730 ಎಕರೆಯಲ್ಲಿ ಮೇವಿನ ಬೆಳೆ

ಭಾನುವಾರ, ಏಪ್ರಿಲ್ 21, 2019
32 °C
‘ಸಮೃದ್ಧ ಮೇವು, ಗೋವುಗಳ ನಲಿವು’ ಯೋಜನೆ; ಸಂಕಷ್ಟಕ್ಕೆ ಪರಿಹಾರ

730 ಎಕರೆಯಲ್ಲಿ ಮೇವಿನ ಬೆಳೆ

Published:
Updated:
Prajavani

ಚಿಕ್ಕಬಳ್ಳಾಪುರ: ಬೇಸಿಗೆಯಲ್ಲಿ ಎದುರಾಗಬಹುದಾದ ಮೇವಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ನೆರೆಯ ಕೋಲಾರದ ಮಾದರಿಯಲ್ಲಿ ಹಸಿರು ಮೇವು ಬೆಳೆಯಲು ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆರಂಭಿಸಿದ ‘ಸಮೃದ್ಧ ಮೇವು, ಗೋವುಗಳ ನಲಿವು’ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಯೋಜನೆಗೆ ಫೆಬ್ರುವರಿ 18 ರಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅವರು ಚಾಲನೆ ನೀಡಿದ್ದರು. ಈ ಯೋಜನೆ ಅಡಿ ಅರ್ಜಿ ಸಲ್ಲಿಸಲು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ರೈತರಿಗೆ ಮಾರ್ಚ್‌ 26ರ ವರೆಗೆ ಕಾಲಾವಕಾಶ ನೀಡಿತ್ತು.

ಈ ಅವಧಿಯಲ್ಲಿ ಜಿಲ್ಲೆಯಲ್ಲಿ ‘ಸಮೃದ್ಧ ಮೇವು, ಗೋವುಗಳ ನಲಿವು’ ಯೋಜನೆಗೆ 1,357 ರೈತರು ಹೆಸರು ನೋಂದಾಯಿಸಿಕೊಂಡಿದ್ದರು. ಆ ಪೈಕಿ 342 ಅರ್ಜಿಗಳು ತಿರಸ್ಕಾರಗೊಂಡಿದ್ದವು. 712 ರೈತರ ಅರ್ಜಿಗಳನ್ನು ಅನುಮೋದಿಸಿ ಅವರಿಗೆ ಇಲಾಖೆ ವತಿಯಿಂದ ಉಚಿತವಾಗಿ ಮೇವಿನ ಬೀಜದ ಕಿಟ್ ವಿತರಿಸಲಾಗಿತ್ತು.

ಪ್ರಸ್ತುತ 712 ರೈತರು ವಿವಿಧ ಹಂತಗಳಲ್ಲಿ 393 ಎಕರೆಯಲ್ಲಿ ಮೇವಿನ ಮೆಕ್ಕೆಜೋಳ (ಎಟಿಎಂ) ಮತ್ತು 338 ಎಕರೆಯಲ್ಲಿ ಸಣ್ಣ ಜೋಳ (ಎಸ್‌ಎಸ್‌ಜಿ) ಹೀಗೆ ಒಟ್ಟು 730 ಎಕರೆಯಲ್ಲಿ ಮೇವು ಬೆಳೆಯುತ್ತಿದ್ದಾರೆ. ಇನ್ನೂ 303 ರೈತರಿಗೆ ಮೇವಿನ ಬೀಜ ಬಿತ್ತನೆಗೆ ಏಪ್ರಿಲ್ 10ರ ವರೆಗೆ ಗಡುವು ನೀಡಲಾಗಿದೆ.

ಈ ಯೋಜನೆ ಅಡಿ ಮೇವು ಬೆಳೆಯುವ ರೈತರಿಗೆ ಪ್ರತಿ ಒಂದು ಎಕರೆಗೆ ಜಿಲ್ಲಾಡಳಿತದ ವತಿಯಿಂದ ₹3 ಸಾವಿರ, ಮತ್ತು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ಕಡೆಯಿಂದ ₹2 ಸಾವಿರದಂತೆ ಒಟ್ಟು ₹5 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ.

‘ಬೇಸಿಗೆಯಲ್ಲಿ ಮೇವಿನ ಅಗತ್ಯ ಪೂರೈಸುವ ನಿಟ್ಟಿನಲ್ಲಿ ಈ ಯೋಜನೆ ಆರಂಭಿಸಲಾಗಿದೆ. ನೀರಾವರಿ ವ್ಯವಸ್ಥೆ ಇರುವ ರೈತರಿಗೆ ಮೇವು ಬೆಳೆಯಲು ಉಚಿತವಾಗಿ ಆಫ್ರಿಕನ್‌ ಟಾಲ್‌ ಮತ್ತು ಕೆಂಪು ಮುಸುಕಿನ ಜೋಳದ ಬಿತ್ತನೆ ಬೀಜ ವಿತರಿಸಲಾಗಿದೆ’ ಎಂದು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಮಧುರನಾಥರೆಡ್ಡಿ ಹೇಳಿದರು.

'ಮೇವಿನ ಮೇಲ್ವಿಚಾರಣೆಗಾಗಿ ಒಂದು ಸಮಿತಿ ರಚಿಸಲಾಗುತ್ತದೆ. ಆ ಸಮಿತಿ ಸದಸ್ಯರು ರೈತರು ಮೇವು ಬೆಳೆಯುವ ಜಮೀನಿಗೆಗೆ ಮೂರು ಹಂತಗಳಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡುತ್ತಾರೆ. ಆ ಬಳಿಕವಷ್ಟೇ ರೈತರಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡಲಾಗುತ್ತದೆ’ ಎಂದು ತಿಳಿಸಿದರು.

‘ಮೇವು ಬೆಳೆದವರು ತಮ್ಮ ಅಗತ್ಯಕ್ಕೆ ಸಾಕಾಗಿ ಮಿಕ್ಕಿ ಉಳಿಯುವ ಮೇವನ್ನು ಹೊರ ರಾಜ್ಯ ಮತ್ತು ಬೇರೆ ಜಿಲ್ಲೆಗಳಿಗೆ ಮಾರುವಂತಿಲ್ಲ. ಸ್ಥಳೀಯ ರೈತರಿಗೆ ಅಥವಾ ಭೂರಹಿತ ಹೈನುದಾರರಿಗೆ ಮಾರಾಟ ಮಾಡಬೇಕು ಎಂದು ಇಲಾಖೆ ಕರಾರು ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಸಮೃದ್ಧ ಮೇವು, ಗೋವುಗಳ ನಲಿವು’ ಯೋಜನೆ ವಿವರ

ತಾಲ್ಲೂಕು ಸ್ವೀಕೃತ ಅರ್ಜಿ ಅನುಮೋದನೆ ಮೇವು ಬೆಳೆದ ಪ್ರದೇಶ ತಿರಸ್ಕಾರ ಬಾಕಿ ಅರ್ಜಿ

ಗುಡಿಬಂಡೆ 53 16 22.09 2 35

ಗೌರಿಬಿದನೂರು 656 337 365.37 254 65

ಚಿಂತಾಮಣಿ 122 64 64.22 13 45

ಚಿಕ್ಕಬಳ್ಳಾಪುರ 183 122 72.18 48 13

ಬಾಗೇಪಲ್ಲಿ 121 81 108.08 0 40

ಶಿಡ್ಲಘಟ್ಟ 122 92 96.27 25 105

ಒಟ್ಟು 1,357 712 730.01 342 330

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !