ಮಕ್ಕಳ ಕಣ್ಣಿನಲ್ಲಿ ಜಗದ ರಂಗ

7

ಮಕ್ಕಳ ಕಣ್ಣಿನಲ್ಲಿ ಜಗದ ರಂಗ

Published:
Updated:
Deccan Herald

ಅಂದು ನಮ್ಮೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲಾ ಆವರಣದಲ್ಲಿ ನೂರಾರು ಮಕ್ಕಳು ಸೂರ್ಯ ಮುಳುಗಿ ಕತ್ತಲಾವರಿಸುವುದನ್ನೇ ಕಾಯುತ್ತಾ ಅತ್ತಿಂದಿತ್ತಾ ಇತ್ತಿಂದತ್ತಾ ಯಾವುದೋ ಸಂಭ್ರಮವನ್ನು ತಮ್ಮೊಳಗೆ ಆವಾಹಿಸಿಕೊಂಡವರಂತೆ ಓಡಾಡುತ್ತಿದ್ದರು.

ಇತ್ತ ಪ್ರಸಾಧನ ಕೋಣೆಯಲ್ಲಿ ಉಡುಗೆ ತೊಡುಗೆ ಮೇಕಪ್ಪಿನಲ್ಲಿ ತಲ್ಲೀನರಾಗಿದ್ದ ಅದೇ ಶಾಲೆಯ ಮಕ್ಕಳು ಇನ್ನು ಕೆಲವೇ ಕ್ಷಣಗಳಲ್ಲಿ ತಮ್ಮ ಸಹಪಾಠಿಗಳ ಮುಂದೆ ತಾವು 20 ದಿನಗಳ ಅವಧಿಯ ರಂಗಶಿಬಿರದಲ್ಲಿ ಕಲಿತ ನಾಟಕವನ್ನು ಆಡಿತೋರಿಸುವ ಉಮೇದಿನಲ್ಲಿದ್ದರು. ಹೀಗೆ 250ಕ್ಕೂ ಹೆಚ್ಚು ಮಕ್ಕಳು ಕಾತರದಿಂದ ಕಾಯುತ್ತಿದ್ದ ನಾಟಕ ಬಣ್ಣಬಣ್ಣದ ಬೆಳಕು, ಸಂಗೀತಗಳಿಂದ ಆರಂಭಗೊಂಡಿತು. ಬೆರಗಿನ ಕಣ್ಣುಗಳಿಂದ ನಾಟಕವನ್ನು ಆಸ್ವಾದಿಸಲು ತೊಡಗಿದ ಮಕ್ಕಳು ಆಟ ಸಾಗಿದಂತೆ ನಾಟಕ ಮತ್ತು ತಮ್ಮ ನಡುವಿನ ಅಂತರ ಕಳೆದುಕೊಳ್ಳುತ್ತಾ ತಾವೇ ಪಾತ್ರಗಳಾಗಿ ನಲಿಯುತ್ತಾ, ಬೇಸರಿಸುತ್ತಾ, ಅರಳಿಕೊಳ್ಳುತ್ತಾ ಭಾವಪರವಶರಾಗಿ ಒಂದು ಮಹಾಯಾತ್ರೆ ಹೊರಟವರಂತೆ ಸಾಗಿ ಚಪ್ಪಾಳೆಯೊಂದಿಗೆ ಎಚ್ಚರಗೊಂಡರು.

ಪ್ರದರ್ಶನ ಮುಗಿದದ್ದೆ ಉದ್ವೇಗದಿಂದ ವೇದಿಕೆಯತ್ತ ನುಗ್ಗಿಬಂದ ಹುಡುಗಿ, ಕೈಯಲ್ಲಿ ಮೈಕ್ ಹಿಡಿದು ನನ್ನದೇ ಕತೆ ತೋರಿಸಿದಿರಿ ಮಿಸ್; ನನ್ನ ಅಪ್ಪ ಅಮ್ಮ ಕೂಡ ಈ ನಾಟಕದ ಅಪ್ಪ, ಅಮ್ಮನಂತೆಯೇ ಯಾವಾಗಲೂ ತಮ್ಮ ಆಫೀಸು ಕೆಲಸದಲ್ಲಿಯೇ ಮುಳುಗಿರುತ್ತಾರೆ. ಮಾತೆತ್ತಿದರೆ ಓದು ಓದು ಅಂತ ಹೇಳ್ತಾರೆ. ನನ್ನೊಟ್ಟಿಗೆ ಇರೋಕೆ ಅವರು ಟೈಮೇ ಕೊಡೋದಿಲ್ಲ. ಇದ್ರಿಂದ ನಾನು ಏನೇನೆಲ್ಲ ಮಿಸ್ ಮಾಡ್ಕೋತಿದಿನಿ ಅಂತ ನನ್ನೊಬ್ಬಳಿಗೆ ಗೊತ್ತು. ಯಾವ ಮಕ್ಕಳಿಗೂ ಹೀಗಾಗಬಾರದು ಎಂದು ಒಂದೇ ಸಮನೆ ಬಿಕ್ಕಳಿಸತೊಡಗಿದಳು. ಅಂದು ನಮಗೆ ಆ ಮಗುವನ್ನು ಸಮಾಧಾನಿಸಲು ಬೇಕಾದ ಪದಗಳೇ ಬತ್ತಿಹೋದಂತೆನಿಸಿ ತಬ್ಬಿಬ್ಬಾಗಿ ಹೋದೆವು.

ನಾನು ಈ ನಾಟಕ ಪ್ರದರ್ಶನದ ಬಗ್ಗೆ ಇಷ್ಟೆಲ್ಲಾ ಹೇಳಲು ಕಾರಣವಿದೆ. ಇದುವರೆಗೂ ದೊಡ್ಡವರು ಮಕ್ಕಳಿಗಾಗಿ ಬರೆದ ನಾಟಕಗಳಲ್ಲಷ್ಟೆ ಕೆಲಸ ಮಾಡುತ್ತಾ ಬಂದಿದ್ದ ನಾನು ಅಂದು ಮಕ್ಕಳು ಮಕ್ಕಳಿಗಾಗಿಯೇ ಬರೆದ ನಾಟಕವೊಂದರಲ್ಲಿ ಕೆಲಸ ಮಾಡಿದ್ದೆ. ಇದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಮಕ್ಕಳ ನಾಟಕ ರಚನಾ ಶಿಬಿರದಲ್ಲಿ ಪಾಲ್ಗೊಂಡ ಹುಡುಗಿಯೊಬ್ಬಳು ಬರೆದ ನಾಟಕವಾಗಿತ್ತು.

ಇವಳಂತೆಯೇ ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಯ್ಕೆಗೊಂಡು ಬಂದ ಮಕ್ಕಳೂ ಈ ಶಿಬಿರದಲ್ಲಿ ಭಾಗವಹಿಸಿ ನಾಟಕಗಳನ್ನು ರಚಿಸಿದ್ದರು. ಆಕಸ್ಮಿಕವಾಗಿ ಇವರಲ್ಲಿ ಕೆಲವರ ನಾಟಕಗಳನ್ನು ಓದುವ ಅವಕಾಶವೂ ನನಗೆ ಒದಗಿ ಬಂದಿತ್ತು. ಓದುತ್ತಾ ಹೋದಂತೆ ಮಕ್ಕಳ ಮನೋಲೋಕದ ವಿಸ್ತಾರ ನನ್ನನ್ನು ಆವರಿಸತೊಡಗಿತು. ಅಲ್ಲಿ ಅವರು ಪ್ರಕೃತಿಯೊಂದಿಗೆ ಅರಳಿಕೊಳ್ಳಲು ಅವಕಾಶವನ್ನೇ ಕೊಡದೆ ಉಸಿರು ಕಟ್ಟಿಸುತ್ತಿರುವ ಶಿಕ್ಷಣ ವ್ಯವಸ್ಥೆಯ ಬಗ್ಗೆ, ಪೋಷಕರ ಸ್ಪರ್ಧಾ ಮನೋಭಾವದೊಳಗೆ ನಲುಗಿ ಹೋಗುತ್ತಿರುವ ತಮ್ಮ ಸುಂದರ ಬಾಲ್ಯದ ಬಗ್ಗೆ, ಯಾಂತ್ರಿಕವಾಗುತ್ತಿರುವ ಬದುಕಿನಲ್ಲಿ ಶಿಥಿಲವಾಗುತ್ತಿರುವ ಸಂಬಂಧಗಳ ಬಗ್ಗೆ, ಮಾಸಿ ಹೋಗುತ್ತಿರುವ ನೆನಪುಗಳು, ಮಕ್ಕಳ ಸೃಜನಶೀಲತೆಯನ್ನೇ ಕಸಿದು ಕೊಳ್ಳುತ್ತಿರುವ ಎಲೆಕ್ಟ್ರಾನಿಕ್ ಮೀಡಿಯ, ಅಸ್ಪೃಶ್ಯತೆ, ಅಸಮಾನತೆ– ಹೀಗೆ ತಮ್ಮ ಪುಟ್ಟ ಕಣ್ಣುಗಳಿಗೆ ಗೋಚರಿಸುತ್ತಿರುವ ಗಹನವಾದ ವಿಷಯಗಳನ್ನು ಪಾತ್ರಗಳ ಮೂಲಕ ಹೇಳಲು ಪ್ರಯತ್ನಿಸಿದ್ದರು.

ಇಲ್ಲಿ ದೊಡ್ಡವರು ಮಕ್ಕಳ ಜಗತ್ತನ್ನು ಕಾಣುವುದಕ್ಕೂ, ಮಕ್ಕಳ ಕಣ್ಣಿನ ಮೂಲಕವೇ ಅವರ ಜಗತ್ತು ಅನಾವರಣಗೊಳ್ಳುವುದಕ್ಕೂ ಎಷ್ಟೊಂದು ಅಂತರವಿದೆ ಎಂಬ ಅರಿವು ನಮ್ಮನ್ನು ನಾವೇ ಒಮ್ಮೆ ಅವಲೋಕಿಸಿಕೊಳ್ಳುವಂತೆ ಮಾಡಿತ್ತು. ಒಟ್ಟಿನಲ್ಲಿ ಇಲ್ಲಿನ ಮಕ್ಕಳ ಬರವಣಿಗೆ ಅವರ ಮನೋಲೋಕದ ಬಗೆಗಿನ ನಮ್ಮ ತಿಳಿವಳಿಕೆಯ ಮಿತಿಗೆ ಕನ್ನಡಿ ಹಿಡಿದಂತಿತ್ತು. ಇಲ್ಲಿ ದೊಡ್ಡವರು ಪರಿಭಾವಿಸಿರುವ ಮಕ್ಕಳ ರಂಗಭೂಮಿಗೂ, ಮಕ್ಕಳ ಮನೋಲೋಕದ ರಂಗಕ್ಕೂ ಬಹು ದೊಡ್ಡ ವ್ಯತ್ಯಾಸವಿದೆ. ನನಗಿಲ್ಲಿ ಲೆಬನಿಸ್ ಅಮೆರಿಕನ್ ಕವಿ, ಚಿಂತಕ ಖಲೀಲ್ ಗಿಬ್ರಾನ್‌ ಅವರ ಮಾತುಗಳು ನೆನಪಾಗುತ್ತಿವೆ.

ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ. ಜೀವನ ಸ್ವಪ್ರೇಮದ ಪುತ್ರ, ಪುತ್ರಿಯರು. ಅವರು ನಿಮ್ಮ ಜತೆಗೆ ಇರುವುದಾದರೂ ಅವರು ನಿಮಗೆ ಸೇರಿದವರಲ್ಲ. ನಿಮ್ಮ ಪ್ರೀತಿಯನ್ನು ಅವರಿಗೆ ನೀಡಬಹುದು. ಆದರೆ, ನಿಮ್ಮ ಆಲೋಚನೆಗಳನ್ನಲ್ಲ. ಅವರಂತಿರಲು ನೀವು ಪ್ರಯತ್ನಿಸಬಹುದು. ಆದರೆ, ಅವರನ್ನು ನಿಮ್ಮಂತೆ ಮಾಡಲು ಯತ್ನಿಸದಿರಿ...

ನೂರಕ್ಕೆ ತೊಂಬತ್ತು ಭಾಗ ಪೋಷಕರು ಮೇಲಿನ ಈ ಚಿಂತನೆಗೆ ತದ್ವಿರುದ್ದ ದಿಕ್ಕಿನಲ್ಲಿ ನಡೆಯುತ್ತಿದ್ದೇವೆ ಎನ್ನುವ ಮಾತನ್ನು ತೆಗೆದು ಹಾಕುವಂತಿಲ್ಲ. ಈ ಜಗತ್ತನ್ನು ಆವರಿಸುತ್ತಿರುವ ಅಗೋಚರ ಕಾಲದ ಒತ್ತಡವೊಂದು ಮಕ್ಕಳನ್ನು ಹಣ ಉತ್ಪಾದಿಸುವ ಯಂತ್ರಗಳನ್ನಾಗಿ ಮಾತ್ರವೇ ರೂಪಿಸುವಂತೆ ನಮ್ಮನ್ನು ಪ್ರೇರೇಪಿಸುತ್ತಿದೆಯೇನೋ ಎನ್ನುವ ಆತಂಕ ಎದುರಾಗಿದೆ.

ಐಷಾರಾಮಿ ಜೀವನದ ಹಂಬಲವನ್ನು ಹೆಚ್ಚಿಸುವ ಹಣ, ನಮ್ಮ ಮಕ್ಕಳ ಸೃಜನಶೀಲತೆಯನ್ನೂ, ಸಮಾಜಮುಖಿಯಾದ ಕಾಳಜಿಗಳನ್ನು ಹಿನ್ನೆಲೆಗೆ ಸರಿಸಿಬಿಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೆತ್ತ ಮಕ್ಕಳನ್ನು ದಡ ಮುಟ್ಟಿಸುವುದೇ ನಮ್ಮ ಜೀವನದ ಅಂತಿಮ ಗುರಿ ಮತ್ತು ಸಾರ್ಥಕತೆ ಎಂದು ಭಾವಿಸಿದ್ದೇವೆ. ನಿಜವಾಗಲೂ ಬದುಕಿಗೆ ದಡವೆಂಬುದಿದೆಯೇ? ಹಾಗೊಂದು ವೇಳೆ ನಾವಂದುಕೊಂಡ ದಡ ಮುಟ್ಟಿ(ಸಿ)ದೆವಾದರೆ ಅಲ್ಲಿಗೆ ನಮ್ಮ ಮತ್ತು ನಮ್ಮ ಮಕ್ಕಳ ಕನಸು ಕಲ್ಪನೆ, ಸಾಧ್ಯತೆಗಳಿಗೆಲ್ಲಾ ತೆರೆ ಎಳೆದಂತಾಗುತ್ತದಲ್ಲವೇ? ಹೊಸತನವಿಲ್ಲದೆ ಯಾಂತ್ರಿಕವಾಗುವ ಬದುಕು ಬಹು ಬೇಗ ಆಯಾಸವನ್ನುಂಟು ಮಾಡಿ ವಯಸ್ಸಿಗೆ ಮುಂಚೆಯೇ ಮುಪ್ಪಡರುವಂತೆ ಮಾಡಿಬಿಡುತ್ತದೆಯೇನೋ ಎನ್ನುವ ಪ್ರಶ್ನೆಗಳು ನಮ್ಮನ್ನು ಆಗಾಗ ಕಾಡುವುದುಂಟು.

ನಾವು ನಮ್ಮ ಈ ದಡ ಮುಟ್ಟಿಸುವಾಟವನ್ನು ಇಷ್ಟಕ್ಕೇ ನಿಲ್ಲಿಸದೇ, ಮುಂದಿನ ಪೀಳಿಗೆಗೂ ಸಾಗಿಸುತ್ತೇವಲ್ಲ ಈ ವಿಪರ್ಯಾಸವನ್ನು ಹೇಗೆ ಅರ್ಥೈಸಿಕೊಳ್ಳುವುದು?

ಈ ಎಲ್ಲ ಸಮಸ್ಯೆಗಳ ಕಾಲದಿಂದ ಕಾಲಕ್ಕೆ ಇನ್ನಷ್ಟು ಜಟಿಲವಾಗುತ್ತಿದೆಯೇ ಎಂಬ ಆತಂಕ ಒಂದು ಕಡೆಯಾದರೆ, ಇನ್ನೊಂದು ಕಡೆ ಹೆಚ್ಚು ಹೆಚ್ಚು ಮಕ್ಕಳು ರಂಗಭೂಮಿಯೂ ಸೇರಿದಂತೆ ಬೇರೆ ಬೇರೆ ಕಲಾ ಮಾಧ್ಯಮಗಳತ್ತ ಆಕರ್ಷಿತರಾಗುತ್ತಾ ಹೊಸ ಅರಿವಿಗೆ ತಮ್ಮನ್ನು ತೆರೆದುಕೊಳ್ಳಲು ತುಡಿಯುತ್ತಿರುವುದು ಕೂಡ ಆಶಾದಾಯಕ ವಿಚಾರವೆಂದೇ ತೋರುತ್ತಿದೆ. ಇಂತಹ ಹಲವು ಪ್ರಶ್ನೆಗಳನ್ನಿಟ್ಟುಕೊಂಡೇ ನಾವು ಇಂದು ರಂಗಭೂಮಿಯ ಮೂಲಕ ಮಕ್ಕಳ ಅನುಸಂಧಾನ ಮಾಡಬೇಕಿದೆಯೇನೋ? 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !