ಕಾನ್‌ಸ್ಟೆಬಲ್ ದಾಖಲೆ ಕದ್ದು ಸಾಲ!

7

ಕಾನ್‌ಸ್ಟೆಬಲ್ ದಾಖಲೆ ಕದ್ದು ಸಾಲ!

Published:
Updated:

ಬೆಂಗಳೂರು: ವೈಟ್‌ಫೀಲ್ಡ್ ಸಂಚಾರ ಠಾಣೆಯ ಕಾನ್‌ಸ್ಟೆಬಲ್‌ವೊಬ್ಬರ ಪಾನ್‌ಕಾರ್ಡ್ ಹಾಗೂ ಆಧಾರ್ ಕಾರ್ಡ್‌ನ ಮಾಹಿತಿ ಕದ್ದ ದುಷ್ಕರ್ಮಿಯೊಬ್ಬ, ಅವುಗಳನ್ನು ಬಳಸಿಕೊಂಡೇ ಬಸವನಗುಡಿಯ ‘ಗಿರಿಯಾಸ್‌’ ಶೋರೂಂನಲ್ಲಿ ₹ 53 ಸಾವಿರ ಮೌಲ್ಯದ ಎಲೆಕ್ಟ್ರಿಕ್ ಉಪಕರಣಗಳನ್ನು ಖರೀದಿಸಿದ್ದಾನೆ!

ಈ ಸಂಬಂಧ ವೈಟ್‌ಫೀಲ್ಡ್ ಠಾಣೆಗೆ ದೂರು ಕೊಟ್ಟಿರುವ ಕಾನ್‌ಸ್ಟೆಬಲ್ ಸೋಮಶೇಖರ್, ‘ಈ ಕೃತ್ಯದಲ್ಲಿ ಖಾಸಗಿ ಫೈನಾನ್ಸ್ ಕಂಪನಿಯೂ ಶಾಮೀಲಾಗಿರುವ ಸಾಧ್ಯತೆ ಇದೆ’ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್‌ನಲ್ಲಿ ಗೊತ್ತಾಯ್ತು: ಸೋಮಶೇಖರ್ ಅವರು ಸಾಲ ಕೇಳುವ ಸಲುವಾಗಿ ಇತ್ತೀಚೆಗೆ ಎಸ್‌ಬಿಐ ಬ್ಯಾಂಕ್‌ನ ವರ್ತೂರು ಶಾಖೆಗೆ
ಹೋಗಿದ್ದರು. ಅವರ ದಾಖಲೆ ಪರಿಶೀಲಿಸಿದ ವ್ಯವಸ್ಥಾಪಕರು, ‘ನಿಮ್ಮ ಸಿಬಿಲ್ ಸ್ಕೋರ್ 500ಕ್ಕಿಂತ ಕಡಿಮೆ ಇದೆ. ಸಾಲ ಕೊಡಲು ಬರುವುದಿಲ್ಲ’ ಎಂದು ಹೇಳಿದ್ದರು. ‘ನಾನು ಯಾವುದೇ ಸಾಲ ಪಡೆದಿಲ್ಲ. ಹಾಗಿದ್ದರೂ ಹೇಗೆ ಕಡಿಮೆ ಆಯಿತು’ ಎಂದು ಸೋಮಶೇಖರ್ ಪ್ರಶ್ನಿಸಿದ್ದರು.

‘2017ರ ಮಾರ್ಚ್‌ನಲ್ಲಿ ಸಾಲ ಪಡೆದಿರುವ ನೀವು, 2018ರ ಸೆಪ್ಟಂಬರ್‌ನೊಳಗೆ ಪಾವತಿಸಬೇಕಿತ್ತು. ಸಿಬಿಲ್ ಸ್ಕೋರ್ ಬಗ್ಗೆ ಹೆಚ್ಚಿನ ಮಾಹಿತಿ ಬೇಕೆಂದರೆ ‘ಪೈಸಾ ಬಜಾರ್’ ಆ್ಯಪ್‌ನಲ್ಲಿ ಪರಿಶೀಲಿಸಿಕೊಳ್ಳಿ’ ಎಂದು ವ್ಯವಸ್ಥಾಪಕರು ಸಲಹೆ ಕೊಟ್ಟಿದ್ದರು. ಅಂತೆಯೇ ಅವರು ಆ್ಯಪ್‌ನಲ್ಲಿ ಪರಿಶೀಲಿಸಿದಾಗ, ಫೈನಾನ್ಸ್ ಕಂಪನಿಯೊಂದರಿಂದ ಸಾಲ ಪಡೆದಿರುವುದಾಗಿ ತೋರಿಸಿದೆ.

ಕೂಡಲೇ ಅವರು ಆ ಕಂಪನಿಯನ್ನು ಸಂಪರ್ಕಿಸಿದ್ದಾರೆ. ಅವರು, ‘ನೀವು ಗಿರಿಯಾಸ್ ಮಳಿಗೆಗೆ ಹೋದಾಗ, ನಮ್ಮ ಕಂಪನಿಯವರಿಗೆ ದಾಖಲೆ ಕೊಟ್ಟು ಸಾಲ ಪಡೆದಿದ್ದೀರಿ. ಅದರಲ್ಲೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿ ಮಾಡಿದ್ದೀರಿ’ ಎಂದು ಹೇಳಿದ್ದಾರೆ. ಇದರಿಂದ ಕಂಗಾಲಾದ ಸೋಮಶೇಖರ್, ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿ ಅವರ ಸೂಚನೆಯಂತೆ ದೂರು ಕೊಟ್ಟಿದ್ದಾರೆ.

ನಕಲಿ ವಿಳಾಸ: ಸೋಮಶೇಖರ್ ಅವರ ದಾಖಲೆಯ ವಿವರಗಳನ್ನೇ ಕೊಟ್ಟಿರುವ ಆರೋಪಿ, ವಿದ್ಯಾಪೀಠ ಮುಖ್ಯರಸ್ತೆಯ ಕೆಂಪೇಗೌಡ ಲೇಔಟ್‌ನ ವಿಳಾಸ ಕೊಟ್ಟಿದ್ದಾನೆ. ಫೈನಾನ್ಸ್ ಕಂಪನಿಯವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !