ಮಕ್ಕಳ ಉನ್ನತಿಯತ್ತ ಹರಿಯಲಿ ಚಿತ್ತ

7
ಮಕ್ಕಳ ದಿನಾಚರಣೆ ವಿಶೇಷ

ಮಕ್ಕಳ ಉನ್ನತಿಯತ್ತ ಹರಿಯಲಿ ಚಿತ್ತ

Published:
Updated:

ಮಕ್ಕಳು ತಮ್ಮ ಬೆಳವಣಿಗೆಯಲ್ಲಿ ಸಮಗ್ರವಾಗಿ ವಿಕಾಸ ಹೊಂದಲು ಸೂಕ್ತ ಜಾಗ ಮತ್ತು ಅವು ಹೊಂದಿಕೊಳ್ಳುವ ಉತ್ತಮ ಪರಿಸರದ ಕೊರತೆ ಕಂಡುಬಂದಿದೆ. ಇಂದಿನ ಮಕ್ಕಳಿಗೆ ಬಹಳವಾಗಿ ಈ ಕೊರತೆ ಕಾಡತೊಡಗಿದೆ. ಪ್ರತಿಷ್ಠೆಯ ಪ್ರತೀಕವೆಂಬಂತೆ ತಮ್ಮ ಮನೆ ದೊಡ್ಡದಾಗಿರಬೇಕೆಂದು ಹಿರಿಯರೆನಿಸಿಕೊಂಡವರು ಇಂಚಷ್ಟು ಜಾಗವನ್ನೂ ಮಕ್ಕಳ ಆಟಕ್ಕೆಂದು ಬಿಡದೆ ಅಷ್ಟೂ ಜಾಗವನ್ನು ಕಟ್ಟಡಕ್ಕೆ ಬಳಸಿಕೊಂಡುಬಿಡುವುದು ಈಗಿನ ಮನೆ ಕಟ್ಟಿಕೊಳ್ಳುವ ಶೈಲಿ.

ಮನೆ ಅನ್ನುವುದಾದರೆ ಅಲ್ಲಿ ಅಂಗಳಕ್ಕೂ ಜಾಗ ಮೀಸಲಿಡುತ್ತಿದ್ದ ನಮ್ಮ ಪೂರ್ವಜರ ಅಭಿಪ್ರಾಯಗಳೇ ಉನ್ನತವಾಗಿದ್ದವು. ಎರಡು ಮೂರು ದಶಕಗಳ ಹಿಂದೆ ಸರಿದರೆ ಮಕ್ಕಳು ಕೇವಲ ನಾಲ್ಕು ಗೋಡೆಗಳ ಮಧ್ಯೆ ಇರದೆ ಆಟಪಾಟಗಳ ಜೊತೆ ತಮ್ಮ ಬಾಲ್ಯವನ್ನು ಹೆಚ್ಚು ಬಯಲಲ್ಲೆ ಕಳೆಯುತ್ತಿದ್ದವು. ಅಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಅವಕಾಶಗಳು ಹೆಚ್ಚು ಇತ್ತು. ಅಂದಿನ ಮತ್ತು ಇಂದಿನ ಮಕ್ಕಳಿಗೆ ಹೋಲಿಕೆ ಮಾಡಿಕೊಂಡಲ್ಲಿ ಇಂದಿನ ಮಕ್ಕಳಲ್ಲಿ ಅಂಕಪಟ್ಟಿಯಲ್ಲಿ ಮಾತ್ರ ಹೆಚ್ಚು ಅಂಕಗಳನ್ನು ಕಾಣಬಹುದು. ಆದರೆ, ಸಾಮಾನ್ಯ ಜ್ಞಾನದಲ್ಲಿ ಕೊರತೆ ಹೆಚ್ಚು.

ಮಕ್ಕಳ ಈ ರೀತಿಯ ಬೆಳವಣಿಗೆ ಸಂಪೂರ್ಣ ಹಾಗೂ ಪರಿಪೂರ್ಣ ಎನಿಸಿಕೊಳ್ಳದು. ಈಗಿನ ಮಕ್ಕಳು ಹೊರಗಿನ ಪ್ರಪಂಚದಲ್ಲಿ ಆಡಲು ಬರದೆ ಟಿ.ವಿ, ಮೊಬೈಲ್‌ಗಳಲ್ಲಿ ಕಳೆದರೆ ಕಣ್ಣು, ಮೆದುಳಿನ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತದೆ. ಬಯಲು ಆಟಗಳಿಲ್ಲದೆ ಮಕ್ಕಳ ಶಾರೀರಿಕ ಉನ್ನತಿಯೂ ಅಷ್ಟಕಷ್ಟೆ ಎಂಬುದನ್ನು ಇಲ್ಲಿ ಒಪ್ಪಿಕೊಳ್ಳಲೇಬೇಕಾಗುತ್ತದೆ. ಮನೆಗೆಲಸ, ಆಫೀಸಿನ ಕೆಲಸ ಎಂದು ಸದಾ ಒತ್ತಡದ ಬದುಕು ನಡೆಸುವ ಬಹಳಷ್ಟು ಪಾಲಕರು ತಮ್ಮ ಮಕ್ಕಳ ಸರ್ವತೋಮುಖ ಬೆಳವಣಿಗೆಯತ್ತ ಗಮನ ಹರಿಸಲು ಮನಸ್ಸು ಮಾಡದಿರುವುದು ಒಂದು ಪಾಪಪ್ರಜ್ಞೆ ಮೂಡಿಸುವ ವಿಚಾರ.

ಬೆಳವಣಿಗೆಯ ಹಂತದಲ್ಲಿರುವ ಮಕ್ಕಳು ಪ್ರತಿಯೊಂದು ಮಾತು, ವಿಚಾರ, ನೋಟ ಇವನ್ನೆಲ್ಲ ತನ್ನ ಆಶ್ಚರ್ಯದ ಕಣ್ಣುಗಳಿಂದ ನೋಡುತ್ತಾ ಗಮನಿಸುತ್ತಿರುತ್ತವೆ. ಅಲ್ಲಿ ತಮಗಾಗುವ ಸಂದೇಹಗಳನ್ನು ನಿವಾರಿಸಲು ಹೆತ್ತವರಿಗೆ ಪ್ರಶ್ನೆ ಮಾಡುವುದು ಸಹಜ. ಇಂತಹ ಸಮಯದಲ್ಲಿ ಪೋಷಕರ ತಾಳ್ಮೆ ಜಾಣ್ಮೆ ಬಹಳ ಮುಖ್ಯ. ದುರಂತವೆಂದರೆ ಬಹುತೇಕ ಮಕ್ಕಳು ಎರಡು ವರ್ಷ ತುಂಬುತ್ತಿದ್ದಂತೆ ಮನೆಕೆಲಸದವರ ಆಸರೆಯಲ್ಲೊ ಅಥವಾ ಬೇಬಿ ಸಿಟ್ಟಿಂಗ್ ಕೇಂದ್ರಗಳಲ್ಲೋ ಬೆಳೆಯುವ ರೀತಿ ಕರುಣಾಜನಕವಾದದ್ದು.

ಮಕ್ಕಳ ಅರಿವಿಗೆ ಬಾರದ ವಿಚಾರಗಳು

ಮಣ್ಣಿನಲ್ಲಿ ಮಕ್ಕಳು ಆಟವಾಡಲು ಸ್ವಲ್ಪವೂ ಜಾಗ ಬಿಡದಂತೆ ಮನೆಯ ಅಂದ ಹೆಚ್ಚಿಸುವ ಸಲುವಾಗಿ ಗ್ರಾನೈಟ್ ಅಥವಾ ಟೈಲ್ಸ್‌ಗಳಿಂದ ಅಲಂಕರಿಸಿಬಿಟ್ಟಿರುವುದು ಇಂದಿನ ಜನರ ಅಲಂಕಾರಿಕ ಗುಣ. ಇದರಿಂದ ಮಕ್ಕಳು ಮಣ್ಣಿನ ಗುಣ, ವಾಸನೆಯನ್ನೇ ಮರೆತುಬಿಟ್ಟಿರುತ್ತಾರೆ.

ಗುಂಪಿನಲ್ಲಿ ಮಕ್ಕಳನ್ನು ಆಡಲು ಬಿಡದೆ ಮನೆಯೊಳಗೆ ಕೂಡಿಹಾಕಿಕೊಳ್ಳುವುದು ಮಕ್ಕಳ ಮಟ್ಟಿಗೆ ದುರದೃಷ್ಟಕರವಾದ ಸಂಗತಿ. ಈ ರೀತಿಯ ಅಭ್ಯಾಸದಿಂದ ಮಕ್ಕಳ ಹಕ್ಕು ಮತ್ತು ಸ್ವಾಭಿಮಾನವನ್ನು ಕಿತ್ತುಕೊಂಡಂತೆ ಆಗುತ್ತದೆ. ಅಲ್ಲದೆ ಅವರನ್ನು ಸಾಮರಸ್ಯದಿಂದ ಬಾಳುವ ಬದುಕಿನ ಕಲೆಯಿಂದ ದೂರ ಉಳಿಯುವಂತೆ ಮಾಡಿದಂತಾಗುತ್ತದೆ.

ಆರೋಗ್ಯಯುತವಾದ ಗಾಳಿ, ಸೂರ್ಯ ಕಿರಣಗಳು ಮಕ್ಕಳ ಶರೀರವನ್ನು ಸ್ಪರ್ಶಿಸದೆ ಅನೇಕ ರೀತಿಯ ಪೋಷಕಾಂಶಗಳ ನ್ಯೂನತೆ ಹಾಗೂ ಕಾಯಿಲೆಗಳು ಮಕ್ಕಳನ್ನು ಬಾಧಿಸುತ್ತವೆ.

ಕಾರ್ಟೂನ್ ಚಾನೆಲ್‌ಗಳು ಮತ್ತು ರಿಯಾಲಿಟಿ ಶೋಗಳಂತಹ ಕಾರ್ಯಕ್ರಮಗಳನ್ನು ದಿನವಿಡೀ ನೋಡುತ್ತಾ ಕೂರುವ ಮಕ್ಕಳು, ಇದ್ದ ಜಾಗದಲ್ಲೇ ಕೂತು ಕಾಲ್ನಡಿಗೆ, ಓಡುವುದು ಮರ ಹತ್ತುವುದು ಇಂತಹ ಚಟುವಟಿಕೆಗಳನ್ನು ಅಭ್ಯಸಿಸದೆ ಆಯಾಸ, ಬಳಲಿಕೆ, ಮೂಳೆ ಸವೆತಗಳಂತಹ ಪರಿಣಾಮಗಳನ್ನು ಸವಾಲಾಗಿ ಎದುರಿಸಬೇಕಾಗುತ್ತದೆ.

ಚಳಿಗಾಲ, ಬೇಸಿಗೆಕಾಲ ಮತ್ತು ಮಳೆಗಾಲದ ಪ್ರಕೃತಿಯಲ್ಲಿ ನಡೆಯುವ ಸಾಮಾನ್ಯ ಬದಲಾವಣೆಗಳನ್ನು ಸೂಕ್ಷ್ಮವಾಗಿ ಹಾಗೂ ಸಹಜವಾಗಿ ಗಮನಿಸದೆ ಹೋಗುವುದು, ತಿನ್ನುವ ಆಹಾರ ಪದಾರ್ಥಗಳನ್ನು ಬೆಳೆಯುವ ಪದ್ಧತಿಯ ಪರಿಚಯವೇ ಇಲ್ಲದೆ ಹೋಗುವುದರಿಂದ ಸಾಮಾನ್ಯ ಜ್ಞಾನದ ಕೊರತೆ ಕಂಡುಬರುವ ಸಾಧ್ಯತೆಗಳೇ ಹೆಚ್ಚು.

ಬಾಲ್ಯಾವಸ್ಥೆಯಲ್ಲಿರುವ ಮಕ್ಕಳು ಎರಡು ವರ್ಷ ತುಂಬುತ್ತಿದ್ದಂತೆ ಇತರ ಮಕ್ಕಳೊಂದಿಗೆ ಮುಕ್ತವಾಗಿ ಬೆರೆಯಲು ಬಿಡಬೇಕು. ಶಾಲೆ, ಟ್ಯೂಷನ್ ಎಂದು ಅವರನ್ನು ಅಂಕಗಳನ್ನು ಪಡೆಯುವ ಯಂತ್ರವನ್ನಾಗಿ ಮಾಡುವ ಪ್ರಯತ್ನದಿಂದ ಕೊಂಚ ದೂರವಿರಬೇಕು. ಶಾಲಾ ದಿನಗಳಲ್ಲಿ ಕನಿಷ್ಠ 2–3 ಗಂಟೆಗಳ ಅವಧಿಯಷ್ಟಾದರೂ ಬಯಲಲ್ಲಿ ಆಡುವ ಅವಕಾಶ ನೀಡಬೇಕು. ಇದರಿಂದ ಇಷ್ಟಪಟ್ಟು ಶಾಲೆಯ ಪಾಠ ಕಲಿಯಲು ಆಸಕ್ತಿ ತೋರುವರು.

ನಗರ ಪ್ರದೇಶಗಳಲ್ಲಿನ ಮಕ್ಕಳಿಗೆ ವಾರಕ್ಕೊಮ್ಮೆ ಉತ್ತಮ ಪರಿಸರದಲ್ಲಿ ಕಾಲ ಕಳೆಯಲು ನಮ್ಮ ಕೆಲಸವನ್ನು ಬದಿಗೊತ್ತಿ ಚಿಕ್ಕವರೊಂದಿಗೆ ಕೆಲ ಸಮಯ ಇದ್ದು ಬಿಡಬೇಕು. ಅಲ್ಲಿ ಪಾಲಕ ಹಾಗೂ ಮಕ್ಕಳ ಬಾಂಧವ್ಯ ಇನ್ನಷ್ಟು ಆಪ್ತವಾಗಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ತೋಟ, ಗದ್ದೆಗಳಲ್ಲಿ ವಿಹರಿಸಿ ಮಕ್ಕಳಿಗೆ ಹಣ್ಣು ತರಕಾರಿಗಳು ಬೆಳೆಯುವ ವಿಧಾನ, ವಿವಿಧ ಸಸ್ಯಗಳ ಪರಿಚಯಗಳನ್ನು ಸ್ಥೂಲವಾಗಿ ಪರಿಚಯಿಸುವುದರಿಂದ ತಮ್ಮ ಕಣ್ಮುಂದೆ ಸುಳಿಯುವ ಇಂತಹ ಚಿತ್ರಣಗಳಿಂದ ಜೀವನದ ಕಲಿಕೆಯನ್ನಷ್ಟೆ ಅಲ್ಲದೆ ಪಠ್ಯಕ್ಕೆ ಪೂರಕವಾಗಿ ಈ ಅಂಶಗಳನ್ನು ಎಳೆಯರು ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ.

ಓದು ಅಂದರೆ ಆಲಯ, ಜ್ಞಾನವೆಂದರೆ ಬಯಲು ಎಂಬುದನ್ನು ನಾವು ಮನಗಾಣಬೇಕು! ಮಕ್ಕಳು ಪಂಜರದ ಹಕ್ಕಿಗಳಾಗದೆ ಸ್ವಚ್ಛಂದವಾಗಿ ಸ್ವತಂತ್ರವಾಗಿ ಹಾರಾಡುವ ಹಕ್ಕಿಗಳಾಗಲಿ. ಮಕ್ಕಳನ್ನು ಮುಂದಿನ ಪೀಳಿಗೆಗೆ ಉತ್ತಮ ಸಮಾಜವನ್ನು ನಿರ್ಮಿಸುವ ಶಕ್ತಿಗಳಾಗಿ ಸಮರ್ಥ ಧ್ವನಿಗಳಾಗಿ ಬೇಳೆಸುವ ಮತ್ತು ಕಾಪಾಡುವ ಅತಿ ದೊಡ್ಡ ಹಾಗೂ ಮುಖ್ಯವಾದ ಜವಾಬ್ದಾರಿ ನಮ್ಮ ಮೇಲಿದೆ.
ಎಲ್ಲ ಪಾಲಕರು ಈ ಸತ್ಯ ಅರಿಯುವ ಅನಿವಾರ್ಯತೆ ಇದೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !