ವಿಜಯಪುರ ಲೋಕಸಭಾ ಕ್ಷೇತ್ರಕ್ಕೊಲಿಯದ ಕೇಂದ್ರ ಸಚಿವ ಸ್ಥಾನಮಾನ..!

ಶುಕ್ರವಾರ, ಏಪ್ರಿಲ್ 26, 2019
36 °C
ಬಿಜೆಪಿಯ ಇಬ್ಬರಿಗೆ ರಾಜ್ಯ ಖಾತೆಯ ಸಚಿವ ಸ್ಥಾನದ ಮನ್ನಣೆ; ಕಾಂಗ್ರೆಸ್‌ನಿಂದ ಸಂಸದೀಯ ಕಾರ್ಯದರ್ಶಿ ಸ್ಥಾನದ ಕೊಡುಗೆ

ವಿಜಯಪುರ ಲೋಕಸಭಾ ಕ್ಷೇತ್ರಕ್ಕೊಲಿಯದ ಕೇಂದ್ರ ಸಚಿವ ಸ್ಥಾನಮಾನ..!

Published:
Updated:

ವಿಜಯಪುರ: ಸ್ವತಂತ್ರ ಭಾರತದ ಪ್ರಪ್ರಥಮ ಚುನಾಯಿತ ಸರ್ಕಾರದಲ್ಲೇ, ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದರಿಗೆ ಕೇಂದ್ರ ಸಚಿವ ಸ್ಥಾನಮಾನ ಸಿಗಲಿದೆ ಎಂಬ ನಿರೀಕ್ಷೆ, ಆರೂವರೆ ದಶಕ ಗತಿಸಿದರೂ ಇಂದಿಗೂ ಈಡೇರದಾಗಿದೆ.

1952ರಲ್ಲಿ ಆಗಿನ ವಿಜಾಪುರ ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದ ರಾಜಾರಾಮ ದುಬೆ ಕಾಂಗ್ರೆಸ್‌ನಲ್ಲಿ ಪ್ರಭಾವಿ ಮುಖಂಡರಾಗಿದ್ದರು. ಪ್ರಧಾನಿ ಜವಾಹರಲಾಲ್‌ ನೆಹರು ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.

ಮೊದಲ ಸರ್ಕಾರದಲ್ಲೇ ದುಬೆ ಕೇಂದ್ರ ಸಚಿವರಾಗಲಿದ್ದಾರೆ ಎಂಬ ನಿರೀಕ್ಷೆ ಆಗ ಎಲ್ಲೆಡೆ ದಟ್ಟೈಸಿತ್ತು. ಆದರೆ ರಾಜಾರಾಮ ಅವರಿಗೆ ಕೇಂದ್ರ ಸಚಿವ ಸ್ಥಾನಮಾನ ಸಿಗಲಿಲ್ಲ. ಕರ್ನಾಟಕದ ರಾಜಕಾರಣದಲ್ಲಿ ದುಬೆ ಮಹತ್ವದ ಪಾತ್ರ ನಿಭಾಯಿಸುತ್ತಿದ್ದರು.

1957ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತರು. 1962ರಲ್ಲಿ ಮತ್ತೆ ಗೆಲುವು ಸಾಧಿಸಿದರೂ; ಕೇಂದ್ರ ಸಚಿವರಾಗಿರಲಿಲ್ಲ. ನೆಹರೂ ತಮ್ಮ ಆಪ್ತನಿಗೆ ರಾಜಕೀಯ ಸಂಸದೀಯ ಕಾರ್ಯದರ್ಶಿ ಸ್ಥಾನಮಾನ ನೀಡಿದ್ದರು. ಈ ಹುದ್ದೆಯ ಮೂಲಕವೇ ದುಬೆ ಮತ್ತಷ್ಟು ಪ್ರಭಾವಿಯಾಗಿದ್ದರು. ದಕ್ಷಿಣ ಭಾರತದ ಕಾಂಗ್ರೆಸ್‌ ರಾಜಕಾರಣದ ಆಗು–ಹೋಗುಗಳನ್ನು ಗಮನಿಸುತ್ತಿದ್ದರು.

ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿಯಾಗಿದ್ದ ರಾಜಾರಾಮ ದುಬೆಗೆ ಒಮ್ಮೆಯೂ ಕೇಂದ್ರ ಸಚಿವ ಸ್ಥಾನ ಅಲಂಕರಿಸುವ ಅವಕಾಶವೇ ಸಿಗಲಿಲ್ಲ. ದುಬೆ ಪ್ರಭಾವ ವಲಯದಲ್ಲಿ ಹಲ ಯುವ ಮುಖಗಳು ಅವಿಭಜಿತ ವಿಜಯಪುರ ಜಿಲ್ಲಾ ರಾಜಕಾರಣ ಪ್ರವೇಶಿಸಿ, ಅಧಿಕಾರದ ಸ್ಥಾನಮಾನ ಪಡೆದಿದ್ದು, ವಿಜಯಪುರ ಜಿಲ್ಲಾ ರಾಜಕಾರಣದ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಯುವಕನಿಗೆ ಸಚಿವ ಸ್ಥಾನ:

ವಿಜಯಪುರ ಲೋಕಸಭಾ ಕ್ಷೇತ್ರ ಆರಂಭದಿಂದಲೂ ಕಾಂಗ್ರೆಸ್‌, ಪಕ್ಷೇತರ, ಸ್ವತಂತ್ರ ಪಕ್ಷ, ಜನತಾದಳದ ಅಭ್ಯರ್ಥಿಗಳಿಗೆ ಒಲಿದಿತ್ತು. ನಂತರ ಮತ್ತೆ ‘ಕೈ’ ಭದ್ರಕೋಟೆಯಾಗಿತ್ತು.

1999ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ, ಒಂದು ಮತದ ಅಂತರದಿಂದ ಪತನಗೊಂಡ ಬಳಿಕ ನಡೆದ, ಸಾರ್ವತ್ರಿಕ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದ ವಿಜಯಲಕ್ಷ್ಮೀ ಮೊದಲ ಬಾರಿಗೆ ಕಮಲ ಪಾಳೆಯಕ್ಕೆ ಒಲಿಯಿತು.

ವಿಜಯಪುರ ನಗರ ಶಾಸಕರಿದ್ದ ಬಸನಗೌಡ ಪಾಟೀಲ ಯತ್ನಾಳ ಲೋಕಸಭೆಗೆ ಸ್ಪರ್ಧಿಸಿ ಲಕ್ಷ್ಮೀಬಾಯಿ ಗುಡದಿನ್ನಿ ವಿರುದ್ಧ ಗೆಲುವು ದಾಖಲಿಸಿದರು. ಇದಕ್ಕೂ ಮುನ್ನ ಒಮ್ಮೆ ಸೋಲನ್ನಪ್ಪಿದ್ದರು. ಲೋಕಸಭೆಯಲ್ಲಿ ಯುವ ನಾಯಕನಾಗಿ ಗುರುತಿಸಿಕೊಂಡರು. ಚಿಕ್ಕ ವಯಸ್ಸಿನಲ್ಲೇ ಕೇಂದ್ರದ ರಾಜ್ಯ ಖಾತೆಯ ಸಚಿವ ಸ್ಥಾನಮಾನ ಹಲ ಕಾರಣಗಳಿಂದ ಯತ್ನಾಳ ಕೊರಳು ಅಲಂಕರಿಸಿತು.

ಜವಳಿ, ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವರಾಗುವ ಮೂಲಕ ಬಸನಗೌಡ ಪಾಟೀಲ ಯತ್ನಾಳ, ಕೇಂದ್ರದ ಅಧಿಕಾರ ಪಡೆದ ಜಿಲ್ಲೆಯ ಮೊದಲಿಗರಾದರು. ಈ ಮೂಲಕ ಬಿಜೆಪಿ ಜಿಲ್ಲೆಗೆ ಸಚಿವ ಸ್ಥಾನಮಾನ ನೀಡಿದ ಕೀರ್ತಿಗೂ ಭಾಜನವಾಯ್ತು.

2004ರಲ್ಲಿ ನಡೆದ ಚುನಾವಣೆಯಲ್ಲಿ ಬಸನಗೌಡ ಪಾಟೀಲ ಯತ್ನಾಳ ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾದರೂ; ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದಿತು.

ಒಂದೂವರೆ ದಶಕದ ಬಳಿಕ ಮತ್ತೆ ಅಧಿಕಾರ..!

ಗುರುವಿನ ಆಜ್ಞೆ ಪಾಲಿಸಲಿಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಯ ಮೈತ್ರಿಯೊಂದಿಗೆ ಚಿಕ್ಕೋಡಿ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದಿಂದ 1998ರಲ್ಲಿ ಸಂಸದರಾಗಿ ಆಯ್ಕೆಯಾದವರು ರಮೇಶ ಜಿಗಜಿಣಗಿ.

ಆಗಲೇ ಸಚಿವ ಸ್ಥಾನದ ಅವಕಾಶವಿದ್ದರೂ ತನ್ನ ಗುರು ರಾಮಕೃಷ್ಣ ಹೆಗಡೆ ಅವರಿಗೆ ಅದು ಮೀಸಲು ಎಂದು ನಯವಾಗಿ ತಿರಸ್ಕರಿಸಿದವರು ಜಿಗಜಿಣಗಿ. ಚಿಕ್ಕೋಡಿಯಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದವರು ರಮೇಶ.

ವಿಜಯಪುರ ಲೋಕಸಭಾ ಕ್ಷೇತ್ರವನ್ನು ಇದೀಗ ಸತತ ಎರಡನೇ ಬಾರಿಗೆ ಪ್ರತಿನಿಧಿಸಿದ್ದಾರೆ. 2016ರ ಜುಲೈ ಮೊದಲ ವಾರದಲ್ಲೇ ಮೋದಿ ಸಂಪುಟಕ್ಕೆ ಸೇರ್ಪಡೆಯಾಗುವ ಮೂಲಕ ಜಿಲ್ಲೆಯಿಂದ ಕೇಂದ್ರದ ಅಧಿಕಾರ ಪಡೆದ ಎರಡನೇ ವ್ಯಕ್ತಿ ಎಂಬ ಕೀರ್ತಿ ಇವರದ್ದು.

ರಾಜ್ಯ ಸರ್ಕಾರದಲ್ಲಿ ಹಲವು ಸಚಿವ ಖಾತೆ ನಿಭಾಯಿಸಿದ್ದ ರಮೇಶ ಜಿಗಜಿಣಗಿ 18 ವರ್ಷ ಸಂಸದರಷ್ಟೇ. ಯಾವೊಂದು ಅಧಿಕಾರವೂ ಸಿಕ್ಕಿರಲಿಲ್ಲ. ಇದೀಗ ಕೇಂದ್ರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆಯ ಸಚಿವರಾಗಿ ಮೂರು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !