ಶನಿವಾರ, ಆಗಸ್ಟ್ 17, 2019
27 °C

ಮಗನ ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

Published:
Updated:

ಬೆಂಗಳೂರು: ಎಂಟು ವರ್ಷದ ಮಗನನ್ನು ಕೊಂದು, ನಂತರ ತಾಯಿಯೂ ಆತ್ಮಹತ್ಯೆಗೆ ಯತ್ನಿಸಿರುವ ಹೃದಯವಿದ್ರಾವಕ ಘಟನೆ ಚಿಕ್ಕಜಾಲ ಸಮೀಪದ ತುರುಬನಹಳ್ಳಿಯಲ್ಲಿ ನಡೆದಿದೆ.

ವರುಣ್ (8) ಕೊಲೆಯಾದವ. ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡಿರುವ ತಾಯಿ ಉಷಾಕುಮಾರಿಯನ್ನು (28)  ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಸೆಕ್ಯುರಿಟಿ ಸಿಬ್ಬಂದಿ ಆಗಿರುವ ಚಿಕ್ಕಬಳ್ಳಾಪುರದ ರೂಪೇಶ್ ಎಂಬುವರ ಜೊತೆ ಉಷಾಕುಮಾರಿ ಮದುವೆ ಆಗಿತ್ತು. ಮಗ ವರುಣ್, ಎರಡನೇ ತರಗತಿಯಲ್ಲಿ ಓದುತ್ತಿದ್ದ’ ಎಂದು ಚಿಕ್ಕಜಾಲ ಪೊಲೀಸರು ಹೇಳಿದರು.

‘ಗೃಹಿಣಿ ಆಗಿದ್ದ ಉಷಾಕುಮಾರಿ, ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಆಕೆಗೆ ಚಿಕಿತ್ಸೆ ಕೊಡಿಸಲು ರೂಪೇಶ್, ಕೈ ಸಾಲ ಮಾಡಿದ್ದರು. ಸಾಲ ವಾಪಸ್ ನೀಡುವಂತೆ ಸಾಲಗಾರರು, ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದರು. ಸಾಲಗಾರರ ಕಿರುಕುಳ ಹೆಚ್ಚಾಗುತ್ತಿದ್ದಂತೆ ಉಷಾಕುಮಾರಿ ಹಾಗೂ ರೂಪೇಶ್ ನಡುವೆ ಜಗಳ ಶುರುವಾಗಿ ವೈ ಮನಸ್ಸು ಮೂಡಿತ್ತು. ಗುರುವಾರವೂ ದಂಪತಿ ಜಗಳವಾಡಿದ್ದರು. ಬೇಸತ್ತ ರೂಪೇಶ್, ಮನೆಯಿಂದ ಹೊರಗಡೆ ಹೋಗಿದ್ದರು’ ಎಂದರು.

‘ಶಾಲೆಗೆ ಹೋಗಿದ್ದ ಮಗ ಸಂಜೆ ಮನೆಗೆ ವಾಪಸ್‌ ಬರುತ್ತಿದ್ದಂತೆ ತಾಯಿಯೇ ವಿಷ ಬೆರೆಸಿದ್ದ ಆಹಾರ ನೀಡಿದ್ದಳು. ನಂತರ ತಾನೂ ಅದೇ ಆಹಾರ ತಿಂದಿದ್ದಳು. ತೀವ್ರ ಅಸ್ವಸ್ಥಗೊಂಡ ತಾಯಿ– ಮಗ, ಮನೆಯಿಂದ ಹೊರಬಂದು ಸಮೀಪದಲ್ಲಿರುವ ದೇವಸ್ಥಾನ ಬಳಿ ಬಿದ್ದಿದ್ದರು. ಅವರಿಬ್ಬರನ್ನು ಸ್ಥಳೀಯರೇ ಆಸ್ಪತ್ರೆಗೆ ಕರೆದೊಯ್ದಿದ್ದರು. ‌ಚಿಕಿತ್ಸೆಗೆ ಸ್ಪಂದಿಸದೇ ವರುಣ್ ಮೃತಪಟ್ಟಿದ್ದಾನೆ. ತಾಯಿ ಸ್ಥಿತಿ ಚಿಂತಾಜನಕವಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು. 

Post Comments (+)