ಪರಿಪೂರ್ಣ ಜೈವಿಕ ಗೊಬ್ಬರ ಅಜೋಲ್ಲಾ

7

ಪರಿಪೂರ್ಣ ಜೈವಿಕ ಗೊಬ್ಬರ ಅಜೋಲ್ಲಾ

Published:
Updated:
Prajavani

ಚಿಂತಾಮಣಿ: ಕೃಷಿ ಬೆಳೆಗಳಿಗೆ ಅತ್ಯಂತ ಪರಿಪೂರ್ಣ ಜೈವಿಕ ಗೊಬ್ಬರ ಹಾಗೂ ಜಾನುವಾರುಗಳಿಗೆ ಉತ್ತಮ ಪೌಷ್ಟಿಕಾಂಶಯುಕ್ತ ಆಹಾರ ಅಜೋಲ್ಲಾ. ಅದರ ಉಪಯೋಗದ ಬಗ್ಗೆ ರೈತರಿಗೆ ಕುರುಬೂರಿನ ಕೃಷಿ ವಿಜ್ಞಾನ ಕೇಂದ್ರ(ಕೆ.ವಿ.ಕೆ)ದ ವಿಜ್ಞಾನಿಗಳು ರೈತರಿಗೆ ಹಲವಾರು ಸಲಹೆ ನೀಡಿದ್ದಾರೆ.

ವ್ಯವಸಾಯ ಪರಿಪೂರ್ಣ ಆಗಬೇಕಾದರೆ ಸಸ್ಯಗಳಿಗೆ ಅವಶ್ಯಕವಾದ ಪೋಷಕಾಂಶ ಪೂರೈಸಬೇಕು. ಅವು ಎಂತಹ ಪೋಷಕತ್ವ ಹೊಂದಿವೆ, ಬೆಳೆ ಬೆಳವಣಿಗೆಗೆ ಹಾಗೂ ಇಳುವರಿಯ ದೃಷ್ಟಿಯಿಂದ ಬಹಳ ಮುಖ್ಯವಾದುದು. ಪೋಷಕಾಂಶಗಳಲ್ಲಿ ಸಾವಯವ, ರಾಸಾಯನಿಕ, ಜೈವಿಕ ಅಂಶಗಳನ್ನೂ ಅಜೋಲ್ಲಾ ಹೊಂದಿದೆ. ಇದು ಜೈವಿಕ ಗೊಬ್ಬರಗಳ ಗುಂಪಿಗೆ ಸೇರುತ್ತದೆ.

ಅಜೋಲ್ಲಾ ಅಥವಾ ಹಸಿರು ಪಾಚಿ, ಇದು ನೀರಿನಲ್ಲಿ ತನ್ನ ಬೇರುಗಳನ್ನು ತೇಲಾಡಿಸಿಕೊಂಡು ವಾತಾವರಣದಲ್ಲಿನ ಸಾರಜನಕ ಹೀರಿಕೊಂಡು ಬೆಳೆಯುತ್ತದೆ. ಈ ಸಸ್ಯದ ಕಾಂಡ ಮತ್ತು ಎಲೆಗಳು ಬಹಳ ಚಿಕ್ಕದಾಗಿದ್ದು ಮೃದುವಾಗಿವೆ. ಸಾಮಾನ್ಯವಾಗಿ ನೆಲದ ಮಟ್ಟದಲ್ಲೆ 1, 2 ಸೆಂ.ಮೀನಷ್ಟು ಬೆಳೆಯುತ್ತದೆ.

ಅಜೋಲ್ಲಾ ಸಸ್ಯವನ್ನು ಸಸಿ ಮಡಿ ಅಥವಾ ಭತ್ತದ ಮಡಿಯಲ್ಲಿ ಅಥವಾ ಮಣ್ಣಿನ, ಸಿಮೆಂಟ್ ತೊಟ್ಟಿಗಳಲ್ಲೂ ಬೆಳೆಸಬಹುದು. ಸಸಿ ಮಡಿಯಲ್ಲಿ ಬೆಳೆಸಬೇಕಾದರೆ ಒಂದು ಹೆಕ್ಟೇರ್‌ಗೆ ನೂರು ಚದರ ಮೀಟರ್ ಆಯ್ಕೆ ಮಾಡಿಕೊಳ್ಳಬೇಕು. ಒಂದು ಕಿಲೋ ಗ್ರಾಮ್‌ ಬೂದಿ, 300 ಗ್ರಾಮ್‌ ಪೋಟ್ಯಾಷಿಯಂ ಸಲ್ಫೇಟ್, 100 ಗ್ರಾಮ್‌ ಸೋಡಿಯಂ ಮಾಲಿಬ್ಡೇಟ್ ಹಾಕಿ 5ರಿಂದ 10 ಸೆಂ.ಮೀ ಎತ್ತರದ ವರೆಗೆ ನೀರು ನಿಲ್ಲಿಸಬೇಕು. 120 ಕಿಲೋ ಗ್ರಾಮ್‌ ದನದ ಸಗಣಿಯನ್ನು ನೀರಿನಲ್ಲಿ ಬೆರಸಿ ಮಣ್ಣಿಗೆ ಸೇರಿಸಬಹುದು. ನಂತರ 20-22 ಕಿ.ಗ್ರಾಮ್‌ನಷ್ಟು ಅಜೋಲ್ಲಾ ಸಸ್ಯವನ್ನು ಈ ಪ್ರದೇಶದಲ್ಲಿ ಹರಡಿ ನೀರಿನ ಎತ್ತರವನ್ನು ಸ್ವಲ್ಪ ಕಡಿಮೆಗೊಳಿಸಬೇಕು. ಅಜೋಲ್ಲಾ 10-15 ದಿನಗಳಲ್ಲಿ 250-300 ಕಿ.ಗ್ರಾಂ ಉಪಯೋಗಕ್ಕೆ ಸಿದ್ಧವಾಗಲಿದೆ ಎಂದು ಕೃಷಿ ವಿಜ್ಞಾನಿಗಳಾದ ಜಿ.ಆರ್.ಅರುಣಾ, ಆರ್.ಮಂಜುನಾಥ್ ವಿವರಿಸುವರು.

ಈ ಸಸ್ಯವನ್ನು ಭತ್ತದ ಮಡಿಯಲ್ಲಿ, ಮಣ್ಣಿನ ಅಥವಾ ಸಿಮೆಂಟ್ ತೊಟ್ಟಿಯಲ್ಲೂ ಸಹ ಬೆಳೆಸಬಹುದು. ಭತ್ತದ ಮಡಿಯಲ್ಲಿ ಬೆಳೆಸುವಾಗ ಮಣ್ಣಿನ ರಸಸಾರ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಖರ ಸೂರ್ಯನ ಕಿರಣ ಅಗತ್ಯ. ಆದರೆ ಅತಿ ಹೆಚ್ಚು ನೇರ ಪ್ರಕಾಶಮಾನ ಬೇಕಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆಸಕ್ತ ರೈತರು ಮಾಹಿತಿಗಾಗಿ ಕುರುಬೂರಿನ ಕೃಷಿ ವಿಜ್ಞಾನ ಕೇಂದ್ರ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !