‘ಫೇಸ್‌ಬುಕ್‌’ಗೆ ಫೋಟೊ ಹಾಕಿ ಸಿಕ್ಕಿಬಿದ್ದ!

7
ವೈದ್ಯರ ಮನೆಯಲ್ಲಿ ವರ್ಷದಿಂದ ಒಡವೆ ದೋಚುತ್ತಿದ್ದ ಕಾರು ಚಾಲಕ

‘ಫೇಸ್‌ಬುಕ್‌’ಗೆ ಫೋಟೊ ಹಾಕಿ ಸಿಕ್ಕಿಬಿದ್ದ!

Published:
Updated:
Prajavani

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನಾಭರಣ ದೋಚಿದ್ದ ಈತ, ಗೋವಾದಲ್ಲಿ ಗೆಳೆಯರೊಂದಿಗೆ ಮೋಜು–ಮಸ್ತಿ ಮಾಡುವಾಗ ತೆಗೆದಿದ್ದ ಫೋಟೊಗಳನ್ನು ಫೇಸ್‌ಬುಕ್‌ಗೆ ಹಾಕಿ ಕೋರಮಂಗಲ ‍ಪೊಲೀಸರ ಅತಿಥಿಯಾಗಿದ್ದಾನೆ.

ದೇವರಚಿಕ್ಕನಹಳ್ಳಿ ಮುಖ್ಯರಸ್ತೆಯ ಚಾಮುಂಡೇಶ್ವರಿನಗರ ನಿವಾಸಿ ಆನಂದ್ ಕುಮಾರ್ (27) ಬಂಧಿತ ಆರೋಪಿ. ಎಚ್‌ಎಸ್‌ಆರ್‌ ಲೇಔಟ್‌ ನಲ್ಲಿ ಕ್ಲಿನಿಕ್ ಇಟ್ಟುಕೊಂಡಿರುವ ಡಾ.ಮಂಜುನಾಥ್ ಎಂಬುವರ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಈತ, ಅವರ ಮನೆಯ ತಿಜೋರಿಗೇ ಕನ್ನ ಹಾಕಿದ್ದ. ಆನಂದ್‌ನಿಂದ ₹ 14 ಲಕ್ಷ ಮೌಲ್ಯದ 420 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. 

ನಂಬಿಕಸ್ಥ ನೌಕರ: ಚಿತ್ತೂರಿನವನಾದ ಆನಂದ್, ಮೊದಲು ಚಿಕ್ಕಬಳ್ಳಾಪುರದಲ್ಲಿ ನೆಲೆಸಿದ್ದ. ಐದು ವರ್ಷಗಳ ಹಿಂದೆ ವಾಸ್ತವ್ಯವನ್ನು ಬೆಂಗಳೂರಿಗೆ ಬದಲಾಯಿಸಿ, ಪರಿಚಿತರ ಮೂಲಕ ಮಂಜುನಾಥ್ ಅವರ ಬಳಿ ಕೆಲಸಕ್ಕೆ ಸೇರಿಕೊಂಡಿದ್ದ. ಕಾರು ಚಾಲನೆಯ ಜತೆಗೆ, ಮಾಲೀಕರು ಹೇಳಿದ ಸಣ್ಣ–ಪುಟ್ಟ ಕೆಲಸಗಳನ್ನೂ ಅಚ್ಚುಕಟ್ಟಾಗಿ ಮಾಡುವ ಮೂಲಕ ಆರಂಭದಲ್ಲೇ ಇಡೀ ಕುಟುಂಬದ ವಿಶ್ವಾಸ ಗಿಟ್ಟಿಸಿಕೊಂಡಿದ್ದ.

ವೈದ್ಯರು ಎಷ್ಟು ನಂಬಿಕೆ ಇಟ್ಟಿದ್ದರೆಂದರೆ ತಮ್ಮ ಎಟಿಎಂ ಕಾರ್ಡ್‌ನ ಪಾಸ್‌ವರ್ಡನ್ನು ಆತನಿಗೇ ಕೊಟ್ಟು, ಅಗತ್ಯವಿರುವಾಗ ಹಣ ಡ್ರಾ ಮಾಡಿಸುತ್ತಿದ್ದರು. ಜತೆಗೆ, ಮನೆಯ ಒಂದು ಕೀಯನ್ನೂ ಆನಂದ್‌ಗೆ ನೀಡಿದ್ದರು. ಆದರೆ, ಮೋಜಿನ ಜೀವನದ ವ್ಯಾಮೋಹವು ಆ ವಿಶ್ವಾಸಕ್ಕೇ ದ್ರೋಹ ಬಗೆಯಿತು ಎಂದು ಪೊಲೀಸರು ಮಾಹಿತಿ ನೀಡಿದರು.

ಫೇಸ್‌ಬುಕ್‌ನಲ್ಲಿ ಸುಳಿವು: ಇಡೀ ಕುಟುಂಬದ ದಿನಚರಿಗಳನ್ನು ತಿಳಿದುಕೊಂಡಿದ್ದ ಆನಂದ್, ತನ್ನ ಬಳಿ ಇರುವ ಇನ್ನೊಂದು ಕೀಯ ನೆರವಿನಿಂದ ಮಧ್ಯಾಹ್ನದ ವೇಳೆ ಮನೆಗೆ ನುಗ್ಗಿ ಕಳ್ಳತನ ಮಾಡಲು ಸಂಚು ರೂಪಿಸಿದ್ದ. ಎಲ್ಲ ಆಭರಣವನ್ನೂ ಒಮ್ಮೆಲೇ ತೆಗೆದುಕೊಂಡರೆ ಸಿಕ್ಕಿಬೀಳಬಹುದೆಂದು, ವರ್ಷದಿಂದ ಒಂದೊಂದೇ ಒಡವೆ ತೆಗೆದುಕೊಂಡು ಹೋಗಿದ್ದ.

ಆನಂದ್, ತನ್ನ ಮಾಲೀಕರ ಸಂಬಂಧಿಕರು ಹಾಗೂ ಕೆಲ ಸ್ನೇಹಿತರನ್ನೂ ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡಿದ್ದ. ಇತ್ತೀಚೆಗೆ ಗೆಳೆಯರೊಂದಿಗೆ ಗೋವಾ ಪ್ರವಾಸ ಹೋಗಿದ್ದ ಆತ, ಐಷಾರಾಮಿ ಹೋಟೆಲ್‌ಗಳಲ್ಲಿ ತಂಗಿದ್ದಾಗ ಹಾಗೂ ಪಾರ್ಟಿ ಮಾಡುವಾಗ ತೆಗೆದಿದ್ದ ಫೋಟೊಗಳನ್ನು ಅಪ್‌ಲೋಡ್ ಮಾಡಿದ್ದ.

ಅದನ್ನು ನೋಡಿದ್ದ ಮಂಜುನಾಥ್ ಸ್ನೇಹಿತರು, ‘ನೀನು ಚಾಲಕನಿಗೆ ₹ 20 ಸಾವಿರ ಸಂಬಳ ಕೊಡುತ್ತಿದ್ದೀಯಾ. ಆದರೆ, ಆತ ತುಂಬಾ ಐಷಾರಾಮಿ ಜೀವನ ನಡೆಸುತ್ತಿದ್ದಾನೆ. ಅಷ್ಟೊಂದು ಹಣ ಎಲ್ಲಿಂದ ಬರುತ್ತದೆ. ನೀನು ಸ್ವಲ್ಪ ಎಚ್ಚರದಿಂದಿರುವುದು ಒಳ್ಳೆಯದು’ ಎಂದಿದ್ದರು. ಮಂಜುನಾಥ್ ಆರಂಭದಲ್ಲಿ ಆ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದರಾದರೂ, ಪ್ರಶ್ನೆ ಮಾಡಿದರೆ ಆನಂದ್‌ಗೆ ಬೇಸರ ಆಗಬಹುದೆಂದು ಸುಮ್ಮನಾಗಿಬಿಟ್ಟಿದ್ದರು.

ಇದರ ಬೆನ್ನಲ್ಲೇ 2018ರ ನವೆಂಬರ್‌ನಲ್ಲಿ ಮಂಜುನಾಥ್ ಅವರ ಎಟಿಎಂ ಕಾರ್ಡ್ ಕೂಡ ಕಳವಾಯಿತು. ಬ್ಯಾಂಕ್ ಸ್ಟೇಟ್‌ಮೆಂಟ್ ತೆಗೆಸಿದಾಗ ಕೆಲ ದಿನಗಳ ಹಿಂದೆ ₹ 20 ಸಾವಿರ ಡ್ರಾ ಆಗಿರುವುದು ಗೊತ್ತಾಯಿತು. ಕೂಡಲೇ ಅವರು ಕೋರಮಂಗಲ ಠಾಣೆಗೆ ದೂರು ಕೊಟ್ಟಿದ್ದರು. ‘ನೀವು ಯಾರ‍್ಯಾರಿಗೆ ಪಿನ್‌ ನಂಬರ್ ಕೊಟ್ಟಿದ್ದೀರಿ’ ಎಂದು ಪೊಲೀಸರು ಪ್ರಶ್ನೆ ಮಾಡಿದಾಗ ಅವರು ಆನಂದ್‌ನ ಹೆಸರನ್ನೂ ಹೇಳಿದ್ದರು.

ವಿಚಾರಣೆ ನಡೆಸಿದಾಗ ಆತ ಆರಂಭದಲ್ಲಿ ತಪ್ಪೊಪ್ಪಿಕೊಂಡಿರಲಿಲ್ಲ. ಕೊನೆಗೆ ಪೊಲೀಸರು ಪೂರ್ವಾಪರ ಜಾಲಾಡಿದಾಗ ಫೇಸ್‌ಬುಕ್‌ನಲ್ಲಿ ಮೋಜು–ಮಸ್ತಿಯ ಫೋಟೊಗಳು ಸಿಕ್ಕಿದ್ದವು. ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಎಟಿಎಂ ಕಾರ್ಡ್ ಕಳ್ಳತನ ಜತೆಗೆ ವರ್ಷದಿಂದ ಆಭರಣ ಕದಿಯುತ್ತಿದ್ದುದಾಗಿಯೂ ತಪ್ಪೊಪ್ಪಿಕೊಂಡಿದ್ದಾನೆ.

ಮರಳು ದಂಧೆಯ ಆರೋಪಿ

‘ವೈದ್ಯರ ಬಳಿ ಕೆಲಸಕ್ಕೆ ಸೇರುವ ಮೊದಲು ಆರೋಪಿ ಚಿಕ್ಕಬಳ್ಳಾಪುರದಲ್ಲಿ ಮರಳು ದಂಧೆ ನಡೆಸುತ್ತಿದ್ದ. ಈ ಸಂಬಂಧ ಆತನ ವಿರುದ್ಧ ಶಿಡ್ಲಘಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕದ್ದ ಒಡವೆಗಳನ್ನು ಮಾರಿ ಕೆಲವರಿಗೆ ಸಾಲ ಮರಳಿಸಿರುವ ಆನಂದ್, ಉಳಿದ ಹಣವನ್ನು ವೈಭವದ ಜೀವನಕ್ಕೆ ಬಳಸಿದ್ದ’ ಎಂದು ಕೋರಮಂಗಲ ಪೊಲೀಸರು ಹೇಳಿದರು.

ಠಾಣೆಯಿಂದ ಕರೆದೊಯ್ದಿದ್ದ ವೈದ್ಯ

ಆಭರಣ ಒಂದೊಂದಾಗಿ ಕಾಣೆಯಾಗುತ್ತಿದ್ದ ಸಂಗತಿ ವೈದ್ಯರ ಪತ್ನಿಯ ಗಮನಕ್ಕೆ ಬಂದಿತ್ತು. ಅವರು ಮನೆಗೆಲಸದವರನ್ನು ವಿಚಾರಿಸಿದ್ದರೂ ಕಳ್ಳ ಸಿಕ್ಕಿರಲಿಲ್ಲ. ಕೊನೆಗೆ ಕೋರಮಂಗಲ ಠಾಣೆಯ ಮೆಟ್ಟಿಲೇರಿದ್ದರು. ಆಗ ಪೊಲೀಸರು ಅನುಮಾನದ ಮೇಲೆ ಆನಂದ್‌ನನ್ನು ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದ್ದರು.

ಆಗ ಚಾಲಕನ ಪರವಾಗಿಯೇ ವಕಾಲತ್ತು ವಹಿಸಿಕೊಂಡಿದ್ದ ವೈದ್ಯರು, ‘ಸರ್.. ಇವನನ್ನು ಐದು ವರ್ಷದಿಂದ ನೋಡುತ್ತಿದ್ದೇನೆ. ಇವನು ಹಾಗೆ ಮಾಡಿರಲು ಸಾಧ್ಯವೇ ಇಲ್ಲ. ಸುಮ್ಮನೇ ತೊಂದರೆ ಕೊಡಬೇಡಿ’ ಎಂದು ಹೇಳಿ ಆನಂದ್‌ನನ್ನು ಠಾಣೆಯಿಂದ ಕರೆದುಕೊಂಡು ಹೋಗಿದ್ದರು. ಆದರೀಗ, ಆತನೇ ಕಳ್ಳನೆಂಬುದು ಅವರ ಅರಿವಿಗೆ ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !