ಲಿಂಗಾಯತ ಪ್ರತ್ಯೇಕ ಧರ್ಮ: ಕೇಂದ್ರದ ನಿಲುವು ಅತಾರ್ಕಿಕ– ಎಂ.ಬಿ.ಪಾಟೀಲ

7

ಲಿಂಗಾಯತ ಪ್ರತ್ಯೇಕ ಧರ್ಮ: ಕೇಂದ್ರದ ನಿಲುವು ಅತಾರ್ಕಿಕ– ಎಂ.ಬಿ.ಪಾಟೀಲ

Published:
Updated:

ವಿಜಯಪುರ: ‘ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಒಪ್ಪಲು ಸಾಧ್ಯವಿಲ್ಲ ಎಂದಿರುವ ಕೇಂದ್ರ ಸರ್ಕಾರದ ನಿಲುವು ಅತಾರ್ಕಿಕವಾಗಿದೆ’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡ, ಕಾಂಗ್ರೆಸ್‌ ಶಾಸಕ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

‘ಕೇಂದ್ರ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿರುವಂತೆ, 1871ರ ಜನಗಣತಿ ವೇಳೆ ಲಿಂಗಾಯತರು ಹಿಂದೂ ಧರ್ಮದ ಭಾಗವಾಗಿರಲಿಲ್ಲ ಎಂಬುದು ಸುಳ್ಳು. ಆಗ ಲಿಂಗಾಯತ, ಸ್ವತಂತ್ರ ಧರ್ಮದ ಮಾನ್ಯತೆ ಹೊಂದಿತ್ತು ಎಂಬುದು ಗಮನಾರ್ಹ’ ಎಂದು ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

‘ಪ್ರತ್ಯೇಕ ಧರ್ಮದ ಮಾನ್ಯತೆ ನೀಡಿದರೆ, ಲಿಂಗಾಯತ-ವೀರಶೈವರಲ್ಲಿ ಈಗಾಗಲೇ ಪರಿಶಿಷ್ಟ ಜಾತಿ ಸೌಲಭ್ಯ ಪಡೆಯುತ್ತಿರುವವರು ಅದರಿಂದ ವಂಚಿತರಾಗುತ್ತಾರೆ ಎಂಬುದೂ ಸುಳ್ಳು. ಈಗಾಗಲೇ ಈ ವಿಷಯದ ಬಗ್ಗೆ ಸಿಖ್ ಮತ್ತು ಜೈನ ಧರ್ಮಗಳಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವಾಗ, ಯುಕ್ತಾಯುಕ್ತ ರೀತಿಯಲ್ಲಿ ಪರಿಣಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವ ಸಂದರ್ಭವೂ ಈ ಅಂಶವನ್ನು ಪರಿಗಣಿಸಬಹುದಿತ್ತು’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಕೇಂದ್ರದ ಈ ನಿಲುವಿನಿಂದ ಬಸವ ಮತ್ತು ಲಿಂಗಾಯತ ಧರ್ಮದ ಅನುಯಾಯಿಗಳು ಆತಂಕ ಪಡುವ ಅಗತ್ಯವಿಲ್ಲ. ಲಿಂಗಾಯತ ಧರ್ಮ ಅಂದು, ಇಂದು ಮತ್ತು ಎಂದೆಂದಿಗೂ ಸ್ವತಂತ್ರ ಧರ್ಮ. ಆದ್ದರಿಂದ ಲಿಂಗಾಯತರು ಸಂಯಮ ಮತ್ತು ಘನತೆಯಿಂದ ವರ್ತಿಸಬೇಕು’ ಎಂದು ಮನವಿ ಮಾಡಿದ್ದಾರೆ.

‘ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು, ಕಾನೂನು ತಜ್ಞರು, ಮಠಾಧೀಶರು ಮತ್ತು ಸಮಾಜದ ಹಿರಿಯರ ಜತೆ ಚರ್ಚಿಸಿ, ಮುಂದಿನ ನಡೆ ತೀರ್ಮಾನಿಸಲಾಗುವುದು’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !