ಸೋಮವಾರ, ಏಪ್ರಿಲ್ 12, 2021
28 °C
ಅನ್ನದಾತನ ಆದಾಯ ದುಪ್ಪಟ್ಟುಗೊಳಿಸುವ ಆಶಯ

ಬಜೆಟ್ ವಿಶ್ಲೇಷಣೆ | ಕೃಷಿಯೇತರ ಚಟುವಟಿಕೆಯತ್ತ ದೃಷ್ಟಿ ಹರಿಯಲಿ

ಮೀನಾಕ್ಷಿ ರಾಜೀವ್‌ Updated:

ಅಕ್ಷರ ಗಾತ್ರ : | |

ರೈತರ ಸಂಕಷ್ಟ ಮತ್ತು ಅದರಿಂದಾದ ಪ್ರತಿಭಟನೆಗಳು ಬಿಜೆಪಿ ಪರವಾದ ಚುನಾವಣಾ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಹಾಗಿದ್ದರೂ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಈ ಕ್ಷೇತ್ರವನ್ನು ನಿರ್ಲಕ್ಷಿಸಲಾಗದು. ಧಾನ್ಯಗಳಲ್ಲಿ ಸ್ವಾವಲಂಬನೆ ಸಾಧಿಸಿದ್ದಕ್ಕಾಗಿ ದೇಶದ ರೈತರನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಭಿನಂದಿಸಿದ್ದಾರೆ. ಎಣ್ಣೆಬೀಜಗಳ ವಿಚಾರದಲ್ಲಿಯೂ ಇಂತಹುದೇ ಸಾಧನೆ ಸಾಧ್ಯವಾಗಬಹುದು ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಜತೆಗೆ, ಶೂನ್ಯ ವೆಚ್ಚದ ಕೃಷಿ ಮಾದರಿಗೆ ಒತ್ತು ನೀಡಬೇಕಿದೆ ಎಂದೂ ಹೇಳಿದ್ದಾರೆ. 

2018–19ನೇ ವರ್ಷದಲ್ಲಿ ಕೃಷಿ ಕ್ಷೇತ್ರದಲ್ಲಿ ಮೂಲ ದರದ ಮೇಲಿನ ಒಟ್ಟು ಮೌಲ್ಯ ವರ್ಧನೆ ಪ್ರಮಾಣವು ಶೇ 2.9ರಷ್ಟು ಇತ್ತು; ಇತರ ಮುಖ್ಯ ವಲಯಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಎಂಬುದನ್ನು ನಾವು ಇಲ್ಲಿ ಗಮನಿಸಬೇಕು. 2018–19ರ ಮೂರನೇ ತ್ರೈಮಾಸಿಕದಲ್ಲಿ ಅದು ಶೇ 2.8ಕ್ಕೆ ಇಳಿಯಿತು. ನಾಲ್ಕನೇ ತ್ರೈಮಾಸಿಕದಲ್ಲಿ ಋಣಾತ್ಮಕ (ಶೇ –0.1) ಬೆಳವಣಿಗೆಗೆ ಇಳಿಯಿತು. ಜಾರ್ಖಂಡ್‌ನಲ್ಲಿ ಶೇ 45 ರೈತ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿದ್ದರೆ ಕರ್ನಾಟಕದಲ್ಲಿ ಈ ಪ್ರಮಾಣ ಶೇ 22.5ರಷ್ಟಿದೆ (ಇದು ಅಖಿಲ ಭಾರತ ಸರಾಸರಿಗೆ ಹತ್ತಿರದಲ್ಲಿದೆ) ಎಂದು ನೀತಿ ಆಯೋಗದ ವರದಿಯು ಹೇಳಿದೆ. 2011–12ರಲ್ಲಿ ರಾಷ್ಟ್ರೀಯ ಸಾಂಖ್ಯಿಕ ಸರ್ವೆ ಕಚೇರಿ ಮಾಡಿದ ಅಂದಾಜಿನ ಆಧಾರದಲ್ಲಿ ಈ ವರದಿ ಸಿದ್ಧಪಡಿಸಲಾಗಿತ್ತು. ಇದು ನಿಜವಾಗಿಯೂ ಚಿಂತೆಗೆ ಕಾರಣವಾಗುವ ವಿಚಾರ. ಕೃಷಿ ಕ್ಷೇತ್ರದಲ್ಲಿ ವ್ಯಾಪಕ ಹೂಡಿಕೆ ಮಾಡಲಾಗುವುದು ಎಂದು ನಿರ್ಮಲಾ ಭರವಸೆ ಕೊಟ್ಟಿದ್ದಾರೆ. ಈ ಹೂಡಿಕೆಯ ವಿವರಗಳನ್ನು ಅವರು ಬಿಚ್ಚಿಟ್ಟಿಲ್ಲ. ಆದರೆ, ಈ ವರ್ಷ ಕೃಷಿಗೆ ಸಂಬಂಧಿಸಿದ ನೀರಾವರಿಯಂತಹ ಮೂಲಸೌಕರ್ಯದಲ್ಲಿ ಹೂಡಿಕೆಗೆ ಬೇಕಾದಷ್ಟು ಹಣ ದೊರೆಯಬಹುದು ಎಂದು ನಿರೀಕ್ಷಿಸೋಣ. ಅಸ್ಥಿರ ಹವಾಮಾನ ಸ್ಥಿತಿಯಿಂದಾಗಿ ಕರ್ನಾಟಕದಂತಹ ರಾಜ್ಯದಲ್ಲಿ ನೀರಾವರಿಯು ವಿಶೇಷ ಗಮನ ಬೇಡುವ ಒಂದು ಕ್ಷೇತ್ರವಾಗಿದೆ. 

ಹವಾಮಾನದಲ್ಲಿ ಅನಿರೀಕ್ಷಿತ ಬದಲಾವಣೆಗಳು ಮತ್ತು ಸದಾ ಚಂಚಲವಾಗಿರುವ ಬೆಲೆಯಿಂದಾಗಿ ಭಾರತದ ರೈತ ಎದುರಿಸುವ ಅಪಾಯ ಅಪಾರ. ಉತ್ಪಾದನೆಯು ತೃಪ್ತಿಕರ ಮಟ್ಟದಲ್ಲಿದ್ದಾಗಲೂ ರೈತನ ಆದಾಯ ಚಿಂತೆಯ ವಿಷಯವೇ ಆಗಿರುತ್ತದೆ. ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯು ಹವಾಮಾನದ ಅನಿಶ್ಚಿತ ಸ್ಥಿತಿಯಿಂದ ಆಗುವ ಬೆಳೆ ನಾಶಕ್ಕೆ ಸಂಬಂಧಿಸಿ ರೈತನನ್ನು ಸ್ವಲ್ಪ ಮಟ್ಟಿಗೆ ನಿರಾಳವಾಗಿಸಿದೆ. ಈ ಯೋಜನೆಗೆ ಈ ವರ್ಷ ಮೀಸಲು ಇರಿಸಿದ ಮೊತ್ತ ಕಳೆದ ವರ್ಷಕ್ಕಿಂತ ಅಲ್ಪ ಏರಿಕೆಯಾಗಿದೆ ಅಷ್ಟೆ. 2018–19ರಲ್ಲಿ ಇದು ₹12,975 ಕೋಟಿ ಇತ್ತು, ಈ ಬಾರಿ ಅದನ್ನು ₹14,000 ಕೋಟಿಗೆ ಏರಿಸಲಾಗಿದೆ. ಈ ಬೆಳೆ ವಿಮೆ ಯೋಜನೆಯು ರೈತನಿಗೆ ಪರಿಹಾರ ಒದಗಿಸುತ್ತಿದ್ದರೂ ಅದರ ವ್ಯಾಪ್ತಿಯಲ್ಲಿ ಬರುವುದು ಬೇಸಾಯದ ವೆಚ್ಚ ಮಾತ್ರ. ಆ ಬೇಸಾಯದಿಂದ  ಬರಬಹುದಾಗಿದ್ದ ಫಸಲಿನ ನಷ್ಟ ಈ ವ್ಯಾಪ್ತಿಯಲ್ಲಿ ಇಲ್ಲ. ಬ್ಯಾಂಕ್‌ನಿಂದ ಸಾಲ ಪಡೆಯುವ ರೈತನಿಗೆ ಆ ಸಾಲದ ಮೊತ್ತವನ್ನು ವಿಮೆ ಮೂಲಕ ಕಟ್ಟಿಕೊಡುವುದು ಮುಖ್ಯವಾಗಿ ಈ ಯೋಜನೆಯ ಉದ್ದೇಶ. ಬೆಳೆ ನಾಶವಾದರೆ ನಂತರದ ಮಧ್ಯಂತರ ಅವಧಿಯಲ್ಲಿ ರೈತನ ಜೀವನ ನಿರ್ವಹಣೆಗೆ ಬೆಂಬಲದ ಅಗತ್ಯ ಇದೆ. ಹಾಗಾಗಿಯೇ, ಬೆಳೆಯ ಮೌಲ್ಯವನ್ನೂ ವಿಮೆ ಒಳಗೊಳ್ಳಬೇಕಾದ ಅಗತ್ಯ ಇದೆ. ಅದರ ಮೂಲಕ ಬೆಳೆ ನಾಶದಂತಹ ಸಂದರ್ಭದಲ್ಲಿ ರೈತರಿಗೆ ಉತ್ತಮ ಬೆಂಬಲ ನೀಡಬೇಕಾಗಿದೆ. 

ಬೆಲೆ ಕುಸಿತದ ಸಂದರ್ಭದಲ್ಲಿ ರೈತರ ರಕ್ಷಣೆಗೆ ಬೆಂಬಲ ಬೆಲೆ ನೀಡಿಕೆಯಂತಹ ನೀತಿ ಇದೆ. ಆದರೆ, ಇದರ ಅನುಷ್ಠಾನ ಹಂತದಲ್ಲಿ ಸುಧಾರಣೆ ಬೇಕಿದೆ. ಬೇಸಾಯದ ವೆಚ್ಚದ ಒಂದೂವರೆ ಪಟ್ಟಿನಷ್ಟು ಮೊತ್ತವನ್ನು ಕನಿಷ್ಠ ಬೆಂಬಲ ಬೆಲೆಯಾಗಿ ನೀಡಲಾಗುವುದು ಎಂದು ಹಿಂದಿನ ಬಜೆಟ್‌ನಲ್ಲಿ ಭರವಸೆ ಕೊಡಲಾಗಿತ್ತು. ಇದರ ವ್ಯಾಪ್ತಿಯಲ್ಲಿ ಸೇರಿಲ್ಲದ ಬೆಳೆಗಳನ್ನು ವ್ಯಾಪ್ತಿಗೆ ಸೇರಿಸಬೇಕಿದೆ. ಕೃಷಿ ಮಾರುಕಟ್ಟೆ ಮತ್ತು ಉತ್ತಮ ಬೆಲೆ ನಿಗದಿಗಾಗಿ ‘ಇ–ನಾಮ್‌’ ವ್ಯವಸ್ಥೆ ಆರಂಭಿಸಲಾಗಿದೆ. ತಮ್ಮ ಬೆಳೆಗೆ ನ್ಯಾಯಯುತ ಬೆಲೆ ದೊರೆಯದ ಸಣ್ಣ ಮತ್ತು ಅತಿಸಣ್ಣ ರೈತರಿಗೂ ಇದರ ಪ್ರಯೋಜನ ಸಿಗಲು ವಿಶೇಷ ಗಮನ ಹರಿಸಬೇಕಾದ ಅಗತ್ಯ ಇದೆ. 

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ತುಂಬುವ 2022ರ ಹೊತ್ತಿಗೆ ರೈತರ ಆದಾಯ ದ್ವಿಗುಣವಾಗುವುದನ್ನು ಖಾತರಿಪಡಿಸುವ ನಿರ್ಧಾರವನ್ನು ಸರ್ಕಾರವು ಮಾಡಿದೆ. ಆದರೆ, ದೇಶದ ರೈತರ ಪೈಕಿ ಶೇ 80ರಷ್ಟು ಸಣ್ಣ ಮತ್ತು ಅತಿಸಣ್ಣ ರೈತರಿದ್ದಾರೆ. ಅವರ ಹಿಡುವಳಿಗಳು ಬಹಳ ಸಣ್ಣವು. ಹಾಗಾಗಿ ಕೃಷಿಯ ಮೂಲಕ ಮಾತ್ರವೇ ಅವರ ಆದಾಯವನ್ನು ಭಾರಿ ಪ್ರಮಾಣದಲ್ಲಿ ಏರಿಸುವುದು ಸಾಧ್ಯವಾಗದು. ಪಶು ಸಂಗೋಪನೆಯ ಜತೆಗೆ, ಕೃಷಿಯೇತರ ಚಟುವಟಿಕೆಗಳ ಅಭಿವೃದ್ಧಿಯೂ ಅನಿವಾರ್ಯ. ಜೇನು ಸಾಕಣೆ, ಬಿದಿರು ಬೆಳೆ ಮತ್ತು ಖಾದಿಯಂತಹ ಸಾಂಪ್ರದಾಯಿಕ ಉದ್ಯಮಗಳಿಗೆ ಗ್ರಾಮೀಣ ಪ್ರದೇಶದಲ್ಲಿ ಉತ್ತೇಜನ ನೀಡುವ ಬಗ್ಗೆ ಈ ಬಾರಿಯ ಬಜೆಟ್‌ ಮಾತನಾಡಿದೆ. ಸಾಂಪ್ರದಾಯಿಕ ಉದ್ಯಮಗಳ ಪುನಶ್ಚೇತನ ನಿಧಿ ಯೋಜನೆಯ ಮೂಲಕ ಇದನ್ನು ಮಾಡಲು ಉದ್ದೇಶಿಸಲಾಗಿದೆ. ಇದರ ಜತೆಗೆ, ರೈತ ಕುಟುಂಬಗಳ ಆದಾಯ ಹೆಚ್ಚಳಕ್ಕೆ ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಕೃಷಿ ಉತ್ಪನ್ನ ಆಧಾರಿತವಾದ ಆಹಾರ ಸಂಸ್ಕರಣೆ ಮತ್ತು ಇತರ ಉದ್ಯಮಗಳ ಮೇಲೆ ಭಾರಿ ಹೂಡಿಕೆಯ ಅಗತ್ಯ ಇದೆ. ಈ ಕ್ರಮವು ರೈತರ ಆದಾಯವನ್ನು ಹೆಚ್ಚಿಸುವುದರ ಜತೆಗೆ ಅವರು ಕೃಷಿ ಕ್ಷೇತ್ರದಲ್ಲಿಯೇ ಉಳಿಯಲು ಸಹಕಾರಿಯಾಗಬಹುದು. 

ಲೇಖಕಿ ಐಸೆಕ್‌ನಲ್ಲಿ ಪ್ರಾಧ್ಯಾಪಕಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು