ಚಿಕ್ಕಲ್ಲೂರಿನಲ್ಲಿ ಪಂಕ್ತಿ ಸೇವೆ ಅಬಾಧಿತ

7
ಪೊಲೀಸರು, ಅಧಿಕಾರಿಗಳ ಕಣ್ತಪ್ಪಿಸಿ ಕುರಿ, ಕೋಳಿ ತಂದ ಹಲವು ಭಕ್ತರು

ಚಿಕ್ಕಲ್ಲೂರಿನಲ್ಲಿ ಪಂಕ್ತಿ ಸೇವೆ ಅಬಾಧಿತ

Published:
Updated:
Prajavani

ಕೊಳ್ಳೇಗಾಲ: ಸುಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಯಲ್ಲಿ ಪೊಲೀಸರು ಹಾಗೂ ಅಧಿಕಾರಿಗಳ ಕಣ್ಗಾವಲಿನ ನಡುವೆಯೂ ಭಕ್ತರು ಅವರ ಕಣ್ತಪ್ಪಿಸಿ ಕುರಿ, ಕೋಳಿಗಳನ್ನು ತಂದು ದೇವಾಲಯದಿಂದ ಸಾಕಷ್ಟು ದೂರದಲ್ಲಿ ಅವುಗಳನ್ನು ಬಲಿ ಕೊಟ್ಟು ಪಂಕ್ತಿ ಸೇವೆ ಸಲ್ಲಿಸಿದರು.

ಪ್ರಾಣಿ ಬಲಿಗೆ ಅವಕಾಶ ನೀಡಬಾರದು ಎಂಬ ಹೈಕೋರ್ಟ್‌ ಆದೇಶ ನೀಡಿರುವುದರಿಂದ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮವಹಿಸಿತ್ತು. ಐದಾರೂ ಕಿ.ಮೀ ದೂರದಲ್ಲೇ ಚೆಕ್‍ಪೋಸ್ಟ್‌ಗಳನ್ನು ಹಾಕಿ ಪ್ರತಿ ವಾಹನವನ್ನು ತಪಾಸಣೆ ನಡೆಸಲಾಗಿತ್ತು. 

ಇದರಿಂದ ಸಾಕಷ್ಟು ಭಕ್ತರಿಗೆ ಆಡು, ಕುರಿ, ಕೋಳಿ ತರಲು ಸಾಧ್ಯವಾಗಿರಲಿಲ್ಲ. ಈ ವರ್ಷ ಪ್ರಾಣಿಗಳ ಬಲಿ ಪ್ರಮಾಣ ಗಣನೀಯವಾಗಿ ಇಳಿದಿತ್ತು. ದೇವಾಲಯದ ಆವರಣ ಹಾಗೂ ಅದಕ್ಕೆ ಸಮೀಪದ ಜಾಗದಲ್ಲಿ ಎಲ್ಲಿಯೂ ಬಲಿ ನೀಡುತ್ತಿರುವುದು ಕಂಡು ಬರಲಿಲ್ಲ.

ಕಾಡುದಾರಿ ಹಾಗೂ ಕಾಲುದಾರಿಗಳ ಮೂಲಕ ಜಿಲ್ಲಾಡಳಿತದ ಕಣ್ತಪ್ಪಿಸಿ ಕೆಲವರು ಆಡು, ಕುರಿ ಕೋಳಿ ತಂದು ದೇವಸ್ಥಾನದಿಂದ ಸಾಕಷ್ಟು ದೂರದಲ್ಲಿ ಅವುಗಳನ್ನು ಕತ್ತರಿಸಿ ಎಡೆ ತಯಾರಿಸಿ ಸಂ‌ಪ್ರದಾಯದಂತೆ ಜೊತೆಯಾಗಿ ಉಂಡು ಭಕ್ತಿ ಮೆರೆದರು.

ಪೊಲೀಸರ ಕೈಗೆ ಸಿಕ್ಕಿ ಬೀಳುವ ಭಯದಲ್ಲಿಯೇ ಪಂಕ್ತಿಸೇವೆ ಮಾಡಿದರು. ಪ್ರಾಣಿ ಬಲಿ ನಿಷೇಧವೆಂದು ತಮ್ಮ ನಂಬಿಕೆಗೆ ಆಡಳಿತ ಧಕ್ಕೆ ತರುತ್ತಿದ್ದಾರೆ. ಭಯದಿಂದ ದೇವರ ಸೇವೆ ಮಾಡಬೇಕಾಗಿರುವುದು ದುರದೃಷ್ಟಕರ ಎಂದು ಭಕ್ತಾದಿಗಳು ಆಕ್ರೋಶ ವ್ಯಕ್ತಪಡಿಸಿದರು.

‘ದೇವಸ್ಥಾನದ ಆವರಣ ಮತ್ತು ಸುತ್ತಮುತ್ತ ಎಲ್ಲೂ ಪ್ರಾಣಿ ಬಲಿಗೆ ಅವಕಾಶ ಕೊಟ್ಟಿಲ್ಲ. ತುಂಬಾ ದೂರ ಕೆಲವೆಡೆ ನಡೆದಿರಬಹುದು. ಹೊರಗಿನಿಂದ ಮಾಂಸ ತಂದು ಆಹಾರ ಸಿದ್ಧಪಡಿಸಿದ್ದಾರೆ. ಅದಕ್ಕೆ ಏನೂ ಮಾಡಲು ಸಾಧ್ಯವಿಲ್ಲ’ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮನೆಯಿಂದಲೇ ಮಾಂಸ ತಂದರು: ಪ್ರಾಣಿ ಬಲಿಗೆ ಅವಕಾಶ ಇಲ್ಲದೇ ಇದ್ದುದರಿಂದ ಕೆಲವು ಭಕ್ತರು ಮನೆಯಿಂದಲೇ ಮಾಂಸ ತಂದು, ಅಡುಗೆ ಮಾಡಿ ಎಡೆ ತಯಾರಿಸಿದರು. 

ಈ ವರ್ಷ ಪೊಲೀಸರು ಅದಕ್ಕೂ ಹೆಚ್ಚಿನ ಅವಕಾಶ ನೀಡಲಿಲ್ಲ ಎಂದು ಮಂಡ್ಯದ ಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಭಕ್ತರ ಸಂಖ್ಯೆ ಇಳಿಕೆ: ಪ್ರಾಣಿ ಬಲಿಗೆ ಅವಕಾಶ ಇಲ್ಲದೇ ಇದ್ದುದರಿಂದ ಈ ವರ್ಷ ಭಕ್ತರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. 

‘ಕಳೆದ ವರ್ಷವೂ ಕಡಿಮೆ ಜನ ಇದ್ದರೂ, ಈ ವರ್ಷ ಮತ್ತಷ್ಟು ಕಡಿಮೆಯಾಗಿದೆ. ಪ್ರಾಣಿ ಬಲಿ, ಮದ್ಯ, ಭಂಗಿ... ಇಲ್ಲಿನ ದೇವರಿಗೆ ಮುಖ್ಯ. ಅದಕ್ಕೆ ಅವಕಾಶ ಇಲ್ಲದಾಗ ಯಾರು ಬರುತ್ತಾರೆ. ತಲತಲಾಂತರದಿಂದ ಪ್ರಾಣಿ ಬಲಿ ಕೊಟ್ಟು, ಎಡೆ ತಯಾರಿಸಿ ಪಂಕ್ತಿಸೇವೆ ನಡೆದಿದೆ.  ಈಗ ಅದಕ್ಕೆ ಅವಕಾಶ ಇಲ್ಲ ಎಂಬ ಕಾರಣಕ್ಕೆ ಭಕ್ತರು ಬರುತ್ತಿಲ್ಲ’ ಎಂದು ಚಾಮರಾಜನಗರದಿಂದ ಬಂದಿದ್ದ ನಾಗರಾಜು ತಿಳಿಸಿದರು.

ಸಸ್ಯಾಹಾರಿಗಳೂ ಪಂಕ್ತಿಸೇವೆ ಮಾಡಿದರು. ‘ನಮ್ಮ ಕುಟುಂಬದವರು 30 ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇವೆ. ಆರು ದಿನ ಇಲ್ಲೇ ಇರುತ್ತೇವೆ. ಮಾಂಸಾಹಾರ ಮಾಡುವುದಿಲ್ಲ. ಸಸ್ಯಾಹಾರವನ್ನೇ ಸಿದ್ದಪ್ಪಾಜಿಗೆ ಅರ್ಪಿಸಿ ಸಹಭೋಜನ ಮಾಡುತ್ತೇವೆ’ ಎಂದು ಮೈಸೂರಿನ ರಾಜು ಅವರು ತಿಳಿಸಿದರು.

ಭಂಗಿ ಸೇವೆಯೂ ನಿರಾತಂಕ

200-300 ಚಿಲ್ಲರೆ ಹಣ ಕೊಟ್ಟು ಜಾತ್ರೆಯಲ್ಲಿನ ಕೆಲ ಟೀ ಅಂಗಡಿ, ಚಿಲ್ಲರೆ ಅಂಗಡಿಗಳಿಂದ ಭಂಗಿ ಸೊಪ್ಪನ್ನು ತರುವ ಕೆಲ ಭಕ್ತರು ದೇವರಿಗೆ ಎಡೆಯಿಟ್ಟು ಮಾಂಸದೂಟದ ತಯಾರಿ ವೇಳೆ ಮಸಾಲೆಗೆ ಬೆರೆಸುತ್ತಾರೆ. ಪವಾಡ ಪುರುಷ ಸಿದ್ದಪ್ಪಾಜಿ ಭಂಗಿ ಸೇವಿಸುತ್ತಿದರೆಂಬ ಇತಿಹಾಸ ಇರುವುದರಿಂದ ಹಲವು ವರ್ಷಗಳಿಂದ ಈ ಭಂಗಿ ಸೇವೆ ನಡೆದುಕೊಂಡು ಬಂದಿದೆ. ಈ ವರ್ಷವೂ ಕೆಲವು ಭಕ್ತರು ಭಂಗಿ ಸೇವೆಯನ್ನು ಸಲ್ಲಿಸಿದರು.

‘ಕೆಲವರು ಎಡೆಗಷ್ಟೆ ಭಂಗಿ ಸೊಪ್ಪನ್ನು ಇಡುತ್ತಾರೆ. ಇನ್ನೂ ಕೆಲವರು ಮಾಂಸದೂಟಕ್ಕೆ ಪ್ರಸಾದವೆಂದು ಹಾಕುತ್ತಾರೆ. ನಾವು ಎಡೆಗಷ್ಟೆ ಭಂಗಿ ಸೊಪ್ಪನ್ನು ಇಟ್ಟೆವು’ ಎಂದು ಪಂಕ್ತಿ ಸೇವೆ ಸಲ್ಲಿಸಿದ ಭಕ್ತರೊಬ್ಬರು ಹೇಳಿದರು.

ವಿವಿಧ ಜಿಲ್ಲೆಗಳ ಭಕ್ತರು ಭಾಗಿ

ಹಿಂದಿನ ವರ್ಷಕ್ಕೆ ಹೋಲಿಸಿದರೆ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದರೂ, ಸಾವಿರಾರು ಜನರು ಗುರುವಾರ ದೇವಾಲಯಕ್ಕೆ ಭೇಟಿ ನೀಡಿ ಪಂಕಿ ಸೇವೆ ಆಚರಣೆ ಮಾಡಿದರು. 

ದೇವಸ್ಥಾನದ ಹಳೆಮಠ, ಹೊಸ ಮಠದಲ್ಲಿ ಭಕ್ತರು ದೇವಸ್ಥಾನದ ಮುಂದೆ ದೂಪ ಹಾಕಿ ದೇವರ ಗದ್ದಿಗೆಯ ಮುಂದೆ ಮಂಡಿ ಊರಿ ಭಕ್ತಿ ಮೆರೆದರು. ದೇವಸ್ಥಾನದ ಆವರಣದಲ್ಲಿ ಬಸವನ ಪಾದಗಳಿಗೆ ಮಲಗಿ ಹರಕೆ ಸಲ್ಲಿಸಿದರು. 

ದೇವಸ್ಥಾನದ ಹೊರವಲಯದ ಜಮೀನುಗಳಲ್ಲಿ ಬಿಡಾರ ಹೂಡಿದ ಭಕ್ತರು ಸಿದ್ದಪ್ಪಾಜಿ ಹಾಗೂ ರಾಚಪ್ಪಾಜಿ ನೀಲಗಾರರ ಸಂಸ್ಕೃತಿಗೆ ಅನುಗುಣವಾಗಿ ಮಾಂಸಹಾರ ಸೇವಿಸುವ ಮೂಲಕ ಪಂಕ್ತಿಸೇವೆ ಆಚರಣೆ ಪೂರೈಸಿದರು.

ಜಿಲ್ಲೆಯ ವಿವಿಧೆಡೆ ಹಾಗೂ ಮೈಸೂರು, ಮಂಡ್ಯ, ಬೆಂಗಳೂರು, ಹಾಸನ, ಕನಕಪುರ, ರಾಮನಗರ, ಮದ್ದೂರು ಸೇರಿದಂತೆ ಅನೇಕ ಭಾಗಗಳಿಂದ ಸಾವಿರಾರು ಭಕ್ತರು ಜಾತಿ ಬೇಧವಿಲ್ಲದೆ ಪಂಕ್ತಿಯಲ್ಲಿ ಕುಳಿತು ಊಟ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !