ಶಾಲಾ ಆವರಣದಲ್ಲಿ ‘ಪೌಷ್ಟಿಕ ತೋಟ’

7
ಅಪೌಷ್ಟಿಕತೆ ನಿವಾರಣೆಗೆ ವಿದ್ಯಾರ್ಥಿಗಳಲ್ಲಿ ತೋಟಗಾರಿಕೆ ಅಭಿರುಚಿ ಮೂಡಿಸಿದ ಯೋಜನೆ; 115 ಶಾಲೆಗಳಲ್ಲಿ ತೋಟ

ಶಾಲಾ ಆವರಣದಲ್ಲಿ ‘ಪೌಷ್ಟಿಕ ತೋಟ’

Published:
Updated:
Prajavani

ಚಿಕ್ಕಬಳ್ಳಾಪುರ: ಈ ಹಿಂದೆ ಫ್ಲೋರೋಸಿಸ್ ಕಾಯಿಲೆ ನಿಯಂತ್ರಿಸುವ ನಿಟ್ಟಿನಲ್ಲಿ ‘ನೆಲ್ಲಿಕಾಯಿ ದಿನಾಚರಣೆ’ಗೆ ಚಾಲನೆ ನೀಡಿದ್ದ ಜಿಲ್ಲಾ ಪಂಚಾಯಿತಿ, ಇದೀಗ ವಿದ್ಯಾರ್ಥಿಗಳಲ್ಲಿ ಪೌಷ್ಟಿಕಾಂಶದ ಅರಿವು ಮೂಡಿಸುವ ಉದ್ದೇಶದಿಂದ ಪ್ರಾಥಮಿಕ, ಪ್ರೌಢ ಶಾಲೆಗಳ ಆವರಣದಲ್ಲಿ ‘ಪೌಷ್ಟಿಕ ತೋಟ’ ನಿರ್ಮಾಣಕ್ಕೆ ಮುಂದಾಗಿದೆ.

ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟಕ್ಕೆ ಅಗತ್ಯವಾದ ಪೌಷ್ಟಿಕಾಂಶಯುಕ್ತ ತರಕಾರಿಗಳನ್ನು ಶಾಲೆಗಳ ಆವರಣದಲ್ಲಿಯೇ ವಿದ್ಯಾರ್ಥಿಗಳ ಸಹಾಯದೊಂದಿಗೆ ಬೆಳೆಯುವುದು ಮತ್ತು ಪೌಷ್ಟಿಕಾಂಶ ಉಳ್ಳ ಹಣ್ಣಿನ ಗಿಡಗಳನ್ನು ಪೋಷಣೆ ಮಾಡುವುದು ಈ ಯೋಜನೆಯ ಉದ್ದೇಶ.

ವಿದ್ಯಾರ್ಥಿಗಳಲ್ಲಿನ ಅಪೌಷ್ಟಿಕತೆ ತೊಡೆದು ಹಾಕುವ ಉದ್ದೇಶದಿಂದ ಜಿಲ್ಲಾ ಪಂಚಾಯಿತಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿ ಇಂತಹದೊಂದು ವಿನೂತನ ಕಾರ್ಯಕ್ರಮ ಹಮ್ಮಿಕೊಂಡು, ಇದರ ಜವಾಬ್ದಾರಿಯನ್ನು ತೋಟಗಾರಿಕೆ ಮತ್ತು ಶಿಕ್ಷಣ ಇಲಾಖೆಗೆ ವಹಿಸಿದೆ.

ಜಿಲ್ಲೆಯಲ್ಲಿ ಈಗಾಗಲೇ ನರೇಗಾ ಅಡಿಯಲ್ಲಿ ಆದ್ಯತೆ ಮೆರೆಗೆ ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಇನ್ನೊಂದೆಡೆ ಕಾಂಪೌಂಡ್ ಮತ್ತು ನೀರಿನ ವ್ಯವಸ್ಥೆ ಹೊಂದಿರುವಂತಹ ಶಾಲೆಗಳ ಆವರಣದಲ್ಲಿ ‘ಪೌಷ್ಟಿಕ ತೋಟ’ ರೂಪಿಸುವ ಕಾರ್ಯ ನಡೆಯುತ್ತಿದೆ. ಪ್ರಸ್ತುತ ಜಿಲ್ಲೆಯ 115 ಶಾಲೆಗಳ ಆವರಣದಲ್ಲಿ ಈ ತೋಟ ಮೈದಳೆಯಲಿದೆ. ಈಗಾಗಲೇ 71 ಕಡೆಗಳಲ್ಲಿ ತೋಟದಲ್ಲಿ ವಿವಿಧ ಹಣ್ಣಿನ ಸಸಿಗಳನ್ನು ನಾಟಿ ಮಾಡಲಾಗಿದೆ.

‘ಜಿಲ್ಲೆಯಲ್ಲಿ ದೊರೆಯುವ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಜಾಸ್ತಿ ಇದೆ. ಅದನ್ನು ಕಡಿಮೆ ಮಾಡಲು ವಿದ್ಯಾರ್ಥಿಗಳು ಹೆಚ್ಚಾಗಿ ನಿಂಬೆ, ಹುಣಸೆ ಹಣ್ಣು ಬಳಸಬೇಕು. ಮಕ್ಕಳಲ್ಲಿ ಪೌಷ್ಟಿಕಾಂಶದ ಸಮತೋಲನವಿರಬೇಕಾದ ಕೆಲ ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಪೌಷ್ಟಿಕ ತೋಟ ರೂಪಿಸುತ್ತಿದ್ದೇವೆ. ಇಂತಹ ಯೋಜನೆ ಬೇರೆ ಎಲ್ಲಿಯೂ ಅನುಷ್ಠಾನಗೊಳಿಸಿರುವುದು ಕಂಡಿಲ್ಲ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವಣ್ಣ ರೆಡ್ಡಿ ತಿಳಿಸಿದರು.

‘ಶಾಲೆಯ ಆವರಣದ ವಿಸ್ತೀರ್ಣ ಆಧರಿಸಿ ನಾವು ತೋಟ ರೂಪಿಸುತ್ತಿದ್ದೇವೆ. ತೋಟದಲ್ಲಿ ನೇರಳೆ, ಪೇರಲ, ಮಾವು, ಚಿಕ್ಕು, ನಿಂಬೆ, ನೆಲ್ಲಿ, ನುಗ್ಗೆ ಸೇರಿದಂತೆ ವಿವಿಧ ಪೌಷ್ಟಿಕಾಂಶಯುಕ್ತ ಹಣ್ಣಿನ 15 ರಿಂದ 35ರ ವರೆಗೆ ಸಸಿಗಳನ್ನು ಪ್ರತಿ ಶಾಲೆಯ ತೋಟದಲ್ಲಿ ನಾಟಿ ಮಾಡುತ್ತಿದ್ದೇವೆ. ಪ್ರತಿ ತೋಟಕ್ಕೆ ತಲಾ ₹12 ರಿಂದ ₹19 ಸಾವಿರದವರೆಗೆ ನರೇಗಾ ಯೋಜನೆ ಅಡಿ ಖರ್ಚು ಮಾಡುತ್ತಿದ್ದೇವೆ’ ಎಂದು ಹೇಳಿದರು.

‘ಈ ಹಿಂದೆ ಶಾಲೆಗಳಲ್ಲಿ ಕೈತೋಟ ಬೆಳೆಸುವ ಪರಿಕಲ್ಪನೆ ಇತ್ತು. ಆದರೆ ಇವತ್ತಿನ ಮಕ್ಕಳಿಗೆ ಗಿಡಗಳು ಎಲ್ಲಿ, ಹೇಗೆ ಬೆಳೆಯುತ್ತವೆ ಎನ್ನುವ ಕಲ್ಪನೆಯೇ ಇಲ್ಲದಂತಾಗಿದೆ. ಸರ್ಕಾರ ಅಪೌಷ್ಟಿಕತೆ ನಿವಾರಣೆಗಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆ ನಿಟ್ಟಿನಲ್ಲಿ ನಾವು ಈ ವಿನೂತನ ಯೋಜನೆ ಕೈಗೆತ್ತಿಕೊಂಡಿದ್ದೇವೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಮಂಜುನಾಥ್ ಹೇಳಿದರು.

‘ನಾವು ನರೇಗಾ ಅಡಿ ತೋಟಗಾರಿಕೆ ಇಲಾಖೆ ವತಿಯಿಂದ ತೋಟ ರೂಪಿಸಿ ಶಾಲೆಯ ಮುಖ್ಯಶಿಕ್ಷಕರಿಗೆ ಹಸ್ತಾಂತರಿಸುತ್ತೇವೆ. ಅದರಲ್ಲಿ ವಿದ್ಯಾರ್ಥಿಗಳು ವಾರದಲ್ಲಿ ಒಂದೆರಡು ದಿನ ಪಠ್ಯೇತರ ಚಟುವಟಿಕೆ ಭಾಗವಾಗಿ ತರಕಾರಿ ಬೆಳೆಯಬೇಕು. ಅವುಗಳನ್ನು ಬಿಸಿಯೂಟಕ್ಕೆ ಬಳಸಬೇಕು. ಜತೆಗೆ ತೋಟದಲ್ಲಿ ಸಿಗುವ ಹಣ್ಣುಗಳನ್ನು ವಿದ್ಯಾರ್ಥಿಗಳಿಗೆ ತಿನ್ನಲು ನೀಡಬೇಕು ಎನ್ನುವುದು ನಮ್ಮ ಉದ್ದೇಶ’ ಎಂದು ತಿಳಿಸಿದರು.

*
ಮಕ್ಕಳಲ್ಲಿ ಕೃಷಿ, ತೋಟಗಾರಿಕೆಗೆ ಬಗ್ಗೆ ಅರಿವು, ಅಭಿರುಚಿ ಮೂಡಬೇಕು. ಜತೆಗೆ ಅಪೌಷ್ಟಿಕತೆಯೂ ನಿವಾರಣೆ ಯಾಗಬೇಕು ಎನ್ನುವ ಉದ್ದೇಶವಿದೆ.
-ಎಚ್.ವಿ.ಮಂಜುನಾಥ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !