ಉಗ್ರರು, ನಕ್ಸಲರಿಂದ ಮಕ್ಕಳ ಬಳಕೆ: ವಿಶ್ವಸಂಸ್ಥೆ ವರದಿ

7
ಕಾಶ್ಮೀರ, ಛತ್ತೀಸಗಡ, ಜಾರ್ಖಂಡ್‌ನಲ್ಲಿ ಕೃತ್ಯ– ವಿಶ್ವಸಂಸ್ಥೆ ವರದಿ ಉಲ್ಲೇಖ

ಉಗ್ರರು, ನಕ್ಸಲರಿಂದ ಮಕ್ಕಳ ಬಳಕೆ: ವಿಶ್ವಸಂಸ್ಥೆ ವರದಿ

Published:
Updated:

ವಿಶ್ವಸಂಸ್ಥೆ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಯೊಂದಿಗೆ ಕಳೆದ ವರ್ಷ ನಡೆದ ಸಂಘರ್ಷದಲ್ಲಿ, ಪಾಕಿಸ್ತಾನ ಮೂಲದ ನಿಷೇಧಿತ ಜೈಷ್–ಎ–ಮೊಹಮ್ಮದ್ ಹಾಗೂ ಹಿಜ್ಬುಲ್‌ ಮುಜಾಹಿದ್ದೀನ್ ಸಂಘಟನೆಗಳು ಮಕ್ಕಳನ್ನು ನಿಯೋಜಿಸಿಕೊಂಡಿದ್ದವು ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

‘ಮಕ್ಕಳು ಮತ್ತು ಸಶಸ್ತ್ರ ಸಂಘರ್ಷ’ಕ್ಕೆ ಸಂಬಂಧಿಸಿದಂತೆ, ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಅವರ ವಾರ್ಷಿಯ ವರದಿಯಲ್ಲಿ ಯುದ್ಧಪೀಡಿತ ಸಿರಿಯಾ, ಅಫ್ಗಾನಿಸ್ತಾನ, ಯೆಮನ್ ಮಾತ್ರವಲ್ಲದೆ 20 ದೇಶಗಳಲ್ಲಿನ ಮಕ್ಕಳ ಸ್ಥಿತಿಗತಿಯನ್ನು ವಿವರಿಸಲಾಗಿದೆ. ಭಾರತ, ಫಿಲಿಪ್ಪೀನ್ಸ್‌, ನೈಜೀರಿಯಾದಂತಹ ದೇಶ ಗಳೂ ಇದರಲ್ಲಿ ಸೇರಿವೆ.

ಭಾರತದ ಬಗ್ಗೆ ಮಾತನಾಡಿರುವ ಗುಟೆರಸ್‌, ಭದ್ರತಾ ಪಡೆಗಳು ಹಾಗೂ ಸಶಸ್ತ್ರ ಗುಂಪುಗಳ ನಡುವಿನ ಹಿಂಸಾಚಾರದಲ್ಲಿ ಮಕ್ಕಳಿಗೆ ತೊಂದರೆಯಾಗುತ್ತಿದೆ. ವಿಶೇಷವಾಗಿ ಛತ್ತೀಸಗಡ, ಜಾರ್ಖಂಡ್‌, ಜಮ್ಮು ಮತ್ತು ಕಾಶ್ಮೀರದಲ್ಲಿ ಇಂತಹ ಸ್ಥಿತಿ ಇದೆ ಎಂದು ಹೇಳಿದ್ದಾರೆ.

ನಕ್ಸಲೀಯರು ಸಹ ಲಾಟರಿ ವ್ಯವಸ್ಥೆಯ ಮೂಲಕ ಛತ್ತೀಸಗಡ ಮತ್ತು ಜಾರ್ಖಂಡ್‌ನಲ್ಲಿ ತಮ್ಮ ಕೃತ್ಯಗಳಿಗೆ ಬಲವಂತದಿಂದ ಮಕ್ಕಳನ್ನು ನಿಯೋಜಿಸಿಕೊಳ್ಳುತ್ತಿರುವ ವರದಿಗಳಿವೆ. ಅವರ ವಿರುದ್ಧ ಭದ್ರತಾ ಪಡೆಗಳು ನಡೆಸುವ ಕಾರ್ಯಾಚರಣೆಗಳಲ್ಲಿ ಮಕ್ಕಳು ಸಾಯುತ್ತಿದ್ದಾರೆ ಮತ್ತು ಗಾಯಗೊಳ್ಳುತ್ತಿದ್ದಾರೆ. ಮಾಹಿತಿದಾರರು ಮತ್ತು ಗೂಢಚಾರರಂತೆ ಮಕ್ಕಳನ್ನು ಬಳಸಿಕೊಳ್ಳುತ್ತಿರುವ ವರದಿಯಿದೆ ಎಂದು ವಿಶ್ವಸಂಸ್ಥೆ ವಿವರಿಸಿದೆ.

ಈ ವರ್ಷ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಸೇನೆ–ಉಗ್ರರ ನಡುವೆ ನಡೆದ ಸಂಘರ್ಷದಲ್ಲಿ 15 ವರ್ಷದ ಬಾಲಕ ಮೃತಪಟ್ಟಿದ್ದನ್ನು ವರದಿ ಉಲ್ಲೇಖಿಸಿದೆ.

ಆತ್ಮಾಹುತಿ ದಾಳಿ
‘ಪಾಕಿಸ್ತಾನದ ಉಗ್ರ ಸಂಘಟನೆಗಳು ಮಕ್ಕಳನ್ನು ಆತ್ಮಾಹುತಿ ದಾಳಿಗಳಿಗೆ ಬಳಸಿಕೊಳ್ಳುತ್ತಿವೆ. ಮದ್ರಸಾಗಳಲ್ಲಿನ ಮಕ್ಕಳೂ ಇವರಲ್ಲಿ ಸೇರಿದ್ದಾರೆ. ಆತ್ಮಾಹುತಿ ದಾಳಿ ಕುರಿತು ಮಕ್ಕಳಿಗೆ ತರಬೇತಿ ನೀಡುತ್ತಿರುವ ವಿಡಿಯೊಗಳನ್ನು ಉಗ್ರ ಸಂಘಟನೆಗಳು ಬಿಡುಗಡೆ ಮಾಡಿವೆ’ ಎಂದು ವಿಶ್ವಸಂಸ್ಥೆ ವರದಿ ವಿವರಿಸಿದೆ.

ಆತ್ಮಾಹುತಿ ದಾಳಿಗೆ ಮಕ್ಕಳ ಬಳಕೆ: ವಿಶ್ವಸಂಸ್ಥೆ

‘ಆತ್ಮಾಹುತಿ ದಾಳಿ ನಡೆಸಲು ಪಾಕಿಸ್ತಾನಿ ಉಗ್ರ ಸಂಘಟನೆಗಳು ಮಕ್ಕಳನ್ನು ಬಳಕೆ ಮಾಡಿಕೊಳ್ಳುತ್ತಿವೆ’ ಎಂದು ವಿಶ್ವಸಂಸ್ಥೆ ಹೇಳಿದೆ.

ಮದರಸ ಮತ್ತು ಇತರೆಡೆಯಿಂದ ಮಕ್ಕಳನ್ನು ನಿಷೇಧಿತ ಉಗ್ರ ಸಂಘಟನೆಗಳು ಕರೆದೊಯ್ಯುತ್ತಿರುವ ಮತ್ತು ಅವರನ್ನು ಆತ್ಮಹತ್ಯೆ ದಾಳಿಗೆ ಬಳಸಿಕೊಳ್ಳುತ್ತಿರುವ ಬಗ್ಗೆ ಪಾಕಿಸ್ತಾನದಿಂದ ಆಗಾಗ್ಗೆ ವರದಿಗಳು ವಿಶ್ವಸಂಸ್ಥೆಗೆ ಬರುತ್ತಿವೆ ಎಂದೂ ವರದಿ ಉಲ್ಲೇಖಿದೆ.

ತೆಹ್ರಿಕ್ ತಾಲಿಬಾನ್ ಪಾಕಿಸ್ತಾನ್ ಸಂಘಟನೆ ಮಕ್ಕಳಿಗೆ ತರಬೇತಿ ನೀಡುತ್ತಿರುವ ವಿಡಿಯೊವನ್ನು ಅದೇ ಸಂಘಟನೆ ಬಿಡುಗಡೆ ಮಾಡಿದೆ ಎಂದೂ ವರದಿ ಹೇಳಿದೆ.

ಈ ಸಂಘಟನೆಗಳು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ. ಇವುಗಳನ್ನು ಮಟ್ಟ ಹಾಕಲು ಪಾಕಿಸ್ತಾನ ಆದ್ಯತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಂಟೋನಿಯೊ ಗುಟರ್ರೆಸ್ ಹೇಳಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !