ಸೋಮವಾರ, ಆಗಸ್ಟ್ 26, 2019
27 °C
ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಾಬ್ದಿ ಸಮಾರೋಪ

‘ಸಿಂಹಾಸನ ತ್ಯಜಿಸಿ ಮಹಾರಾಜರಾದ ಒಡೆಯರ್‌’

Published:
Updated:
Prajavani

ಬೆಂಗಳೂರು: ‘ಭಾರತ ಒಕ್ಕೂಟಕ್ಕೆ ಸೇರಲು ಮೊದಲು ಒಪ್ಪಿದ್ದು ಮೈಸೂರು ಸಂಸ್ಥಾನ. ಆಗ, ಜಯಚಾಮರಾಜೇಂದ್ರ ಒಡೆಯರ್‌ ರಾಜರಾಗಿದ್ದರು. ಈ ಕಾರಣಕ್ಕಾಗಿಯೇ, ಒಡೆಯರ್‌ ಅವರನ್ನು ಸಿಂಹಾಸನ ತ್ಯಜಿಸಿ ಮಹಾರಾಜರಾದವರು ಎಂದು ಕುವೆಂಪು ಬಣ್ಣಿಸಿದ್ದರು’ ಎಂಬುದಾಗಿ ಹಿರಿಯ ವಿದ್ವಾಂಸ ಡಾ. ಪ್ರಧಾನ ಗುರುದತ್ತ ಸ್ಮರಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಹಮ್ಮಿಕೊಂಡಿದ್ದ ಜಯಚಾಮರಾಜೇಂದ್ರ ಒಡೆಯರ್‌ ಜನ್ಮಶತಾಬ್ದಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಜನ ತಮ್ಮನ್ನು ತಾವೇ ಆಳಿಕೊಳ್ಳುವಂತೆ ಮಾಡುವ ಉದ್ದೇಶವನ್ನು ಮಹಾರಾಜರು ಈಡೇರಿಸಿದ್ದರು’ ಎಂದರು.

‘ಯಾವುದನ್ನು ತ್ಯಾಗ ಎಂದು ಎಲ್ಲರೂ ಪರಿಗಣಿಸಿದ್ದರೋ ಅದನ್ನು ನಾನು ಮಾಡಿಲ್ಲ. ಸೂಕ್ತರನ್ನು ಆಯ್ಕೆ ಮಾಡುವ ಮೂಲಕ ಜವಾಬ್ದಾರಿ ಸರ್ಕಾರವನ್ನು ಪ್ರಜೆಗಳು ರಚಿಸಿಕೊಳ್ಳಬೇಕು ಎಂಬುದಾಗಿ ಒಡೆಯರ್‌ ಹೇಳಿದ್ದರು’ ಎಂದರು. 

‘ಪರಿಶಿಷ್ಟರನ್ನೂ ಪೊರೆದವರು ಒಡೆಯರ್. ದಲಿತರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡುವಂತೆ ಅವರು ಆದೇಶಿಸಿದ್ದರು. ಭಿಕ್ಷಾಟನೆಯನ್ನು ನಿಷೇಧಿಸಿದ್ದ ಅವರು, ಭಿಕ್ಷುಕರಿಗಾಗಿ ಪುನರ್‌ವಸತಿ ಕೇಂದ್ರಗಳನ್ನು ಸ್ಥಾಪಿಸುವ ದೂರದೃಷ್ಟಿಯನ್ನೂ ಹೊಂದಿದ್ದರು’ ಎಂದು ಗುರುದತ್ತ ಸ್ಮರಿಸಿದರು.

‘ನುಸಿರೋಗಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಂಡ್ಯ ಬಳಿ ನುಸಿರೋಗ ಪರಾವಲಂಬಿ ಪ್ರಯೋಗಾಲಯ ಸ್ಥಾಪಿಸಿದ್ದರು. ಈ ಮಾದರಿಯ ಪ್ರಯೋಗಾಲಯ ದೇಶದಲ್ಲೇ ಮೊದಲು. ಇಂಥ ಜನಪರ ಯೋಜನೆಗಳನ್ನು ರೂಪಿಸಿದ ಕಾರಣದಿಂದಲೇ ಜಯಚಾಮರಾಜೇಂದ್ರ ಒಡೆಯರ್‌ ಅವರನ್ನು ಜನಸಾಮಾನ್ಯರ ಮಹಾರಾಜರು ಎಂದೇ ಕರೆಯಲಾಗುತ್ತಿತ್ತು’ ಎಂದು ನೆನಪಿಸಿಕೊಂಡರು. 

‘ಒಡೆಯರ್‌ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷರು. ಒಡೆಯರ್‌ ಅವರ ಜೀವಿತಾವಧಿಯ ಸಾಧನೆಗಳನ್ನು ಮೆಲುಕು ಹಾಕಲು ಮೈಸೂರಿನಲ್ಲಿ ಪರಿಷತ್‌ ವತಿಯಿಂದ ಜನ್ಮಶತಮಾನೋತ್ಸವ  ಸಮಾರಂಭ ಆಯೋಜಿಸಲಾಗಿತ್ತು. ಅದರ ಸಮಾರೋಪ ಇಲ್ಲಿ ನಡೆಯುತ್ತಿದೆ’ ಎಂದು ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಹೇಳಿದರು. 

 

Post Comments (+)