ಭಾನುವಾರ, ಡಿಸೆಂಬರ್ 8, 2019
21 °C
ಒಬ್ಬರಿಂದ ನಾಮಪತ್ರ ಸಲ್ಲಿಕೆ, ಅವಿರೋಧ ಆಯ್ಕೆ– ಚುನಾವಣಾವಧಿಕಾರಿ ಘೋಷಣೆ

ಚಾಮರಾಜನಗರ ತಾ.ಪಂ: ಶೋಭಾ ನೂತನ ಅಧ್ಯಕ್ಷೆ

Published:
Updated:
Prajavani

ಚಾಮರಾಜನಗರ: ಚಾಮರಾಜನಗರ ತಾಲ್ಲೂಕು ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ತಾಲ್ಲೂಕಿನ ಸಾಗಡೆ ಕ್ಷೇತ್ರದ ಕಾಂಗ್ರೆಸ್‌ ಸದಸ್ಯೆ ಎಚ್.ಎಸ್‌.ಶೋಭಾ ಅವರು ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಕಾಂಗ್ರೆಸ್‌ನವರೇ ಆದ ದೊಡ್ಡಮ್ಮ ಅವರ ರಾಜೀನಾಮೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಬುಧವಾರ ಚುನಾವಣೆ ನಿಗದಿಯಾಗಿತ್ತು.

ಚಾಮರಾಜನಗರ ತಾಲ್ಲೂಕು ಪಂಚಾಯಿತಿಯಲ್ಲಿದ್ದರೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಸಾಗಡೆ ಕ್ಷೇತ್ರದ ಸದಸ್ಯೆ ಎಚ್‌.ಎಸ್‌.ಶೋಭಾ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ, ಚುನಾವಣಾಧಿಕಾರಿಯಾಗಿದ್ದ ನಿಖಿತಾ ಚಿನ್ನಸ್ವಾಮಿ ಅವರು ಶೋಭಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. 

29 ಸದಸ್ಯ ಬಲದ ತಾಲ್ಲೂಕು ಪಂಚಾಯಿತಿಯಲ್ಲಿ ಬಿಜೆಪಿ 17 ಸ್ಥಾನ, ಕಾಂಗ್ರೆಸ್‌ 11 ಹಾಗೂ ವಾಟಾಳ್‌ ಪಕ್ಷ ಒಂದು ಸ್ಥಾನ ಹೊಂದಿವೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿದ್ದು, ಸ್ಪಷ್ಟ ಬಹುಮತ ಹೊಂದಿರುವ ಬಿಜೆಪಿಯಲ್ಲಿ ಈ ವರ್ಗಕ್ಕೆ ಸೇರಿದ ಸದಸ್ಯರು ಇಲ್ಲದಿರುವುದರಿಂದ ಈ ಹುದ್ದೆ ಕಾಂಗ್ರೆಸ್‌ ಪಾಲಾಗಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯವರ್ಗಕ್ಕೆ ಮೀಸಲಾಗಿದ್ದು, ಬಿಜೆಪಿಯ ಜಿ.ಬಸವಣ್ಣ ಉಪಾಧ್ಯಕ್ಷರಾಗಿದ್ದಾರೆ. 

ಐದು ವರ್ಷಗಳ ಆಡಳಿತಾವಧಿಯಲ್ಲಿ ಯಾರೆಲ್ಲ ಅಧ್ಯಕ್ಷರಾಗಬೇಕು ಎನ್ನುವ ಕುರಿತು ಕಾಂಗ್ರೆಸ್‌ನಲ್ಲಿ ಆಂತರಿಕ ಒಪ್ಪಂದ ಆಗಿದೆ. ಅದರಂತೆ ಮೊದಲು ಎಚ್‌.ವಿ.ಚಂದ್ರು ಅಧ್ಯಕ್ಷರಾಗಿದ್ದರು. ಅವರ ನಂತರ ದೊಡ್ಡಮ್ಮ ಅವರು ಹುದ್ದೆ ಅಲಂಕರಿಸಿದ್ದರು. ಅವರ ರಾಜೀನಾಮೆ ನಂತರ ಮೊದಲೇ ನಿರ್ಧಾರವಾದಂತೆ ಶೋಭಾ ಅಧ್ಯಕ್ಷರಾಗಿದ್ದಾರೆ. 

ಬುಧವಾರ ನಡೆದ ಚುನಾವಣೆಯಲ್ಲಿ 29 ಸದಸ್ಯರ ಪೈಕಿ 8 ಸದಸ್ಯರು ಗೈರಾಗಿದ್ದರು. 

ಪ್ರಯತ್ನಪಟ್ಟಿದ್ದ ಚಂದ್ರು
ಎಲ್ಲ ಸದಸ್ಯರೊಂದಿಗೆ ಉತ್ತಮ ಒಡನಾಟ ಹೊಂದಿರುವ ಎಚ್‌.ವಿ.ಚಂದ್ರು ಅವರು ಮತ್ತೆ ಅಧ್ಯಕ್ಷರಾಗಲು ಪ್ರಯತ್ನ ಪಟ್ಟಿದ್ದರು ಎಂದು ಹೇಳುತ್ತವೆ ಮೂಲಗಳು. ಬಿಜೆಪಿ ಸದಸ್ಯರು ಕೂಡ ಚಂದ್ರು ಪರ ಒಲವು ವ್ಯಕ್ತಪಡಿಸಿದ್ದರು ಎಂದು ಗೊತ್ತಾಗಿದೆ. ಜಿಲ್ಲಾ ಕಾಂಗ್ರೆಸ್‌ ಮುಖಂಡರನ್ನು ಭೇಟಿ ಮಾಡಿ ಮನವೊಲಿಸುವ ಕೆಲಸವನ್ನೂ ಚಂದ್ರು ಅವರು ಮಾಡಿದ್ದರು. ಆದರೆ, ಮುಖಂಡರು ಇದಕ್ಕೆ ಅವಕಾಶ ಕೊಡಲಿಲ್ಲ. ಒಪ್ಪಂದಕ್ಕೆ ಬದ್ಧರಾಗುವಂತೆ ಅವರು ಸೂಚಿಸಿದರು ಎಂದು ಗೊತ್ತಾಗಿದೆ. 

ಇದರ ಜೊತೆಗೆ ಸಾಗಡೆ ಕ್ಷೇತ್ರವು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಅಲ್ಲಿನ ಮುಖಂಡರು, ತಮ್ಮ ಕ್ಷೇತ್ರಕ್ಕೆ ಅಧ್ಯಕ್ಷ ಸ್ಥಾನ ಕೊಡಬೇಕು ಎಂದು ಪಟ್ಟು ಹಿಡಿದಿದ್ದರು ಎಂದೂ ತಿಳಿದು ಬಂದಿದೆ.

ಪ್ರತಿಕ್ರಿಯಿಸಿ (+)