ಚಿಕ್ಕಲ್ಲೂರು: ಪ್ರಾಣಿ ಬಲಿ ನೀಡದಂತೆ ಮನವಿ

7

ಚಿಕ್ಕಲ್ಲೂರು: ಪ್ರಾಣಿ ಬಲಿ ನೀಡದಂತೆ ಮನವಿ

Published:
Updated:
Prajavani

ಚಾಮರಾಜನಗರ: ‘ಸೋಮವಾರದಿಂದ (ಜ.21) ಇದೇ 26ರವರೆಗೆ ನಡೆಯಲಿರುವ ಚಿಕ್ಕಲ್ಲೂರು ಜಾತ್ರೆಯಲ್ಲಿ ಪ್ರಾಣಿಗಳನ್ನು ಬಲಿ ಕೊಡದೆ ಸಾತ್ವಿಕ ರೀತಿಯಲ್ಲಿ ಸಿದ್ದಪ್ಪಾಜಿ ಅವರಿಗೆ ಪೂಜೆ ಸಲ್ಲಿಸಿ’ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಅವರು ಭಕ್ತರಲ್ಲಿ ಮನವಿ ಮಾಡಿದರು.

‘ಜಾತ್ರೆಯಲ್ಲಿ ಹರಕೆಯ ರೂಪದಲ್ಲಿ ಆಡು, ಕುರಿ, ಕೋಟಿ ಮುಂತಾದ ಪ್ರಾಣಿಗಳನ್ನು ಬಲಿ, ಹತ್ಯೆ, ರಕ್ತ ತರ್ಪಣ ಬಿಡುವುದು, ಮಾಂಸ ನೈವೇದ್ಯ ಮಾಡುವಂತಹ ಆಚರಣೆಗಳಿವೆ. ಇವು ಜೀವ ಹಿಂಸಾತ್ಮಕ ಆಚರಣೆಗಳಾಗಿದ್ದು, ಇವನ್ನು ದೇವಾಲಯದ ಆವರಣ, ಹೊಲಗದ್ದೆ, ಬಿಡಾರಗಳಲ್ಲಿ ಮಾಡಬಾರದು. ಇವುಗಳ ಬದಲಾಗಿ, ತೆಂಗಿನಕಾಯಿ, ಬಾಳೆಹಣ್ಣು, ಧೂಪ ದೀಪ ಮುಂತಾದವುಗಳಿಂದ ಸಾತ್ವಿಕ ಪೂಜೆ ಸಲ್ಲಿಸಿ, ದೇವರಿಗೆ ಸಸ್ಯಾಹಾರಿ ಮತ್ತು ಸಿಹಿಯಾದ ನೈವೇದ್ಯ ಮಾಡಿ ಪ್ರಸಾದವನ್ನು ಭಕ್ತರು ಸ್ವೀಕರಿಸಬೇಕು’ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಪ್ರಾಣಿ ಬಲಿಯು ಅವೈಜ್ಞಾನಿಕ. ಮೌಢ್ಯದ ಪರಮಾವಧಿ. ಇದು ದೇವರು ಮತ್ತು ಧರ್ಮ ವಿರೋಧಿ. 1959ರ ಕರ್ನಾಟಕ ಪ್ರಾಣಿಬಲಿ ಪ್ರತಿಬಂಧಕ ಕಾಯ್ದೆ ಹಾಗೂ ಹೈಕೋರ್ಟ್‌ನ ಆದೇಶ ಪ್ರಕಾರ, ಪ್ರಾಣಿ ಬಲಿ ಶಿಕ್ಷಾರ್ಹ ಅಪರಾಧ. ಅಲ್ಲದೇ ಇದು ಘೋರ ಪಾಪಕೃತ್ಯ. ಇದರಿಂದ ಸಾಂಕ್ರಾಮಿಕ ರೋಗ ರುಜಿನಗಳೂ ಹರಡಬಹುದು. ಹಾಗಾಗಿ, ಭಕ್ತರು ಪ್ರಾಣಿ ಬಲಿ ನೀಡಬಾರದು’ ಎಂದು ಅವರು ಹೇಳಿದರು.

‘ದೇವಸ್ಥಾನಗಳಲ್ಲಿ ಭಕ್ತಿ ಇರಲಿ. ರಕ್ತ ಬೇಡ. ದೇವಾಲಯಗಳು ವಧಾಲಾಯಗಳಾಗದೆ, ದಿವ್ಯಾಲಯಗಳು ಆಗಬೇಕು. ಜಾತ್ರೆ ನಡೆಯುವ ಪರಿಸರಗಳು ದಯೆ, ಕರುಣೆ ಹಾಗೂ ಮಾನವೀಯತೆ ಸಂದೇಶ ಸಾರುವ ಕೇಂದ್ರಗಳಾಬೇಕು’ ಎಂದು ಅವರು ಹೇಳಿದರು.

ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಸಂಚಾಲಕಿ ಸುನಂದಾ ದೇವಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !