚಳವಳಿಗಳು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ, ಕನ್ನಡದ ಮೂಲಕವೇ ಜ್ಞಾನದ ಹತ್ತು ಹಲವು ಶಾಖೆಗಳತ್ತ ನೋಡುವುದು... ಇವೆಲ್ಲ ವಿಚಾರಗಳ ಬಗೆಗೆ ಮಾತು ಬಂದಾಗ ಸಾಫ್ಟ್‌ವೇರ್‌ ತಂತ್ರಜ್ಞ ವಸಂತ ಶೆಟ್ಟಿ ಅವರ ಹೆಸರು ಪ್ರಸ್ತಾಪ ಆಗುವುದು ಸಹಜ. ಡೆಕ್ಕನ್ ಹೆರಾಲ್ಡ್‌ ಇಂಗ್ಲಿಷ್‌ ದೈನಿಕವು, ಕನ್ನಡದ ಪ್ರಜ್ಞೆಯ ಮೇಲೆ ಪ್ರಭಾವ ಬೀರಿದ 19 ಜನರ ಹೆಸರನ್ನು 2019ರ ಆರಂಭದಲ್ಲಿ ಪಟ್ಟಿ ಮಾಡಿತ್ತು. ಅವುಗಳಲ್ಲಿ ಒಂದು ಹೆಸರು ವಸಂತ್ ಅವರದ್ದೂ ಆಗಿತ್ತು. ಅವರು ಹೆಚ್ಚಿನ ಸಾಮಾಜಿಕ ಕಾರ್ಯಗಳನ್ನು ನಡೆಸಿದ್ದು ಬರಹಗಳ ಮೂಲಕ.

‘ನೀವು ಬರವಣಿಗೆ ಆರಂಭಿಸಲು ದೊರೆತ ಮೊದಲ ವೇದಿಕೆ ಯಾವುದು’ ಎಂಬ ಪ್ರಶ್ನೆ ಮುಂದಿಟ್ಟಾಗ, ವಸಂತ್ ಅವರು, ‘ನಾನು ಬರವಣಿಗೆ ಆರಂಭಿಸಿ 10 ವರ್ಷಗಳು ಕಳೆದಿವೆ. ಬರಹಕ್ಕೆ ವೇದಿಕೆ ಕೊಟ್ಟಿದ್ದು ಫೇಸ್‌ಬುಕ್‌. ಅದಕ್ಕೂ ಮೊದಲು ಬ್ಲಾಗ್‌ಗಳಲ್ಲಿ ಒಂದಿಷ್ಟು ಬರೆಯುತ್ತಿದ್ದೆ. ನನ್ನದೇ ಒಂದು ಬ್ಲಾಗ್‌ ಕೂಡ ನಡೆಸುತ್ತಿದ್ದೆ’ ಎಂದರು. ಅವರು ಹೆಚ್ಚಾಗಿ ಬರೆಯುತ್ತಿದ್ದುದು ಕನ್ನಡ ಜಾಗೃತಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ.

ವಸಂತ್ ಅವರಿಗೆ ‘ಸೆಲೆಬ್ರಿಟಿ’ ಸ್ಥಾನ ಸಿಕ್ಕಿರಲು ಕಾರಣ, ಸಾಮಾಜಿಕ ಜಾಲತಾಣಗಳ ಮೂಲಕ ನಡೆಸಿದ ನಿರಂತರ ಬರವಣಿಗೆ. ತಾವು ‘ಸೆಲೆಬ್ರಿಟಿ’ ಎನ್ನುವುದನ್ನು ಅವರು ಒಪ್ಪುವುದಿಲ್ಲ. ಆದರೆ, ತಾವು ‘ಓದುಗರ ಮೇಲೆ ಪ್ರಭಾವ ಬೀರುವ ವ್ಯಕ್ತಿ ಮಾತ್ರ’ ಎಂದು ಹೇಳಿಕೊಂಡರು. ‘ಜನಸಮೂಹದ ಮೇಲೆ ಪ್ರಭಾವ ಬೀರುವ ವ್ಯಕ್ತಿಯನ್ನೇ ಸೆಲೆಬ್ರಿಟಿ ಎಂದು ಹೇಳುವುದಲ್ಲವಾ’ ಎಂದು ಪ್ರಶ್ನಿಸಿದಾಗ, ಪ್ರತಿವಾದ ಮಂಡಿಸದೆ ಸುಮ್ಮನಾದರು.

ಸಾಮಾಜಿಕ ಜಾಲತಾಣಗಳ ಮೂಲಕ ಬರವಣಿಗೆ ಆರಂಭಿಸಿದ ವಸಂತ್, ನಂತರ ಕನ್ನಡದ ದಿನಪತ್ರಿಕೆಗಳಲ್ಲಿ ಅಂಕಣಕಾರ ಆಗಿಯೂ ಗುರುತಿಸಿಕೊಂಡರು. ‘ಇಷ್ಟೆಲ್ಲ ಆಗಿದ್ದಕ್ಕೆ ಕಾರಣ ಬ್ಲಾಗ್‌ಗಳು ಮತ್ತು ಸಾಮಾಜಿಕ ಜಾಲತಾಣಗಳು. ಅಲ್ಲಿ ಬರೆದ ಬರಹಗಳೇ ಪತ್ರಿಕೆಗಳು ನನ್ನನ್ನು ಗುರುತಿಸುವಂತೆ ಮಾಡಿದವು. ಇಂದಿಗೂ ಕೂಡ ನನ್ನ ಹಲವು ಕೆಲಸಗಳು ಸಾಮಾಜಿಕ ಜಾಲತಾಣಗಳ ಮೂಲಕವೇ ನಡೆಯುತ್ತವೆ. ಮುನ್ನೋಟ ಎನ್ನುವ ಯೂಟ್ಯೂಬ್‌ ವಾಹಿನಿ ಮೂಲಕ ಮಾಹಿತಿ ನೀಡುವ, ಶಿಕ್ಷಣ ನೀಡುವ ಕೆಲಸ ನಡೆಯುತ್ತಿದೆ’ ಎನ್ನುತ್ತಾರೆ ವಸಂತ್. ಅವರೇ ಒಪ್ಪಿಕೊಂಡಿರುವಂತೆ, ‘ಸಾಮಾಜಿಕ ಜಾಲತಾಣಗಳು ಇಲ್ಲದಿರುತ್ತಿದ್ದರೆ, ನಾನು ಇಂದು ಈಗಿರುವ ಸ್ಥಿತಿಯಲ್ಲಿ ಇರುತ್ತಿರಲಿಲ್ಲ.’

ಫಿಟ್‌ ವಿವೇಕ್‌

ವಿವೇಕ್‌ ಮಿತ್ತಲ್ ಎನ್ನುವ 29 ವರ್ಷ ವಯಸ್ಸಿನ ಟೆಕಿಯೊಬ್ಬರು ಇದ್ದಾರೆ. ಕಾಲೇಜಿನಲ್ಲಿ ಓದುತ್ತಿದ್ದಾಗಿನಿಂದಲೇ ಇವರಿಗೆ ದೈಹಿಕ ಫಿಟ್‌ನೆಸ್‌ ಬಗ್ಗೆ ಆಸಕ್ತಿ ಇತ್ತು. ಕಾಲೇಜು ಓದಿನ ಜೊತೆಯಲ್ಲೇ ಆರೋಗ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನೂ ಓದಿಕೊಳ್ಳುತ್ತಿದ್ದರು. ಪ್ರತಿ ವ್ಯಕ್ತಿಯಲ್ಲೂ ದೈಹಿಕ ಫಿಟ್‌ನೆಸ್‌ ಬಗ್ಗೆ ಒಂದಿಷ್ಟಾದರೂ ಆಸಕ್ತಿ ಇರುತ್ತದೆ ಎಂಬುದು ವಿವೇಕ್ ಅವರಿಗೆ ಗೊತ್ತಿತ್ತು. ಯೂಟ್ಯೂಬ್‌ನಲ್ಲಿ ಅವರು ಒಮ್ಮೆ ಜಾಲಾಡಿದಾಗ, ಅಲ್ಲಿದ್ದ ಬಹುತೇಕ ಫಿಟ್‌ನೆಸ್‌ ಚಾನೆಲ್‌ಗಳು ಸಿಕ್ಸ್‌ ಪ್ಯಾಕ್‌ ದೇಹ ರೂಪಿಸಿಕೊಳ್ಳುವುದು ಹೇಗೆ ಎಂಬುದನ್ನು ಹೇಳುತ್ತಿದ್ದವೇ ವಿನಾ, ಸಾಮಾನ್ಯರಿಗೆ ಅಗತ್ಯವಿರುವ ಫಿಟ್‌ನೆಸ್‌ ಬಗ್ಗೆ ಮಾಹಿತಿ ನೀಡುತ್ತಿರಲಿಲ್ಲ. ಹಾಗಾಗಿ, ತಾವೇ ಫಿಟ್‌ನೆಸ್‌ಗೆ ಸಂಬಂಧಿಸಿದ ಒಂದು ಯೂಟ್ಯೂಬ್‌ ವಾಹಿನಿ ಆರಂಭಿಸಿದರು.

ಇಂದು ಅವರ ವಾಹಿನಿಗೆ 14.98 ಲಕ್ಷ ಚಂದಾದಾರರಿದ್ದಾರೆ! ತುಪ್ಪ ತಿಂದರೆ ಆರೋಗ್ಯ ಕೆಡುತ್ತದೆ, ಕೊಬ್ಬರಿ ಎಣ್ಣೆ ಬಳಸಬಾರದು ಎಂಬಂತಹ ವಾದಗಳನ್ನು ವಿವೇಕ್‌ ಅವರು ತಮ್ಮ ವಾಹಿನಿ ಮೂಲಕವೇ ಸೋಲಿಸುತ್ತಿದ್ದಾರೆ ಕೂಡ. ಇಷ್ಟು ದೊಡ್ಡ ಸಂಖ್ಯೆಯ ಚಂದಾದಾರರನ್ನು ಹೊಂದಿರುವ ವಿವೇಕ್‌ ಅವರು ಹೊಸದಾಗಿ ಯೂಟ್ಯೂಬ್‌ ವಾಹಿನಿ ಆರಂಭಿಸುವವರಿಗೆ ಹೇಳುವ ಕಿವಿಮಾತು ಹೀಗಿದೆ: ‘ಚಿತ್ರೀಕರಣ ಮಾಡಲು ದುಬಾರಿ ಕ್ಯಾಮೆರಾ, ದೃಶ್ಯಾವಳಿಗಳನ್ನು ಕತ್ತರಿಸಲು–ಜೋಡಿಸಲು ದುಬಾರಿ ಲ್ಯಾಪ್‌ಟಾಪ್‌... ಇಂಥವೆಲ್ಲ ಬೇಕಿಲ್ಲ. ಜನರಿಗೆ ಬೇಕಿರುವುದು ಉತ್ತಮ ಹೂರಣ. ನನ್ನ ವಾಹಿನಿಯಲ್ಲಿ ನಾನೇ ಕ್ಯಾಮೆರಾಮ್ಯಾನ್, ನಾನೇ ಸಂಕಲನಕಾರ, ನಾನೇ ಸಂಭಾಷಣೆಕಾರ ಕೂಡ’. ಅವರು ಹಿಂದೆ ಕೆಲಸ ಮಾಡುತ್ತಿದ್ದ ತಂತ್ರಜ್ಞಾನ ಕಂಪನಿ ಕೊಡುತ್ತಿದ್ದಕ್ಕಿಂತ ಹೆಚ್ಚಿನ ಹಣವನ್ನು ಈಗ ಅವರ ಯೂಟ್ಯೂಬ್‌ ವಾಹಿನಿ ತಂದುಕೊಡುತ್ತಿದೆ. ‘ಹೀಗಿದ್ದರೂ, ಹಣ ಗಳಿಸುವುದಕ್ಕಾಗಿಯೇ ಯೂಟ್ಯೂಬ್‌ ವಾಹಿನಿ ಆರಂಭಿಸುವುದು ವಿವೇಕಯುತ ಕೆಲಸ ಆಗಲಾರದು’ ಎನ್ನುವ ಕಿವಿಮಾತನ್ನು ಫಿಟ್‌ನೆಸ್‌ ಸೆಲೆಬ್ರಿಟಿ ವಿವೇಕ್‌ ಹೇಳುತ್ತಾರೆ.

ಆಧುನಿಕ ಸೌಲಭ್ಯಗಳನ್ನು ಬಳಸಿ, ಸಮಾಜದಲ್ಲಿ ಒಂದು ಒಳ್ಳೆಯ ಹೆಸರು ಸಂಪಾದಿಸುವ, ಆ ಮೂಲಕ ‘ಸೆಲೆಬ್ರಿಟಿ’ ಆಗುವ ಪಾಠ ಈ ಯುವಕರ ಕಥೆಯಲ್ಲಿ ಇದೆಯಲ್ಲ? ‘ಬೆಲ್‌ ಬಾಟಂ’ ಸಿನಿಮಾ ವೀಕ್ಷಣೆ ನಂತರ ಚಹಾ ಅಂಗಡಿ ಮುಂದೆ ನಿಂತಿದ್ದ ಆ ಯುವಕರಲ್ಲಿ, ‘ಸೆಲೆಬ್ರಿಟಿ ಆಗಲು ಅಲ್ಲಿ, ಇಲ್ಲಿ ನೋಡುವುದೇಕೆ? ನಿಮ್ಮ ಕೈಯಲ್ಲೇ ಇರುವ ಸ್ಮಾರ್ಟ್‌ ಫೋನನ್ನು ಒಮ್ಮೆ ನೋಡಿ’ ಎಂದು ಹೇಳಬಹುದಲ್ಲ?!

ಮನು ಹಂದಾಡಿ ಗೊತ್ತಲ್ವಾ?!

‘ಹಲೋ, ನಾನ್ ಮನು ಹಂದಾಡಿ ಅಂದಳಿ’ ಎನ್ನುವ ಮಾತಿನ ಮೂಲಕವೇ ತಮ್ಮನ್ನು ಕನ್ನಡಿಗರಿಗೆ ಪರಿಚಯಿಸಿಕೊಂಡವರು ಮನು ಹಂದಾಡಿ. ಅಚ್ಚ ಕುಂದಗನ್ನಡ (ಕನ್ನಡದ ಒಂದು ಉಪಭಾಷೆ) ಬಳಸಿ ಹಾಸ್ಯಮಯ ಸಂಭಾಷಣೆ ನಡೆಸುತ್ತಿದ್ದ ಮನು ಅವರು ಹೆಚ್ಚಿನ ಜನರನ್ನು ತಲುಪಿದ್ದು ವಾಟ್ಸ್‌ಆ್ಯಪ್‌ ಮೂಲಕ.

ಹೆಚ್ಚಿನವರು ವಾಟ್ಸ್‌ಆ್ಯಪ್‌ ಅಪ್ಲಿಕೇಷನ್‌ಅನ್ನು ಚ್ಯಾಟಿಂಗ್‌ಗೆ ಮಾತ್ರವೇ ಬಳಸಬಹುದು. ಆದರೆ ಮನು ಅವರು ಇದನ್ನು ತಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಬಳಸಿಕೊಂಡರು. ಇವರು ಕೂಡ ಹೊಸ ಕಾಲದ ಮಾಧ್ಯಮಗಳನ್ನು ಸೆಲೆಬ್ರಿಟಿ ಆಗಲು ಏಣಿಯಾಗಿ ಬಳಸಿಕೊಳ್ಳುವುದಕ್ಕೆ ಉತ್ತಮ ಮಾದರಿ.

‘ನನ್ನಲ್ಲಿನ ಹಾಸ್ಯದ ಪ್ರತಿಭೆ ಹೊರಜಗತ್ತಿಗೆ ಗೊತ್ತಾಗಿದ್ದೇ ವಾಟ್ಸ್‌ಆ್ಯಪ್‌ ಮೂಲಕ. ನನ್ನ ಹಾಸ್ಯ ಸಂಭಾಷಣೆಗಳನ್ನು ನನ್ನ ಸ್ನೇಹಿತರು ವಾಟ್ಸ್‌ಆ್ಯಪ್‌ ಗ್ರೂಪ್‌ಗಳ ಮೂಲಕ ಎಲ್ಲರಿಗೂ ಹಂಚಿದರು. ಜನ ನನ್ನನ್ನು ಗುರುತಿಸಿ, ಬೆನ್ನುತಟ್ಟಿದರು’ ಎನ್ನುತ್ತಾರೆ ಮನು. ವಾಟ್ಸ್‌ಆ್ಯಪ್‌ ಮೂಲಕ ಕುಂದಾಪುರದ ಗಡಿಯನ್ನು ಮೀರಿದ ಮನು, ಹಾಸ್ಯ ಕಾರ್ಯಕ್ರಮ ನೀಡಲೆಂದೇ ದುಬೈವರೆಗೂ ಹೋಗಿಬಂದಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !