ಮೂರು ತಿಂಗಳಲ್ಲಿ 19 ಬಾಲ್ಯ ವಿವಾಹಕ್ಕೆ ತಡೆ

7
ಸಾಮಾಜಿಕ ಪಿಡುಗಿಗೆ ಇಲ್ಲ ಕಡಿವಾಣ, ಪೋಷಕರಲ್ಲಿ ಇನ್ನೂ ಜಾಗೃತಿ ಕೊರತೆ

ಮೂರು ತಿಂಗಳಲ್ಲಿ 19 ಬಾಲ್ಯ ವಿವಾಹಕ್ಕೆ ತಡೆ

Published:
Updated:
ಬಾಲ್ಯ ವಿವಾಹ

ಚಾಮರಾಜನಗರ: ಜಿಲ್ಲೆಯಲ್ಲಿ 2018ರ ಮಾರ್ಚ್‌ನಿಂದ ಮೇ ತಿಂಗಳ ಅಂತ್ಯದವರೆಗೆ ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಮಕ್ಕಳ ಸಹಾಯವಾಣಿಗೆ (1098) 28 ಕರೆಗಳು ಬಂದಿದ್ದು, 19 ಮದುವೆಗಳನ್ನು ತಡೆಯುವಲ್ಲಿ ಜಿಲ್ಲಾಡಳಿತ (ಮಕ್ಕಳ ಸಹಾಯವಾಣಿ, ಮಕ್ಕಳ ರಕ್ಷಣಾ ಘಟಕ, ಶಿಕ್ಷಣ ಇಲಾಖೆ, ಪೊಲೀಸರು ಎಲ್ಲರೂ ಒಟ್ಟಾಗಿ) ಯಶಸ್ವಿಯಾಗಿದೆ.

28 ಕರೆಗಳಲ್ಲಿ ಒಂದು ಪ್ರಕರಣದಲ್ಲಿ ವಧುವಿಗೆ 18 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿತ್ತು. ಮೂರು ಪ್ರಕರಣಗಳಲ್ಲಿ ದೊರೆತ ಮಾಹಿತಿ ತಪ್ಪಾಗಿತ್ತು. ಐದು ಪ್ರಕರಣಗಳಲ್ಲಿ ಸಹಾಯವಾಣಿಗೆ ಮಾಹಿತಿ ತಲುಪುವಷ್ಟರಲ್ಲಿ ಬಾಲಕಿಯರಿಗೆ ಮದುವೆಯಾಗಿತ್ತು.

ಮೈಸೂರಿನ ಸ್ವಯಂ ಸೇವಾ ಸಂಸ್ಥೆ(ಎನ್‌ಜಿಒ) ಆರ್ಗನೈಸೇಷನ್‌ ಫಾರ್‌ ದಿ ಡೆವೆಲಪ್‌ಮೆಂಟ್‌ ಆಫ್‌ ಪೀಪಲ್‌ (ಒಡಿಪಿ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯವಾಣಿಯು 2015ರ ಜೂನ್‌ನಲ್ಲಿ ಚಾಮರಾಜನಗರದಲ್ಲಿ ಆರಂಭವಾಗಿತ್ತು. ಅಲ್ಲಿಂದ, ಇಲ್ಲಿಯವರೆಗೆ ಬಾಲ್ಯ ವಿವಾಹಕ್ಕೆ ಸಂಬಂಧಿಸಿದ 309 ಕರೆಗಳನ್ನು ಸಹಾಯವಾಣಿ ಸ್ವೀಕರಿಸಿದೆ. ಈ ಪೈಕಿ 132 ಪ್ರಕರಣಗಳಲ್ಲಿ ಮದುವೆಯನ್ನು ತಡೆಯಲು ಸಾಧ್ಯವಾಗಿದೆ. 105 ಪ್ರಕರಣಗಳಲ್ಲಿ ಬಾಲಕಿಯರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಮುಂದೆ ಹಾಜರುಪಡಿಸಲಾಗಿದೆ.

ಆರನೇ ಸ್ಥಾನ: ರಾಜ್ಯದಲ್ಲಿ ಅತೀ ಹೆಚ್ಚು ಬಾಲ್ಯವಿವಾಹ ಪ್ರಕರಣಗಳು ದಾಖಲಾದ ಜಿಲ್ಲೆಗಳ ಪೈಕಿ ಚಾಮರಾಜನಗರ ಆರನೇ ಸ್ಥಾನದಲ್ಲಿದೆ. (ಕೊಪ್ಪಳ ಮೊದಲ ಸ್ಥಾನದಲ್ಲಿದೆ). 2016ರಲ್ಲಿ ನಡೆದ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ‌ ಪ್ರಕಾರ, ರಾಜ್ಯದಲ್ಲಿ ನಡೆಯುವ ಒಟ್ಟಾರೆ ಬಾಲ್ಯ ವಿವಾಹಗಳಲ್ಲಿ ಶೇ 29.2ರಷ್ಟು ಪ್ರಕರಣಗಳು ಜಿಲ್ಲೆಯಲ್ಲೇ ನಡೆಯುತ್ತವೆ. ಜಿಲ್ಲೆಯ ನಗರ ಭಾಗಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ.

ದಾಖಲಾಗದ ಎಫ್‌ಐಆರ್‌: ಬಹುತೇಕ ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಾಗುತ್ತಿಲ್ಲ. ಆರೋಪಿಗಳ ವಿರುದ್ಧ ಆರೋಪಪಟ್ಟಿಯನ್ನೂ ಸಲ್ಲಿಸಲಾಗುತ್ತಿಲ್ಲ. ಮೂರು ವರ್ಷಗಳಲ್ಲಿ ಕೇವಲ 8 ಪ್ರಕರಣಗಳಲ್ಲಿ ಮಾತ್ರ ಎಫ್‌ಐಆರ್‌ ಹಾಕಲಾಗಿದೆ.

ಶಾಲಾ ಮಕ್ಕಳು, ನೆರೆಹೊರೆಯವರು, ಶಿಕ್ಷಕರು ಅಷ್ಟೇ ಅಲ್ಲ ಹಲವು ಪ್ರಕರಣಗಳಲ್ಲಿ ಸ್ವತಃ ಬಾಲ ವಧುವೇ ಸಹಾಯವಾಣಿಗೆ ಕರೆ ಮಾಡಿ ವಿವಾಹದ ಬಗ್ಗೆ ಮಾಹಿತಿ ಕೊಡುತ್ತಾರೆ ಎಂದು ಹೇಳುತ್ತಾರೆ ಸಹಾಯವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲತಾ.

ಹೊಸ ಹೊಸ ದಾರಿ: ಸಾಮಾನ್ಯವಾಗಿ 13ರಿಂದ 16 ವರ್ಷದ ನಡುವಿನ, ಪ್ರೌಢಾವಸ್ಥೆಗೆ ಬಂದ ಹೆಣ್ಣುಮಕ್ಕಳು ಈ ಪಿಡುಗಿಗೆ ತುತ್ತಾಗುತ್ತಿದ್ದಾರೆ. ಪೋಷಕರಿಗೆ ಬಾಲ್ಯವಿವಾಹ ನಿಷೇಧ ಕಾನೂನಿನ ಬಗ್ಗೆ ಅರಿವಿದೆ. ಆದರೆ, ಯಾವುದೋ ಕಾರಣಕ್ಕಾಗಿ ಮದುವೆ ಮಾಡಿ ಬಿಡುತ್ತಾರೆ. ಬಹಿರಂಗವಾಗಿ ಮಾಡಿದರೆ ತಡೆಯುತ್ತಾರೆ ಎಂಬ ಕಾರಣಕ್ಕೆ ಆಮಂತ್ರಣ ಪತ್ರಿಕೆ ಮುದ್ರಿಸದೇ, ಚಪ್ಪರ ಹಾಕಿಸದೇ ರಾತ್ರೋರಾತ್ರಿ ಮದುವೆ ಮಾಡಿದ ನಿದರ್ಶನಗಳು ಇವೆ.

‘ಜಿಲ್ಲೆಯು ಗಡಿ ಭಾಗವಾಗಿರುವುದರಿಂದ ತಮಿಳುನಾಡಿಗೆ ಕರೆದುಕೊಂಡು ಹೋಗಿ ಅಲ್ಲಿ ಮದುವೆ ಮಾಡಿಸಿ, ಮತ್ತೆ ವಾಪಸ್‌ ಕರೆದುಕೊಂಡು ಬರುವ ಪ್ರವೃತ್ತಿಯೂ ಈಗ ಹೆಚ್ಚಾಗುತ್ತಿದೆ’ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಅರುಣ್‌ ರೇ ಹೇಳಿದರು.

ಹುಡುಗಿಯರ ಪಾತ್ರನೂ ಇದೆ: ‍‘ಪೋಷಕರು ಬೇರೆ ಮದುವೆ ಮಾಡುತ್ತಾರೆ ಎಂಬ ಕಾರಣಕ್ಕೆ ಪ್ರೀತಿಯಲ್ಲಿ ಬಿದ್ದ ಹುಡುಗಿಯರೇ ಪ್ರಿಯತಮನ ಮೇಲೆ ಒತ್ತಡ ಹಾಕಿ ಮನೆಯಿಂದ ಓಡಿ ಹೋದ ಪ್ರಕರಣಗಳೂ ನಡೆದಿವೆ. ಪೋಷಕರು ಹುಡುಗನ ವಿರುದ್ಧ ಅಪಹರಣ ದೂರು ನೀಡುತ್ತಾರೆ. ಈ ಪ್ರಕರಣಗಳೆಲ್ಲ ಪೋಕ್ಸೊ ಅಡಿಯಲ್ಲಿ ಬರುತ್ತವೆ. ಇದರಿಂದ ಹುಡುಗ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ’ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸರಸ್ವತಿ ತಿಳಿಸಿದರು.

17 ಅಧಿಕಾರಿಗಳು: ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಯಿಂದ ಗ್ರಾಮ‍ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳವರೆಗೆ 17 ಅಧಿಕಾರಿಗಳನ್ನು ಬಾಲ್ಯವಿವಾಹ ನಿಷೇಧಾಧಿಕಾರಿಗಳು ಎಂದು ಗುರುತಿಸಲಾಗಿದೆ. ಇದರಲ್ಲಿ ಶಾಲೆಗಳ ಮುಖ್ಯೋಪಾಧ್ಯಾಯರು, ಜಿಲ್ಲೆಯ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳೆಲ್ಲ ಬರುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಇವರು ಈ ಬಗ್ಗೆ ಹೆಚ್ಚಿನ ಗಮನ ನೀಡುವುದಿಲ್ಲ ಎಂಬ ಆರೋಪವೂ ಇದೆ. ಬಾಲ್ಯ ವಿವಾಹ ಪ್ರಕರಣಗಳಲ್ಲಿ ಸ್ವಯಂ ದೂರು ದಾಖಲಿಸಿ ಕ್ರಮ ಕೈಗೊಳ್ಳುವ ಅಧಿಕಾರ ಪೊಲೀಸರಿಗಿದೆ. ಆದರೆ, ಅವರು ಆಸಕ್ತಿ ತೋರುತ್ತಿಲ್ಲ.

‘ಸನ್ನದ್ಧ ಸ್ಥಿತಿಯಲ್ಲಿ ಇದ್ದೇವೆ’

‘ಬಾಲ್ಯ ವಿವಾಹ ಪ್ರಕರಣಗಳ ಬಗ್ಗೆ ಜಿಲ್ಲಾಡಳಿತ ಯಾವಾಗಲೂ ಜಾಗರೂಕ ಸ್ಥಿತಿಯಲ್ಲಿರುತ್ತದೆ. ಮಾಹಿತಿ ಸಿಕ್ಕ ತಕ್ಷಣ ಅದನ್ನು ತಡೆಯಲು ಕ್ರಮ ಕೈಗೊಳ್ಳುತ್ತೇವೆ. ಗ್ರಾಮ ಪಂಚಾಯಿತಿ ಹಂತದಲ್ಲಿ, ಶಾಲಾ ಮಟ್ಟದಿಂದ ಹಿಡಿದು ಜಿಲ್ಲಾಡಳಿತದ ವಿವಿಧ ಹಂತಗಳಲ್ಲಿ ಇದರ ಮೇಲ್ವಿಚಾರಣೆ ನಡೆಸಲು ಜನ ಇದ್ದಾರೆ’ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಗುಂಪುಗಳು, ಶಾಲಾ ಮಕ್ಕಳು, ಶಿಕ್ಷಕರು ಎಲ್ಲರೂ ಈ ಕುರಿತು ನಿಗಾ ಇರಿಸಬೇಕು. ಇದರಲ್ಲಿ ಎಲ್ಲರ ಜವಾಬ್ದಾರಿ ಇದೆ. ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗುತ್ತಿಲ್ಲ. ಇದು ತಪ್ಪಬೇಕು ಎಂದರು.

ಆಗಬೇಕಿರುವುದು ಏನು?

‘ಬಾಲ್ಯವಿವಾಹ, ಅದರಿಂದ ಹೆಣ್ಣು ಮಕ್ಕಳಿಗೆ ಆಗುವ ತೊಂದರೆಗಳ ಬಗ್ಗೆ ಪೋಷಕರಿಗೆ ಹಾಗೂ ಜನರಿಗೆ ಜಾಗೃತಿ ಇಲ್ಲ. ಪ್ರೌಢಶಾಲೆ, ಪಿಯುಸಿವರೆಗಿನ ಹೆಣ್ಣುಮಕ್ಕಳಿಗೆ ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಸರ್ಕಾರ ಹಲವು ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಿದೆ. ಆದರೆ, ಜನರಿಗೆ ತಲುಪುತ್ತಿಲ್ಲ’ ಎಂದು ಸರಸ್ವತಿ ಹೇಳಿದರು.

‘ಸಾಮಾಜಿಕವಾಗಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಬಹುತೇಕ ಬಾಲ್ಯವಿವಾಹಗಳು ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ನಡೆಯುತ್ತವೆ. ಇವರಿಗೆ ಈ ಪಿಡುಗಿನ ಬಗ್ಗೆ ತಿಳಿ ಹೇಳಬೇಕು. ಪ್ರೌಢಶಾಲೆ, ಕಾಲೇಜು ಹಂತದಲ್ಲಿ ಮಕ್ಕಳಿಗೆ ಇದರ ಬಗ್ಗೆ ಮಾಹಿತಿ ನೀಡುವುದನ್ನು ಕಡ್ಡಾಯ ಮಾಡಬೇಕು’ ಎಂದು ಒಡಿಪಿಯ ನಿರ್ದೇಶಕ ಸ್ಟ್ಯಾನಿ ಡಿ‘ಅಲ್ಮೆಡಾ ತಿಳಿಸಿದರು.

ಬಾಲ್ಯವಿವಾಹಕ್ಕೆ ಕಾರಣಗಳೇನು?

ಸಂಪ್ರದಾಯ, ಮೂಢನಂಬಿಕೆ

ಜವಾಬ್ದಾರಿ ಕಳೆದುಕೊಳ್ಳೋಣ ಎಂಬ ಪೋಷಕರ ಮನಃಸ್ಥಿತಿ

ತವರು ಸಂಬಂಧ ಉಳಿಸಿಕೊಳ್ಳಬೇಕು ಎಂಬ ನಿಲುವು

ಕುಟುಂಬದ ಹಿರಿಯರ ಒತ್ತಡಕ್ಕೆ ಮಣಿದು (ಕೊನೆಗಾಲದ ಆಸೆ)

ಬಡತನ, ಪೋಷಕರ ಆರೋಗ್ಯ ಸ್ಥಿತಿ

ಕಾಡಿನ ಅಂಚಿನ ಗ್ರಾಮ, ಬುಡಕಟ್ಟು ಪ್ರದೇಶದಲ್ಲಿ ಕಾಲೇಜು ಸೌಲಭ್ಯ ಇಲ್ಲದಿರುವುದು

ಆಸ್ತಿ ರಕ್ಷಣೆ, ಆಸ್ತಿ ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !