ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಪ್ರಸನ್ನ ಕುಮಾರ್ ಹೆಸರಿನಲ್ಲೇ ಉಳಿದ ದಾಖಲೆ

ಶನಿವಾರ, ಏಪ್ರಿಲ್ 20, 2019
29 °C
1980ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌(ಐ) ಅಭ್ಯರ್ಥಿ 1.46 ಲಕ್ಷ ಮತಗಳ ಅಂತರದ ಗೆಲುವು

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಪ್ರಸನ್ನ ಕುಮಾರ್ ಹೆಸರಿನಲ್ಲೇ ಉಳಿದ ದಾಖಲೆ

Published:
Updated:
Prajavani

ಚಿಕ್ಕಬಳ್ಳಾಪುರ: ಚುನಾವಣೆಯಲ್ಲಿ ಅಭ್ಯರ್ಥಿಯ ಗೆಲುವಿನ ಮತಗಳ ಅಂತರವು ಅಭ್ಯರ್ಥಿ ಹಾಗೂ ಪಕ್ಷದ ಮೇಲೆ ಕ್ಷೇತ್ರದ ಮತದಾರರ ಒಲವು ಎಷ್ಟಿದೆ ಎಂಬುದನ್ನು ಸಾರುತ್ತದೆ. ಭಾರಿ ಪ್ರಮಾಣದ ಗೆಲುವಿನ ಅಂತರವು ಅಭ್ಯರ್ಥಿಯ ಪ್ರತಿಷ್ಠೆ ಹೆಚ್ಚಿಸಿದರೆ, ಅಲ್ಪ ಪ್ರಮಾಣದ ಮತಗಳ ಅಂತರದ ಸೋಲು ತಾನು ಎಡವಿದ್ದು ಎಲ್ಲಿ ಎಂಬ ಆತ್ಮಾವಲೋಕನಕ್ಕೆ ಎಡೆ ಮಾಡಿಕೊಡುತ್ತದೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಈವರೆಗೆ ಒಟ್ಟು 11 ಚುನಾವಣೆಗಳು ನಡೆದಿವೆ. 1980ರಲ್ಲಿ ನಡೆದ ಚುನಾವಣೆಯಲ್ಲಿ 1,46,943 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌(ಐ) ಅಭ್ಯರ್ಥಿ ಎಸ್.ಎನ್.ಪ್ರಸನ್ನ ಕುಮಾರ್ ಅವರ ದಾಖಲೆಯನ್ನು ಮುರಿಯಲು ಇದುವರೆಗೆ ಮತ್ತೆ ಯಾರಿಂದಲೂ ಸಾಧ್ಯವಾಗಿಲ್ಲ.

ಅವಿಭಜಿತ ಕೋಲಾರ ಜಿಲ್ಲೆಯ ಭಾಗವಾಗಿದ್ದ ಚಿಕ್ಕಬಳ್ಳಾಪುರ 2008ರಲ್ಲಿ ನೂತನ ಜಿಲ್ಲೆಯಾಗಿ ರೂಪುಗೊಂಡಿತು. ಈ ಹಿಂದೆ ಕೋಲಾರ ಮತ್ತು ಮಧುಗಿರಿ ಲೋಕಸಭಾ ಕ್ಷೇತ್ರಗಳ ಭಾಗವಾಗಿದ್ದ ಚಿಕ್ಕಬಳ್ಳಾಪುರ 1977ರಲ್ಲಿ ಸ್ವತಂತ್ರ ಲೋಕಸಭಾ ಕ್ಷೇತ್ರವಾಗಿ ರೂಪುಗೊಂಡಿತು.

‘ತುರ್ತು ಪರಿಸ್ಥಿತಿ’ಯ ಸಂಕೋಲೆಯಿಂದ ಭಾರತ ಹೊರ ಬಂದ ಬಳಿಕ 1977ರಲ್ಲಿ ಚುನಾವಣೆಯ ಕಾವು ದೇಶದಾದ್ಯಂತ ವ್ಯಾಪಿಸಿತ್ತು. ಆಗ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ವಿ. ಕೃಷ್ಣಪ್ಪ ಅವರು ಭಾರತೀಯ ಲೋಕ ದಳದ ಅಭ್ಯರ್ಥಿ ಜಿ.ನಾರಾಯಣಗೌಡ ಅವರನ್ನು ಪರಾಭವಗೊಳಿಸಿ ಗೆಲುವಿನ ನಗೆ ಚೆಲ್ಲಿದ್ದರು.

ದೇಶದಲ್ಲಿ ಸಂವಿಧಾನವನ್ನು ಬುಡಮೇಲು ಮಾಡಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದ ಇಂದಿರಾ ಗಾಂಧಿಯವರಿಗೆ 1977ರ ಲೋಕಸಭಾ ಚುನಾವಣೆಯಲ್ಲಿ ಮತದಾರ ಗಂಭೀರ ರಾಜಕೀಯ ಆಘಾತ ನೀಡಿದ್ದ. ನಂತರ ಕೇಂದ್ರದಲ್ಲಿ ಅಧಿಕಾರ ಸೂತ್ರ ಹಿಡಿದ ಜಯಪ್ರಕಾಶ್‌ ನಾರಾಯಣ್‌ ಅವರ ಚಿಂತನೆಯ ಪ್ರಪ್ರಥಮ ಕಾಂಗ್ರೆಸ್ಸೇತರ, ಜನತಾ ಪಕ್ಷ ಸರ್ಕಾರ ಪರಸ್ಪರ ಸೈದ್ಧಾಂತಿಕ ಸಂಘರ್ಷದಿಂದ ಕೇವಲ ಮೂರು ವರ್ಷಗಳಲ್ಲಿ ಪತನಗೊಂಡಿತು.

ಪರಿಣಾಮ, 1980ರಲ್ಲಿ ಲೋಕಸಭೆಗೆ ಮಧ್ಯಂತರ ಚುನಾವಣೆ ಅನಿವಾರ್ಯವಾಗಿತ್ತು. ಇಂದಿರಾ ಗಾಂಧಿ ಜತೆಗಿನ ವೈಮನಸ್ಸಿನಿಂದಾಗಿ ಮುಖ್ಯಮಂತ್ರಿ ದೇವರಾಜ ಅರಸು ಅವರು ರಾಜ್ಯದಲ್ಲಿ ಕಟ್ಟಿದ್ದ ತಮ್ಮದೇ ಆದ ಕಾಂಗ್ರೆಸ್‌ (ಯು) ಎಂಬ ಪ್ರತ್ಯೇಕ ಪಕ್ಷ ಮತ್ತು ಇಂದಿರಾ ಕಾಂಗ್ರೆಸ್‌ (ಐ) ನಡುವೆ ಈ ಚುನಾವಣೆಯಲ್ಲಿ ಪೈಪೋಟಿ ನಡೆಯಿತು.

1980ರ ಲೋಕಸಭೆ ಚುನಾವಣೆಯಲ್ಲಿ ಭಾರತದಾದ್ಯಂತ ಇಂದಿರಾ ಪ್ರಾಯೋಜಕತ್ವದ ಕಾಂಗ್ರೆಸ್‌ಗೆ ಅಖಂಡ ಬೆಂಬಲ ವ್ಯಕ್ತವಾಗಿತ್ತು. ಅರಸು ನೇತೃತ್ವದ ಕಾಂಗ್ರೆಸ್ ದಯನೀಯ ಪರಾಭವ ಅನುಭವಿಸಿತ್ತು. ಆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಧುಗಿರಿಯ ಮುನ್ಸಿಫಲ್‌ನ ಮಾಜಿ ಅಧ್ಯಕ್ಷ ಎಸ್.ಎನ್.ಪ್ರಸನ್ನ ಕುಮಾರ್ ಅವರು ಕಾಂಗ್ರೆಸ್‌ (ಐ) ಅಭ್ಯರ್ಥಿಯಾಗಿ 2,34,172 ಮತಗಳನ್ನು ಗಳಿಸುವ ಮೂಲಕ ವಿರೋಚಿತ ಗೆಲುವು ದಾಖಲಿಸಿದ್ದರು.

ಆ ಚುನಾವಣೆಯಲ್ಲಿ ಪ್ರಸನ್ನಕುಮಾರ್ ಅವರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಅರಸು ಕಾಂಗ್ರೆಸ್‌ ಅಭ್ಯರ್ಥಿ ಎಂ.ವಿ.ಕೃಷ್ಣಪ್ಪ ಅವರು ಕೇವಲ 67 ಸಾವಿರ ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಜನತಾ ಪಕ್ಷದ ಅಭ್ಯರ್ಥಿ ಲಕ್ಷ್ಮಿ ನರಸಿಂಹಯ್ಯ ಅವರು 87 ಸಾವಿರ ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನ ಕಾಯ್ದುಕೊಂಡಿದ್ದರು.

ಕಾಂಗ್ರೆಸ್‌ ಇಬ್ಭಾಗವಾಗಿ ಮತಗಳು ಹಂಚಿ ಹೋಗಿದ್ದರೂ ಇಷ್ಟೊಂದು ಪ್ರಮಾಣದ ಅಂತರದಲ್ಲಿ ಗೆದ್ದಿರುವುದು ಇಂದಿರಾ ಗಾಂಧಿಯ ಅಲೆ ಎಷ್ಟಿತ್ತು ಎಂಬುದನ್ನು ಸೂಚಿಸುತ್ತದೆ. ಆದರೆ, ಮುಂದಿನ ಚುನಾವಣೆಗಳಲ್ಲಿ ಪ್ರಸನ್ನಕುಮಾರ್‌ ಅವರು ವೈಯಕ್ತಿಕ ಕಾರಣಗಳಿಗಾಗಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿದರು ಎಂಬುದೂ ವಿಶೇಷ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರಸನ್ನಕುಮಾರ್‌ ಅವರನ್ನು ಹೊರತುಪಡಿಸಿದಂತೆ ಎಂ.ವಿ. ಕೃಷ್ಣಪ್ಪ ಅವರು ಅತಿ ಹೆಚ್ಚು ಅಂತರಗಳಲ್ಲಿ ಗೆದ್ದವರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. 1977ರ ಚುನಾವಣೆಯಲ್ಲಿ ಭಾರತೀಯ ಲೋಕ ದಳದ ಅಭ್ಯರ್ಥಿಯಾಗಿದ್ದ ಜಿ.ನಾರಾಯಣಗೌಡ ಅವರನ್ನು ಕೃಷ್ಣಪ್ಪ ಅವರು 48,474 ಮತಗಳ ಅಂತರದಿಂದ ಸೋಲಿಸಿದ್ದರು.

ಈ ಕ್ಷೇತ್ರದಲ್ಲಿ ಮೂರನೆಯವರಾಗಿ ಅತಿ ಹೆಚ್ಚು ಮತ ಪಡೆದ ಹೆಗ್ಗಳಿಕೆ ವಿ. ಕೃಷ್ಣ ರಾವ್ ಅವರದು. 1984 ಜನತಾಪಕ್ಷದ ಹುರಿಯಾಳು ಆರ್‌.ಎಲ್.ಜಾಲಪ್ಪ ಅವರನ್ನು ಕೃಷ್ಣರಾವ್ ಅವರು ಶೇ 50.6 ಮತ ಪಡೆಯುವ ಮೂಲಕ ಪರಾಭವಗೊಳಿಸಿದ್ದರು. ನಂತರ ನಡೆದ ಚುನಾವಣೆಗಳಲ್ಲಿ ಗೆಲುವಿನ ಮತಗಳ ಅಂತರ ಇಳಿಮುಖವಾಗುತ್ತಲೇ ಬಂದಿದೆ. 2014 ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಂ. ವೀರಪ್ಪ ಮೊಯಿಲಿ ಅವರು ಶೇ 33.6 ಮತ ಪಡೆದರೆ, ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಅವರು ಶೇ 32.9 ರಷ್ಟು ಮತ ಪಡೆದಿದ್ದರು.

ಈ ಬಾರಿ ಜಿಲ್ಲೆಯಲ್ಲಿ ಸಮ್ಮಿಶ್ರ ಸರ್ಕಾರದ ಮೈತ್ರಿ ಅಭ್ಯರ್ಥಿಯಾಗಿ ವೀರಪ್ಪ ಮೊಯಿಲಿ ಅವರು ಕಣಕ್ಕೆ ಇಳಿಸಲಾಗಿದೆ. ಇತ್ತ ಬಿಜೆಪಿ ಎರಡನೇ ಬಾರಿಗೆ ಬಿ.ಎನ್.ಬಚ್ಚೇಗೌಡರನ್ನೇ ಅಭ್ಯರ್ಥಿಯನ್ನಾಗಿ ಮಾಡಿದೆ. ಹೀಗಾಗಿ ಈ ಬಾರಿ ಮೊಯಿಲಿ ಮತ್ತು ಬಚ್ಚೇಗೌಡರ ನಡುವೆ ನೇರ ಹಣಾಹಣಿ ನಡೆಯಲಿದೆ. ಕಳೆದ ಬಾರಿ ಮೊಯಿಲಿ ಅವರು ಬಚ್ಚೇಗೌಡರನ್ನು 9,520 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿಯ ಫಲಿತಾಂಶ ಏನಾಗಲಿದೆಯೋ ಕಾಯ್ದು ನೋಡಬೇಕಿದೆ.

ವಿಜೇತ ಅಭ್ಯರ್ಥಿಗಳ ಗೆಲುವಿನ ಅಂತರದ ಮಾಹಿತಿ

ವರ್ಷ       ಅಭ್ಯರ್ಥಿ          ಪಕ್ಷ       ಮತಗಳು   ಶೇಕಡಾವಾರು

1977  ಎಂ.ವಿ. ಕೃಷ್ಣಪ್ಪ   ಕಾಂಗ್ರೆಸ್  2,07,589  50.8

1980  ಎಸ್.ಎನ್.ಪ್ರಸನ್ನ ಕುಮಾರ್ ಕಾಂಗ್ರೆಸ್ (ಐ) 2,34,172  57.4

1984  ವಿ. ಕೃಷ್ಣ ರಾವ್   ಕಾಂಗ್ರೆಸ್  2,82,279  50.6

1989  ವಿ. ಕೃಷ್ಣ ರಾವ್   ಕಾಂಗ್ರೆಸ್  3,67,638  50.5

1991  ವಿ. ಕೃಷ್ಣ ರಾವ್   ಕಾಂಗ್ರೆಸ್  3,09,614  46.4

1996  ಆರ್.ಎಲ್.ಜಾಲಪ್ಪ ಜನತಾದಳ  3,37,542  43.2

1998 ಆರ್.ಎಲ್.ಜಾಲಪ್ಪ  ಕಾಂಗ್ರೆಸ್  3,60,761  43.7

1999 ಆರ್.ಎಲ್.ಜಾಲಪ್ಪ  ಕಾಂಗ್ರೆಸ್  4,22,587  49.7

2004 ಆರ್.ಎಲ್.ಜಾಲಪ್ಪ  ಕಾಂಗ್ರೆಸ್  3,76,204  40.5

2009 ಎಂ. ವೀರಪ್ಪ ಮೊಯಿಲಿ ಕಾಂಗ್ರೆಸ್  3,90,500  39.9

2014 ಎಂ. ವೀರಪ್ಪ ಮೊಯಿಲಿ  ಕಾಂಗ್ರೆಸ್  4,24,800  33.6

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !