ರಸ್ತೆಗಳಲ್ಲಿ ರಾಗಿ ಕಣ: ಸಂಚಾರಕ್ಕೆ ಅಡ್ಡಿ

7
ತಾಲ್ಲೂಕಿನಲ್ಲಿ ರಾಗಿ ಕಟಾವು ಮುಕ್ತಾಯ

ರಸ್ತೆಗಳಲ್ಲಿ ರಾಗಿ ಕಣ: ಸಂಚಾರಕ್ಕೆ ಅಡ್ಡಿ

Published:
Updated:
Deccan Herald

ಶಿಡ್ಲಘಟ್ಟ: ತಾಲ್ಲೂಕಿನ ಪ್ರಮುಖ ರಸ್ತೆಗಳಲ್ಲಿ ರೈತರು ರಾಗಿಒಕ್ಕಣೆ ಮಾಡುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುವ ಪರಿಸ್ಥಿತಿ ಉಂಟಾಗಿದೆ. 

ಮುಂಚಿತವಾಗಿ ಬಿತ್ತನೆ ಮಾಡಿದವರು ಈಗಾಗಲೇ ರಾಗಿ ಕಟಾವು ಕಾರ್ಯ ಮುಗಿಸಿದ್ದಾರೆ. ಹಿಂದಿನ ಕಾಲದಿಂದಲೂ ರೈತರು ತಮ್ಮ ಹೊಲಗಳಲ್ಲಿ ಕಣ ಮಾಡಿಕೊಂಡು ರಾಗಿಯನ್ನು ಬೇರ್ಪಡಿಸುತ್ತಿದ್ದರು. ಆದರೆ ಆಧುನಿಕತೆ ಹೆಚ್ಚಾದಂತೆ ಕಣ ಮಾಡುವುದನ್ನು ಬಿಟ್ಟು ರಸ್ತೆಯಲ್ಲಿ ಹಾಕಿಕೊಂಡು ರಾಗಿಯನ್ನು ಬೇರ್ಪಡಿಸುತ್ತಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆಗೆ ಒಳಗಾಗುತ್ತಿದ್ದಾರೆ.

ತಾಲ್ಲೂಕಿನ ಮೇಲೂರು-ಗಂಗನಹಳ್ಳಿ ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡಿದ್ದಾರೆ. ‘ಗ್ರಾಮಾಂತರ ಪ್ರದೇಶಗಳಲ್ಲಿನ ಬಹುತೇಕ ರಸ್ತೆಗಳಲ್ಲಿ ರಾಗಿ ಮೆದೆಗಳನ್ನು ತಂದು ಹಾಕಿ ಕಣ ಮಾಡುತ್ತಿರುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಸುಗುಮವಾಗಿ ಸಂಚರಿಸಲು ತೊಂದರೆ ಯಾಗಿದೆ. ರಸ್ತೆಗಳಲ್ಲಿ ರಾಗಿ ಒಕ್ಕಣೆ ಮಾಡುವುದು ಅಪಾಯಕಾರಿ ಎಂಬುದನ್ನು ಅರಿತಿರುವ ರೈತರು ಇದನ್ನು ಗಮನಿಸದೆ ಈ ಕಾರ್ಯದಲ್ಲಿ ತೊಡಗಿಸಿ
ಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು ಗಮನಹರಿಸಬೇಕು’ ಎಂದು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.

ಮುಂಗಾರು ಆರಂಭದಲ್ಲೆ ಬಿತ್ತನೆ ಮಾಡಿರುವಂತಹ ಹೊಲಗಳಲ್ಲಿನ ರಾಗಿತೆನೆ ಸಹಿತ ಮೆದೆಗಳನ್ನು ಕೆಲವು ಹಳ್ಳಿಗಳ ರೈತರು ರಸ್ತೆಗಳಲ್ಲಿ ತಂದು ಉದ್ದಕ್ಕೂ ಹಾಕಿದ್ದಾರೆ. ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ಚಕ್ರಗಳಿಗೆ ಸಿಕ್ಕಿ ರಾಗಿ ಬೇರ್ಪಡುತ್ತದೆ ಎನ್ನುವ ಉದ್ದೇಶದಿಂದ ಹಾಕಿದ್ದಾರೆ. ಇದರಿಂದ ದ್ವಿ ಚಕ್ರ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.

ರಾಗಿ ಮೆದೆಯನ್ನು ಹಾಕಿರುವ ಜಾಗದಲ್ಲಿ ವಾಹನಗಳ ಸಂಚಾರದಿಂದ ರಸ್ತೆಯ ಹೊರಗೆ ಹೋಗಿರುವ ಹುಲ್ಲನ್ನು ಸರಿಪಡಿಸಲೆಂದು ಇರುವ ಕಾರ್ಮಿಕರು ವಾಹನಗಳು ಬರುವುದನ್ನೂ ಗಮನಿಸದೆ, ಅಪಾಯಕ್ಕೆ ಸಿಲುಕಿರುವ ಘಟನೆಗಳೂ ನಡೆದಿವೆ. ಕೆಲವೊಮ್ಮೆ ಹುಲ್ಲಿನ ಮೇಲೆ ಹಾದುಹೋಗುವ ವಾಹನಗಳು ಜಾರಿಕೊಂಡು ಬಂದು ಜನರಿಗೆ ಬಡಿದಿರುವ ಘಟನೆಗಳೂ ನಡೆದಿವೆ ಎಂದರು.

ಗ್ರಾಮಸ್ಥ ಮುನಿರಾಜು ಮಾತನಾಡಿ, ಈ ವರ್ಷದಲ್ಲಿ ಬೆಳೆಗಳು ಸರಿಯಾಗಿ ಆಗಿಲ್ಲ, ಮೊದಲು ಬಿತ್ತನೆ ಮಾಡಿರುವ ಹೊಲಗಳಲ್ಲಿನ ಹರಿ (ರಾಗಿ ಮೆದೆ) ತಂದು ಹಾಕಿಕೊಳ್ಳುತ್ತಿದ್ದಾರೆ. ಹಳ್ಳಿಗಳಲ್ಲಿ ಕೃಷಿ ಇಲಾಖೆಯಿಂದ ಕಣಗಳನ್ನು ಮಾಡಲಿಕ್ಕೆ ಹಣ ಕೊಟ್ಟು ಕಾಂಕ್ರಿಟ್ ಕಣಗಳನ್ನೂ ಮಾಡಿದ್ದಾರೆ. ರೈತರು ಇಂತಹ ಕಣಗಳನ್ನು ಉಪಯೋಗಿಸಿಕೊಳ್ಳುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಗಳು ಕ್ರಮ ವಹಿಸಬೇಕು ಎಂದರು.

ರೈತ ವೆಂಕಟಪ್ಪ ಮಾತನಾಡಿ, ನಾವು ಹೊಲದಲ್ಲಿ ಬಿತ್ತನೆ ಮಾಡಬೇಕಾದರೆ ಒಂದು ಎಕರೆಗೆ ಸುಮಾರು 10 ಸಾವಿರ ಖರ್ಚು ಮಾಡಿದ್ದೇವೆ. ಈಗ ಅಲ್ಪಸ್ವಲ್ಪ ಬೆಳೆ ಮಾತ್ರ ನಮ್ಮ ಕೈಗೆ ಸಿಕ್ಕಿದೆ. ನಾವು ಕಣ ಮಾಡಬೇಕಾದರೆ ಕನಿಷ್ಠ ₹ 5 ಸಾವಿರ ಖರ್ಚು ಮಾಡಬೇಕು, ಟ್ರಾಕ್ಟರ್ ತರಿಸಬೇಕು. ಕಾರ್ಮಿಕರನ್ನು ಹೊಂದಿಸಿಕೊಳ್ಳಬೇಕು. ಇನ್ನೂ ಮಿಷನ್‌ನಲ್ಲಿ ಮಾಡಿಕೊಳ್ಳೋಣವೆಂದರೆ ಅದಕ್ಕೂ ಹಣ ಕೊಡಲೇ ಬೇಕು. ಇಷ್ಟೆಲ್ಲ ಮಾಡಲಿಕ್ಕೆ ಸಾಧ್ಯವಿಲ್ಲದ ಕಾರಣ ನಾವು ಪ್ರತಿ ವರ್ಷ ರಸ್ತೆಯಲ್ಲೆ ಹಾಕಿಕೊಂಡರೆ. ಸಂಜೆಯೊಳಗೆ ರಾಗಿ ಬೇರ್ಪಡುತ್ತದೆ. ಹುಲ್ಲು ಪ್ರತ್ಯೇಕ ಮಾಡಿದರೆ, ರಾಗಿ ಯನ್ನು ಸ್ವಚ್ಛಗೊಳಿಸಿಕೊಂಡು ಮನೆಗೆ ತೆಗೆದುಕೊಂಡು ಹೋಗುತ್ತೇವೆ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !